ಊಡ್ಜಿರೂ ನೂನುಕ್ಕಲ್: ಕರಾಳ ಕಾಲದ ಮಿಣುಕು ಹುಳು

7

ಊಡ್ಜಿರೂ ನೂನುಕ್ಕಲ್: ಕರಾಳ ಕಾಲದ ಮಿಣುಕು ಹುಳು

Published:
Updated:
Deccan Herald

ಆಸ್ಟ್ರೇಲಿಯಾದ ಮೂಲನಿವಾಸಿ ಜನಾಂಗಗಳು ಮತ್ತು ದ್ವೀಪವಾಸಿ ಜನಾಂಗಗಳಿಗೆಂದೇ ಸಪ್ತಾಹ ಆಚರಣೆ ಅಲ್ಲಿ 70ರ ದಶಕದಿಂದ ನಡೆಯುತ್ತ ಬಂದಿದೆ. ಈ ಜನಾಂಗಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದ, ಮಕ್ಕಳನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಜಾಥಾ ನಡೆಸಿ ಹೊಡೆಸಿಕೊಂಡು, ತಮ್ಮ ನೆಲೆಗಾಗಿ, ನೆಲಕ್ಕಾಗಿ ಪ್ರಾಣ ಅರ್ಪಿಸಿದ, ತಮ್ಮ ಕಥೆಗಳನ್ನು, ಹಾಡುಗಳನ್ನು ಕಾಪಿಟ್ಟುಕೊಂಡು ಅವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಿದ, ಭಾಷೆಗಳನ್ನು ಪೋಷಿಸಿದ, ಕುಲಗಳನ್ನು ಕಾಪಾಡಿದ, ಕುಟುಂಬವನ್ನು ಪೋಷಿಸಿ ಸಲುಹಿದ ಮಹಿಳೆಯರ ಗೌರವಾರ್ಥವಾಗಿ ಈ ವರ್ಷದ ಸಪ್ತಾಹದ ವಿಷಯ ಮೀಸಲಾಗಿತ್ತು. ‘ಆಕೆಯಿಂದ, ಹಾಗಾಗಿ ನಮ್ಮಿಂದ’ ಎನ್ನುವ ಘೋಷವಾಕ್ಯದ ಮೂಲಕ ಸಮುದಾಯಗಳ ಪ್ರತಿ ಹೆಣ್ಣಿಗೂ ಅವರು ಗೌರವ ಸಲ್ಲಿಸಿದರು.

ಅಂತಹ ಮೂಲನಿವಾಸಿಗಳ ಮಹಿಳೆಯರಲ್ಲಿ ಊಡ್ಜಿರೂ ನೂನುಕ್ಕಲ್ ಅವರ ಹೆಸರು ಮರೆಯಲಾರದ್ದು. ಅವರು ಮೊದಲ ಅಬರಿಜನಲ್ ಲೇಖಕಿ ಎಂಬುದು ವಿಶೇಷ.

ಊಡ್ಜಿರೂ ಅವರಂತಹ ಕೆಚ್ಚೆದೆಯ ಅಬರಿಜಿನಲ್ ಮತ್ತು ದ್ವೀಪವಾಸಿ ಮಹಿಳೆಯರಿಗೂ ಮತ್ತು ಅವರ ಕುಲಗಳ ಎಲ್ಲಾ ಸಾಮಾನ್ಯ ಮತ್ತು ಅಸಾಮಾನ್ಯ ಮಹಿಳೆಯರಿಗೂ ಸಂದ ಗೌರವವೇ ಈ ಸಪ್ತಾಹದ ಆಚರಣೆ.

ಒಂದು ಯೂನಿವರ್ಸಿಟಿಯಲ್ಲಿದ್ದ ಊಡ್ಜಿರೂ ಹೆಸರಿನ ವಿಭಾಗದಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದಾಗ ಆ ಪದವನ್ನು ಹೇಗೆ ಉಚ್ಚರಿಸುವುದು ಎಂದು ನಾನು ಕೇಳಿದ್ದೆ. ಪ್ರಯತ್ನಪಟ್ಟು ಊಡ್ಜಿರೂ ಪದದ ಉಚ್ಚಾರವನ್ನು ರೂಢಿ ಮಾಡಿಕೊಂಡೆ. ನಾಲಿಗೆ ತಿರುಗುತ್ತಾ ಹೋದಹಾಗೆ ಎಂಥ ಸುಂದರ ಹೆಸರು ಅನಿಸಿತ್ತು. ಕ್ರಮೇಣ ಈ ಊಡ್ಜಿರೂ ಯಾರು, ಏನು ಎಂಬ ಪರಿಚಯವಾಯ್ತು. ಅಬರಿಜಿನಲ್ ಹುಡುಗಿ Kath Ruska ಮುಂದೆ Kath Walker ಎಂದು ಪ್ರಸಿದ್ಧಿಯಾದದ್ದು, ತಾನು ಕ್ಯಾಥ್ ವಾಕರ್ ಆಗಿರಬೇಕಿಲ್ಲ, ಬದಲಾಗಿ ತನ್ನ ಕುಲದ ಹೆಸರನ್ನು (Noonuccal) ಇಟ್ಟುಕೊಂಡರೂ ಅದು ಹೆಮ್ಮೆಯೇ ಸರಿ ಎಂದು ಸಾರಿ ತೋರಿದ್ದು ಆ ಕಾಲಕ್ಕೆ ಅವರು ನಡೆಸಿದ ಹೋರಾಟದ ಹಾದಿಯ ಮೈಲಿಗಲ್ಲು.

ಅಂದರೆ ಇಂಗ್ಲಿಷ್ ಹೆಸರು ಇರದಿದ್ದರೂ (ಈಗಲೂ) ಜನಾಂಗೀಯ ವಿಭಜನೆ ಧೋರಣೆ ಮತ್ತು ಆಚರಣೆಗಳು ಎದ್ದು ಕಾಣುವ ಕ್ವೀನ್ಸ್ ಲ್ಯಾಂಡ್ ರಾಜ್ಯದಲ್ಲಿ ಜೀವಿಸಬಹುದು ಅನ್ನೋ ಎದೆಗಾರಿಕೆ! ಅಂದಹಾಗೆ ಊಡ್ಜಿರೂ ಅಂದರೆ Paper Bark, ಆಸ್ಟ್ರೇಲಿಯಾದ ಉದ್ದಗಲ ಕಾಣಸಿಗುವ ಉದ್ದನೆ ಮರ. ಅದರ ಪದರ ಪದರವಾಗಿ ಬಿಚ್ಚಿಕೊಳ್ಳುವ ತೊಗಟೆಯನ್ನು ಹಿಂದೆ ಅಬರಿಜಿನಲ್ ಜನರು ಬಹು ಉಪಯೋಗಿ ಸಂಪನ್ಮೂಲವಾಗಿ ಬಳಸುತ್ತಿದ್ದರು.

ಕ್ವೀನ್ಸ್ ಲ್ಯಾಂಡ್ ರಾಜ್ಯದ ಅಬರಿಜಿನಿಗಳಿಗೆ, ಬ್ರಿಸ್ಬನ್ ನಗರದ ನಿವಾಸಿಗಳಿಗೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಚಿರಪರಿಚಿತವಾದ ಹೆಸರು ಕ್ಯಾಥ್ ವಾಕರ್ ಮತ್ತು ಊಡ್ಜಿರೂ ನೂನುಕ್ಕಲ್. ಆ ಎರಡೂ ಹೆಸರುಗಳು ಒಬ್ಬಾಕೆಗೇ ಸೇರಿದ್ದು ಎನ್ನುವುದನ್ನು ಜನ ಸರಿಯಾಗಿ ಗುರುತಿಸುತ್ತಾರೆ. ಒಂದು ರೀತಿಯಲ್ಲಿ ಅದು ಈಗಿನ ಆಸ್ಟ್ರೇಲಿಯಾದ ಅಸ್ಮಿತೆಯೂ ಹೌದು- ವಸಾಹತುಶಾಹಿಗಳ ಯೂನಿಯನ್ ಜಾಕ್ ಬಾವುಟದ ನೆರಳಿನಲ್ಲಿ ಅಬರಿಜನಲ್ ಜನರು ತಮ್ಮ ಕೆಂಪು ಸೂರ್ಯನನ್ನು ಜ್ವಲಂತವಾಗಿಸಿದ್ದಾರೆ.

ಅಬರಿಜಿನಲ್ ಮಹಿಳೆಯರಲ್ಲಿ ಅನೇಕರು ತಮ್ಮ ಕುಲಗಳಿಗೆ ವಿಶಿಷ್ಟವಾದ ಚಿತ್ರಕಲೆ, ಸಾವಯವ ಪದಾರ್ಥಗಳಿಂದ ಮಾಡುವ ನೇಯ್ಗೆ, Dream time ಕಥೆಗಳನ್ನು ಹೇಳುವುದರಲ್ಲಿ, ಹಾಡು- ನೃತ್ಯಗಳಲ್ಲಿ ಪರಿಣತರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯನ್ ಬುಶ್ ಎಂಬ ಕಠಿಣ ಮತ್ತು ಪ್ರತಿಕೂಲ ನೈಸರ್ಗಿಕ ಪರಿಸರದಲ್ಲಿ ಬದುಕಿದವರು. ಆಹಾರವನ್ನು ಬೇಟೆಯಾಡಿ ಕುಟುಂಬವನ್ನು ಪೋಷಿಸುವುದು, ಮರುಭೂಮಿ ವಾತಾವರಣದ ನಿಷ್ಕರುಣೆಯ ಭೂಮಿಯಲ್ಲಿ ಸಿಕ್ಕುವ ಗೆಡ್ಡೆ– ಗೆಣಸುಗಳನ್ನು ಜಾಣತನದಿಂದ ಗುರುತಿಸಿ, ಅದನ್ನು ಅಗೆದು ಸಂಪಾದಿಸುವುದು, ಪ್ರಕೃತಿಯಲ್ಲಿ ಒಂದಾಗಿ ಬದುಕುವ ಸಾಮರ್ಥ್ಯಗಳನ್ನು ಪಡೆದಿದ್ದರು ಅನ್ನುವುದನ್ನು ಈಗೀಗ ಜನರು ಶ್ಲಾಘಿಸುತ್ತಿದ್ದಾರೆ. ಅದಕ್ಕೂ ಮುಂಚೆ ಅವರ ಕಲೆ– ಕೌಶಲಗಳನ್ನು ಹೊರ ಪ್ರಪಂಚದವರು ಒಂದೋ ಉಪಯೋಗಿಸಿಕೊಂಡಿದ್ದು ಇಲ್ಲವೇ ಅವರನ್ನು ಲಾಭದಾಯಕವಾಗಿ ನೋಡುತ್ತಿದ್ದುದು ಆಗಿತ್ತು.

ಸಾಂಪ್ರದಾಯಿಕ ಓದು- ಬರಹವೆಂಬ ವಿದ್ಯೆಗಳನ್ನು ಒಂದು ಪಕ್ಕಕ್ಕಿಟ್ಟು ನೋಡಿದರೆ ಕಣ್ಣಿಗೆ ಕಾಣುವ ಅಬರಿಜಿನಲ್ ಮಹಿಳೆಯರ ಸ್ವಾಯತ್ತೆ, ಮುಂದಾಳತ್ವ, ಅವರ ಚಾತುರ್ಯ, ಸಾತ್ವಿಕತೆ ಮತ್ತು ಕೌಶಲಗಳ ಬಗ್ಗೆ ಈಗೀಗ ಹೆಚ್ಚು ತಿಳಿದುಬರುತ್ತಿದೆ. ದೇಶದಲ್ಲಿರುವ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಬರಿಜಿನಲ್ ಮಹಿಳಾ ಅಧ್ಯಾಪಕರೂ, ಪ್ರಾಧ್ಯಾಪಕರೂ ಇದ್ದಾರೆ; ಬರೆಯುತ್ತಿದ್ದಾರೆ, ದನಿಯೆತ್ತಿದ್ದಾರೆ. ಅವರು ಗಮನಾರ್ಹ ಶೈಕ್ಷಣಿಕ ಅಧ್ಯಯನಗಳನ್ನು, ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ರಾಜಕೀಯ ರಂಗದಲ್ಲಿ, ಪಾರ್ಲಿಮೆಂಟಿನಲ್ಲಿ ಅವರಿದ್ದಾರೆ. ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ.

ಆದರೆ, ಆ ಕೌಶಲಗಳು, ವಿದ್ಯೆಗಳನ್ನು ಹೊಂದಿದ್ದ, ನೆಲಕ್ಕೆ ಹತ್ತಿರವಾಗಿ ವಾಸಿಸುತ್ತಿದ್ದ ಅಬರಿಜಿನಲ್ ಮಹಿಳೆಯರ ಮತ್ತು ಈಗಿನ ಹೊಸಪೀಳಿಗೆಯ ಮಹಿಳೆಯರ ನಡುವೆ ಒಂದು ಶತಮಾನದ ದೀರ್ಘ ಮೌನವಿದೆ. ಆ ಮೌನದಲ್ಲಿ ಅತೀವ ನೋವು, ಕಿಬ್ಬೊಟ್ಟೆಯಲ್ಲಿ ಹುದುಗಿಹೋಗಿರುವ ಆಕ್ರಂದನ, ಹೊಟ್ಟೆ ಸೀಳಿಕೊಂಡು ಬರದೇ ಅಲ್ಲೇ ಶರಣಾದ ದನಿಗಳಿವೆ. ಏಕೆಂದರೆ ಅದು ‘ಕಳೆದು ಹೋದವರ’ ಹಾಗೂ ಕಾಣೆಯಾದವರ ಶತಮಾನ!

ಆ ಬೃಹತ್‌ ಕಾಲದ ಅಂತರದಲ್ಲಿ ಇರುವವರು– ಕಳೆದುಹೋದ ಮಕ್ಕಳು, ತಂದೆ ತಾಯಿಯರಿಂದ ಬಲವಂತವಾಗಿ ಬೇರ್ಪಡಿಸಲ್ಪಟ್ಟ ಮಕ್ಕಳು, ಅನಾಥ ಗೃಹಗಳಿಗೆ ತಳ್ಳಲ್ಪಟ್ಟ ಮಕ್ಕಳು, ಮಿಷನರಿಗಳು ಬೆಳೆಸಿದ, ಊಳಿಗ ವರ್ಗಕ್ಕೆಂದೇ ಮೀಸಲಾದ ಮಕ್ಕಳು. ಅವರಿಗೆ ತಮ್ಮ ತಂದೆ– ತಾಯಿಯರ, ಅವರ ರಕ್ತ–ಕುಲಗಳ ಜಾಣ್ಮೆ, ಕೌಶಲ, ವಿದ್ಯೆಗಳು ದೊರೆಯಲೇ ಇಲ್ಲ. ತಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಕಲೆ, ಆಹಾರ... ಒಟ್ಟಾಗಿ ಹೇಳಬೇಕೆಂದರೆ ಅವರನ್ನು ಅವರದೇ ಜೀವನದಿಂದ ಹೊರಗೆಳೆದು ಬೇರೆ ಅಸ್ಮಿತೆ, ವ್ಯಕ್ತಿತ್ವ ಮತ್ತು ಮನಷ್ಯತ್ವವನ್ನು ಕೊಟ್ಟುಬಿಟ್ಟರು ವಸಾಹತುಶಾಹಿಗಳು.

ಹೆಚ್ಚಿನವರಿಗೆ ಅಪ್ಪ ಅಮ್ಮಂದಿರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಸುಳಿವೇ ಇರದ ಕರಾಳ ಕಾಲದಲ್ಲಿ ಕೂಡ ಒಂದೆರಡು ಮಿಣುಕು ಹುಳುಗಳು ಬೆಳಕನ್ನು ಚೆಲ್ಲಿದವು. ಅದನ್ನು ಕ್ವೀನ್ಸ್ ಲ್ಯಾಂಡ್ ರಾಜ್ಯ ಅದೃಷ್ಟವಶಾತ್ ಕಂಡಿದೆ ಎನ್ನಬೇಕು. ಮಾರ್ಪಾಡುಗಳು ಬರಲು, ಜನರ ಮನಸ್ಸಿನಲ್ಲಿ ಬದಲಾವಣೆಗಳು ಆಗಬೇಕಿವೆ ಎನ್ನುವ ಅಪೇಕ್ಷೆ ಮೂಡಿಸಲು ಬೆರಳೆಣಿಕೆಯಷ್ಟು ಮಂದಿ ಅಬರಿಜಿನಲ್ ಮಹಿಳೆಯರು ಹೋರಾಡಿದ್ದಾರೆ. ಅವರಲ್ಲಿ ಬಹುಮುಖ್ಯವಾದ ಹೆಸರು ಈ ಊಡ್ಜಿರೂ ನೂನುಕ್ಕಲ್ (Oodgeroo Noonuccal) ಉರುಫ್ ಕ್ಯಾಥ್ ವಾಕರ್ (Kath Walker).

ಇವರನ್ನು Kath Ruska ಎಂದೂ ಕರೆಯುತ್ತಾರೆ. ಹುಟ್ಟಿದ್ದು 1920ನೇ ಇಸವಿಯಲ್ಲಿ; ಸತ್ತಿದ್ದು 1993ರಲ್ಲಿ. ಸತ್ತಾಗ ಅವರಿಗೆ ಎಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಆ ಎಪ್ಪತ್ತೆರಡು ವರ್ಷಗಳಲ್ಲಿ ಸುಮಾರು ಅರವತ್ತು ವರ್ಷಗಳು ಆಕೆ ತಮ್ಮ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಸಾಗಿದರು. ಬರೆಯುತ್ತಲೇ ಹೋದರು. ಪ್ರಶಸ್ತಿಗಳನ್ನು ಪಡೆದರು, ಕೆಲವನ್ನು ಹಿಂದಿರುಗಿಸಿದರು. ಹೋರಾಟದ ಕ್ರಾಂತಿಯ ಕಿಚ್ಚುಹಚ್ಚುವ ಹಾಡುಗಳನ್ನು ಜನಪ್ರಿಯಗೊಳಿಸಿದರು.

ಕ್ಯಾಥ್ ಬಾಲ್ಯದಲ್ಲಿ ತನ್ನ ಎಡಗೈನಲ್ಲಿ ಬರೆಯುತ್ತಿದ್ದಳು. ಆ ಕಾರಣಕ್ಕಾಗಿ ಆಕೆಯ ಕೈಮೇಲೆ ಹೊಡೆದೂ ಹೊಡೆದೂ, ಕಡೆಗೆ ಆಕೆ ಹೈಸ್ಕೂಲು ಮುಗಿಸುವ ಮುನ್ನವೇ ಶಾಲೆ ಬಿಡುವಂತೆ ಆಯಿತು. ಅಷ್ಟರಲ್ಲೇ ಆಕೆಗೆ ‘ನೀನು ದಾಸ್ಯಕ್ಕೆ ಸೇರಿದವಳು, ಮನೆ ಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು’ ಎನ್ನುವುದನ್ನು ಶಾಲೆಯಲ್ಲಿ ಮನದಟ್ಟು ಮಾಡಿಸಿದ್ದರಂತೆ.


ಊಡ್ಜಿರೂ ನೂನುಕ್ಕಲ್  –ಚಿತ್ರ: ಗುರು ನಾವಳ್ಳಿ

ಅದಕ್ಕೆ ವ್ಯತಿರಿಕ್ತವಾಗಿ ಆಕೆಯ ತಾಯಿ, ತನ್ನ ಮಕ್ಕಳು ಶಾಲೆಗೆ ಹೋಗಿ ಕಲಿತು ಶಿಕ್ಷಣವಂತರಾಗಬೇಕು ಎಂದು ಶ್ರಮಪಟ್ಟರಂತೆ. ಆ ತಾಯಿ ಶಾಲಾ ಶಿಕ್ಷಣವನ್ನು ಪಡೆಯದ ವಾತಾವರಣದಲ್ಲಿ ಬೆಳೆದವರು. ಬಾಲಕಿಯ ತಂದೆಯೂ ಕನಿಷ್ಠ ಓದು- ಬರಹ ಪಡೆದವರು. ಆದರೆ ಒಳ್ಳೆಯ ಕೆಲಸಗಾರರಾಗಿದ್ದರೂ ಅವರಿಗೆ ಗುಲಾಮರಿಗೆ ಕೊಡುವ ಒಂದೆರಡು ಕಾಸು ಮಾತ್ರವೇ ಸಿಗುತ್ತಿತ್ತಂತೆ. ಸರ್ಕಾರ ತಮಗೆ ಬಳುವಳಿಯಾಗಿ ಬಡತನವನ್ನು ಕೊಟ್ಟಿದ್ದರೂ ಸ್ವಾಭಿಮಾನಿ ಕುಟುಂಬ ತಮ್ಮ ಹಸಿವನ್ನು ನಿಯಂತ್ರಿಸಿಕೊಂಡು ಬದುಕಿತು. ಧೃತಿಗೆಡದ ಆ ತಂದೆ–ತಾಯಿ ಮಕ್ಕಳಲ್ಲಿ ಕನಸುಗಳನ್ನು, ಧೈರ್ಯವನ್ನು ತುಂಬಿದರು. ಆ ಇಷ್ಟಿಷ್ಟೇ ತುಂತುರು ಸೇರಿ, ಅವರ ಮಗಳು ಕ್ಯಾಥ್ ತಾನು ಹುಟ್ಟಿದ ನಾರ್ತ್‌ ಸ್ಟ್ರ್ಯಾಡ್‌ಬ್ರೋಕ್‌ ದ್ವೀಪದ ‘ಮಿಂಜೆರಿಬ’ ಸಮುದ್ರದ ಮೊರೆತವೇ ಆಗುವಂತಾಯಿತು.

ಮುಂದೆ ಹದಿನಾರು ವರ್ಷದ ಹುಡುಗಿ ಕ್ಯಾಥ್ ತಾನು ನರ್ಸಿಂಗ್ ಓದಬೇಕೆಂದು ಕೇಳಿಕೊಂಡರೂ ಜನಾಂಗೀಯ ತಾರತಮ್ಯದ ಧೋರಣೆಯ ಪರಿಣಾಮವಾಗಿ ಆಕೆಗೆ ಅದನ್ನು ನಿರಾಕರಿಸಲಾಯ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ (1941-44) ಆಸ್ಟ್ರೇಲಿಯನ್ ವಿಮೆನ್ಸ್ ಆರ್ಮಿ ಸರ್ವಿಸ್ ಸೇರಿ ಸ್ವಿಚ್ ಆಪರೇಟರ್ ಆದ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ. ಅದೇ ವೇಳೆಯಲ್ಲೇ ಬ್ರೂಸ್ ವಾಕರ್ ಅವರನ್ನು ಮದುವೆಯಾಗಿ ಕ್ಯಾಥ್ ವಾಕರ್ ಆದರು. ಇಬ್ಬರು ಮಕ್ಕಳಾದ ನಂತರ, 1960ರ ದಶಕದಲ್ಲಿ ಕ್ಯಾಥ್ ರಾಜಕೀಯ ಪಕ್ಷವನ್ನು ಸೇರಿ ಮುಂದಾಳತ್ವವನ್ನು ತೋರಿದರು. ತಮ್ಮ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಸಂವಿಧಾನದಲ್ಲಿ ಅವುಗಳನ್ನು ಸೇರಿಸುವ ಪರವಾಗಿನ ಗಟ್ಟಿ ದನಿಯಾದರು. 1967ರಲ್ಲಿ ಅಬರಿಜಿನಲ್ ಜನರನ್ನು ಕಾನೂನು ಬದ್ಧವಾಗಿ ಸಂವಿಧಾನದಲ್ಲಿ ಸೇರಿಸುವಂತಾಯಿತು. ತನ್ನ ಸಕ್ರಿಯ ಪಾತ್ರದಿಂದ ಆಕೆ ರಾಜಕೀಯ ನಾಯಕರೊಂದಿಗೆ, ಆಡಳಿತಾರೂಢರೊಂದಿಗೆ ಮಾತನಾಡುವ ಆತ್ಮವಿಶ್ವಾಸವನ್ನು ತೋರಿದರು. ಬದಲಾವಣೆಗಳನ್ನು ತರುವ ಅವರ ಶ್ರಮ ಪ್ರಸಿದ್ಧಿ ಪಡೆದಿತ್ತು. ಅದಕ್ಕೆ ಕಾರಣ ಆಕೆಯ ಬರವಣಿಗೆ- ಮುಖ್ಯವಾಗಿ ಅವರ ಕವನಗಳು.

1964ರಲ್ಲಿ ಪ್ರಕಟವಾದ We are going ಕವನ ಸಂಕಲನ ಅವರ ಜನರ ಸ್ಥಿತಿಗೆ ಕನ್ನಡಿ ಹಿಡಿದು ತೋರಿದ್ದು ಅಲ್ಲದೆ ತಾವು ಬೇರೆ ಜನಾಂಗವಲ್ಲ, ಆಸ್ಟ್ರೇಲಿಯನ್ ಮಣ್ಣಿನ ಮಕ್ಕಳು ಎಂದು ಜಗತ್ತಿಗೆ ಸಾರಿತು. ಅವರು ಬರೆದಿದ್ದು ಇಂಗ್ಲಿಷ್ ಭಾಷೆಯಲ್ಲಿ. ಓದುಗರಾದ ಬಿಳಿಯರು ಅವರ ಕವನಗಳನ್ನು ಮೆಚ್ಚಿಕೊಂಡರು. ಕವನಗಳನ್ನು ಬರೆದು ಪ್ರಕಟಿಸಿದ ಮೊದಲ ಆಸ್ಟ್ರೇಲಿಯನ್ ಅಬರಿಜಿನಲ್ ಬರಹಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು. ಕ್ಯಾಥ್‌ರ ಬರವಣಿಗೆಗಳು ದೂರದ ಇಂಗ್ಲೆಂಡ್, ಅಮೆರಿಕ ಮತ್ತು ಯೂರೋಪ್‌ಗಳನ್ನು ತಲುಪಿದವು. ಇಂಗ್ಲೆಂಡಿನಲ್ಲಿ ಆಕೆಯನ್ನು ಮೆಚ್ಚುವ ಓದುಗರು ಹೆಚ್ಚಾದರು. ಪ್ರಶಸ್ತಿಗಳು ಹುಡುಕಿಕೊಂಡು ಬಂದವು.

1970ರಲ್ಲಿ ಅವರಿಗೆ ಎಂ.ಬಿ.ಇ (Member of the Order of the British Empire) ಅತ್ಯುಚ್ಚ ಗೌರವ ಲಭಿಸಿತು. ಅದೇ ವರ್ಷ ತಮ್ಮ ಹುಟ್ಟಿದ ಊರಿಗೆ ಬಂದು, ಅಲ್ಲಿ ಭೂಮಿ ಖರೀದಿಸಿ, ಅಲ್ಲಿ ಮೂನ್ಗಾಲ್ಬ ಎಂಬ ಹೆಸರಿನ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಿದರು. ಸಾವಿರಾರು ಜನರು ಬಂದು ಆಕೆಯ ಬಾಯಿಂದ ಅವರ ಜನರ ಕಥೆಗಳನ್ನು, Dream time ಕಥೆಗಳನ್ನು ಕೇಳಿದರು; ಅವರ ಜನರ ಸಂಸ್ಕೃತಿಯ ಆಳ ಅಗಲಗಳನ್ನು ತಿಳಿದರು. ಇನ್ನೂ ಹೆಚ್ಚು ಬರೆಯುತ್ತಲಿರುವಾಗ, ಪ್ರಶಸ್ತಿಗಳು ಬರುತ್ತಿದ್ದಾಗಲೇ ಅವರು ಫುಲ್ ಬ್ರೈಟ್ ಫೆಲೋಶಿಪ್ ಪಡೆದು ಅಮೆರಿಕ ಪ್ರವಾಸವನ್ನು ಕೈಗೊಂಡು, 1978- 79ರಲ್ಲಿ ಆ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ತಮ್ಮ ಜನರ ಕಥೆಗಳನ್ನು, ವ್ಯಥೆಯನ್ನೂ, ಹೋರಾಟವನ್ನು, ಸ್ವಾಭಿಮಾನವನ್ನು ಹೇಳಿದರು. ಇನ್ನೂ ಬರೆಯುತ್ತಾ, ಮಕ್ಕಳ ಕತೆಗಳನ್ನು, ಮತ್ತಷ್ಟು ಕವನಗಳನ್ನು, ಕಥೆಗಳನ್ನು, ಪ್ರಬಂಧಗಳನ್ನು, ಲೇಖನಗಳನ್ನು ಒಟ್ಟುಹಾಕಿದರು. ಮಧ್ಯದಲ್ಲಿ ಬಿಡುವು ಮಾಡಿಕೊಂಡು ತಮ್ಮ ಕುಲದ ಚಿತ್ರಕಲೆಯನ್ನು ಅಭ್ಯಸಿಸಿ, ಪ್ರಕಟಿಸಿದರು. ಅನೇಕ ಸಂಸ್ಥೆಗಳಿಗೆ ಜೀವಕೊಟ್ಟು, ಅವರ ದನಿಯನ್ನು ದೊಡ್ಡದಾಗಿಸಿದರು. ಶಾಲೆಗಳನ್ನು ಮುನ್ನಡೆಸಿದರು; ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದರು. ಹಲವಾರು ಗೌರವ ಡಾಕ್ಟರೇಟ್‌ಗಳನ್ನು ಪಡೆದರು.

ಎಲ್ಲರಿಗೂ ಆಶ್ಚರ್ಯವಾಗುವಂತೆ 1988ರಲ್ಲಿ ರಾಣಿ ಎರಡನೇ ಎಲಿಜಬೆತ್ ನೀಡಿದ್ದ ಗೌರವವನ್ನು ವಾಪಸ್ ಮಾಡಿದರು.

ಆಗ ಅವರು ಹೇಳಿದ್ದು - ‘ಎರಡು ಶತಮಾನಗಳ ಕಾಲದ ನಮ್ಮ ಜನರ ನೋವನ್ನು, ಸಾವನ್ನು, ಎಲ್ಲದರಿಂದ ವಂಚಿತರಾಗಿ ನಮ್ಮದೇ ನೆಲದಲ್ಲಿ ನಾವು ಪರದೇಶಿಗಳೂ ಅನಾಥರೂ ಆದದ್ದನ್ನು ಈ ವರ್ಷ ನೆನಪಿಸುತ್ತದೆ. ಆಸ್ಟ್ರೇಲಿಯನ್ ಮತ್ತು ಬ್ರಿಟಿಷ್ ಸರ್ಕಾರಗಳು ನಮ್ಮ ಅಬರಿಜನಲ್ ಜನರ ಎಲ್ಲಾ ಹಕ್ಕುಗಳನ್ನು ಅವರಿಗೆ ಕೊಟ್ಟು, ನಮ್ಮ ಪೂರ್ವಜರಿಂದ ಪಡೆದ ನೆಲವನ್ನೂ ಅದರ ಹಕ್ಕನ್ನೂ ವಾಪಸ್ ಕೊಡಬೇಕು. ಅವರು ನಡೆಸಿದ ನರಮೇಧ, ಕೊಲೆಗಳು, ಸುಲಿಗೆ, ನಮ್ಮ ಭಾಷೆಗಳು, ಸಂಸ್ಕೃತಿಯನ್ನು ನಾಶ ಮಾಡಿದ್ದು ಎಲ್ಲವನ್ನೂ ಅವರು ಒಪ್ಪಿಕೊಳ್ಳಬೇಕು. ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದಾಗ ಅದರಿಂದ ನಮ್ಮ ಜನರಿಗೆ ಮತ್ತಷ್ಟು ಧೈರ್ಯ, ಗುರುತಿಸುವಿಕೆ, ಪ್ರೋತ್ಸಾಹ ಸಿಗುತ್ತದೆ, ಅದರಿಂದ ಹಲವಾರು ಬಾಗಿಲುಗಳು ತೆರೆಯುತ್ತವೆ ಎಂದು ಭಾವಿಸಿದ್ದೆ. ಪರಿಸ್ಥಿತಿ ನಾನಂದುಕೊಂಡಂತೆ ಸುಧಾರಿಸಲಿಲ್ಲ, ಅವರು ಕ್ಷಮಾಪಣೆ ಕೇಳಿಲ್ಲ, ನಮ್ಮ ನೆಲವನ್ನು ಇನ್ನೂ ಕೊಟ್ಟಿಲ್ಲ. ಎಷ್ಟೋ ಸುಧಾರಣೆಗಳು ಇನ್ನೂ ಆಗಬೇಕಿವೆ.’

ಅದೇ ವರ್ಷ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಊಡ್ಜಿರೂ ನೂನುಕ್ಕಲ್ ಆದರು, ತಮ್ಮ ಕುಲದ ಹೆಸರನ್ನು ತಮ್ಮ ಕವನಗಳಂತೆಯೇ ಅಜರಾಮರಗೊಳಿಸಿದರು. ಊಡ್ಜಿರೂ ಅವರಂತಹ ಕೆಚ್ಚೆದೆಯ ಅಬರಿಜಿನಲ್ ಮತ್ತು ದ್ವೀಪವಾಸಿ ಮಹಿಳೆಯರಿಗೂ ಹಾಗೂ ಅವರ ಕುಲಗಳ ಎಲ್ಲ ಸಾಮಾನ್ಯ ಮತ್ತು ಅಸಾಮಾನ್ಯ ಮಹಿಳೆಯರಿಗೂ ಸಂದ ಗೌರವ ಈ ಸಪ್ತಾಹದ ಆಚರಣೆ.
**
ಸಂತೋಷ– ಸ್ವಂತಿಕೆಯ ಸಮಯ
ದೇಶದ ಅಬರಿಜಿನಲ್ ಮತ್ತು ದ್ವೀಪ ನಿವಾಸಿಗಳು ತಮ್ಮ ಇತಿಹಾಸದ ಪುಟಗಳನ್ನು ತಿರುವುತ್ತಾ, ತಮ್ಮ ವೈವಿಧ್ಯಮಯ ಸಂಸ್ಕೃತಿಗಳನ್ನು, ಭಾಷೆಗಳ ಶ್ರೇಷ್ಠತೆಯನ್ನು ಎತ್ತಿಹಿಡಿದು, ಆಸ್ಟ್ರೇಲಿಯಾದ ಇತರರಿಗೆ (ಬಿಳಿಯರು ಮತ್ತು ವಲಸಿಗರಿಗೆ) ಶಾಂತಿ ಸಂದೇಶವನ್ನು ಸಾರುವ ಸಮಯ. NAIDOC (National Aboriginal and Islanders Day Observance Committee) ವಾರ. 1972ರಿಂದ ಆಸ್ಟ್ರೇಲಿಯಾ ದೇಶದಾದ್ಯಂತ ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಆಚರಿಸಲಾಗುವ ಈ ಮಹತ್ವದ ಅವಧಿಯು ಈ ವರ್ಷ ‘ಬಿಕಾಸ್ ಆಫ್ ಹರ್, ವಿ ಕ್ಯಾನ್!’ ಎಂಬ ವಿಷಯವನ್ನು ಇರಿಸಿಕೊಂಡಿತ್ತು. ಕಲಾಪಗಳು, ಸಮಾರಂಭಗಳು ಮತ್ತು ಕಾರ್ಯಕ್ರಮಗಳಿಂದ ಕೂಡಿದ ಈ ಸಪ್ತಾಹವು ಸುಸೂತ್ರವಾಗಿ ಜುಲೈ ಮಧ್ಯದಲ್ಲಿ ಮುಕ್ತಾಯವಾಯಿತು.

ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲದಿಂದ ತಮ್ಮ ದೇಶದಲ್ಲೇ ಪರಕೀಯರಾಗಿ, ನಾಮಶೇಷವಿಲ್ಲದಂತಾಗಿದ್ದ ಆಸ್ಟ್ರೇಲಿಯ ಮೂಲನಿವಾಸಿಗಳು ಮತ್ತು ದ್ವೀಪವಾಸಿಗಳಿಗೆ (Aboriginal and Torres Strait Islanders) ಬರಬರುತ್ತಾ ಈ NAIDOC ವಾರ ಒಂದು ರೀತಿಯ ವಿಶೇಷ ಮುದ್ರೆಯಂತಾಗಿದೆ. NAIDOC ನ ಸದಸ್ಯರು ಸಾರ್ವಜನಿಕರಿಂದ ವರ್ಷದ ವ್ಯಕ್ತಿ, ಹಿರಿಯ ನಾಯಕಿ (Female Elder), ಹಿರಿಯ ನಾಯಕ (Male Elder), ವರ್ಷದ ಕ್ರೀಡಾಪಟು ಇತ್ಯಾದಿ ಪ್ರಶಸ್ತಿಗಳಿಗೆ ಹೆಸರುಗಳನ್ನು ಸೂಚಿಸಲು ಆಹ್ವಾನಿಸಿ, ಪ್ರಶಸ್ತಿಗಳನ್ನು ಕೊಡುತ್ತಾರೆ. ಮೂಲನಿವಾಸಿಗಳು ಸೇರುವ ಮುಖ್ಯಸ್ಥಳಗಳಲ್ಲಿ ಇಡೀ ವಾರ ಸಾರ್ವಜನಿಕ ಸಮಾರಂಭಗಳು ನಡೆದು, ಕಡೆಯ ಶುಕ್ರವಾರ ಸಂಗೀತ, ನೃತ್ಯಗಳೊಂದಿಗೆ NAIDOC ವಾರ ಮತ್ತಷ್ಟು ಕಳೆಗಟ್ಟುತ್ತದೆ.

ನಗರ ಪ್ರದೇಶಗಳಲ್ಲಿ ಸಾವಿರಾರು ಜನ ಸೇರುತ್ತಾರೆ. ಹಿಂದೆ ಅಲ್ಲೊಂದು ಇಲ್ಲೊಂದು ಭಾರತೀಯರ ಮುಖ ಕಾಣಿಸುತ್ತಿತ್ತು. ಈಗ ಈ ಕಡೆಯ ಶುಕ್ರವಾರದಂದು ಕಾಣಿಸುವ ಭಾರತೀಯರು ಮತ್ತು ಬಿಳಿಯರು ಹೆಚ್ಚಾಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !