ಕಡೆಯ ಚಿತ್ರ

7

ಕಡೆಯ ಚಿತ್ರ

Published:
Updated:
Prajavani

ಹೊತ್ತು ನಡೆಯಬಹುದಷ್ಟೆ
ಹೊತ್ತು ಯಾರದ್ದು ಅಲ್ಲ

ಮನೆಯಿಂದ ಮಸಣಕೆ ಎಷ್ಟು ಹೆಜ್ಜೆ
ಎಣಿಸಿಕೊಂಡೆ ಮುನ್ನಡೆಯುತ್ತದೆ ಚೈತ್ರಯಾತ್ರೆ
ನೀನೆಷ್ಟು ಜೊತೆಯಾಗಿದ್ದಿ...
ಕಳೆದುಕೊಂಡರಾಯಿತು ಜೀವ ಹಗುರ
ಋಣ ಸಂದಾಯದ ಭಾರ

ಹಲಗೆ ನುಡಿಸುವವ ಲೆಕ್ಕಾಚಾರದಲ್ಲೆ ಇದ್ದಾನೆ
ಹೆಜ್ಜೆ ತಪ್ಪಬಹುದು ತಾಳ ತಪ್ಪಲಾರ
ನೀನು ಸತ್ತು ಹೋಗಿದ್ದಿ... ಸಾಬೀತುಪಡಿಸಲು ಜಗತ್ತು ಸೆಣಸುತ್ತದೆ

ನೀನೀಗ ಸ್ವರ್ಗವಾಸಿ!
ನಿನ್ನ ಇಚ್ಛೆ ಆಇಚ್ಛೆ ಎಲ್ಲವೂ ಗೌಣ
ಉಳಿದಿರುವ ಹಿಡಿ ಬೂದಿ... ಅದು ನೀನು
ನಡು ಬೆರಳದ್ದಿ ನೊಸಲಿಗಿಟ್ಟರೆ ಅದು ನೀನಲ್ಲ
ಸೀಟಿಕೊಂಡರೆ
ನಸೀಬು ಖಾಲಿ ಖಾಲಿ

ನಿನಗೂ ಗೊತ್ತಿದೆ
ಮುಗಿಯುತ್ತಿದ್ದಂತೆ ಇಲ್ಲಿ ಎಲ್ಲ ಶುರುವಾಗುತ್ತವೆ
ಕಾಯಿ ಕಟ್ಟುವ ಕಾಲಕ್ಕೆ ಮತ್ತೆ ಮೊಟ್ಟೆಯೊಡೆಯುತ್ತದೆ ಕಾಯಿಕೊರಕ

ಕಣ್ಣಲ್ಲಿ ದಾಖಲಾದ ಕಟ್ಟಕಡೆಯ ಚಿತ್ರ ಯಾರದು?
ಕೊರೆವ ಚಿಂತೆಯೊಂದು ಇದ್ದೆ ಇರುತ್ತದೆ
ತಲೆ ಬೋಳಿಸಿಕೊಂಡ ಹುಡುಗನೊಬ್ಬ
ನಿನ್ನ ಹೆಣದ ಮುಂದೆ ಕಿಚ್ಚು ಹಿಡಿದು ಹೊರಟಿದ್ದಾನೆ
ನೀನು ಅಪ್ಪ
ಅವನು ಮಗ.

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !