ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದ ಬಣ್ಣ ಕರಗದಿರಲಿ

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

‘ಈ ಸಿನಿಮಾ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಹಣ ಮಾಡಿ ನಾವೆಲ್ಲ ಶ್ರೀಮಂತರಾಗಿಬಿಡುತ್ತೇವೆ ಎಂಬ ಭ್ರಮೆ ನನಗಿಲ್ಲ. ಅದು ನಮ್ಮ ಉದ್ದೇಶವೂ ಅಲ್ಲ. ಈ ಚಿತ್ರ ನೋಡಿದ ಯಾವುದೋ ಮಗು ಸಂಕಷ್ಟದಲ್ಲಿದ್ದರೆ 1098 ಎಂಬ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ, ಸಂಕಷ್ಟದಿಂದ ಪಾರಾದರೆ ಅದೇ ನಮ್ಮ ಗೆಲುವು. ಒಂದು ಮಗುವಿನ ಬಾಲ್ಯ ಬವಣೆಯಲ್ಲಿ ಬೇಯುವುದು ತಪ್ಪಿದರೆ ಈ ಸಿನಿಮಾ ಸಾರ್ಥಕವಾದ ಹಾಗೆ’

ಹೀಗೆ ವಾಣಿಜ್ಯ ಲೆಕ್ಕಾಚಾರಗಳಾಚೆ ‘ಸಿನಿಮಾ ಗೆಲುವು’ ಎಂಬುದರ ಇನ್ನೊಂದು ಆಯಾಮವನ್ನು ಮುಟ್ಟುವ ಆಸೆಯನ್ನು ವ್ಯಕ್ತಪಡಿಸುತ್ತಲೇ ಮಾತಿಗಾರಂಭಿಸಿದರು ಶ್ವೇತಾ ಎನ್. ಎ. ಶೆಟ್ಟಿ. ಎಷ್ಟೋ ದಿನಗಳ ಕನಸನ್ನು ಜನರ ಎದುರು ಇಡುತ್ತಿರುವ ನಿರಾಳಭಾವವೂ ಅವರ ಮಾತುಗಳಲ್ಲಿತ್ತು.  ಅವರು ನಿರ್ದೇಶಿಸಿರುವ ‘1098’  ಸಿನಿಮಾ ಇದೇ ತಿಂಗಳ 12ರಂದು ಬೆಂಗಳೂರಿನ ಚಂದ್ರೋದಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಮೊದಲ ದಿನ ಹದಿನಾಲ್ಕು ವರ್ಷದ ಎಲ್ಲ ಮಕ್ಕಳಿಗೆ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ದೇವನಹಳ್ಳಿ ಬಳಿಯ ನಾಗನಾಯಕನ ಹಳ್ಳಿಯವರಾದ ಅವರು, ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಜತೆಗೆ ರಂಗಭೂಮಿಯಲ್ಲೂ ಸಕ್ರಿಯ ವಾಗಿದ್ದಾರೆ. ಬೀದಿ ನಾಟಕಗಳಲ್ಲಿ ವಿಶೇಷ ಆಸಕ್ತಿ.

‘ಬಾಸ್ಕೋ ಕಂಪನಿಯಲ್ಲಿ ಕೆಲಸ ಕ್ಲಸ್ಟರ್ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದೆ. ನಂತರ ಆ ಕೆಲಸ ಬಿಟ್ಟು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡೆ. ಬಾಸ್ಕೋನಲ್ಲಿ ಕೆಲಸ ಮಾಡುವಾಗ ನಾನು ನೋಡಿದ ಕೆಲವು ಘಟನೆಗಳನ್ನೇ ಇಟ್ಟುಕೊಂಡು ‘1098’ ಸಿನಿಮಾ ಕಥೆ ಕಟ್ಟಿದ್ದೇನೆ’’ ಎಂದು ಅವರು ವಿವರಿಸುತ್ತಾರೆ.

ರಂಗಭೂಮಿಯಲ್ಲಿ ತೊಡಗಿಕೊಂಡಿದ್ದವರು ಸಿನಿಮಾ ನಿರ್ದೇಶನಕ್ಕಿಳಿದಾಗ್ಯ ವ್ಯಂಗ್ಯ ದಿಂದ ನಕ್ಕವರೇ ಹೆಚ್ಚಂತೆ. ‘‘ನಾಟಕ ಮಾಡ್ಕೊಂಡಿದ್ದವರು. ಸಿನಿಮಾ ಮಾಡಕ್ಕಾಗತ್ತಾ?’ ಎಂದು ವ್ಯಂಗ್ಯವಾಗಿ ಕೇಳುತ್ತಿದ್ದರು. ಸಿನಿಮಾ ಮಾಡಿ ಮುಗಿಸಿದೆ. ನಂತರ ‘ಸಿನಿಮಾ ಏನೋ ಮಾಡಿದ್ರಿ ಬಿಡುಗಡೆ ಮಾಡುವುದು ಸಾಧ್ಯವಾ?’ ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಏನೂ ಪ್ರತಿಕ್ರಿಯಿಸಿರಲಿಲ್ಲ. ಈಗ ಬಿಡುಗಡೆಯಾಗುತ್ತಿರುವ ‘1098’ ಸಿನಿಮಾದಲ್ಲಿಯೇ ನಾನು ಎದುರಿಸಿದ ವ್ಯಂಗ್ಯ, ಪ್ರಶ್ನೆ ಎಲ್ಲದಕ್ಕೂ ಉತ್ತರವಿದೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ ಶ್ವೇತಾ.

ಶಿಕ್ಷಣದ ಕುರಿತು ಜಾಗೃತಿ ಮೂಡಿಸಲು ಅವರು ಮಾಡಿಸಿದ್ದ ‘ಶಾಲೆ ಕಡೆ ನಮ್ಮ ನಡೆ’ ಎಂಬ ಬೀದಿನಾಟಕ ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರದರ್ಶಿತವಾಗಿ ಮೆಚ್ಚುಗೆ ಗಳಿಸಿತ್ತು. ಆ ನಾಟಕ ಮಾಡಿಸುವಾಗ ಮಕ್ಕಳ ಜತೆಗೆ ಒಡನಾಡಿದ ಅನುಭವವೂ ಶ್ವೇತಾ ಅವರಿಗೆ ಚಿಣ್ಣರ ಮನಸ್ಸಿನ ಲೋಕದೊಳಗೆ ಹೊಕ್ಕು ಸಂತಸ– ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

‘ನಾನು ನೋಡಿದ ಹಲವು ನೈಜ ಘಟನೆಗಳನ್ನೇ ಇಟ್ಟುಕೊಂಡು ಕೆಲವು ಕಾಲ್ಪನಿಕ ಅಂಶಗಳನ್ನು ಸೇರಿಸಿ ಈ ಚಿತ್ರವನ್ನು ಹೆಣೆದಿದ್ದೇನೆ. ಬೀದಿ ನಾಟಕಗಳನ್ನು ಮಾಡುವಾಗಲೇ ಈ ವಿಷಯವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ಮುಟ್ಟಿಸಬೇಕಾದ ಅವಶ್ಯಕತೆ ಇದೆ ಎಂದು ಬಲವಾಗಿ ಅನಿಸುತ್ತಿತ್ತು. ಸಿನಿಮಾ ಜನಪ್ರಿಯ ಮಾಧ್ಯಮ. ಅದಕ್ಕಿರುವ ವ್ಯಾಪ್ತಿಯೂ ಹಿರಿದು. ಆದ್ದರಿಂದ ಆ ಮಾಧ್ಯಮದ ಮೂಲಕವೇ ಈ ವಿಷಯವನ್ನು ಹೇಳಬೇಕು ಎಂದು ನಿರ್ಧರಿಸಿ ಈ ಚಿತ್ರ ಮಾಡಿದ್ದೇನೆ’ ಎನ್ನುತ್ತಾರೆ ಅವರು. 2012ರಲ್ಲಿ ಅವರು ‘ಅಂಬಾ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಹಾಗೆಯೇ ಹಲವು ಸಾಕ್ಷ್ಯಚಿತ್ರಗಳನ್ನು ಮಾಡಿದ ಅನುಭವವೂ ಅವರಿಗಿದೆ. ಆ ಅನುಭವವೇ ಅವರಿಗೆ ಪೂರ್ಣಪ್ರಮಾಣದ ಸಿನಿಮಾ ನಿರ್ದೇಶಿಸುವ ಆತ್ಮವಿಶ್ವಾಸವನ್ನು ನೀಡಿದ್ದು.

‘ರಂಗಭೂಮಿ ಎಂದರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ! ನಮ್ಮ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅಲ್ಲಿಯೇ ಸಿಕ್ಕುಬಿಡುತ್ತದೆ. ಸಿನಿಮಾ ಹಾಗಲ್ಲ. ಅದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಸಿಗಲು ನಾವು ಸ್ವಲ್ಪ ಕಾಯಲೇಬೇಕಾಗುತ್ತದೆ. ಅದು ಅನಿವಾರ್ಯ’ ಎಂದು ಎರಡು ಭಿನ್ನ ಮಾಧ್ಯಮಗಳ ನಡುವಿನ ವ್ಯತ್ಯಾಸವನ್ನು ಗುರ್ತಿಸುತ್ತಾರೆ.

ಮಾಧ್ಯಮಗಳು ಬೇರೆಯಾದರೂ ಅವರು ಅಭಿವ್ಯಕ್ತಿಸುತ್ತಿರುವ ಕಾಳಜಿಗಳೇನೂ ಬದಲಾಗಿಲ್ಲ. ‘ಪ್ರತಿ ಮಗುವಿನ ಬಾಲ್ಯವೂ ಮುಖ್ಯ. ಓದುವ ಸಮಯದಲ್ಲಿ ಯಾವ್ಯಾವುದೋ ಚಟಗಳಿಗೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮನೆಯಿಂದ ಓಡಿಬಂದ ಮಕ್ಕಳ ಬದುಕಂತೂ ಇನ್ನೂ ದಾರುಣ. ದಲ್ಲಾಳಿಗಳು ಅವರನ್ನು ಬಳಸಿಕೊಂಡು ಲಾಭ ಮಾಡುತ್ತಾರೆ. ಅಂಥ ರಾಕ್ಷಸರ ಕೈಗೆ ಮಕ್ಕಳ ಬಾಲ್ಯ ಸಿಕ್ಕು ಹಾಳಾಗಬಾರದು ಎನ್ನುವುದನ್ನೇ ಈ ಚಿತ್ರದಲ್ಲಿ ಹೇಳಹೊರಟಿದ್ದೇವೆ. ಇದೇ ಸಮಯದಲ್ಲಿ ಮಕ್ಕಳ ಸಹಾಯವಾಣಿ ಮಾಡುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆಯೂ ಹೇಳಿದ್ದೇವೆ’ ಎಂದು ತಮ್ಮ ಸಿನಿಮಾದ ಕಾಳಜಿಗಳ ಕುರಿತು ವಿವರಿಸುತ್ತಾರೆ.

ಮೊದಲ ಸಿನಿಮಾ ಬಿಡುಗಡೆಯ ಜತೆಗೆ ತಮ್ಮ ಎರಡನೇ ಸಿನಿಮಾ ತಯಾರಿಯನ್ನೂ ಜೋರಾಗಿಯೇ ನಡೆಸುತ್ತಿದ್ದಾರೆ ಶ್ವೇತಾ. ಕಾದಂಬರಿ ಆಧಾರಿತ, ಸಾಮಾಜಿಕ ಕಾಳಜಿಯ ಸಿನಿಮಾಗಳನ್ನು ಮಾಡಬೇಕು ಎನ್ನುವುದು ಅವರ ತುಡಿತ. ಈ ಉದ್ದೇಶದಿಂದಲೇ ಅವರು ಸಾರಾ ಅಬೂಬಕ್ಕರ್ ಅವರ ‘ವಜ್ರಗಳು’ ಎಂಬ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದಾರೆ.

‘ಇನ್ನು ಮುಂದೆಯೂ ಮಕ್ಕಳು ಮತ್ತು ಮಹಿಳಾ ಪ್ರಧಾನವಾದ ಕಾದಂಬರಿಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತೇನೆ. ಸಾಮಾಜಿಕ ಕಳಕಳಿಯನ್ನು ಈ ಮಾಧ್ಯಮದ ಮೂಲಕ ಅಭಿವ್ಯಕ್ತಿಸುವ ಕೆಲಸ ವನ್ನು ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ಬದ್ಧತೆಯಿಂದ ಅವರು ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT