ಎಲ್ಲಾ ಮಾಯ... ಎಲ್ಲಾ ಮಾಯೆ

7

ಎಲ್ಲಾ ಮಾಯ... ಎಲ್ಲಾ ಮಾಯೆ

Published:
Updated:

ಪಂಜರದಲ್ಲಿದ್ದ ಪಕ್ಷಿಗಳು ಹೋದದ್ದೆಲ್ಲಿ? ಶವಪೆಟ್ಟಿಗೆಯಲ್ಲಿದ್ದ ದೇಹ ಗಾಳಿಯಲ್ಲಿ ತೇಲುತ್ತ ಮಾಯವಾಯಿತೆ? ಅಸ್ಥಿಪಂಜರದಂತಿದ್ದ ವ್ಯಕ್ತಿಜೊತೆಗಿದ್ದ ಜಾದೂಗಾರ ನೋಡನೋಡುವುದರಲ್ಲಿ ಪ್ರೇಕ್ಷಕರ ನಡುವೆಯೇ ಪ್ರತ್ಯಕ್ಷ!

ಜಾದೂ ಹಾಗೂ ಕಣ್ಕಟ್ಟು, ಭ್ರಮಾಲೋಕದ ಸೃಷ್ಟಿ ಹಾಗೂ ವಶೀಕರಣದಂತೆ ಹಲವಾರು ತಂತ್ರಗಳನ್ನು ಬಳಸುತ್ತಲೇ ನಮ್ಮ ಇಹಪರವನ್ನು ಮರೆಸುವಂಥ ಶೋ ಬೆಂಗಳೂರಿನಲ್ಲಿ ಇದೇ 11ರವರೆಗೆ ನಡೆಯುತ್ತಿದೆ.

ಸಾಮಾನ್ಯವಾಗಿ ನಮ್ಮನ್ನು ವೇದಿಕೆಯ ಮೇಲೆ ಕರೆದು, ತಲೆಯಿಂದ ಮೊಟ್ಟೆ ತೆಗೆಯುವುದು, ಛತ್ರಿಯಿಂದ ಉದ್ದಾನುದ್ದ ರುಮಾಲುಗಳನ್ನು ಎಳೆಯುವುದು ಇಂಥ ಜಾದೂವನ್ನು ನೋಡಿರುತ್ತೇವೆ. ಆದರೆ ಜೀವಂತ ಹುಡುಗಿಯನ್ನು ಏಕಾಏಕಿ ಕತ್ತರಿಸುವುದು, ಕಣ್ಕಟ್ಟಿ, ಪೆಟ್ಟಿಗೆಯೊಳಗೆ ಹೋದ ಜಾದೂಗಾರ ಜನರ ನಡುವೆಯಿಂದ ಎದ್ದು ಬರುವುದು.. ಇಂಥ ಅಪರೂಪದ ಅನುಭವಗಳನ್ನು ಈ ಜಾದೂ ಶೋ ಕಟ್ಟಿಕೊಡುತ್ತದೆ.

ಇದಕ್ಕೆ ತಕ್ಕಂತಹ ಹಿನ್ನೆಲೆ ಸಂಗೀತ, ಅಂಧಕಾರ, ಸಭಾಂಗಣದಲ್ಲಿಯೂ ಮೌನ. ಆ ಕಡುಮೌನದಲ್ಲಿ ನಮ್ಮೆದೆ ಬಡಿತ ನಮಗೇ ಕೇಳಿಸುವಂಥ ಹಲವಾರು ಸನ್ನಿವೇಶಗಳು. ಆ ನಂತರದ ನಿಟ್ಟುಸಿರು, ಹಲವಾರು ಚಪ್ಪಾಳೆಗಳು. ಇಂಥವೇ ಹಲವು ಕಣ್ಕಟ್ಟುಗಳಿಗೆ ಸಾಕ್ಷಿಯಾಗುವ ಅವಕಾಶ ಈ ಮ್ಯಾಜಿಕ್‌ ಶೋನಲ್ಲಿದೆ.

ಪ್ರಿಯಾ ಕಲ್ಚರಲ್‌ ಸಂಸ್ಥೆ ಆಯೋಜಿಸಿರುವ ಈ ಶೋನಲ್ಲಿ ಸರ್ಕಾರ್‌ ಕುಟುಂಬದ ಯುವ ಜಾದೂಗಾರ ಕಾಣಿಸಿಕೊಳ್ಳಲಿದ್ದಾರೆ. ಜಾದೂವನ್ನೇ ಉಸಿರಾಡಿ, ಜಾದೂವನ್ನೇ ಹಾಸಿಹೊದೆಯುವೆ ಎಂದು ಹೇಳಿಕೊಳ್ಳುವ ಅವರು ಪ್ರೇಕ್ಷಕರನ್ನು ಜಾದೂವಿನ ಲೋಕಕ್ಕೆ ಕರೆದೊಯ್ಯುತ್ತಾರೆ, ಸೆಳೆದೊಯ್ಯುತ್ತಾರೆ.

ಪ್ರದರ್ಶನದ ವೇಳೆ ಮತ್ತೇನನ್ನೂ ಯೋಚಿಸದಂತೆ ಕಟ್ಟಿಹಾಕುವ ಕಲೆ ಅವರಿಗೆ ರಕ್ತಗತವಾಗಿದೆ. ಪ್ರದರ್ಶನದ ನಂತರವೂ ಬಹಳಷ್ಟು ಕಾಲದವರೆಗೆ ಈ ಅನುಭವವೆಲ್ಲ ಸ್ಮರಣೆಯ ಕೋಶದಲ್ಲಿ ಕಾಯಂ ಜಾಗ ಪಡೆಯುವಂತೆ ಮಾಡಲು ಶಕ್ತವಾಗಿದೆ ಅವರ ತಂಡ.

ರಂಗ ಸಜ್ಜಿಕೆ, ವಸ್ತ್ರವೈಭವ, ಪ್ರಸಾಧನ, ಬೆಳಕಿನ ಸಂಯೋಜನೆ, ಪ್ರೇಕ್ಷಕನಿಗೆ ಒಂದಿನಿತೂ ಬೇಸರವಾಗದಂತೆ, ಬಿಡುವು ನೀಡದಂತೆ ಒಂದಾದ ನಂತರ ಒಂದು ಜಾದೂಗಳ ಮೆರವಣಿಗೆಯೇ ಇಲ್ಲಿ ಸಾಗುತ್ತದೆ.

ಭಾರತದ ಹೆಸರಾಂತ ಜಾದೂಗಾರ ಪಿ.ಸಿ. ಸರ್ಕಾರ್‌ ಜಾದೂಲೋಕವನ್ನು ಕಣ್ತುಂಬಿಸಿಕೊಳ್ಳಬಹುದು. ಪ್ರತಿ ದಿನ ಎರಡು ಶೋಗಳನ್ನು ಆಯೋಜಿಸಲಾಗುತ್ತಿದೆ. ಸಂಜೆ ನಾಲ್ಕು ಹಾಗೂ 7ಗಂಟೆಗೆ ಈ ಪ್ರದರ್ಶನಗಳಿವೆ. ಮಕ್ಕಳೊಂದಿಗೆ ಹೋಗಿ, ಮಕ್ಕಳಾಗಿಯೇ ನೋಡಲು ಇದೊಂದು ಸದವಕಾಶ. ಹೆಚ್ಚಿನ ಮಾಹಿತಿಗೆ– 91484 46679. ಆನ್‌ಲೈನ್‌ ಬುಕಿಂಗ್‌ಗಾಗಿ: www.bookmyshow.com


ಪಿ.ಸಿ.ಸರ್ಕಾರ್ ಮತ್ತು ತಂಡದವರು ಮ್ಯಾಜಿಕ್ ಷೋ ನಡೆಸಿದರು  -ಪ್ರಜಾವಾಣಿ ಚಿತ್ರ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !