ಸೋಮವಾರ, ಜನವರಿ 20, 2020
18 °C
ಬಣ್ಣದ ಎಲೆಗಳ ’ಮಾಂಟೆರಿಯಲ್ ಪಾರ್ಕ್‌’

ಕೆಂಪಾದವೋ.. ಎಲ್ಲ ಕೆಂಪಾದವೋ..ಕೆನಡಾದಲ್ಲಿ ಸೃಷ್ಟಿಯ ಸೊಬಗು !

ಮಲ್ಲಿಕಾರ್ಜುನ ಕನ್ನಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಮಾಂಟ್‌ರಾಯಲ್ ಪಾರ್ಕ್ ಉತ್ತರ ಅಮೆರಿಕದ ಕೆನಡಾ ದೇಶದ ಮಾಂಟ್ರಿಯಲ್ ನಗರದಲ್ಲಿದೆ. ಇದು ಪ್ರವಾಸಿಗರ ನೆಚ್ಚಿನ ತಾಣ. ಮೂರು ಪರ್ವತಗಳು ಸೇರಿ ಮಾಂಟ್‌ ರಾಯಲ್ ಪಾರ್ಕ್ ಆಗಿದೆ. ಇಲ್ಲಿ ಬೆಳೆದು ನಿಂತಿರುವ ವಿವಿಧ ಜಾತಿಯ ಮರಗಿಡಗಳಲ್ಲಿ ಕಂಡು ಬರುವ ಬಹು ವರ್ಣದ ಎಲೆಗಳು ಪ್ರವಾಸಿಗರ ಆಕರ್ಷಣೆ.

ಚಳಿಗಾಲದಲ್ಲಿ ಹೊರತುಪಡಿಸಿ, ಉಳಿದ ಎಲ್ಲ ಕಾಲದಲ್ಲೂ, ಹಸಿರು ಹಾಸಿನ ನೆಲ. ವರ್ಷವಿಡಿ ತಂಪಾದ ವಾತಾವರಣ. ಬಣ್ಣ ಬಣ್ಣದ ಎಲೆಗಳು ಉದುರಿ ಹೊಸ ಚೈತನ್ಯ ನೀಡುತ್ತವೆ.

ದ್ವೀಪ ನಗರ

ಸೆಂಟ್‌ ಲಾರೆನ್ಸ್ ನದಿ, ಮಾಂಟ್ರಿಯಲ್ ನಗರವನ್ನು ಸುತ್ತುವರೆದಿದೆ. ಹಾಗಾಗಿ, ಇದೊಂದು ದ್ವೀಪನಗರ. ಆದಿವಾಸಿಗಳು ಶವಸಂಸ್ಕಾರಕ್ಕಾಗಿ ಈ ಪಾರ್ಕ್‌ ಜಾಗವನ್ನು ಸ್ಮಶಾನ ಮಾಡಿಕೊಂಡಿದ್ದಾರೆ. ಶವಸಂಸ್ಕಾರ ಮಾಡಿದ ನಂತರ, ಆ ಸಮಾಧಿಗಳ ಮೇಲೆ ವಿವಿಧ ಜಾತಿಯ ಮರಗಳನ್ನು ಬೆಳೆಸಿ, ನಿರ್ವಹಣೆ ಮಾಡುತ್ತಿದ್ದಾರೆ. ಇಂದಿಗೂ ಇಲ್ಲಿ ಶವಸಂಸ್ಕಾರ ಮುಂದುವರಿದಿದೆ. ಜತೆಗೆ ಗೋರಿಗಳೂ ಇವೆ.

ಜಾಕ್ವೀಸ್ ಕಾರ್‍ಟೈಯೀರ್ ಎಂಬ ಫ್ರೆಂಚ್‌ ಪ್ರವಾಸಿಗ ಇಲ್ಲಿಗೆ ಭೇಟಿ ನೀಡಿದಾಗ, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಮಾಂಟ್ ರಾಯಲ್ ಎಂಬ ಹೆಸರಿಟ್ಟನಂತೆ. ಈ ಪಾರ್ಕ್‌ ಅನ್ನು ಮೇ 24, 1874ರಂದು ಅಧಿಕೃತವಾಗಿ ಉದ್ಘಾಟಿಸಿ, ಪ್ರವಾಸಿ ಕೇಂದ್ರವನ್ನಾಗಿಸಿದೆ.

‘ಸ್ವರ್ಗದ ಬಾಗಿಲು’

ಸ್ಕಾಟೀಶ್ ದೇಶದ ಜೇಮ್ಸ್ ಮ್ಯಾಕ್‍ಗಿಲ್ ಎಂಬ ಉದ್ಯಮಿ ಇಲ್ಲಿಗೆ ಭೇಟಿ ನೀಡಿದಾಗ, ಇಲ್ಲಿನ ಪರಿಸರ ಕಂಡು ಈ ಪರ್ವತ ಪ್ರದೇಶವನ್ನು ‘ಸ್ವರ್ಗದ ಬಾಗಿಲು’ ಎಂದು ಬಣ್ಣಿಸಿದ. ಇದರಿಂದ ಪ್ರೇರಣೆಗೊಂಡು ಪರ್ವತದ ತುದಿಯಲ್ಲಿ ತಾನು ವಾಸಿಸಲು ಬೃಹತ್‍ ಅರಮನೆಯನ್ನು ನಿರ್ಮಿಸಿದ. ಇದೇ ಪರ್ವತದಲ್ಲಿ ಆದಿವಾಸಿಗಳಿಗೆ ಶಾಲೆಯನ್ನು ಆರಂಭಿಸಿದ. ಈ ಅರಮನೆಯಿಂದ ನೋಡಿದರೆ ಮಾಂಟ್ರಿಯಲ್‍ನ ಗಗನಚುಂಬಿ ಕಟ್ಟಡಗಳನ್ನು ಸುತ್ತುವರೆದ ಸೆಂಟ್ ಲಾರೆನ್ಸ್ ನದಿ ಕಾಣುತ್ತದೆ.

ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮಾಂಟ್ರಿಯಲ್ ನಗರದಲ್ಲಿ ವಿಶಾಲ ರಸ್ತೆಗಳಿವೆ. ಮನೆಗಳ ಸುತ್ತಲು ಹಸಿರು. ಇಲ್ಲಿನ ಜನರು ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುತ್ತಾರೆ. ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಸಾಕಷ್ಟು ನೀರು ಲಭ್ಯವಿದ್ದರೂ, ಮಿತಬಳಕೆ ಮಾಡುತ್ತಾರೆ. ಪರಿಸರ ರಕ್ಷಣೆ ಬಗ್ಗೆ ಇಲ್ಲಿನ ನಾಗರಿಕರಿಗೆ ಅರಿವಿದೆ. ಇಲ್ಲಿನ ಸಿಟಿ ಬಸ್‍ಗಳಲ್ಲಿ ಶೇ.60ರಷ್ಟು ಮಹಿಳಾ ಚಾಲಕರಿದ್ದಾರೆ. ಈ ನಗರ ಉನ್ನತ ಶಿಕ್ಷಣಕ್ಕೆ ಹೆಸರುವಾಸಿ. ಇಲ್ಲಿಗೆ ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಅದರಲ್ಲೂ ಭಾರತೀಯರು ಹೆಚ್ಚು. ಶಿಕ್ಷಣಕ್ಕೆ ಆದ್ಯತೆ ನೀಡಿದ ಮ್ಯಾಕ್‌ಗಿಲ್ ಹೆಸರಿನಲ್ಲಿ ಸರ್ಕಾರ ವಿಶ್ವವಿದ್ಯಾಲಯ ತೆರೆದಿದೆ.

ಪಾರ್ಕ್‌ನ ವಿಶೇಷತೆ

ಚಳಿಗಾಲದಲ್ಲಿ ಮರಗಿಡಗಳ ಎಲೆಗಳು ಉದುರಿ ವಸಂತಕಾಲದಲ್ಲಿ ಚಿಗುರೊಡೆಯವುದು ಸಹಜ. ಆದರೆ ಇಲ್ಲಿರುವ ಮರಗಿಡಗಳ ಎಲೆಗಳು ಕೆಂಪು, ಕಂದು, ನೇರಳೆ, ಹಳದಿ ಬಣ್ಣಕ್ಕೆ ತಿರುಗಿ ಹೂಮರಗಳಂತೆ ಕಂಗೊಳಿಸುತ್ತವೆ. ಉದುರಿದ ವಿವಿಧ ಬಣ್ಣಗಳ ಎಲೆಗಳು ಭೂರಮೆಗೆ ಮೆರಗನ್ನು ನೀಡಿ ನಿಸರ್ಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಇದನ್ನು ನೋಡುವುದಕ್ಕೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಈ ನಿಸರ್ಗದ ಸಿರಿ ಮೌಂಟ್ ರಾಯಲ್ ಪಾರ್ಕ್‌ ಏರಲು ಅಗಲವಾದ ರಸ್ತೆ ಇದೆ. ಕುಡಿಯುವ ನೀರು, ಶೌಚಾಲಯಗಳು, ಕಸದ ಡಬ್ಬಿಗಳ ಸೌಲಭ್ಯಗಳಿವೆ. ಸೈಕಲ್ ಹೊರತುಪಡಿಸಿ ಯಾವುದೇ ವಾಹನಗಳಿಗೆ ಪ್ರವೇಶ ಇಲ್ಲ. ಅಹಿತರ ಘಟನೆಗಳನ್ನು ತಡೆಗಟ್ಟಲು ಅಶ್ವರೂಢ ಸುಸಜ್ಜಿತ ಮಹಿಳಾ ಪೊಲೀಸ್ ಬೆಂಗಾವಲು ಪಡೆ ಸನ್ನದ್ಧವಾಗಿರುತ್ತದೆ.

‌ಮೌಂಟ್ ರಾಯಲ್ ಸೌಂದರ್ಯ ಕೆಲವೇ ವಾರಗಳ ಕಾಲ ಇರುತ್ತದೆ. ನಂತರ ಎಲೆಗಳು ಉದುರಿ ಮರಗಿಡಗಳು ಒಣಗಿದಂತೆ ಭಾಸವಾಗುತ್ತದೆ, ಆದರೆ ಒಣಗಿರುವುದಿಲ್ಲ. ನಂತರ ಚಳಿ ಹೆಚ್ಚಾಗಿ ಆಳೆತ್ತರದ ಮಂಜು ಬೀಳಲಿದೆ. ಈ ಸಮಯದಲ್ಲಿ ಪ್ರವಾಸಿಗರು ಸ್ಕೀಯಿಂಗ್‌ಗಾಗಿ ಬರುತ್ತಾರೆ.

ಇದನ್ನೂ ಓದಿ: ಅಮೆರಿಕ ಅಲೆಮಾರಿಯ ‘ತಿರುಗಾಟ’ದ ಕಥೆ

ಸೆಪ್ಟೆಂಬರ್‌ ತಿಂಗಳ ಮಧ್ಯ ಭಾಗದಿಂದ ಅಕ್ಪೋಬರ್ ತಿಂಗಳ ಅಂತ್ಯದವರೆಗೆ ಮಾತ್ರ ಭೇಟಿ ನೀಡಬಹುದು.

ಬಿಸಿಲು ನಾಡು ಬಳ್ಳಾರಿ ಜಿಲ್ಲೆಯವರಾದ ನಮಗೆ, ಮಗಳು ತಾರಾ ಕನ್ನಿಹಳ್ಳಿ, ಅಳಿಯ ವಿರೇಶ್ ಯಾತ್ತದ ಅವರು ಇಲ್ಲಿ ಉದ್ಯೋಗದಲ್ಲಿದ್ದ ಕಾರಣ, ಈ ತಾಣವನ್ನು ನೋಡುವ ಅವಕಾಶ ಸಿಕ್ಕಿತು. ಹೀಗಾಗಿ ಇಲ್ಲಿಗೆ ಬಂದವರು ಬೆಳಿಗ್ಗೆಯಿಂದ ಸಂಜೆವರೆಗೆ ಇಲ್ಲಿನ ಅಹ್ಲಾದಕರ ವಾತಾವರಣವನ್ನು ಅನುಭವಿಸಿದೆವು. ಕೊನೆಯಲ್ಲಿ ‘ಕೆಂಪಾದವೋ ಎಲ್ಲಾ ಕೆಂಪಾದವೋ.. ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ಕೆಂಪಾದವೋ...’ ಎಂದು ಸಿನಿಮಾ ಹಾಡನ್ನು ಗುನುಗುತ್ತಾ ಪಾರ್ಕ್‌ನಿಂದ ಹೊರ ನಡೆದವು.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು