‘ಪ್ರಜಾ’ವಿಮಾ ಆರೋಗ್ಯವಾಗಿರಲಿ

7

‘ಪ್ರಜಾ’ವಿಮಾ ಆರೋಗ್ಯವಾಗಿರಲಿ

Published:
Updated:

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮಹತ್ತರವಾದ ಘೋಷಣೆಯೊಂದನ್ನು ಮಾಡಿದ್ದಾರೆ. ಅದರ ಪ್ರಕಾರ ದೇಶದ 50ಕೋಟಿ ಜನರು ಆರೋಗ್ಯ ವಿಮಾ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಈ ಯೋಜನೆಯು ಇದೇ ಸೆಪ್ಟೆಂಬರ್ 25ರಿಂದ ಪ್ರಾರಂಭವಾಗಲಿದೆ. ಅಂದು ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ. ಮೊದಲು ಈ ಯೋಜನೆಗೆ ಆಯುಷ್ಮಾನ್‌ ಭಾರತ್‌, ಮೋದಿ ಕೇರ್ ಎಂಬ ಹೆಸರುಗಳು ಕೇಳಿಬಂದಿದ್ದವು. ಆದರೆ ಈಗ ‘ಪ್ರಜಾ’ ಎಂದು ನಾಮಕರಣ ಮಾಡಲಾಗಿದೆ.

‘ಪ್ರಜಾ’ ಎಂದರೆ ‘ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ್’. ಇದು ಒಟ್ಟು 50 ಕೋಟಿ ಜನರಿಗೆ ತಲುಪುವ ಯೋಜನೆ. 10 ಕೋಟಿ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆಯನ್ನು ಒಳಗೊಂಡಿರುವ ಯೋಜನೆ ಇದು. 8.03ಕೋಟಿ ಗ್ರಾಮಾಂತರ ಪ್ರದೇಶದ ಜನರು ಹಾಗೂ 2.33ಕೋಟಿ ನಗರ ಪ್ರದೇಶದ ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಇದು ಸುಮಾರು ₹30 ಸಾವಿರ ಕೋಟಿಗಳ ಯೋಜನೆ. ಈ ಯೋಜನೆಯಲ್ಲಿ 1354 ವಿವಿಧ ಚಿಕಿತ್ಸೆಗಳನ್ನು ಸೇರಿಸಲಾಗಿದೆ. 

ಯೋಜನೆಯ ವೆಚ್ಚದಲ್ಲಿ ಶೇ 60ರಷ್ಟು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಶೇ 40ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಉತ್ತರ ಪೂರ್ವ ರಾಜ್ಯಗಳಾದ ಮಣಿಪುರ, ಮೇಘಾಲಯ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಿಗೆ ಕೇಂದ್ರವೇ ಶೇ 90ರಷ್ಟನ್ನು ಭರಿಸುತ್ತದೆ. ಈ ವೆಚ್ಚಗಳಲ್ಲಿ ಹೃದಯದ ಬೈಪಾಸ್ ಶಸ್ತ್ರಕ್ರಿಯೆ ಆದವರಿಗೆ ₹1 ಲಕ್ಷದ 10 ಸಾವಿರ, ಒಂದು ಸ್ಟೆಂಟ್ ಹಾಕುವುದಕ್ಕೆ ₹50 ಸಾವಿರ, ಕ್ಯಾನ್ಸರ್‌ಗೆ ಹಿಸ್ಟರಕ್ಟೆಮಿ ಮಾಡುವುದಕ್ಕೆ ₹50 ಸಾವಿರ, ಸಿಸೇರಿಯನ್ ಹೆರಿಗೆಗೆ ₹9 ಸಾವಿರ – ಹೀಗೆ ನಿಗದಿಪಡಿಸಲಾಗಿದೆ. ಸಿಸೇರಿಯನ್‌ಗೆ ನಿಗದಿ ಪಡಿಸಿರುವ ಮೊತ್ತ ಕಡಿಮೆ ಎಂಬ ಅಭಿಪ್ರಾಯವೂ ಇದೆ. ಆದರೆ ‘ಸಿಸೇರಿಯನ್ ಈಗಾಗಲೇ ಅನಾವಶ್ಯಕವಾಗಿ ನಡೆಯುತ್ತಿದ್ದು, ಶೇ 50ರಷ್ಟು ಸಿಸೇರಿಯನ್‌ಗಳು ಹಣ ಗಳಿಸುವ ಉದ್ದೇಶದಿಂದಲೇ ಮಾಡಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರ ಅದಕ್ಕೆ ಉತ್ತರಿಸಿದೆ.

ಪ್ರಜಾ ವಿಮೆಯಲ್ಲಿ ರೋಗಪತ್ತೆ ಹಚ್ಚುವ ಖರ್ಚನ್ನೂ ಸೇರಿಸಲಾಗಿದೆ. ಆದರೆ ಶಸ್ತ್ರಚಿಕಿತ್ಸೆಯಂಥ ಒಳರೋಗಿಯಾಗಿ ಪಡೆಯುವ ಚಿಕಿತ್ಸೆಗಳಿಗೇ ಹೆಚ್ಚಿನ ಮೊತ್ತ ಮೀಸಲಾಗಿರಿಸಲಾಗಿದೆ. ಭಾರತದಲ್ಲಿ ಇಂತಹ ಗಾತ್ರ ಮತ್ತು ವಿಸ್ತಾರದ ಆರೋಗ್ಯ ವಿಮೆಯ ಯೋಜನೆ ಯಾವ ರಾಜ್ಯದಲ್ಲೂ ಇರಲಿಲ್ಲ. ಅನೇಕ ರಾಜ್ಯಗಳು ಇದನ್ನು ಅಳವಡಿಸಿಕೊಳ್ಳುವ ಹಂತದಲ್ಲಿದ್ದಾರೆ. ಇದಾಗಲೇ ಒಂಬತ್ತು ರಾಜ್ಯಗಳು ಈ ಯೋಜನೆಗೆ ಕೈ ಜೋಡಿಸಿವೆ. ಕರ್ನಾಟಕ ರಾಜ್ಯವೂ ಯಶಸ್ವಿನಿ ಯೋಜನೆಯಿಂದ ಪ್ರಜಾ ಯೋಜನೆಯತ್ತ ಹೋಗಬಹುದೇನೋ...

ಈ ವಿಮಾ ಯೋಜನೆಯು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯತ್ತ ಗಮನ ಹರಿಸುವುದಿಲ್ಲ ಮತ್ತು ಹೊರರೋಗಿಗಳ ಖರ್ಚನ್ನು ಭರಿಸುವುದಿಲ್ಲ. ಆ ಕಾರಣಕ್ಕೆ ಆರೋಗ್ಯವನ್ನು ಕೇವಲ ಒಳರೋಗಿಗಳ ಹಾಗೂ ಶಸ್ತ್ರಚಿಕಿತ್ಸೆಯ ದೃಷ್ಟಿಯಿಂದಷ್ಟೇ ನೋಡಲಾಗಿದೆ – ಎಂದು ಕೆಲವರು ತಜ್ಞರು ಅಭಿಪ್ರಾಯಿಸಿದ್ದಾರೆ. ಇದಾಗಲೇ ತಿಳಿದಿರುವಂತೆ ಶೇ 70ರಷ್ಟು ಆರೋಗ್ಯದ ಖರ್ಚನ್ನು ಭಾರತೀಯರ ಪ್ರಜೆಗಳು ತಮ್ಮ ಜೇಬಿನಿಂದಲೇ ಭರಿಸುತ್ತಿದ್ದಾರೆ. ಅದರಲ್ಲೂ ಶೇ 70ರಷ್ಟು ಖರ್ಚನ್ನು ಭರಿಸುತ್ತಿರುವುದು ಹೊರ ರೋಗಿಗಳಾಗಿ. ಹೀಗಾಗಿ ಈ ಖರ್ಚನ್ನು ಹೇಗೆ ಕಡಿಮೆ ಮಾಡುವುದು ಎನ್ನುವ ಪ್ರಶ್ನೆ ಏಳುತ್ತದೆ. ಅಲ್ಲದೆ, ಅನೇಕ ರಾಜ್ಯಗಳಲ್ಲಿ ವಿಮೆಯ ದುರುಪಯೋಗವೂ ಕಂಡುಬಂದಿದೆ. ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಪ್ರೀಮಿಯಂ ಹೆಚ್ಚಾದಂತೆಲ್ಲಾ ಶಸ್ತ್ರಚಿಕಿತ್ಸೆ ಹೆಚ್ಚಾಗುತ್ತಾ ಹೋಗಿದೆ. ವಿಮೆ ಹಣ ಗಳಿಸುವ ಸಲುವಾಗಿ 22 ವರ್ಷದ ಹೆಣ್ಣುಮಕ್ಕಳ ಗರ್ಭಚೀಲವನ್ನು ತೆಗೆದಿರುವ ಘಟನೆಗಳು ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿವೆ. ಜೊತೆಗೆ ಶೇ 72ರಷ್ಟು ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳೇ ಆಗಿವೆ ಎನ್ನುವುದನ್ನೂ ಗಮನಿಸಬೇಕು. ‘ಸಾರ್ವಜನಿಕ ಮತ್ತು ಸರ್ಕಾರಿ’ ಎನ್ನುವುದು ಕೂಡ ಖಾಸಗಿ ಆಸ್ಪತ್ರೆ, ಖಾಸಗಿ ವೈದ್ಯರು, ಖಾಸಗಿ ಟ್ರಸ್ಟ್ ಮೂಲಕ ಖಾಸಗಿ ವಿಮೆ ಕಂಪನಿಗಳ ಮೂಲಕವೇ ನಿರ್ವಹಿಸುವ ವಿಷಯವಾಗಿದೆ. ಯಾರದೋ ಶಸ್ತ್ರಚಿಕಿತ್ಸೆಯನ್ನು ಇನ್ನಾರದೋ ಆಧಾರ್‌ಗೆ ಜೋಡಿಸುವುದು, ವಿಮೆಗಾಗಿಯೇ ‘ಚಿಕಿತ್ಸೆ’ಯ ಖರ್ಚು ಭರಿಸುವುದು  – ಇಂಥ ಹಲವು ದುರುಪಯೋಗಗಳಿಗೂ ಅವಕಾಶವಿದೆ. ಸರಿಯಾದ ನಿರ್ವಹಣೆ ಮತ್ತು ತಂತ್ರಜ್ಞಾನದ ಬಳಕೆಯಿಂದ ಇಂಥವನ್ನು ತಡೆಗಟ್ಟಲು ಸಾಧ್ಯ. ಪಟ್ಟಿನಲ್ಲಿ ಈ ವಿಮಾ ಯೋಜನೆಯು ಅರ್ಹರಿಗೆ ದೊರೆತು, ಯಶಸ್ವಿಯಾಗಲಿ ಎಂಬುದು ಎಲ್ಲರ ಹಾರೈಕೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !