ಪಾಕ್ ಪರ ಪೋಸ್ಟ್ ಆರೋಪ; ಬಂಧನಕ್ಕೆ ಆಗ್ರಹ

ಸೋಮವಾರ, ಮಾರ್ಚ್ 25, 2019
33 °C
ಎಬಿವಿಪಿ ಪ್ರತಿಭಟನೆ; ಮಂಡಿಯೂರಿ ಕ್ಷಮೆ ಕೋರಿದ ಪ್ರಾಧ್ಯಾಪಕ

ಪಾಕ್ ಪರ ಪೋಸ್ಟ್ ಆರೋಪ; ಬಂಧನಕ್ಕೆ ಆಗ್ರಹ

Published:
Updated:
Prajavani

ವಿಜಯಪುರ: ‘ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕ ಸಂದೀಪ ವಠಾರ, ಪುಲ್ವಾಮಾ ದಾಳಿ ನಂತರ ಪಾಕಿಸ್ತಾನ ಪರ ಒಲವು ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ’ ಎಂದು ದೂರಿ ಎಬಿವಿಪಿ ಕಾರ್ಯಕರ್ತರು ಶನಿವಾರ ಕಾಲೇಜಿನ ಆವರಣದಲ್ಲಿ ಪ್ರತಿಭಟಿಸಿದರು.

‘ಈತ ಕಾಲೇಜಿನಲ್ಲೂ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದ. ರಾಜಕೀಯ ಹಸ್ತಕ್ಷೇಪದಲ್ಲಿ ಪ್ರವೀಣನಿದ್ದ. ಕಾಲೇಜಿನ ಆಡಳಿತ ಮಂಡಳಿ ಕೂಡಲೇ ಈತನನ್ನು ಅಮಾನತುಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಗೃಹ ಸಚಿವರು ಅಧ್ಯಕ್ಷರಿರುವ ಕಾಲೇಜಿನಲ್ಲೇ ಈ ಘಟನೆ ನಡೆದಿದೆ. ಎಂ.ಬಿ.ಪಾಟೀಲ ಇತ್ತ ಗಮನ ಹರಿಸಬೇಕು. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಪ್ರಾಧ್ಯಾಪಕನನ್ನು ಬಂಧಿಸಬೇಕು’ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಸಚಿನ ಬಾಗೇವಾಡಿ ಆಗ್ರಹಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ ಬಿರುಸುಗೊಳ್ಳುತ್ತಿದ್ದಂತೆ, ಪ್ರಾಧ್ಯಾಪಕ ಸಂದೀಪ ವಠಾರ ಮಂಡಿಯೂರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ಇದರ ಜತೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಕ್ರಮ ಜರುಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ದೂರು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣಗಳ ಪೋಸ್ಟ್ ಪರಿಶೀಲನೆ ನಡೆಸಿದ್ದೇವೆ. ದೇಶ ವಿರೋಧಿ ಪೋಸ್ಟ್‌ ಕಂಡುಬಂದಿಲ್ಲ. ಬಿಜೆಪಿ ವಿರೋಧದ ಪೋಸ್ಟ್‌ಗಳಿವೆ. ದೂರು ನೀಡಿದರೆ ದಾಖಲಿಸಿಕೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಕಾಲೇಜಿನ ಸಿಬ್ಬಂದಿಯನ್ನು ಸಂಪರ್ಕಿಸಲು ಯತ್ನಿಸಿದರೂ, ಲಭ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !