ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಡ್ತಿ ಪ್ರಕ್ರಿಯೆಗೆ ಚಾಲನೆ

ಸುಪ್ರೀಂಕೋರ್ಟ್‌ ಆದೇಶ ಪಾಲನೆಗೆ ಮುಂದಾದ ರಾಜ್ಯ ಸರ್ಕಾರ
Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಬಡ್ತಿ ಮೀಸಲಾತಿ ಕಾಯ್ದೆ 2002ರಡಿ ಮುಂಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ನೌಕರರಿಗೆ ಹಿಂಬಡ್ತಿ ನೀಡುವ ಪ್ರಕ್ರಿಯೆಯನ್ನು ತಕ್ಷಣದಿಂದ ಆರಂಭಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಎಲ್ಲ ಇಲಾಖೆಗಳಿಗೆ ಸೂಚಿಸಿದೆ.

ಏಪ್ರಿಲ್ 19ರೊಳಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಆದೇಶ ಜಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಕಟ್ಟಪ್ಪಣೆ ಮಾಡಿತ್ತು. ‘ಈಗಾಗಲೇ ಜ್ಯೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ನ್ಯಾಯಾಲಯ ನಿಗದಿ ಮಾಡಿರುವ ಕಾಲಮಿತಿಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ಡಿಪಿಎಆರ್ ಸುತ್ತೋಲೆಯಲ್ಲಿ ತಿಳಿಸಿದೆ.

ಹಿಂಬಡ್ತಿ ನೀಡಿದ ಬಳಿಕ ತೆರವಾಗುವ ಹುದ್ದೆಗಳಿಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯಲ್ಲಿ ಸೇವಾ ಹಿರಿತನ ಹೊಂದಿರುವವರಿಗೆ ಮುಂಬಡ್ತಿ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಹಿಂಬಡ್ತಿ ಪಡೆಯುವ ನೌಕರರಿಗೆ ಯಾವ ಹುದ್ದೆಗಳನ್ನು ನೀಡಬೇಕು ಎಂದು ನಂತರ ತೀರ್ಮಾನಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಆರು ತಿಂಗಳು ಸಮಯಾವಕಾಶ ಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್‌ ನ್ಯಾಯಪೀಠ ಮಾರ್ಚ್‌ 20ರಂದು ತಿರಸ್ಕರಿಸಿತ್ತು. ಕೂಡಲೇ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಿತ್ತು. ಇಲ್ಲದೇ ಇದ್ದರೆ ಏಪ್ರಿಲ್ 25 ರಂದು ನಡೆಯಲಿರುವ ವಿಚಾರಣೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಜರಾಗಬೇಕು ಎಂದು ಸೂಚಿಸಿತ್ತು. ನ್ಯಾಯಾಂಗ ನಿಂದನೆಗೆ ಗುರಿಯಾಗುವ ಸಾಧ್ಯತೆಯೂ ಇತ್ತು.

ಚುನಾವಣೆ ನೀತಿ ಸಂಹಿತೆ ಮುಂದಿಟ್ಟುಕೊಂಡು ಚುನಾವಣೆ ಮುಗಿಯುವರೆಗೆ ಹಿಂಬಡ್ತಿ– ಮುಂಬಡ್ತಿ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ಯತ್ನಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ, ನ್ಯಾಯಾಲಯದ ಆದೇಶ ಪಾಲನೆ ವಿಷಯ ಆಗಿರುವುದರಿಂದ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಹೀಗಾಗಿ, ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆಯನ್ನು ಅನುಷ್ಠಾನ ಮಾಡುವ ಅನಿವಾರ್ಯಕ್ಕೆ ಸರ್ಕಾರ ಸಿಲುಕಿದೆ.

ಹಿಂಬಡ್ತಿ ಭೀತಿಯಲ್ಲಿದ್ದ ನೌಕರರ ಹಿತ ಕಾಯಲು ಮುಂದಾಗಿದ್ದ ರಾಜ್ಯ ಸರ್ಕಾರ, ಪುನರ್‌ಪರಿಶೀಲನಾ  ಅರ್ಜಿ ಸಲ್ಲಿಸಿತ್ತು. ಬಡ್ತಿಯಲ್ಲಿ ಮೀಸಲಾತಿ ನೀಡಿದ ಕ್ರಮ ಸಮರ್ಥಿಸಿಕೊಳ್ಳಲು ಪರಿಶಿಷ್ಟ ಜಾತಿಯವರ ಹಿಂದುಳಿದಿರುವಿಕೆ, ಬಡ್ತಿ ಮೀಸಲಾತಿ ಪಡೆದ ನೌಕರರ ಶೇಕಡಾವಾರು ಪ್ರಮಾಣ, ಆಡಳಿತದ ಕಾರ್ಯದಕ್ಷತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ಬಡ್ತಿ ಮೀಸಲಾತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ, ಅದನ್ನು ನ್ಯಾಯಾಲಯ ಒಪ್ಪಿರಲಿಲ್ಲ.

ಎರಡು ಹಂತ ಕೆಳಗೆ: ಮುಖ್ಯ ಎಂಜಿನಿಯರ್‌ ಆಗಿರುವವರು ಎರಡು ಹಂತ ಕೆಳಗೆ ಹಿಂಬಡ್ತಿ ಪಡೆಯಲಿದ್ದಾರೆ. ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಹೋಗಬೇಕಾಗುತ್ತದೆ. ಪೊಲೀಸ್‌, ಕೆಪಿಟಿಸಿಎಲ್‌, ಲೋಕೋಪಯೋಗಿ ಇಲಾಖೆಯಲ್ಲಿಯೇ ಹೆಚ್ಚು ಮಂದಿ ಹಿಂಬಡ್ತಿ ಪಡೆಯಲಿದ್ದಾರೆ. ಲೋಕೋಪ
ಯೋಗಿ ಇಲಾಖೆಯಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ಪೂರ್ಣಗೊಳಿಸದೇ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದು ಮೂಲಗಳು ತಿಳಿಸಿವೆ.

20 ಸಾವಿರ ನೌಕರರಿಗೆ ಹಿಂಬಡ್ತಿ
63 ಇಲಾಖೆ ಮತ್ತು 132 ನಿಗಮ ಮಂಡಳಿಗಳಲ್ಲಿ ಕೆಲಸ ಮಾಡುವ ಪರಿಶಿಷ್ಟ ಜಾತಿಗೆ ಸೇರಿದ 20 ಸಾವಿರ ಅಧಿಕಾರಿ ಮತ್ತು ಇತರ ಸಿಬ್ಬಂದಿ ಹಿಂಬಡ್ತಿ ಪಡೆಯಲಿದ್ದು, ಸರಿ ಸುಮಾರು ಅಷ್ಟೇ ಸಂಖ್ಯೆಯ ಅಧಿಕಾರಿಗಳು ಮುಂಬಡ್ತಿ ಪಡೆಯಲಿದ್ದಾರೆ.

2.75 ಲಕ್ಷ ನೌಕರರಿರುವ ಶಿಕ್ಷಣ ಇಲಾಖೆಯಲ್ಲಿ  ರಾಜ್ಯಮಟ್ಟದ ಸಾಮಾನ್ಯ ಜ್ಯೇಷ್ಠತಾ ಪಟ್ಟಿ ಇಲ್ಲ. ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಹಾಗೂ ಬಡ್ತಿ ನೀಡುವ ಪದ್ಧತಿ ಚಾಲ್ತಿಯಲ್ಲಿದ್ದು, ಜಿಲ್ಲಾ ಮಟ್ಟದ ಜ್ಯೇಷ್ಠತಾ ಪಟ್ಟಿ ಮಾತ್ರ ಇದೆ. ಸಾಮಾನ್ಯ ಜ್ಯೇಷ್ಠತಾ ಪಟ್ಟಿ ತಯಾರಾಗುವವರೆಗೆ ಈ ಇಲಾಖೆಯಲ್ಲಿ ಎಷ್ಟು ನೌಕರರು ಹಿಂಬಡ್ತಿ ಪಡೆಯಲಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಯಾರಿಗೆಲ್ಲ ಅನ್ವಯ

ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ, ಮಂಡಳಿ ಮತ್ತು ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT