ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷಗಳಿಂದ ಪ್ರಜಾತಂತ್ರ ದುರ್ಬಲ: ಅಮಿತ್ ಶಾ

ಇವಿಎಂ ಕುರಿತ ವಿರೋಧಪಕ್ಷಗಳ ಹೋರಾಟಕ್ಕೆ ತಿರುಗೇಟು
Last Updated 22 ಮೇ 2019, 17:25 IST
ಅಕ್ಷರ ಗಾತ್ರ

ನವದೆಹಲಿ:‘ಆರನೇ ಹಂತದ ಮತದಾನ ಮುಗಿದ ನಂತರ ವಿರೋಧಪಕ್ಷಗಳವರು ಮತಯಂತ್ರದ ಕಾರ್ಯಕ್ಷಮತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಲು ಆರಂಭಿಸಿದರು. ಎನ್‌ಡಿಎಗೆ ಬಹುಮತ ಲಭಿಸುತ್ತದೆ ಎಂಬುದನ್ನು ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಳಿಸಿದ ನಂತರ ಅವರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಸೋಲಿನ ಭೀತಿಯಲ್ಲಿರುವ ವಿರೋಧಪಕ್ಷಗಳವರು ಭಾರತದ ಪ್ರಜಾತಂತ್ರವನ್ನು ದುರ್ಬಲಗೊಳಿಸುತ್ತಿದ್ದಾರೆ. ಮತಗಟ್ಟೆ ಸಮೀಕ್ಷೆಗಳ ಆಧಾರದಲ್ಲಿ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಹೇಗೆ ಸಾಧ್ಯ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪ್ರಶ್ನಿಸಿದ್ದಾರೆ.

‘ಮೊದಲು ವಿವಿಪ್ಯಾಟ್‌ ಮತಗಳನ್ನು ಎಣಿಸಬೇಕು ಎಂದು 22 ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಮುಂದಿಟ್ಟ ಬೇಡಿಕೆ ಅಸಾಂವಿಧಾನಿಕವಾದುದು’ ಎಂದಿರುವ ಶಾ, ‘ಚುನಾವಣಾ ಆಯೋಗ ಶಿಷ್ಟಾಚಾರವನ್ನು ಮುರಿಯಲು ಸಾಧ್ಯವೇ? ಸರ್ವಪಕ್ಷಗಳ ಅನುಮತಿ ಇಲ್ಲದೆ ಇಂಥ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಈಗ ಇವಿಎಂಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿರುವ ಪಕ್ಷಗಳಲ್ಲಿ ಹೆಚ್ಚಿನವು ಒಂದಲ್ಲ ಒಂದು ಬಾರಿ ಇವಿಎಂ ಬಳಸಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದವುಗಳೇ ಆಗಿವೆ. ತಾವು ಗೆದ್ದಾಗ ‘ನಮ್ಮ ಸಾಧನೆ’ ಎನ್ನುವುದು, ಸೋತಾಗ ಇವಿಎಂಗಳ ಮೇಲೆ ಹೊಣೆ ಹೊರಿಸುವುದು ಸರಿಯೇ? ಮತಯಂತ್ರಗಳ ಮೇಲೆ ವಿಶ್ವಾಸ ಇಲ್ಲದಿದ್ದರೆ ಆಗ ಅವರು ಸರ್ಕಾರ ರಚಿಸಿದ್ದೇಕೆ ಎಂದು ಶಾ ಕೇಳಿದ್ದಾರೆ.

‘ವಂಶಾಡಳಿತ ಕೊನೆಗೊಳ್ಳುವ ಭಯ’

‘ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರಲ್ಲಿ ಗೆದ್ದಾಗ ಸಂಭ್ರಮ, ಸೋತಾಗ ವಿನಯ ಇರಬೇಕು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಆದರೆ ವಂಶಾಡಳಿತಕ್ಕೆ ಸೋಲಾಗುವುದೆಂಬ ಕಾರಣದಿಂದ ಈಗ ವಿರೋಧಪಕ್ಷಗಳವರು ಮತಯಂತ್ರಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಆರೋಪಿಸಿದ್ದಾರೆ.

ಹಿಮ್ಮುಖ ಚಲನೆ

‘ಸೋಲುವ ಭೀತಿಯಿಂದ ಹತಾಶರಾದವರು ಮತಯಂತ್ರಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ಕೇಂದ್ರದ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಟೀಕಿಸಿದ್ದಾರೆ.

‘ಸೋಲುವ ಸಂದರ್ಭ ಎದುರಾದರೆ ವಿರೋಧಪಕ್ಷದವರೆಲ್ಲರೂ ಸೇರಿ ಮತಯಂತ್ರಗಳತ್ತ ಬೊಟ್ಟು ಮಾಡುತ್ತಾರೆ ಎಂದು ನಾನು ಹಲವು ತಿಂಗಳ ಹಿಂದೆಯೇ ಹೇಳಿದ್ದೆ. ಮತಯಂತ್ರಗಳ ಬಳಕೆಯನ್ನು ವಿರೋಧಿಸುವವರು ಭಾರತವನ್ನು ಧನಬಲ ಮತ್ತು ತೋಳ್ಬಲಗಳಿಂದಲೇ ಚುನಾವಣಾ ಫಲಿತಾಂಶ ನಿರ್ಧಾರವಾಗುತ್ತಿದ್ದ ದಿನಗಳತ್ತ ಎಳೆದುತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಪಾಸ್ವಾನ್‌ ಹೇಳಿದ್ದಾರೆ.

***

ಮತಯಂತ್ರಗಳನ್ನು ತಿರುಚಿ ತೋರಿಸಿ ಎಂದು ಚುನಾವಣಾ ಆಯೋಗವು ಹಿಂದೆ ಎಲ್ಲರಿಗೂ ಬಹಿರಂಗ ಸವಾಲು ಹಾಕಿತ್ತು. ಆಗ ಯಾವ ಪಕ್ಷವೂ ಆ ಸವಾಲನ್ನು ಸ್ವೀಕರಿಸಿರಲಿಲ್ಲ.

– ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT