ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಸುರಕ್ಷೆ, ಭದ್ರತೆಗೆ ಇನ್ನಷ್ಟು ಆದ್ಯತೆ ನೀಡಿ

Last Updated 8 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡಿರುವುದು ನಗರದ ಭದ್ರತೆಯ ಬಗ್ಗೆ ಆತಂಕ ಉಂಟುಮಾಡಿದೆ. ಈ ನಿಲ್ದಾಣಕ್ಕೆ ಪ್ರಯಾಣಿಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಭದ್ರತಾ ತಪಾಸಣೆಗೆ ಒಳಗಾಗಲು ನಿರಾಕರಿಸಿ ಸದ್ದಿಲ್ಲದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಜುಬ್ಬಾ ಮತ್ತು ಕಪ್ಪುಕೋಟು ಧರಿಸಿದ್ದ ಈ ಮಧ್ಯವಯಸ್ಕ ಉತ್ತರದ ದ್ವಾರದಿಂದ ಭದ್ರತಾ ತಪಾಸಣೆಯ ಬಳಿಗೆ ಬಂದಾಗ ಲೋಹಶೋಧಕ ಯಂತ್ರದ ಕೆಂಪು ದೀಪ ಉರಿದು ಒಂದೇ ಸಮನೆ ‘ಬೀಪ್’ ಶಬ್ದ ಮೊಳಗಿದೆ.

ಅನುಮಾನದಿಂದ ಈತನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಏನನ್ನೋ ಹುಡುಕುವಂತೆ ಈಚೆ ಬಂದ ಆತ ನಿಲ್ದಾಣದಿಂದ ಹೊರನಡೆದಿದ್ದಾನೆ. ಅದೇ ವ್ಯಕ್ತಿ 15 ನಿಮಿಷದ ಬಳಿಕ ಪಶ್ಚಿಮ ದ್ವಾರದಿಂದ ಮತ್ತೆ ಮೆಟ್ರೊ ನಿಲ್ದಾಣದ ಒಳಗೆ ಪ್ರವೇಶಿಸಲು ಬಂದಿದ್ದಾನೆ. ಆತನ ಬಗ್ಗೆ ಅನುಮಾನಗೊಂಡು ಹಿಡಿಯಲು ಯತ್ನಿಸಿದಾಗ ಹೊರಗೋಡಿ ತಪ್ಪಿಸಿಕೊಂಡಿದ್ದಾನೆ. ನಿಲ್ದಾಣದ ಭದ್ರತಾ ಅಧಿಕಾರಿಗಳು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಆತನ ಚಹರೆಯನ್ನು ಅನುಸರಿಸಿ ಪತ್ತೆ ಹಚ್ಚುವ ಯತ್ನ ನಡೆದಿದೆ. ಬೆಂಗಳೂರುಪೊಲೀಸರು ಈ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಬಿಡಿ ಘಟನೆಯಂತೆ ಕಾಣಿಸಬಹುದಾದರೂ ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭೀಕರ ಸರಣಿ ಬಾಂಬ್‌ ಸ್ಫೋಟಗಳ ಹಿನ್ನೆಲೆಯಲ್ಲಿ, ಯಾವ ಸಣ್ಣ ಘಟನೆಯನ್ನೂ ನಿರ್ಲಕ್ಷಿಸಲಾಗದು. ಬೆಂಗಳೂರಿನ ಎಲ್ಲ ಮೆಟ್ರೊ ನಿಲ್ದಾಣಗಳಲ್ಲೂ ಬಿಗಿ ಭದ್ರತೆಯಿದ್ದು ಯಾರೂ ಲೋಹಶೋಧಕ ಯಂತ್ರದ ತಪಾಸಣೆಯಿಲ್ಲದೆ ಒಳಪ್ರವೇಶಿಸುವಂತಿಲ್ಲ. ಅಂತಹ ಸ್ಥಳದಲ್ಲೇ ವ್ಯಕ್ತಿಯೊಬ್ಬ ತಪಾಸಣೆಗೆ ಒಳಪಡಲು ನಿರಾಕರಿಸಿ ತಪ್ಪಿಸಿಕೊಂಡಿದ್ದಾನೆಂದರೆ, ಇದರ ಹಿಂದೆ ಯಾವುದೋ ಸಂಚು ಅಡಗಿರುವ ಶಂಕೆ ಮೂಡುತ್ತದೆ. ಅದೂ ಅಲ್ಲದೆ, ಆತ ನಿಲ್ದಾಣ ಪ್ರವೇಶಿಸುವ ಮುನ್ನ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯ ಜೊತೆಗೆ, ತಾನು ಹೇಳಿದ ಕೆಲಸ ಮಾಡಿಕೊಟ್ಟರೆ ಹಣ ಕೊಡುತ್ತೇನೆ ಎಂದು ಪ್ರಲೋಭನೆ ಒಡ್ಡಿರುವುದೂ ಅನುಮಾನಗಳನ್ನು ಹೆಚ್ಚಿಸಿದೆ. ಶ್ರೀಲಂಕಾದ ಸರಣಿ ಬಾಂಬ್‌ ಸ್ಫೋಟಗಳ ಆರೋಪಿಗಳು ಅದಕ್ಕೂ ಮುನ್ನ ಬೆಂಗಳೂರು ನಗರಕ್ಕೂ ಭೇಟಿ ನೀಡಿದ್ದರು ಎನ್ನುವ ಮಾಹಿತಿಯನ್ನು ಶ್ರೀಲಂಕಾದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ಬೆಂಗಳೂರಿನ ಭದ್ರತೆಯ ಬಗ್ಗೆ ಸರ್ಕಾರ ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ.

ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಸಹಜವಾಗಿಯೇ ದೇಶ ವಿದೇಶಗಳಿಂದ ಸಾವಿರಾರು ಜನರು ಬಂದುಹೋಗುವ ತಾಣವಾಗಿದೆ. ಅತ್ಯುತ್ತಮ ಆಸ್ಪತ್ರೆಗಳು, ಪ್ರತಿಷ್ಠಿತ ವಿದ್ಯಾಕೇಂದ್ರಗಳು, ಕೈಗಾರಿಕಾಸ್ನೇಹಿ ವಾತಾವರಣ ಎಲ್ಲವೂ ಬೆಂಗಳೂರಿಗೆ ಹೊರರಾಜ್ಯಗಳ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ದೇಶದ ಮಹಾನಗರಗಳಲ್ಲೇ ಅತ್ಯಂತ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿರುವ ನಗರ ಎಂಬ ಹೆಗ್ಗಳಿಕೆಯೂ ಬೆಂಗಳೂರಿಗಿದೆ. ಜೊತೆಗೆ ಇಲ್ಲಿಯ ಅತ್ಯುತ್ತಮ ಹವಾಮಾನದಿಂದಾಗಿ ಬಹಳಷ್ಟು ವಲಸಿಗರು ದೊಡ್ಡ ಮಟ್ಟದಲ್ಲಿ ಇಲ್ಲಿಗೆ ಬಂದು ನೆಲೆಯೂರುತ್ತಿದ್ದಾರೆ.

ಸುರಕ್ಷಿತ ಮತ್ತು ಶಾಂತಿಪ್ರಿಯ ಕಾಸ್ಮೊಪಾಲಿಟನ್‌ ನಗರ ಎಂದು ಅನ್ನಿಸಿಕೊಂಡಿರುವ ಬೆಂಗಳೂರಿನ ಶಾಂತಿ ಕದಡುವ ಯತ್ನ ಉಗ್ರಗಾಮಿಗಳಿಂದ ಹಿಂದೆ ಹಲವು ಸಲ ನಡೆದಿದೆ. 2008ರಲ್ಲಿ ನಗರದ 9 ಕಡೆ ಸಣ್ಣ ಸ್ವರೂಪದ ಸರಣಿ ಬಾಂಬ್‌ ಸ್ಫೋಟ ಸಂಭವಿಸಿ, ಒಬ್ಬ ಸತ್ತು ಹಲವರು ಗಾಯಗೊಂಡಿದ್ದರು. ಆ ಬಳಿಕ 2013 ಮತ್ತು 14ರಲ್ಲೂ ಎರಡು ಬಾಂಬ್‌ ಸ್ಫೋಟದ ಪ್ರಕರಣಗಳು ನಡೆದಿವೆ. ಇಲ್ಲಿನ ಪೊಲೀಸರ ದಕ್ಷ ಆಡಳಿತ ಮತ್ತು ಬಿಗಿ ಪಹರೆಯ ಕಾರಣಗಳಿಂದಾಗಿ ಉಗ್ರರಿಂದ ದೊಡ್ಡ ದುರಂತಗಳು ಸಾಧ್ಯವಾಗಿಲ್ಲ. ನಗರದ ಭದ್ರತೆ ಮತ್ತು ಸುರಕ್ಷೆಯ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಪೊಲೀಸರ ಜೊತೆ ಕೈಜೋಡಿಸಬೇಕಾಗಿದೆ.

ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ವಸ್ತುಗಳು ಮತ್ತು ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರ ಜೊತೆಗೆ ಮಾಹಿತಿ ಹಂಚಿಕೊಳ್ಳುವ ಪ್ರವೃತ್ತಿ ನಾಗರಿಕರಲ್ಲಿ ಹೆಚ್ಚಾಗಬೇಕು. ಹೊರರಾಜ್ಯಗಳ ಜನರಿಗೆ ಮನೆಗಳನ್ನು ಬಾಡಿಗೆಗೆ ಕೊಡುವಾಗ ಬಾಡಿಗೆದಾರರ ಕುರಿತು ಪೂರ್ಣ ಮಾಹಿತಿಗಳನ್ನು ಖಚಿತಪಡಿಸಿಕೊಂಡೇ ನೀಡುವ ಮತ್ತು ಮಾಹಿತಿಗಳನ್ನು ಪೊಲೀಸರ ಜೊತೆಗೆ ಹಂಚಿಕೊಳ್ಳುವ ಒಡನಾಟ ಇರಬೇಕು. ಪೊಲೀಸರೂ ಈ ನಿಟ್ಟಿನಲ್ಲಿ ಹೆಚ್ಚು ಜನಸ್ನೇಹಿ ಕ್ರಮಗಳ ಮೂಲಕ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾಜ್ಯದ ಮತ್ತು ದೇಶದ ಪ್ರಗತಿಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರವನ್ನು ಸುರಕ್ಷಿತ ಮತ್ತು ಸಮೃದ್ಧ ನಗರವಾಗಿಸುವ ಹೊಣೆ ಎಲ್ಲರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT