ನಳಿನ್‌ ಕುಮಾರ್, ಶೋಭಾ ಕರಂದ್ಲಾಜೆ ಗೆಲುವಿನ ಹಾದಿ ಸುಗಮವಾಗಿದ್ದು ಹೇಗೆ?

ಗುರುವಾರ , ಜೂನ್ 27, 2019
29 °C
ಪ್ರಜಾವಾಣಿ ವಿಶ್ಲೇಷಣೆ

ನಳಿನ್‌ ಕುಮಾರ್, ಶೋಭಾ ಕರಂದ್ಲಾಜೆ ಗೆಲುವಿನ ಹಾದಿ ಸುಗಮವಾಗಿದ್ದು ಹೇಗೆ?

Published:
Updated:

ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿರುವ ವೇಳೆ ದಕ್ಷಿಣ ಕನ್ನಡ ಮತ್ತು ಉಡುಪಿ–ಚಿಕ್ಕಮಗಳೂರು ಕ್ಷೇತ್ರಗಳ ಫಲಿತಾಂಶದ ಕುರಿತು ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕಿ ನೀಳಾ ಎಂ.ಎಚ್‌. ಮತ್ತು ಸ್ಪೆಷಲ್ ಕರೆಸ್ಪಾಂಡೆಂಟ್ ಎಂ.ಜಿ.ಬಾಲಕೃಷ್ಣ ಅವರು ವಿಶ್ಲೇಷಿಸಿದ್ದು ಹೀಗೆ.

ನೀಳಾ ಎಂ.ಎಚ್‌: 29 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿ ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಯುವ ಐಕಾನ್‌ ಎಂದೇ ಬಿಂಬಿಸಲಾಗಿದ್ದ ಮಿಥುನ್ ರೈಗೆ ಬಿಜೆಪಿಯ ಗೆಲುವಿನ ಓಟವನ್ನು ತಡೆಯುವಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ವಿಶ್ಲೇಷಿಸೋಣ.

ಎಂ.ಜಿ.ಬಾಲಕೃಷ್ಣ: ನಳಿನ್ ಕುಮಾರ್ ಕಟೀಲ್ ಅವರು ಆರಂಭದಿಂದಲೂ; ದಕ್ಷಿಣ ಕನ್ನಡದಲ್ಲಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅಲೆ ಅಲ್ಲ, ಸುನಾಮಿ ಎನ್ನುತ್ತಿದ್ದರು. ಭಾರಿ ಅಂತರದಿಂದ ಗೆಲ್ಲುವುದಾಗಿ ಭರವಸೆ ವ್ಯಕ್ತಪಡಿಸಿದ್ದರು. ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ ಸಂಘಟನಾ ಶಕ್ತಿ ಹೆಚ್ಚಿರುವುದು, ಸಂಘದ ಕಾರ್ಯಕರ್ತರು ಮನೆಮನೆ ತೆರಳಿ ಜನರನ್ನು ಸಂಪರ್ಕಿಸಿರುವುದು ಗೆಲುವಿಗೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ಈ ಸಂಘಟನೆ ಇರಲಿಲ್ಲ. ಕಾಂಗ್ರೆಸ್‌ನ ಮೃದು ಹಿಂದುತ್ವವೂ ಅದಕ್ಕೆ ಹಿನ್ನಡೆಯನ್ನೇ ಉಂಟುಮಾಡಿತು. ಮಿಥುನ್ ರೈ ಅವರು ಪ್ರಚಾರಕ್ಕೆ ತೆರಳುವಾಗ ಕೇಸರಿ ಶಾಲು ಹಾಕಿ ತೆರಳುತ್ತಿದ್ದರು. ಇದು ಅವರ ದ್ವಿಮುಖ ನೀತಿಯನ್ನು ಬಿಂಬಿಸಿತು. ಎಸ್‌ಡಿಪಿಐ ಪಕ್ಷದವರು ಇದರ ಲಾಭ ಪಡೆದರು ಅನ್ನಿಸುತ್ತಿದೆ. ಚಿಕ್ಕಮಗಳೂರು–ಉಡುಪಿಯಲ್ಲೂ ಇದೇ ಚಿತ್ರಣ ಕಾಣಿಸುತ್ತಿದೆ.

ನೀಳಾ ಎಂ.ಎಚ್‌: ಶೋಭಾ ಕರಂದ್ಲಾಜೆ ಅವರ ಗೆಲುವಿನಲ್ಲಿ ಅವರ ವರ್ಚಸ್ಸು ಕೆಲಸ ಮಾಡಿದ್ದಕ್ಕಿಂತಲೂ ಮೋದಿ ಅವರ ಅಲೆಯ ಪ್ರಭಾವವೇ ಹೆಚ್ಚು. ಪ್ರಚಾರದ ವೇಳೆಯೂ ಬಿಜೆಪಿ, ಶೋಭಾ ಹೆಸರಿನ ಬದಲು ಮೋದಿ ಹೆಸರೇ ಹೆಚ್ಚಾಗಿ ಕೇಳಿಬಂದಿತ್ತು. ಅಭಿವೃದ್ಧಿ ವಿಚಾರದಲ್ಲಿಯೂ ಶೋಭಾ ವಿರುದ್ಧ ಅಲೆಯಿತ್ತು. ಮೀನುಗಾರರ ರಕ್ಷಣೆ, ಅರಣ್ಯ ಒತ್ತುವರಿ ವಿಚಾರದಲ್ಲಿ ಅವರು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬ ಆರೋಪವೂ ಇತ್ತು. ಈ ಎಲ್ಲ ವಿರೋಧದ ಹೊರತಾಗಿಯೂ ಅವರು ಜಯಗಳಿಸಿರುವುದು ಮೋದಿ ಹೆಸರಿನಿಂದ ದೊರೆತ ಉಡುಗೊರೆ ಎನ್ನಬೇಕಷ್ಟೆ. ಈ ಗೆಲುವನ್ನು ಮುಂದೆ ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕು.

ಎಂ.ಜಿ.ಬಾಲಕೃಷ್ಣ: ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ತುಂಬಾ ಹೆಸರು ಮಾಡಿದವರು. ಅವರಿಗೇಕೆ ಹಿನ್ನಡೆಯಾಯಿತು?

ನೀಳಾ ಎಂ.ಎಚ್‌: ಪ್ರಮೋದ್ ಮಧ್ವರಾಜ್‌ಗೆ ಒಳ್ಳೆ ಹೆಸರಿತ್ತು. ಕಳೆದ ಬಾರಿ ಉತ್ತಮ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅವರ ಸೋಲಿಗೆ ಮೋದಿ ಅಲೆ ಒಂದೇ ಕಾರಣ ಎನ್ನಲಾಗದು. ಅವರು ಮೂಲತಃ ಕಾಂಗ್ರೆಸ್‌ನವರು. ಆದರೆ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಿದರು. ಇದು ಕಟ್ಟಾ ಕಾಂಗ್ರೆಸ್ ಮತದಾರರಲ್ಲಿ ಗೊಂದಲ ಉಂಟುಮಾಡಿರಬಹುದು. ಕೆಲವರು ಮಧ್ವರಾಜ್ ಅವರನ್ನು ಜೆಡಿಎಸ್‌ ಚಿಹ್ನೆಯಲ್ಲಿ ನೋಡಿ ಗೊಂದಲಕ್ಕೊಳಗಾಗಿ ಬೇರೆ ಯಾರಿಗೋ ಮತ ಹಾಕಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಚಿಕ್ಕಮಗಳೂರು ಭಾಗದಲ್ಲಿ ಅಷ್ಟು ಪರಿಚಿತರಲ್ಲ ಎನ್ನಲಾಗಿದೆ. ಹೀಗಾಗಿ ಅವರನ್ನು ಆ ಭಾಗದಲ್ಲಿ ಹೆಚ್ಚು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು. ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವ ಕೆಲಸವನ್ನು ಉಭಯ ಪಕ್ಷಗಳ ನಾಯಕರು ಮಾಡಲಿಲ್ಲ.

ಎಂ.ಜಿ.ಬಾಲಕೃಷ್ಣ: ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಶೋಭಾ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದರು. ಅವರ ಮುಂದಿನ ನಡೆ ಏನಿರಬಹುದು?

ನೀಳಾ ಎಂ.ಎಚ್‌: ಬಹುಶಃ ರಾಜ್ಯ ರಾಜಕಾರಣಕ್ಕೆ ಬರದೇ ಇದ್ದರೂ ಇರಬಹುದು. ದಕ್ಷಿಣ ಕನ್ನಡದಲ್ಲಿ ಜನಾರ್ದನ ಪೂಜಾರಿಯವರು ಜನಪ್ರಿಯ ನಾಯಕ. ಅವರು ನೇಪಥ್ಯಕ್ಕೆ ಸರಿದಿರುವುದು ಕಾಂಗ್ರೆಸ್‌ ಮೇಲೆ ಯಾವ ಪರಿಣಾಮ ಬೀರಿತು?

ಎಂ.ಜಿ.ಬಾಲಕೃಷ್ಣ: ಪೂಜಾರಿ ಅವರು ನಾಲ್ಕು ಬಾರಿ ಗೆದ್ದು, ಮೂರು ಬಾರಿ ಸೋತವರು. ಅವರಿಗೆ ಜಿಲ್ಲೆಯ ಜನರ ನಾಡಿಮಿಡಿತದ ಅರಿವಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿಯೂ ಗೊಂದಲವಿತ್ತು. ಉಭಯ ಅಭ್ಯರ್ಥಿಗಳೂ ಆರಂಭದಲ್ಲಿ ಪೂಜಾರಿ ಅವರ ಆಶೀರ್ವಾದ ಪಡೆದಿದ್ದರು. ಆದರೆ, ಅವರ ಮನಸಲ್ಲಿ ಏನಿತ್ತೋ ಗೊತ್ತಿಲ್ಲ. ಕಾಂಗ್ರೆಸ್ ಪರ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿಲ್ಲ. ಹಾಗಂತ ವಿರೋಧಿಸಿ ಹೇಳಿಕೆಯನ್ನೂ ಕೊಟ್ಟಿಲ್ಲ. ಕೆಲವು ಬಾರಿ, ಕೇಂದ್ರದಲ್ಲಿ ಮೋದಿಯೇ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿಕೆ ನೀಡಿದ್ದರು. ಇದೆಲ್ಲ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಮಿಥುನ್ ಕೂಡ ಇತ್ತೀಚೆಗೆ ಸಾರ್ವಜನಿಕ ಜೀವನದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಅನ್ನಿಸುತ್ತಿದೆ.

ನೀಳಾ ಎಂ.ಎಚ್‌: ಎಸ್‌ಡಿಪಿಐ ರಾಜ್ಯದಲ್ಲಿ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿಯ ಸಾಂಪ್ರದಾಯಿಕ ಮತಗಳೇನಾದರೂ ಆ ಪಕ್ಷಕ್ಕೆ ದೊರೆತಿದೆಯೇ? ಅಥವಾ ಕಾಂಗ್ರೆಸ್ ಮತಗಳು ದೊರೆತಿವೆಯೇ?

ಎಂ.ಜಿ.ಬಾಲಕೃಷ್ಣ: ಎಸ್‌ಡಿಪಿಐ ಮತ ಧ್ರುವೀಕರಣ ಮಾಡುವಲ್ಲಿ ಯಶಸ್ವಿಯಾಗಿದೆ ಅನ್ನಿಸುತ್ತಿದೆ. ಇನ್ನು ನಳಿನ್‌ ಕುಮಾರ್ ವಿಚಾರಕ್ಕೆ ಬಂದರೆ, ಪ್ರತಿ ಬಾರಿಯೂ ಅವರ ಗೆಲುವಿನ ಅಂತರ ಹೆಚ್ಚಾಗುತ್ತಾ ಸಾಗಿದೆ.

ನೀಳಾ ಎಂ.ಎಚ್‌: ನಳಿನ್ ಗೆಲುವಿನ ಅಂತರ ಹೆಚ್ಚಾಗುತ್ತಾ ಸಾಗಲು ಕಾರಣವೇನು? ಅಭಿವೃದ್ಧಿಯಾ ಅಥವಾ ಮೋದಿ ಅಲೆಯೇ?

ಎಂ.ಜಿ.ಬಾಲಕೃಷ್ಣ: ಅಭಿವೃದ್ಧಿಗಿಂತಲೂ ಹೆಚ್ಚಾಗಿ ಮೋದಿ ಅಲೆಯೇ ಕೆಲಸ ಮಾಡಿದೆ ಎನ್ನಬಹುದು. ಯಾಕೆಂದರೆ ಹೆದ್ದಾರಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿ ಅವ್ಯವಸ್ಥೆ ಮೇಲ್ನೋಟಕ್ಕೆ ಕಾಣಿಸುವಂತಿದೆ. ಕೆಲವು ಯೋಜನೆಗಳು ಜಿಲ್ಲೆಯ ಕೈತಪ್ಪಲು ಸಂಸದರೇ ಕಾರಣ ಎಂಬ ಆರೋಪವೂ ಇದೆ. ಆದರೆ ಇವೆನ್ನೆಲ್ಲ ಮೋದಿ ಅಲೆ ನಿಭಾಯಿಸಿದೆ. ಮತ್ತೆ 29 ವರ್ಷಗಳಿಂದ ಇರುವ ಬಿಜೆಪಿ ಪರ ಒಲವನ್ನು ಉಳಿಸಿಕೊಳ್ಳುವಲ್ಲಿ ಮೋದಿ ಅಲೆ ಯಶಸ್ವಿಯಾಗಿದೆ.

ಶೋಭಾ ಅವರು ಪಕ್ಷಕ್ಕಾಗಿ ಏನೇ ಕೆಲಸ ಮಾಡಿದ್ದರೂ ಕ್ಷೇತ್ರಕ್ಕೆ ಅವರ ಕೊಡುಗೆ ಕಡಿಮೆ ಎಂಬ ಆರೋಪವಿದೆ. ಇದನ್ನು ಮುಂದೆ ಅವರು ಹೇಗೆ ನಿಭಾಯಿಸಬಲ್ಲರು?

ನೀಳಾ ಎಂ.ಎಚ್‌: ಮುಂದಿನ ಬಾರಿಯೂ ಮೋದಿ ಅಲೆ ಕೈಹಿಡಿಯಬಹುದು ಎನ್ನಲಾಗದು. ರಾಜಕೀಯದಲ್ಲಿ ಏನೇ ಆದರೂ ಕೊನೆಗೆ ಕೈಹಿಡಿಯುವುದು ಸ್ವಂತ ವರ್ಚಸ್ಸು, ಅಭಿವೃದ್ಧಿ ಕೆಲಸಗಳು ಮತ್ತು ಜನರ ಜತೆಗಿನ ನಂಟು. ಆ ನಿಟ್ಟಿನಲ್ಲಿ ಕ್ರಮಕೈಗೊಂಡರೆ ಶೋಭಾ ಅವರಿಗೆ ಭವಿಷ್ಯವಿದೆ.

ಎಂ.ಜಿ.ಬಾಲಕೃಷ್ಣ: ಚುನಾವಣೆ ಘೋಷಣೆಯಾದ ಬಳಿಕ ಗೋಬ್ಯಾಕ್ ಶೋಭಾ ಎಂಬ ಚಳವಳಿ ಆರಂಭವಾಗಿತ್ತು. ನಂತರ ಏನಾಯಿತು?

ನೀಳಾ ಎಂ.ಎಚ್‌: ಅಭ್ಯರ್ಥಿ ಘೋಷಣೆಯಾಗುವ ಮೊದಲು ಗೋಬ್ಯಾಕ್ ಶೋಭಾ ಚಳವಳಿ ಇತ್ತು. ಆದರೆ, ಅಭ್ಯರ್ಥಿ ಘೋಷಣೆಯಾದ ಬಳಿಕ ಅದು ತಾನೇತಾನಾಗಿ ಇಲ್ಲವಾಯಿತು. ಈ ಅಸಮಾಧಾನವನ್ನು ಯಾರು ಹುಟ್ಟುಹಾಕಿದರೋ ಅವರು ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಕೊಳ್ಳಲಿಲ್ಲ. ಆದರೂ ಪಕ್ಷಕ್ಕೆ ಹೊಡೆತವಾಗದಂತೆ ನೋಡಿಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !