ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿಗೆ ಬನ್ನಿ.. ಜತೆಗೆ ಎಚ್ಚರಿಕೆಯೂ ಇರಲಿ

Last Updated 24 ಜುಲೈ 2019, 19:30 IST
ಅಕ್ಷರ ಗಾತ್ರ

ಕೊನೆಗೂ ಈ ವರ್ಷವೂ ಮುಂಗಾರಿನ ಅಭಿಷೇಕದಲ್ಲಿ ತೊಯ್ದಿರುವ ಕೊಡಗಿನಲ್ಲಿ ಈಗ ತಣ್ಣನೆಯ ವಾತಾವರಣ. ಜುಲೈ 15 ಕಳೆದರೂ ಕಾಫಿ ಕಣಿವೆಯಲ್ಲಿ ಮುಂಗಾರು ಮಾಯವಾಗಿತ್ತು. ಜುಲೈ ಕೊನೆಯಲ್ಲಿ ಮುಂಗಾರು ಅಬ್ಬರಿಸುತ್ತಿದ್ದು ನದಿ, ಹಳ್ಳ–ಕೊಳ್ಳಗಳು ತುಂಬಿಕೊಂಡಿವೆ. ಭತ್ತದ ಗದ್ದೆಗಳಲ್ಲಿ ನೀರು ಆವರಿಸಿದೆ. ಸೊರಗಿದ್ದ ಜಲಪಾತಗಳಿಗೆ ಜೀವಕಳೆ ಬಂದಿದೆ.

ಜಲಪಾತಗಳು ಹಾಲ್ನೊರೆಯಂತೆ ವಯ್ಯಾರದಿಂದ ಧುಮ್ಮಿಕ್ಕುತ್ತಿವೆ. ಕಾಫಿ ನಾಡಿನ ಹಸಿರು, ಬೆಟ್ಟಗಳ ಸಾಲಿನ ನಡುವಿನ ಈ ಜಲಪಾತಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಮಳೆಗಾಲದಲ್ಲಿ ಕೊಡಗಿನ ಬೆಡಗು ನೋಡಬೇಕೆಂಬುದು ಹಲವರ ಅಪೇಕ್ಷೆ. ಅದರಲ್ಲೂ, ಇಲ್ಲಿನ ಬೆಟ್ಟದ ಸಾಲಿನ ಹೋಮ್‌ ಸ್ಟೇಗಳಲ್ಲಿ ಮಳೆ ಸಿಂಚನ, ಮೈಕೊರೆಯುವ ಚಳಿ, ಮಳೆ ನಡುವೆಯೇ ಆವರಿಸುವ ಮಂಜು, ಹಕ್ಕಿಗಳ ಕಲರವದಲ್ಲಿ ಕಾಲ ಕಳೆಯಲು ಇದು ಸೂಕ್ತ ಸಮಯ. ಆದರೆ, ಮಳೆ, ಮಂಜು, ಜಲಪಾತದ ಸೊಬಗು ವೀಕ್ಷಿಸಲು ಬರುವ ಪ್ರವಾಸಿಗರು ಎಚ್ಚರಿಕೆವಹಿಸುವುದೂ ಅಷ್ಟೇ ಅಗತ್ಯ. ಕಳೆದ ವರ್ಷ ಮಹಾಮಳೆಗೆ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಗಳು ಭೂಕುಸಿತದ ಸಂಕಷ್ಟಕ್ಕೆ ಸಿಲುಕಿದ್ದವು. ಅಲ್ಲಿ ಈಗಲೂ ಆತಂಕವಿದೆ.

ಜಿಲ್ಲಾಡಳಿತ ಈ ವರ್ಷವೂ 30 ಅಪಾಯಕಾರಿ ಸ್ಥಳಗಳನ್ನು ಗುರುತಿಸಿದೆ. ಅಲ್ಲಿ ನಿಗಾ ಇಡಲು ಪ್ರತಿ ಗ್ರಾಮಕ್ಕೂ ನೋಡಲ್‌ ಅಧಿಕಾರಿಗಳನ್ನು ನೇಮಿಸಿದೆ. ಅಂತಹ ಅಪಾಯಕಾರಿ ಸ್ಥಳಕ್ಕೆ ಪ್ರವಾಸಿಗರು ತೆರಳದಂತೆಯೂ ಮನವಿ ಮಾಡಲಾಗಿದೆ.

ಪ್ರವಾಸಕ್ಕೆ ಬರುವವರು ಅಂತಹ ಸೂಕ್ಷ್ಮ ಪ್ರದೇಶಕ್ಕೆ ತೆರಳದೇ ಅದೆಷ್ಟೋ ಸುರಕ್ಷಿತ ತಾಣಗಳ ಸೌಂದರ್ಯ ಸವಿಯಲು ಅವಕಾಶವಿದೆ. ಆದರೆ, ಪ್ರವಾಸಿಗರು ತಾವೇ ಸ್ವಯಂ ನಿಯಂತ್ರಣ ಹಾಕಿಕೊಂಡು, ಪ್ರವಾಸಕ್ಕೆ ಬರಬೇಕು ಎನ್ನುತ್ತಾರೆ ಪ್ರವಾಸೋದ್ಯಮ ಅವಲಂಬಿತರು.

ಒಂದು ವೇಳೆ ಸೂಚನೆ ಮೀರಿ ತೆರಳಿದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಜಿಲ್ಲಾಡಳಿತವು 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಆರಂಭಿಸಿದೆ.

ಸಹಾಯವಾಣಿ

ತುರ್ತು ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ಜಿಲ್ಲಾಡಳಿತ ಆರಂಭಿಸಿರುವ ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ. ದೂರವಾಣಿ:
08272 221077, ವಾಟ್ಸ್ ಆ್ಯಪ್‌ 85500 01077 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT