ದರ್ಶನ

7

ದರ್ಶನ

Published:
Updated:
Deccan Herald

ನಮ್ಮೊಳಗೇ ಇವೆ
ಎಂದೂ ಮೈಲಿಗೆಯಾಗದ ದಿವ್ಯ ಶಿಖರಗಳು
ಉಕ್ಕುವ ಜೀವನದಿಗಳಲಿ ಬತ್ತದ ಒರತೆಗಳು.
ಸಸ್ಯಶಾಮಲೆಯರು ನರ್ತಿಸುವ
ನಮ್ಮ ಮಲೆಗಳಲ್ಲಿ ಆಡಿಕೊಂಡಿವೆ ಮುದ್ದಾಗಿ
ಹುಲಿ ಸಿಂಹಗಳೂ...

ಬೆಟ್ಟದ ತುತ್ತತುದಿಯೇರಲೇಬೇಕೆಂಬ
ದರ್ದು ನಮಗಿಲ್ಲ.
ಹೊತ್ತು ನಿಲ್ಲುವೆವು ನಿಮ್ಮ ಬೆತ್ತಲೆ ಪಾದಗಳ
ಹೋಗಿಬನ್ನಿ.
ಹೌದು, ಮುಟ್ಟಾಗಿದೆ ಭೂಮಿ...
ಮುಟ್ಟುವ ಯೋಗ್ಯತೆಯಿದ್ದವರು
ಮಾತ್ರ ಮುಟ್ಟುವರು ನಿಜಶಿಖರ
ಎಚ್ಚರವಿರಲಿ!

ಏರಿದರೆ ಏನಾಗಬಹುದು?
ನಮ್ಮ ಬೆಳಕಲ್ಲಿ ನಾವೇ ಬಯಲಾಗಬಹುದು.
ಮಗುವಂಥದೇವರ ಮುದ್ದಿಸಿ
ಆಲಯವ ಹೊಟ್ಟೆಯೊಳಗಿಟ್ಟುಕೊಳ್ಳಬಹುದು.
ಗಮ್ಯವೇ ನಾವಾದರೆ ತಲುಪುವ
ಹಂಗೂ ಇಲ್ಲವಾಗಬಹುದು.

ನಿಮ್ಮ ಮಿದುಳ ಭಿತ್ತಿಗಳಲ್ಲಿ
ನಮ್ಮೆದೆಯ ಹಾಲುಹೀರಿ ಬೆಳೆದ
ಜೀವತಂತುಗಳು...
ಎಲ್ಲಿ ಹಾಲಾಹಲವನುಂಡವೋ ಸ್ವಾಮೀ...
ಆ ಬೇಟೆಗಾರನ ಭಂಗಿ
ವಿಜಯೋನ್ಮಾದದ ಕೇಕೆ
ಭಯವಾಗುತ್ತೆ ಬಲಿತ ಮಕ್ಕಳ ಮೈದಡವಲೂ..
ನಿಮ್ಮ ಮೀಸೆಗಂಟಿದ ಹಾಲಪಸೆಯ
ಒರೆಸಬೇಕೆನಿಸುತ್ತೆ ನಮ್ಮ ಅಂಗೈ ಬಿಸುಪಿನಲ್ಲಿ
ಆದರೂ...

ಓ ಬನ್ನಿ ದೇವರ
ಖಾಸಗಿ ಕಾವಲುಪಡೆಯ ಯೋಧರೇ..
ವಿರಮಿಸಿ ಅರೆಘಳಿಗೆ ಮಡಿಲ ಜೋಲಿಯಲ್ಲಿ.
ಜೀಕುವುದು ಕಣ್ಣಲ್ಲಿ
ಹೊಸ ಮನ್ವಂತರದ ಕನಸು.
ಒತ್ತಿದ ಹೊಟ್ಟೆಗೆ ನಿಮ್ಮ ಕಿವಿ ಸೋಕಿದರಲ್ಲಿ
ಆಲಿಸಿ ಬ್ರಹ್ಮಾಂಡದ ನಾದ ಕೇಳುವದು.
ಅಲ್ಲೇ ಇಳಿದಿಳಿದು ಹೋದರೆ
ಯೋಗನಿದ್ರೆಯಲೊಮ್ಮೆ
ನಿಮ್ಮ ದರ್ಶನ ನಿಮಗಾಗುವುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !