7

ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಜಟಾಪಟಿ

Published:
Updated:

ಶಿವಮೊಗ್ಗ/ತೀರ್ಥಹಳ್ಳಿ: ಮೂಲಸೌಕರ್ಯ ಕಲ್ಪಿಸದೇ ಅಧ್ಯಯನ ಕೇಂದ್ರ ತೆರೆದರೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಏನೆಲ್ಲ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿ ಬಳಿ ಆರಂಭಿಸಿರುವ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ ಸಾಕ್ಷಿ.

ಕುಪ್ಪಳಿ ಬಳಿಯ ಗಡಿಕಲ್‌ನಲ್ಲಿ ಇರುವ ವಸ್ತುಸಂಗ್ರಹಾಲಯ ಕಟ್ಟಡದಲ್ಲಿ 2017–18ನೇ ಸಾಲಿನಿಂದ ಅಧ್ಯಯನ ಕೇಂದ್ರ ಆರಂಭವಾಗಿತ್ತು. ಆದರೆ, ಮಲೆನಾಡಿನ ದಟ್ಟ ಅರಣ್ಯ ಪ್ರದೇಶದ ಈ ಭಾಗದಲ್ಲಿ ಪ್ರಾಧ್ಯಾಪಕರಿಗೆ ಅಗತ್ಯ ವಸತಿನಿಲಯ ಸೌಲಭ್ಯ ಕಲ್ಪಿಸದ ಕಾರಣ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದೆ.

ಮೂಲಸೌಕರ್ಯಕ್ಕೆ ಆಗ್ರಹಿಸಿ ಹಾಗೂ ಪ್ರಾಧ್ಯಾಪಕರು ಮನೆಗೆಲಸಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕೆಲವು ವಿದ್ಯಾರ್ಥಿಗಳು ಹಂಪಿ ವಿಶ್ವವಿದ್ಯಾಲಯದ ಕುಲಪತಿ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಲವು ವಿದ್ಯಾರ್ಥಿಗಳು ಪ್ರಾಧ್ಯಾಪಕರ ಬೆಂಬಲಕ್ಕೆ ನಿಂತಿದ್ದಾರೆ. ಇದು ವಿದ್ಯಾರ್ಥಿಗಳ ನಡುವೆಯೇ ಸಂಘರ್ಷಕ್ಕೆ ಕಾರಣವಾಗಿದೆ.

ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ಸಂಯೋಜನೆಯ 5 ವರ್ಷಗಳ ಈ ಕೋರ್ಸ್‌ಗೆ ಮೊದಲ ವರ್ಷ ಎಂಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಒಂದಿಬ್ಬರು ನೇರ ಸಂಶೋಧನೆಗೆ ಬಂದಿದ್ದರು. ಈ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿಲ್ಲದ ಕಾರಣ ಕೆಲವರು ವಸ್ತು ಸಂಗ್ರಹಾಲಯ ಕಟ್ಟಡದಲ್ಲಿ ಉಳಿದುಕೊಂಡರೆ, ಕೆಲವರಿಗೆ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಕೆ.ಸಿ.ಶಿವಾರೆಡ್ಡಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿದ್ದರು.

ಅಡುಗೆ ಮಾಡಿ ಬಡಿಸಿದ್ದ ಮುಖ್ಯಸ್ಥ: ವಸತಿನಿಲಯದ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಲ್ಲಿ ತೊಂದರೆಯಾಗಬಾರದು ಎಂದು ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಕೆ.ಸಿ.ಶಿವಾರೆಡ್ಡಿ ಅವರೇ ಬೆಳಿಗ್ಗೆ ಸಮಯದಲ್ಲಿ ಸ್ವತಃ ಉಪಾಹಾರ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಬಡಿಸಿದ್ದಾರೆ.

‘ಬೆಳಿಗ್ಗೆ ಅವರು ಉಪಾಹಾರ ಸಿದ್ಧಪಡಿಸುತ್ತಿದ್ದರು. ಮಧ್ಯಾಹ್ನ, ರಾತ್ರಿ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದೆವು. ಕೆಲ ಸಮಯ ‘ಡಿ’ ಗ್ರೂಪ್ ನೌಕರ ಗುರು ಕೂಡ ಕೈಜೋಡಿಸುತ್ತಿದ್ದ. ಇದೆಲ್ಲ ಪರಸ್ಪರ ಮಾನವೀಯ ಸಹಕಾರವಾಗಿತ್ತು’ ಎಂದು ಕಲಿಕೆಯನ್ನು ಮಧ್ಯದಲ್ಲಿಯೇ ಬಿಟ್ಟಿರುವ ಹಳೆ ವಿದ್ಯಾರ್ಥಿ ಚಿದಾನಂದ ಹುಳಿಯಾರ್ ಹೇಳುತ್ತಾರೆ.

‘ಅಬಕಾರಿ ಇಲಾಖೆಯ ನೌಕರಿಯ ಸಂದರ್ಶನಕ್ಕೆ ಹಾಜರಾಗಲು ಮಧ್ಯದಲ್ಲೇ ಕಲಿಕೆ ಬಿಟ್ಟು ಬಂದೆ. ಅಲ್ಲಿನ ವಾತಾವರಣ, ಅಧ್ಯಯನ ಕೇಂದ್ರದ ಸಹಬಾಳ್ವೆ ಮರೆಯಲು ಸಾಧ್ಯವಿಲ್ಲ’ ಎಂದು ಅವರು ಸ್ಮರಿಸುತ್ತಾರೆ.

ಕುವೆಂಪು ಅವರ ವೈಚಾರಿಕತೆ, ಸಾಹಿತ್ಯದಿಂದ ಪ್ರೇರೇಪಣೆಗೊಂಡ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಕುಪ್ಪಳಿಯ ಸುಂದರ ಪರಿಸರದಲ್ಲಿ ಅಧ್ಯಯನ ಮಾಡಲು ಬಯಸುತ್ತಾರೆ. ಅದಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ಅಲ್ಲಿ ಅಧ್ಯಯನ ಕೇಂದ್ರ ತೆರೆದಿದೆ. ಈ ಭಾಗ ಪಶ್ವಿಮಘಟ್ಟ ಶ್ರೇಣಿಯಲ್ಲಿ ಬರುವ ಕಾರಣ ತಕ್ಷಣ ಕಟ್ಟಡ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಮೂಲಸೌಕರ್ಯ ಕಲ್ಪಿಸಲು ಸಮಯ ಹಿಡಿಯುತ್ತದೆ ಎನ್ನುವುದು ಅಲ್ಲಿನ ಪ್ರಾಧ್ಯಾಪಕರ ಅಭಿಮತ.

ಹಾಜರಾತಿ ಕೊರತೆ: ‘ವಿದ್ಯಾರ್ಥಿಗಳಲ್ಲಿ ಬಹುತೇಕರು ನಿತ್ಯ ತರಗತಿಗೆ ಹಾಜರಾಗುತ್ತಿರಲಿಲ್ಲ. ನಿಯಮ ಉಲ್ಲಂಘಿಸಿ ಬೇರೆ ಕೆಲಸ ಮಾಡುತ್ತಿದ್ದರು. ಒಬ್ಬ ವಿದ್ಯಾರ್ಥಿಯಂತೂ ಹವ್ಯಾಸಿ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಎಷ್ಟು ಬಾರಿ ಪ್ರಾಧ್ಯಾಪಕರು ಎಚ್ಚರಿಸಿದರೂ ಆತ ತರಗತಿಗೆ ಬರಲಿಲ್ಲ. ಕೊನೆ ಗಳಿಗೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಿಲ್ಲ ಎಂದು ಕುಲಪತಿ, ರಾಜ್ಯಪಾಲರಿಗೆ ದೂರು ನೀಡಿದ್ದಾನೆ. ಜತೆಗೆ, ನನ್ನ ಹೆಸರನ್ನೂ ಸೇರಿಸಿದ್ದಾನೆ. ಇದು ಅತ್ಯಂತ ಹೀನ ಕೃತ್ಯ’ ಎಂದು ವಿದ್ಯಾರ್ಥಿ ಚಿದಾನಂದ ಬೇಸರ ವ್ಯಕ್ತಪಡಿಸಿದರು.

ಎಲ್ಲವೂ ಪಾರದರ್ಶಕ

ಕುಪ್ಪಳಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳು ಪಾರದರ್ಶಕವಾಗಿವೆ. ಈ ಕೇಂದ್ರ ತೆರೆದ ಪುಸ್ತಕ. ಎಲ್ಲ ಮಾಹಿತಿಯನ್ನು ಸಾರ್ವಜನಿಕರು ಪರಿಶೀಲಿಸಬಹುದು. ಹಂಪಿ ಕನ್ನಡ ವಿಶ್ವವಿದ್ಯಾಲಯ ಕೇಂದ್ರದ ಉನ್ನತಿಗೆ ಕ್ರಮ ತೆಗೆದುಕೊಂಡಿದೆ. ಎಲ್ಲರೂ ತಾಳ್ಮೆ ವಹಿಸಬೇಕು ಎನ್ನುತ್ತಾರೆ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಕೆ.ಸಿ.ಶಿವಾರೆಡ್ಡಿ.

‘ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಕ್ರಮ ತೆಗೆದುಕೊಂಡಿದೆ. ವಸತಿನಿಲಯ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಆದರೆ, ಸ್ಥಳಾಭಾವದ ಕಾರಣ ವಿಳಂಬವಾಗಿದೆ’ ಎಂದು ವಿವರ ನೀಡುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !