ಆಕ್ಸ್‌ಫರ್ಡ್‌ ಐಐಟಿ ಒಲಂಪಿಯಾಡ್‌ ಶಾಲೆಗೆ ಮೊದಲ ಸ್ಥಾನ

7
ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌: ವಲಯ ಮಟ್ಟದ ಸ್ಪರ್ಧೆಯಲ್ಲಿ ಸೈನಿಕ ಶಾಲೆಗೆ ದ್ವಿತೀಯ, ಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೃತೀಯ ಸ್ಥಾನ

ಆಕ್ಸ್‌ಫರ್ಡ್‌ ಐಐಟಿ ಒಲಂಪಿಯಾಡ್‌ ಶಾಲೆಗೆ ಮೊದಲ ಸ್ಥಾನ

Published:
Updated:

ವಿಜಯಪುರ: ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆಯಾಗಲೇಬೇಕು. ಶಾಲೆಗೆ ಕೀರ್ತಿ ತರಬೇಕು ಎಂಬ ಕನಸು ಹೊತ್ತು ಬಂದಿದ್ದ ವಿದ್ಯಾರ್ಥಿಗಳು... ಆರಂಭದಿಂದ ಅಂತ್ಯದವರೆಗೂ ಬತ್ತದ ಉತ್ಸಾಹ. ಇವರಿಗೆ ಬೆಂಬಲವಾಗಿ ನಿಂತಿದ್ದ ಶಿಕ್ಷಕ ಸಮೂಹ, ಪೋಷಕರು...

ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಉತ್ತರ ಹೇಳಲು ಅತ್ಯುತ್ಸಾಹ ತೋರಿದ ಸ್ಪರ್ಧಿಗಳು... ಗೆದ್ದವರಲ್ಲಿ ಸಾಧನೆಯ ಸಂಭ್ರಮ. ಆರಂಭದಿಂದ ಅಂತಿಮ ಹಂತದವರೆಗೂ ಗೆಲ್ಲುವ ಛಲ ವ್ಯಕ್ತವಾದರೆ, ಸೋತವರಲ್ಲಿ ಹೊಸ ವಿಷಯ ತಿಳಿದುಕೊಂಡ ಸಮಾಧಾನ... ಮುಂದಿನ ಬಾರಿ ಚಾಂಪಿಯನ್‌ಷಿಪ್‌ ನಮಗೆ ಎಂಬ ಉತ್ಸಾಹದ ನುಡಿಗಳು. ಒಟ್ಟಾರೆ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡವರಿಗೆ ಹೊಸ ತರಹದ ಅನುಭವ...

ಇಲ್ಲಿನ ಸೈನಿಕ ಶಾಲೆಯ ಸಭಾಂಗಣದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ಹೆರಾಲ್ಡ್‌’ ಪತ್ರಿಕಾ ಬಳಗದಿಂದ, ದೀಕ್ಷಾ ಸಂಸ್ಥೆ ಮತ್ತು ಕೆನರಾ ಬ್ಯಾಂಕ್‌ ಸಹಯೋಗದಲ್ಲಿ ಗುರುವಾರ ಶಾಲಾ ಮಕ್ಕಳಿಗಾಗಿ ನಡೆದ ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ನ ವಲಯ ಮಟ್ಟದ ಸ್ಪರ್ಧೆಯಲ್ಲಿ ಗೋಚರಿಸಿದ ದೃಶ್ಯಾವಳಿಯಿದು.

ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ 350ಕ್ಕೂ ಹೆಚ್ಚು ತಂಡಗಳ 700ಕ್ಕೂ ಅಧಿಕ ವಿದ್ಯಾರ್ಥಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ, ವಿಜಯಪುರದ ಆಕ್ಸ್‌ಫರ್ಡ್‌ ಐಐಟಿ ಒಲಂಪಿಯಾಡ್‌ ಶಾಲೆಯ ಅಭಿಷೇಕ್‌ ಹಿಳ್ಳಿ, ಯೋಗೇಶ್‌ ಬಿಸನಾಳ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಜ 24ರಂದು ಬೆಂಗಳೂರಿನಲ್ಲಿ ನಡೆಯುವ ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆಯಾಯ್ತು.

ತೀವ್ರ ಪೈಪೋಟಿ ನೀಡಿದ ವಿಜಯಪುರದ ಸೈನಿಕ ಶಾಲೆಯ ಶೇಖರ್ ಸುಮನ್‌, ಸೃಜನ್‌ ಎಸ್‌,ಕೆ, ತಂಡ ಈ ಬಾರಿಯೂ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಚಡಚಣ ತಾಲ್ಲೂಕಿನ ಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಾಧಿಕ್‌ ಮತ್ತು ಮಶಾಕ್‌ ತಂಡ ತೃತೀಯ ಸ್ಥಾನ ಪಡೆಯಿತು.

ನಸುಕಿನಲ್ಲೇ ಬಂದರು: ವಿಜಯಪುರ ಸೇರಿದಂತೆ ನೆರೆಯ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ವಿವಿಧೆಡೆಯಿಂದ ಸ್ಪರ್ಧಿಗಳು ಕ್ವಿಜ್‌ಗೆ ಬಂದಿದ್ದರು. ಬೆಳಿಗ್ಗೆ 8ರ ಆಸುಪಾಸಿನಿಂದಲೇ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕಾಗಿಯೇ ದೂರದ ಊರುಗಳಿಂದ ಮೈಕೊರೆವ ಚಳಿಯನ್ನು ಲೆಕ್ಕಿಸದೆ ನಸುಕಿನಲ್ಲೇ ಬಂದಿದ್ದು ವಿಶೇಷವಾಗಿತ್ತು.

ಒಂದು ಪ್ರೌಢಶಾಲೆಯಿಂದ ಮೂರು ತಂಡಗಳಂತೆ ಆರು ವಿದ್ಯಾರ್ಥಿಗಳಿಗೆ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೆ ಆರಂಭದಲ್ಲೇ 20 ಪ್ರಶ್ನೆಗಳನ್ನು ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಕೇಳಿದರು. ಈ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸುವ ಅವಕಾಶವಿತ್ತು. ಇದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆರು ತಂಡಗಳನ್ನು ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಎರಡು ತಂಡ ಅತ್ಯಂತ ಹೆಚ್ಚು ಅಂಕ ಗಳಿಸಿದ್ದು ವಿಶೇಷವಾಗಿತ್ತು.

ನಿರ್ಣಾಯಕ ಸುತ್ತಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿಗಳು ಆಯ್ಕೆಯಾದರು. ವಿಜಯಪುರದ ಆಕ್ಸ್‌ಫರ್ಡ್‌ ಐಐಟಿ ಒಲಂಪಿಯಾಡ್‌ ಶಾಲೆಯ ಯೋಗೇಶ್ ಬಿಸನಾಳ, ಅಭಿಷೇಕ್‌ ಹಿಳ್ಳಿ, ಸೈನಿಕ ಶಾಲೆಯ ಶೇಖರ್ ಸುಮನ್‌, ಸೃಜನ್‌ ಎಸ್‌,ಕೆ, ಚಡಚಣ ತಾಲ್ಲೂಕಿನ ಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಾಧಿಕ್‌ ಮತ್ತು ಮಶಾಕ್‌.

ವಿಜಯಪುರದ ರಾಮಕೃಷ್ಣ ಪ್ರೌಢಶಾಲೆಯ ಅಶ್ವಿನಿ, ಅಬ್ದುಲ್‌, ಕೇಂದ್ರೀಯ ವಿದ್ಯಾಲಯದ ಸಮೀರ್‌, ಅಮೃತ್‌, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತುಂಗಳ ಪ್ರೌಢಶಾಲೆಯ ಸಿದ್ಧಲಿಂಗ ಹಾಗೂ ವೀರೇಶ್‌ ತಂಡ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದರು.

ವಿಜಯಪುರ ಸೈನಿಕ ಶಾಲೆಯ ಶೇಖರ್ ಸುಮನ್‌, ಸೃಜನ್‌ ಎಸ್‌,ಕೆ, ಹಿಂದಿನ ವರ್ಷದ ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗಿಯಾಗಿ, ದ್ವಿತೀಯ ಸ್ಥಾನ ಪಡೆದಿದ್ದರು. ಈ ಬಾರಿಯೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮುಂದಿನ ಚಾಂಪಿಯನ್‌ಷಿಪ್‌ ನಮ್ಮದೇ ಎಂದು ಇದೇ ಸಂದರ್ಭ ಹೆಮ್ಮೆಯಿಂದ ಬೀಗಿದರು. ಹಿಂದಿನ ಚಾಂಪಿಯನ್‌ಷಿಪ್‌ನಂತೆ ಈ ಬಾರಿಯೂ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದು ವಿಶೇಷ. ಆದರೆ ಶಾಲೆ ಮಾತ್ರ ಬೇರೆ.

ಐದು ಸುತ್ತಿನಲ್ಲಿ ನಡೆದ ಸ್ಪರ್ಧೆಯಲ್ಲಿ ಸಾಮಾನ್ಯ ಜ್ಞಾನ, ಸ್ಥಳೀಯ ಮಹತ್ವದ ಪ್ರಶ್ನೆಗಳು, ಸುಳಿವಿನ ಸಹಾಯದಿಂದ ಉತ್ತರಿಸುವ ಪ್ರಶ್ನೆಗಳು, ಹೋಲಿಕೆ ಮಾಡಿ ಉತ್ತರಿಸುವ ಪ್ರಶ್ನೆಗಳನ್ನು ಕೇಳಲಾಯಿತು. ಅಂತಿಮ ಸುತ್ತಿನಲ್ಲಿ ಮೊದಲು ‘ಬಜರ್‌’ ಒತ್ತಿದವರಿಗೆ ಉತ್ತರಿಸುವ ಅವಕಾಶ ನೀಡಲಾಗಿತ್ತು.

ವಿಜಯಪುರದ ಮಾಲಿಕ್‌–ಎ–ಮೈದಾನ್, ಸಾಠ್‌ ಖಬರ್, ವಿಜಯಪುರದ ಐತಿಹ್ಯ, ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ, ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಬಸವೇಶ್ವರ, ಚಾಂದ್‌ ಬೀಬಿ. ಮುಧೋಳದ ಬೇಟೆ ನಾಯಿ ಖ್ಯಾತಿಯ ಮುಧೋಳ ಹೌಂಡ್ಸ್, ರಕ್ಕಸ ತಂಗಡಗಿಯಲ್ಲಿ 1565ರಲ್ಲಿ ನಡೆದ ತಾಳಿಕೋಟೆ ಕದನಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ಸಾಹದಿಂದ ಉತ್ತರಿಸಿದರು. ಜ್ಞಾನದೊಂದಿಗೆ, ತೀವ್ರ ಕುತೂಹಲ ಕೆರಳಿಸುವ ಹಾಗೆ ಹಲ ಪ್ರಶ್ನೆಗಳನ್ನು ರೂಪಿಸಿದ್ದು ವಿಶೇಷವಾಗಿತ್ತು.

90 ಅಂಕ ಗಳಿಸಿದ ವಿಜಯಪುರದ ಆಕ್ಸ್‌ಫರ್ಡ್‌ ಐಐಟಿ ಒಲಂಪಿಯಾಡ್‌ ಶಾಲೆಯ ತಂಡ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಯಿತು. ತೀವ್ರ ಪೈಪೋಟಿ ನೀಡಿದ ಸೈನಿಕ ಶಾಲೆಯ ತಂಡ 88 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆಯಿತು. 35 ಅಂಕ ಗಳಿಸಿದ್ದ ಚಡಚಣ ತಾಲ್ಲೂಕಿನ ಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೃತೀಯ ಸ್ಥಾನ ಪಡೆಯಿತು.

ಮೊದಲ ಮೂರು ಸ್ಥಾನ ಗಳಿಸಿದ ತಂಡಗಳಿಗೆ ಕ್ರಮವಾಗಿ ₹ 6000, ₹ 4000, ₹ 2000 ನಗದು ಬಹುಮಾನದ ಜತೆಗೆ ಟ್ರೋಫಿ, ಪ್ರಶಂಸಾ ಪತ್ರ, ಪದಕ ವಿತರಿಸಲಾಯಿತು. 4, 5, 6ನೇ ಸ್ಥಾನ ಪಡೆದ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಡಾಮಿನೊ ರೌಂಡ್‌ನಲ್ಲಿ ಡಾಮಿನೇಟ್‌..!

ನಿರ್ಣಾಯಕ ಹಂತದ ಡಾಮಿನೊ ರೌಂಡ್‌ನಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿಗಳು, ಸ್ಪರ್ಧೆಯ ಫಲಿತಾಂಶವನ್ನೇ ತೀವ್ರ ಕುತೂಹಲ ಘಟಕ್ಕೆ ಕೊಂಡೊಯ್ದರು. ಈ ಸುತ್ತಿನಲ್ಲಿ 48 ಅಂಕ ಸಂಪಾದಿಸಿ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಆರಂಭದ ಸುತ್ತಿನಿಂದಲೂ ವಿಜಯಪುರದ ಆಕ್ಸ್‌ಫರ್ಡ್‌ ಐಐಟಿ ಒಲಂಪಿಯಾಡ್‌ ಶಾಲೆಯ ಯೋಗೇಶ್‌ ಬಿಸನಾಳ, ಅಭಿಷೇಕ್‌ ಹಿಳ್ಳಿ ಎಲ್ಲ ಪ್ರಶ್ನೆಗಳಿಗೂ ನಿಖರ ಉತ್ತರ ನೀಡುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದರು. ನಿರ್ಣಾಯಕ ಘಟ್ಟದಲ್ಲಿ ತಮ್ಮ ಅಂಕಗಳ ಆಧಾರದಲ್ಲಿ ಚಾಣಾಕ್ಷ್ಯ ನಡೆ ಅನುಸರಿಸಿದರು. ತಮಗೆ ನಿಖರವಾಗಿ ಗೊತ್ತಿದ್ದಕ್ಕೆ ಉತ್ತರ ನೀಡುವ ಮೂಲಕ, ಮೊದಲ ಸ್ಥಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದು ವಿಶೇಷವಾಗಿತ್ತು.

ತಲಾ 35 ಅಂಕ ಗಳಿಸಿದ್ದ ಚಡಚಣ ತಾಲ್ಲೂಕಿನ ಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಿಜಯಪುರದ ರಾಮಕೃಷ್ಣ ಪ್ರೌಢಶಾಲೆಯ ನಡುವೆ ಮೂರನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯಿತು. ಈ ಎರಡೂ ತಂಡಗಳಿಗೆ ಕೇಳಿದ ಲಿಖಿತ ಪ್ರಶ್ನೆ ವಿಭಾಗದಲ್ಲಿ ಮತ್ತೆ ಸಮಾನ ಅಂಕ ಗಳಿಸಿದವು. ಬಜರ್‌ ರೌಂಡ್‌ನಲ್ಲಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಮೊದಲು ಬಜರ್‌ ಒತ್ತಿ ಉತ್ತರ ಹೇಳುವ ಮೂಲಕ ಮೂರನೇ ಸ್ಥಾನ ಪಡೆಯುವ ಜತೆಗೆ, ಸ್ಪರ್ಧೆಯಲ್ಲಿ ತೀವ್ರ ರೋಚಕತೆ ಸೃಷ್ಟಿಸಿದ್ದು ವೀಕ್ಷಕರ ಗಮನ ಸೆಳೆಯಿತು.

ಆಕ್ಸ್‌ಫರ್ಡ್‌ ತಂಡ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ತಲಾ 10 ಅಂಕ ಗಳಿಸಿದರೆ, ಮೂರನೇ ಸುತ್ತಿನಲ್ಲಿ 45, ನಾಲ್ಕನೇ ಸುತ್ತಿನಲ್ಲಿ 10, ಅಂತಿಮ ಸುತ್ತಿನಲ್ಲಿ 5 ಅಂಕ ಗಳಿಸಿತು. ಸೈನಿಕ ಶಾಲೆ ಆರಂಭಿಕ ಸುತ್ತಿನಲ್ಲಿ 10, ಎರಡನೇ ಸುತ್ತಿನಲ್ಲಿ ಶೂನ್ಯ, ಮೂರನೇ ಸುತ್ತಿನಲ್ಲಿ 20, ನಾಲ್ಕನೇ ಸುತ್ತಿನಲ್ಲಿ 15, ಡಾಮಿನೊ ರೌಂಡ್‌ನಲ್ಲಿ 48 ಅಂಕ ಗಳಿಸುವ ಮೂಲಕ ಮಿಂಚಿನ ಪ್ರದರ್ಶನ ನೀಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !