ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯವರ ಲೋಕದಲ್ಲಿ…

Last Updated 1 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ನನ್ನ ಉದ್ವೇಗ ಕಂಡು ಡಾಕ್ಟರ್ ಕಕ್ಕಾಬಿಕ್ಕಿಯಾಗಿದ್ದರು. ‘ಡಾಕ್ಟ್ರೇ, ನನಗೆ ಏನೇನೋ ಆಗ್ತಿದೆ’ ಅಂದೆ. ಅವರು ಸ್ಟೆತಾಸ್ಕೋಪ್ ಕಿವಿಗೆ ಸಿಕ್ಕಿಸಿಕೊಂಡು ನನ್ನ ಹೃದಯ ಸಂಗೀತ ಕೇಳತೊಡಗಿದರು. ‘ಡಾಕ್ಟ್ರೇ, ನನ್ನ ಹೃದಯಕ್ಕೇನೂ ಆಗಿರಲಿಕ್ಕಿಲ್ಲ. ನನ್ನ ಸಮಸ್ಯೆ ಏನೆಂದರೆ, ಕೆಲ ದಿವಸಗಳಿಂದ ಒಳ್ಳೆಯವರ ಲೋಕದಲ್ಲಿ ತಿರುಗಾಡುತ್ತಿರೋ ಹಾಗೆ ಭ್ರಮೆಯಾಗ್ತಿದೆ’, ನನ್ನ ಆತಂಕಕ್ಕೆ ಕಾರಣ ಕೊಟ್ಟೆ.

ಡಾಕ್ಟರ್, ಸ್ಟೆತಾಸ್ಕೋಪನ್ನು ನನ್ನ ತಲೆಯ ಮೇಲಿಟ್ಟು ಯೋಚನಾಮಗ್ನರಾದಂತೆ ಕುಳಿತರು. ‘ಹೌದು, ನಿಮ್ಮ ಕಿಡ್ನಿಯಲ್ಲಿ ಏನೋ ತೊಂದರೆ ಇರುವುದು ನಿಜ. ಆದರೆ ನಿಮ್ಮ ನಿಜವಾದ ಸಮಸ್ಯೆ ಏನೂಂತ ನನಗೆ ಗೊತ್ತಾಗಬೇಕಾದರೆ, ನಿಮ್ಮ ಆ ಭ್ರಮೆಗಳು ಏನೂಂತ ಹೇಳಬೇಕಾಗುತ್ತದೆ’ ಎಂದು ನನ್ನ ಕಟ್ಟುಕತೆಗಳನ್ನು ಕೇಳಲು ಅಣಿಯಾದರು. ನಾನು ಹೇಳತೊಡಗಿದೆ.

‘ಎಲ್ಲಾ ಧರ್ಮದ ಜನರು ಪರಸ್ಪರ ಪ್ರೀತಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಯುವಜನ ಯಾವುದೇ ಮುಜುಗರ ಪಡಬೇಕಾಗಿಲ್ಲ. ಮುಸ್ಲಿಮರನ್ನು ಹಿಂದೂಗಳು ಪ್ರೀತಿಯಿಂದಲೇ ಗೆಲ್ಲೋಣ… ಉಗ್ರ ಹೇಳಿಕೆಗಳಿಂದಲೇ ಭಯ ಹುಟ್ಟಿಸುತ್ತಿದ್ದ ಆ ಕೇಂದ್ರ ಸಚಿವರನ್ನು ಟಿ.ವಿಯಲ್ಲಿ ನೋಡಿದಾಗ ಹೀಗೆ ಮಾತನಾಡಿದಂತಾಯಿತು ಡಾಕ್ಟ್ರೇ!’.

‘ಮೊನ್ನೆ ಏನಾಯಿತೂಂದ್ರೆ… ಆಟೊದಲ್ಲಿ ಜಯನಗರಕ್ಕೆ ಹೋಗಿದ್ದೆ. ಮೀಟರ್ ನಲವತ್ತೈದು ರೂಪಾಯಿ ತೋರಿಸುತ್ತಿತ್ತು. ನೂರು ರೂಪಾಯಿ ಕೊಟ್ಟೆ. ಅಚ್ಚರಿ ಒಂದು- ಚಾಲಕ ಚಿಲ್ಲರೆ ಇಲ್ಲ ಅನ್ನಲಿಲ್ಲ. ಅಚ್ಚರಿ ಎರಡು- ಆತ ಅರವತ್ತು ರೂಪಾಯಿ ವಾಪಸ್ ಕೊಟ್ಟ! ಐದು ರೂಪಾಯಿ ಜಾಸ್ತಿ ಕೊಟ್ಟಿದೀಯಲ್ಲಪ್ಪಾ ಎಂದು ನಾನು ಹೇಳಿದೆ. ಇಲ್ಲ ಸಾರ್, ಕಳೆದ ವಾರ ನೀವು ಇದೇ ಆಟೊದಲ್ಲಿ ಬಂದಿದ್ದಿರಲ್ಲ. ಚಿಲ್ಲರೆ ಇಲ್ಲಾಂತ ಐದು ರೂಪಾಯಿ ನಿಮಗೆ ಕೊಟ್ಟಿರಲಿಲ್ಲ. ಆ ಐದು ರೂಪಾಯಿ ಅಂದ. ಇದು ಮೂರನೇ ಅಚ್ಚರಿ! ನಿಜ ಹೇಳಬೇಕೆಂದರೆ ಹೀಗೆ ನಡೆದೇ ಇರಲಿಲ್ಲ ಡಾಕ್ಟ್ರೇ’.

‘ಬಸ್ಸಿನಲ್ಲಿ ನಾನು ಕಂಡ ಈ ಅಸಂಭವ ಕೇಳಿ ಡಾಕ್ಟ್ರೇ. ನನ್ನ ಪಕ್ಕ ಹಿರಿಯ ಜೀವವೊಂದು ಕುಳಿತಿತ್ತು. ನೇತ್ರಾಸ್ಪತ್ರೆಗೆ ಟಿಕೆಟ್ ಕೊಡಿ ಅಂದರು. ಕಂಡ
ಕ್ಟರ್ ನೇತ್ರಾಸ್ಪತ್ರೆ ಸ್ಟಾಪ್ ಇಲ್ಲ ಸಾರ್… ಆದ್ರೆ ನಿಮಗೆ ಅಲ್ಲೇ ಇಳಿಸ್ತೀವಿ ಅಂದಾಗ, ಬೆಂಗಳೂರಿನಲ್ಲಿ ಇಂತಹ ಕಂಡಕ್ಟರ್ ಇರ್ತಾರಾ ಎನಿಸಿ ತುಂಬಾ ಹೆಮ್ಮೆಯಾಯಿತು. ಆದರೆ ನೇತ್ರಾಸ್ಪತ್ರೆ ಮುಂದೆ ಬಸ್ಸು ನಿಲ್ಲಲಿಲ್ಲ. ಆ ವ್ಯಕ್ತಿ ಮುಂದಿನ ಸ್ಟಾಪಿನಲ್ಲಿ ಇಳಿದಾಗಲೇ ನಾನು ಈ ಲೋಕಕ್ಕೆ ಬಂದದ್ದು’.

‘ಕಳೆದ ವರ್ಷ ರೈಲು ನಿಲ್ದಾಣದಲ್ಲಿ ನನ್ನ ಸ್ಮಾರ್ಟ್ ಫೋನ್ ಕಳವಾದಾಗ ಬಹಳ ದಿನಗಳು ಶೋಕಸಾಗರದಲ್ಲಿ ಮುಳುಗಿದ್ದೆ ಡಾಕ್ಟ್ರೆ. ಫೋನ್ ಖಂಡಿತ ಸಿಗುವುದಿಲ್ಲ ಎಂದು ಹೇಳುತ್ತಲೇ ಪೊಲೀಸಪ್ಪ ದೂರು ಪಡೆದುಕೊಂಡಿದ್ದರಿಂದ, ಆ ಹತ್ತು ಸಾವಿರ ರೂಪಾಯಿ ಬೆಲೆಯ ಫೋನ್ ಇಷ್ಟು ಸಮಯ ತಪ್ಪಿಯೂ ನೆನಪಾಗಿರಲಿಲ್ಲ. ಡಾಕ್ಟ್ರೆ, ನೀವು ನಂಬಿದರೆ ನಂಬಿ, ಇಲ್ಲ ಬಿಡಿ. ಮೊನ್ನೆ ಸಂಕ್ರಾಂತಿ ಹಬ್ಬಕ್ಕೆ ನಾನು ಏಕ್‌ದಂ ಖುಷಿಯಾಗಿದ್ದೆ. ಕಾರಣ- ಪೊಲೀಸ್ ಸ್ಟೇಷನ್‌ನಿಂದ ಬೆಲ್ಲದಂತಹ ಸುದ್ದಿ. ನಿಮ್ಮ ಫೋನ್ ಸಿಕ್ಕಿದೆ. ನಾಳೆ ಸ್ಟೇಷನ್‌ಗೆ ಬನ್ನಿ. ಮರುದಿವಸ ಸ್ಟೇಷನ್‌ಗೆ ಹೋದಾಗ ಆ ಪೊಲೀಸಪ್ಪ ಗಬ್ಬರ್ ಸಿಂಗ್‌ನಂತೆ ನಗುವವರೆಗೂ ನಾನು ಕೇಳಿಸಿಕೊಂಡದ್ದು ಬರೀ ಭ್ರಮೆ ಎಂದು ಗೊತ್ತಾಗಿರಲಿಲ್ಲ ಡಾಕ್ಟ್ರೆ!’

‘ಗೋರಕ್ಷಕರ ಬಗ್ಗೆ ನನಗೆ ಏನೇನೋ ತಪ್ಪು ಅಭಿಪ್ರಾಯವಿತ್ತು ಡಾಕ್ಟ್ರೆ. ಆದರೆ ಎರಡು ದಿವಸಗಳ ಹಿಂದೆ ಏನಾಯಿತೂಂದ್ರೆ… ಇವರ ಒಂದು ದೊಡ್ಡ ಗುಂಪು ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿಬಿಟ್ಟಿತ್ತು. ಯಾಕ್ ಗೊತ್ತಾ ಡಾಕ್ಟ್ರೇ? ಬರದಿಂದ ಮೇವು, ನೀರಿಲ್ಲದೆ ತತ್ತರಿಸಿ ಹೋಗಿರುವ ಗೋವುಗಳಿಗೆ ತಕ್ಷಣ ಗೋಶಾಲೆ ತೆರೆಯಬೇಕೆಂದು ಒತ್ತಾಯಿಸಲು ಅವರೆಲ್ಲ ಅಲ್ಲಿ ಜಮಾಯಿಸಿಬಿಟ್ಟಿದ್ದರು. ಆಹಾ! ಇವತ್ತು ನಮ್ಮ ಗೋರಕ್ಷಕರು ಮಾಡಿದ ಮಹತ್ಕಾರ್ಯವನ್ನು ಟಿ.ವಿಯಲ್ಲಿ ನೋಡೋಣ ಎಂದು ಕುಳಿತರೆ, ಆ ಸುದ್ದಿ ಕೇಳುವ ಭಾಗ್ಯ ಸಿಗಲೇ ಇಲ್ಲ. ನಿಜ ಡಾಕ್ಟ್ರೇ, ನಡೆಯದ ಸುದ್ದಿ ಬಿತ್ತರಿಸುವುದಾದರೂ ಹೇಗೆ ಅಲ್ವೇ?’

‘ಇದು, ಮದ್ಯ ನಿಷೇಧಕ್ಕೆ ಸಂಬಂಧಿಸಿದ್ದು ಡಾಕ್ಟ್ರೇ. ಮದ್ಯ ನಿಷೇಧಕ್ಕಾಗಿ 200 ಕಿ.ಮೀ ದೂರ ಹೆಂಗಳೆಯರು ಪಾದಯಾತ್ರೆ ನಡೆಸಿದ್ರಲ್ಲ. ಅವರ ಮಾನಸಿಕ ನೋವು ಈಗ ಕಾಲಿಗೆ ಹರಡಿರುವುದನ್ನು ಕಂಡು, ಬಹುತೇಕ ಗಂಡಂದಿರು ಭಾವುಕರಾಗಿ ಗುಂಡು ತ್ಯಜಿಸುವುದಾಗಿ ಪ್ರಮಾಣ ಮಾಡುತ್ತಿದ್ದಾರೆ! ಅವರ ಜತೆಗೆ ಕಂಪ್ಲಿ ಶಾಸಕರೂ ಕಂಪ್ಲೀಟಾಗಿ ಕುಡಿತ ನಿಲ್ಲಿಸಿದ್ದೇನೆ ಎಂದು ಎಲ್ಲೋ ಅನಾಮಿಕ ಜಾಗದಿಂದ ಸಿದ್ರಾಮಣ್ಣರಿಗೆ ಫೋನ್ ಮಾಡಿದ್ದಾರೆ’.

‘ಡಾಕ್ಟ್ರೇ, ಇದು ಕೊನೆಯದು. ನಾನು ಒಬ್ಬ ಮೇಲ್ಜಾತಿಯ ಬಡವ ಎಂದು ನಿಮ್ಮಲ್ಲಿ ಹೇಳಿಕೊಂಡಾಗ, ನೀವು ನಿಮ್ಮ ಫೀಸನ್ನು ನನ್ನಿಂದ ತೆಗೆದುಕೊಳ್ಳದೆ, ಆಟೊಗೆ ಇರಲೀಂತ ನನಗೇ ಐವತ್ತು ರೂಪಾಯಿ ಕೊಟ್ಟು ಕಳುಹಿಸಿದ್ದೀರಿ!’

ನಾನು ಹೇಳಿ ಮುಗಿಸುತ್ತಿದ್ದಂತೆಯೇ, ಡಾಕ್ಟರ್ ಬಿಲ್ ಮತ್ತು ಮಾರುದ್ದದ ಔಷಧದ ಪಟ್ಟಿ ನನ್ನನ್ನು ನೋಡಿ ನಗುತ್ತಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT