ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಕಲ್ಪನೆ

ಅಕ್ಷರ ಗಾತ್ರ

ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡ ಉದ್ಯೋಗಿಗಳ ಸಂಖ್ಯೆ ಕುಸಿತ; ಕನ್ನಡ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಪಾಠ (ಪ್ರ.ವಾ., ಆ.  3). ಈ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್‌ ಕನ್ನಡಿಗರನ್ನು ಸೆಳೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ. ಇದೇ ರೀತಿ ಕರ್ನಾಟಕದಲ್ಲಿ ಜನ್ಮ ತಳೆದ ಇತರೆ ಬ್ಯಾಂಕ್‌ಗಳೂ ಅರಿವು ಮೂಡಿಸಲಿ.

ಇತ್ತೀಚೆಗೆ ನಾನು ಪ್ರಯಾಣದಲ್ಲಿದ್ದಾಗ ಬಹಳ ವರ್ಷಗಳ ನಂತರ ಭೇಟಿಯಾದ ಪರಿಚಿತರೊಬ್ಬರು ಮಗಳ ಜೊತೆ ಪ್ರಯಾಣಿಸುತ್ತಿದ್ದರು. ‘ಮಗಳ ಅಂತಿಮ ವರ್ಷದ ‘ವಿಜ್ಞಾನ’ ಪದವಿ ಮುಗಿದಿದೆ. 88% ಅಂಕ ಪಡೆದಿದ್ದಾಳೆ. ಸೀಟ್‌ ಸಿಕ್ಕಲ್ಲಿ ಮಾಸ್ಟರ್‌ ಡಿಗ್ರಿ ಮಾಡುವಳು; ವರ ಸಿಕ್ಕರೆ ಮದುವೆ ಮಾಡುವೆನು’ ಎಂದರು. ನಾನು ಅವರಿಗೆ, ‘ಬ್ಯಾಂಕಿಂಗ್‌ ಪರೀಕ್ಷೆ ತೆಗೆದುಕೊಳ್ಳಬಹುದಲ್ಲಾ?’ ಎಂದಿದ್ದಕ್ಕೆ ‘ಅದು ನಮಗಲ್ಲ, ‘ವಾಣಿಜ್ಯ’ ಪದವಿಯವರಿಗೆ ಮಾತ್ರ’ ಎಂದಳಾಕೆ. ಕೊನೆಗೆ ನಾನು ಅವಳ ತಪ್ಪು ಕಲ್ಪನೆ ಬಗ್ಗೆ ತಿಳಿಸಿ ‘ಬ್ಯಾಂಕಿಗೆ ಪದವಿ ಪಡೆದ ಯಾರೂ ಪರೀಕ್ಷೆ ಬರೆಯಬಹುದು’ ಎಂದಾಗ ‘ಹೌದಾ? ಬರೆಯುವೆ’ ಎಂದಳು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿತಿವಂತರು ಎಂಜಿನಿಯರಿಂಗ್‌, ವೈದ್ಯಕೀಯ ಕಲಿತು ನಗರ ಪ್ರದೇಶಗಳಲ್ಲಿ ಇರಲಿಕ್ಕೆ ಬಯಸುತ್ತಾರೆ. ಆದರೆ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದವರು ಪದವಿ ಪಡೆದು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗಲು ಹಿಂಜರಿಯುತ್ತಾರೆ. ಏಕೆಂದರೆ ಅವರು ಪರೀಕ್ಷೆ ಬರೆಯಲು ನೂರಾರು ರೂಪಾಯಿ ಖರ್ಚು ಮಾಡಿ ಕನಿಷ್ಠ ಜಿಲ್ಲಾ ಕೇಂದ್ರಕ್ಕೆ ಹೋಗಬೇಕು. ಆದ್ದರಿಂದ ಇದರ ಗೊಡವೆಯೇ ಬೇಡವೆಂದು ಸುಮ್ಮನಾಗುತ್ತಾರೆ. ಕೆಲವು ಸಂಸ್ಥೆಗಳಂತೂ ‘ಕೋಚಿಂಗ್‌’ ಹೆಸರಲ್ಲಿ ದೋಚುತ್ತವೆ.

ಅರಿವು ಮೂಡಿಸುವ ಮತ್ತು ಕೋಚಿಂಗ್‌ ವ್ಯವಸ್ಥೆಯನ್ನು ಬ್ಯಾಂಕ್‌ಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಡಿದಲ್ಲಿ ಮತ್ತು ಕನಿಷ್ಠ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ‘ಪರೀಕ್ಷಾ ಕೇಂದ್ರ’ ವ್ಯವಸ್ಥೆ ಮಾಡಿದಲ್ಲಿ ಹೆಚ್ಚಿನ ಗ್ರಾಮೀಣ ಕನ್ನಡಿಗರು ನೇಮಕವಾಗಬಹುದು. ಇತ್ತೀಚೆಗಂತೂ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳ ಪ್ರಚಾರಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡುವ ಬ್ಯಾಂಕುಗಳು; ಗ್ರಾಮೀಣ ಕನ್ನಡಿಗರ ನೇಮಕಾತಿಗೆ ಆದ್ಯತೆ ನೀಡಲಿ. ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗೂ ತುಂಬಾ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT