ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡ ಬಯಲು...?

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ದೇಶದ ಅತಿಪ್ರತಿಷ್ಠಿತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ವಿಜ್ಞಾನ ಮಂದಿರ, ಹಾರ್ವರ್ಡ್ ಸೇರಿದಂತೆ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳ ಮಟ್ಟಕ್ಕೆ ಏರಬೇಕು ಎಂದು ವಿಜ್ಞಾನಿ ಸಿ.ಎನ್.ಆರ್. ರಾವ್  ಆಶಿಸಿದ್ದಾರೆ (ಪ್ರ.ವಾ., ಜೂನ್‌ 27).  ಆ ಹೆಮ್ಮೆಯ ಸಂಸ್ಥೆ ಅದನ್ನು ಗಳಿಸಿಕೊಳ್ಳುವುದರಲ್ಲೇನೂ ಆಶ್ಚರ್ಯವಿಲ್ಲ.

ಕಾರಣ ಮೊದಲಿನಿಂದಲೂ ಅಂಥ ಉನ್ನತ ಮಟ್ಟದ ಸಂಶೋಧನೆಗಳನ್ನು ಮಾಡುವ, ವಿಜ್ಞಾನ ಸಂಶೋಧನೆ ಗಾಗಿಯೇ ತಮ್ಮನ್ನು ಪೂರ್ಣವಾಗಿ ತೆತ್ತುಕೊಂಡ ಜ್ಞಾನದಾಹಿ ಪ್ರಾಮಾಣಿಕ ವಿಜ್ಞಾನಿಗಳ ಆಡುಂಬೊಲವಾಗಿರುವ ಅದು ಅಂಥ ಉನ್ನತ ಮಟ್ಟದ ಆಕಾಂಕ್ಷೆ ಇಟ್ಟುಕೊಳ್ಳುವುದು ಸಹಜವೇ.

ಇದರ ಸಾಧನೆಯನ್ನು ನೋಡುತ್ತ ನಮ್ಮ ವಿಶ್ವವಿದ್ಯಾಲಯಗಳ ಕಡೆ ಕಣ್ಣುಹಾಯಿಸಿದರೆ ನಮಗೆ ನಿರಾಸೆ ಕಟ್ಟಿಟ್ಟದ್ದು. ಬೆರಳೆಣಿಕೆಯಷ್ಟನ್ನು ಹೊರತುಪಡಿಸಿದರೆ ಇನ್ನುಳಿದ ಬಹುತೇಕ ವಿಶ್ವವಿದ್ಯಾಲಯಗಳು ವಿಶ್ವವಿದ್ಯಾ ‘ಲಯ’ಗಳಾಗಿವೆಯೇ ಹೊರತು ವಿಶ್ವವಿದ್ಯಾ‘ನಿಲಯ’ಗಳಾಗಿಲ್ಲ.

ಸಂಶೋಧನೆಗೆಂದು ಬಂದ ಹೆಣ್ಣುಮಕ್ಕಳ ಶೀಲಕೆಡಿಸಲು ಕಾದುಕುಳಿತ ಸಡಿಲುಗಚ್ಚೆಯ ಧೂರ್ತರು, ಹಣಕ್ಕಾಗಿ ಬಾಯಿಬಿಡುವ ಭ್ರಷ್ಟರು, ನಾನಾ ಹಗರಣಗಳಲ್ಲಿ ಸಿಲುಕಿಕೊಂಡ ‘ಪಗರಣದ ಅರಸುಗಳು’, ಕೃತಿಚೋರಾಗ್ರೇಸರರು, ವಿನಾಕಾರಣ ಸಂಶೋಧನಾ ಪ್ರಬಂಧಗಳನ್ನು ಮೌಲ್ಯಮಾಪನ ಮಾಡದೆ ಏನೋ ನಿರೀಕ್ಷೆಯಿಟ್ಟುಕೊಂಡು ವರ್ಷಗಟ್ಟಲೆ ಸತಾಯಿಸುವ ವಿದ್ವಾಂಸ ನಾಮಧಾರಕರು, ಸೂಟ್ಕೇಸ್‌ಗಳನ್ನು ಕೊಟ್ಟು ಬಂದು ಅಧಿಕಾರದ ಕುರ್ಚಿ ಹಿಡಿದ ಕುಲಗೆಟ್ಟ ಕುಲಪತಿಗಳೆನಿಸಿಕೊಂಡವರು ಇಂಥವರಿಂದ ತುಂಬಿ ತುಳುಕುತ್ತಿರುವ ಈ ವಿಶ್ವವಿದ್ಯಾಲಯಗಳಿಂದ ಸಮಾಜ ಏನುತಾನೆ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ? 

ಎಂ.ಎ. ತರಗತಿಗಳಲ್ಲಿ ಸರಿಯಾಗಿ ಹಾಜರಿ ಹಾಕದ, ನಾಲ್ಕು ವಾಕ್ಯಗಳನ್ನು ಸರಿಯಾಗಿ ಬರೆಯಲು ಬಾರದ ನಿರಾಧಾರ ಪರಂಜ್ಯೋತಿಗಳಾದವರುಗಳನ್ನು ಅಡ್ಮಿಷನ್ ಮಾಡಿಸಿಕೊಂಡ ಅಪರಾಧಮಾತ್ರಕ್ಕೆ ಡಿಸ್ಟಿಂಕ್ಷನ್‌ನಲ್ಲಿ ಪಾಸುಮಾಡಿ ಬಿಡುವ ಪವಾಡಗಳ ಕೇಂದ್ರಗಳಾಗಿರುವ ಈ ಅಧ್ಯಯನ ಕೇಂದ್ರಗಳೆಂಬುವುಗಳ ಪವಾಡ ಬಯಲು ಮಾಡುವವರು ಇನ್ನೂ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT