ಚಾಮರಾಜನಗರ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

7
ಕೆಲವು ಬ್ಯಾಂಕುಗಳು ಬಂದ್‌, ಎಂದಿನಂತಿದ್ದ ಜನ, ವಾಹನಗಳ ಸಂಚಾರ, ಸರ್ಕಾರಿ ಬಸ್‌ಗಳು ವಿರಳ

ಚಾಮರಾಜನಗರ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

Published:
Updated:
Prajavani

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರದ ಮೊದಲ ದಿನವಾದ ಮಂಗಳವಾರ ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಎಲ್ಲ ಕಡೆ ಜನಜೀವನ ಎಂದಿನಂತೆ ಇತ್ತು.

ಅಂಗಡಿ ಮುಂಗಟ್ಟುಗಳು ತೆರೆದೇ ಇದ್ದವು. ವಹಿವಾಟಿಗೆ ಯಾವುದೇ ಧಕ್ಕೆಯೂ ಆಗಲಿಲ್ಲ. ಜನ, ವಾಹನಗಳ ಸಂಚಾರ ಎಂದಿನಂತೆ ಇತ್ತು. ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ಮೊದಲೇ ರಜೆ ಘೋಷಿಸಿದ್ದರಿಂದ ಮಕ್ಕಳನ್ನು ಕರೆದೊಯ್ಯುವ ಆಟೊಗಳು ಹಾಗೂ ಇತರ ವಾಹನಗಳು ಸಂಚರಿಸಲಿಲ್ಲ. ಉಳಿದಂತೆ ಆಟೊಗಳು ಲಭ್ಯವಿದ್ದವು.

ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳ: ಮಂಗಳವಾರ ಬೆಳಿಗ್ಗೆ ಚಾಮರಾಜನಗರ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದವು. ಆದರೆ, 12 ಗಂಟೆ ಸುಮಾರಿಗೆ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಯಿತು. ಸ್ವಲ್ಪ ಹೊತ್ತಿನ ನಂತರ ಗುಂಡ್ಲುಪೇಟೆ, ಕೊಳ್ಳೇಗಾಲಕ್ಕೆ ಬಸ್‌ ಸಂಚರಿಸಲು ಆರಂಭಿಸಿದವು. ಆದರೆ, ಬಸ್‌ ಟ್ರಿಪ್‌ಗಳು ಎಂದಿನಂತೆ ಇರಲಿಲ್ಲ.

‘ಮಧ್ಯಾಹ್ನದ ಮೇಲೆ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಬುಧವಾರ ಎಂದಿನಂತೆ ಬಸ್‌ ಸಂಚಾರ ಇರಲಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಬಸ್‌ ಮಾಲಕರ ಸಂಘ ಮುಷ್ಕರಕ್ಕೆ ಬೆಂಬಲ ನೀಡಿರಲಿಲ್ಲ. ಹಾಗಾಗಿ, ಖಾಸಗಿ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಇದ್ದುದರಿಂದ ಜನರು ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಯಿತು. 

ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಆದರೆ, ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು. 

ಬ್ಯಾಂಕುಗಳು ಬಂದ್‌

ಚಾಮರಾಜನಗರದಲ್ಲಿ ಎಸ್‌ಬಿಐ ಶಾಖೆಗಳು ತೆರೆದಿದ್ದವು. ಆದರೆ, ಕರ್ಣಾಟಕ, ಎಚ್‌ಡಿಎಫ್‌ಸಿ, ಸಿಂಡಿಕೇಟ್‌, ಆ್ಯಕ್ಸಿಸ್‌ ಬ್ಯಾಂಕುಗಳು ಸೇರಿದಂತೆ ಇನ್ನೂ ಕೆಲವು ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ. ಕೆಲವು ಬ್ಯಾಂಕುಗಳಲ್ಲಿ ‌ಸಿಬ್ಬಂದಿ ಇದ್ದರಾದರೂ ವಹಿವಾಟು ನಡೆಯಲಿಲ್ಲ. ಅಂಚೆ ಕಚೇರಿಗಳೂ ಬಂದ್‌ ಆಗಿದ್ದವು.‌

ರೈತರ ನೋಂದಣಿಗೆ ತೊಂದರೆ: ಬ್ಯಾಂಕುಗಳಲ್ಲಿ ಸೋಮವಾರ ವ್ಯವಹಾರ ನಡೆಯದೆ ಇದ್ದುದರಿಂದ ಸಾಲಮನ್ನಾ ಯೋಜನೆಗೆ ಸ್ವಯಂ ದೃಢೀಕರಣ ಮಾಡಿಕೊಳ್ಳಲು ಬಾಕಿ ಇರುವ ರೈತರಿಗೆ ತೊಂದರೆ ಆಯಿತು. ನೋಂದಣಿ ಮಾಡಿಕೊಳ್ಳಲು ಜನವರಿ 10 ಕೊನೆಯ ದಿನವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !