ಬುಧವಾರ, ಫೆಬ್ರವರಿ 26, 2020
19 °C

ಪುರಾತನ ಗುಹೆಗಳ ಸಂಕೀರ್ಣ ‘ಕಾರ್ಲ– ಭಾಜ’

ಡಾ. ಉಮಾಮಹೇಶ್ವರಿ. ಎನ್. Updated:

ಅಕ್ಷರ ಗಾತ್ರ : | |

Prajavani

ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಬೆಟ್ಟದ ಕಲ್ಲನ್ನು ಕೊರೆದು ಮಾಡಿದ ಕೃತಕ ಗುಹೆಗಳು ಕಾಣಸಿಗುತ್ತವೆ. ಇವುಗಳಲ್ಲಿ ಹೆಚ್ಚಿನವು ಬೌದ್ಧಧರ್ಮದ ಭಿಕ್ಷುಗಳ ತಂಗುದಾಣಗಳಾಗಿದ್ದವು. ಅವುಗಳಲ್ಲಿ ಅಜಂತಾ, ಎಲ್ಲೋರಾ, ಎಲಿಫೆಂಟಾ ಗುಹೆಗಳು ಪ್ರಸಿದ್ಧವಾದವು. ಈ ಗುಹೆಗಳಲ್ಲಿ ಅತಿ ಪುರಾತನವಾದಂತಹವು ಕಾರ್ಲ ಮತ್ತು ಭಾಜ ಗುಹೆಗಳು. ಇವು ಪುಣೆಯ ಲೋನಾವಾಲದಲ್ಲಿವೆ. ನನಗೆ ಇಂಥ ಅಪರೂಪದ ಪುರಾತನ ಗುಹೆಗಳನ್ನು ವೀಕ್ಷಿಸುವ ಅವಕಾಶ ಒದಗಿಬಂತು.

ಕಾರ್ಲ ಗುಹೆಗಳು

ಕ್ರಿ.ಪೂ.2ನೇ ಶತಮಾನದಿಂದ ಕ್ರಿ.ಶ. 5ನೇ ಶತಮಾನಗಳ ಮಧ್ಯದಲ್ಲಿ ನಿರ್ಮಾಣವಾದ ಈ ಕಲ್ಲಿನ ಗುಹೆಗಳು ಲೋನಾವಾಲದ ಪ್ರಮುಖ ಆಕರ್ಷಣೆಗಳಲ್ಲೊಂದು. ಇವುಗಳಲ್ಲಿ ಅತಿ ಪುರಾತನವಾದ ಗುಹೆ ಕ್ರಿ.ಪೂ.160 ರಲ್ಲಿ ನಿರ್ಮಾಣವಾಗಿರುವಂಥದ್ದು.ಇಲ್ಲಿನ ಗುಹೆಗಳು ಬೇರೆ ಗುಹೆಗಳಿಗಿಂತ ಚಿಕ್ಕದಾಗಿವೆ. ಆದರೆ ಇಲ್ಲಿರುವ ಮುಖ್ಯ ಪ್ರಾರ್ಥನಾಗೃಹ (ಚೈತ್ಯಾಗೃಹ), ಉಳಿದ ಜಾಗಗಳಲ್ಲಿ ರುವುದ
ಕ್ಕಿಂತ ಗಾತ್ರದಲ್ಲಿ ಬಲು ದೊಡ್ಡದು. ಇದು ಇನ್ನೂ ಮೂಲರೂಪದಲ್ಲಿ ಉಳಿದುಕೊಂಡಿರುವುದೇ ವಿಶೇಷ. ಕಾರ್ಲ ಗುಹೆಗಳ ಪುರಾತನ ಹೆಸರು ‘ವಲುಕುರ’ ಎಂಬುದು.

ಹಲವಾರು ವರ್ತಕರು ಹಾಗೂ ಶಾತವಾಹನ ರಾಜರು ಈ ಗುಹೆಗಳ ನಿರ್ಮಾಣಕ್ಕಾಗಿ ದೇಣಿಗೆಗಳನ್ನು ನೀಡಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. ಈ ಗುಹೆಗಳು ಉತ್ತರ ಹಾಗೂ ದಕ್ಷಿಣ ಭಾರತಗಳ ಮಧ್ಯದಲ್ಲಿವೆ. ಇವು ಅರಬ್ಬೀಸಮುದ್ರದ ಮೂಲಕ ಬರುವ ವರ್ತಕರಿಗೆ ಸರಕುಗಳನ್ನು ದಕ್ಷಿಣ ಭಾರತಕ್ಕೆ ಸಾಗಿಸುವ  ವ್ಯಾಪಾರ ಮಾರ್ಗ (trade route)ದಲ್ಲಿದ್ದವು. ಇವುಗಳನ್ನು ಪ್ರಯಾಣಿಕರಿಗೆ ತಂಗುದಾಣವಾಗಿಯೂ ಉಪಯೋಗವಾಗುತ್ತಿದ್ದವೆಂದು ಹೇಳಲಾಗುತ್ತದೆ. ಮೊದಲಿಗೆ ಬೌದ್ಧ ಧರ್ಮದ ಮಹಾಸಂಘಿಕ ಪಂಥದವರ ಸ್ಥಾನವಾಗಿದ್ದ ಈ ಗುಹೆಗಳು ಸ್ವಲ್ಪ ಸಮಯ ಹಿಂದೂಗಳ ಅಧೀನದಲ್ಲೂ ಇದ್ದವು ಎನ್ನಲಾಗುತ್ತದೆ. ಈಗ ಭಾರತೀಯ ಪುರಾತತ್ವ ಇಲಾಖೆಯ ಅಧೀನಕ್ಕೊಳಪಟ್ಟಿದೆ.

ಒಟ್ಟು 16 ಗುಹೆಗಳಿರುವ ಈ ಸಂಕೀರ್ಣದಲ್ಲಿ ಮೂರು ಗುಹೆಗಳು ಮಹಾಯಾನ ಪಂಥದ ಭಿಕ್ಷುಗಳು ಉಪಯೋಗಿಸುತ್ತಿದ್ದ ಸ್ಥಳಗಳಾಗಿದ್ದವು. ಎಲ್ಲಕ್ಕಿಂತ ದೊಡ್ಡದಾದ ಗುಹೆಯೇ ಪ್ರಾರ್ಥನಾ ಗೃಹ ಅಥವಾ ಚೈತ್ಯಾಗೃಹ.  ಈ ಗೃಹಗಳ ಕಂಬಗಳಲ್ಲಿ ಕೆಲವು ಪುರಾತನ ಶಾಸನಗಳಿವೆ. ಪ್ರತಿ ಕಂಬದ ಮೇಲಿನ ಭಾಗದಲ್ಲೂ ಮಹಿಳೆ-ಪುರುಷರ ಶಿಲಾಕೃತಿಗಳಿವೆ. ಇವು ಕ್ರಿ.ಪೂ.120ರಲ್ಲಿ ನರವನ ಎಂಬ ರಾಜನ ಕಾಲದಲ್ಲಿ ನಿರ್ಮಾಣವಾಗಿದ್ದವು. ಆಗ ಪ್ರಾರ್ಥನೆಯಂತಹ ಚಟುವಟಿಕೆಗಳು ನಡೆಯುತ್ತಿದ್ದವೆಂದು ಶಾಸನವೊಂದು ತಿಳಿಸುತ್ತದೆ. ಮೇಲ್ಛಾವಣಿಯಲ್ಲಿ ಅಡಕವಾಗಿರುವ ಮರದ ದಿಮ್ಮಿಗಳ ನಿರ್ಮಿತಿ ಅಲಂಕಾರಿಕವಾಗಿದೆ. ಈ ಮರದ ಭಾಗಗಳಲ್ಲಿ ಹೆಚ್ಚಿನವು ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯವು ಎಂಬ ವಿಷಯ ನನಗೆ ಅಚ್ಚರಿ ಮೂಡಿಸಿತು. ಈ ಗುಹೆಯಲ್ಲಿ ಒಂದು ಸ್ತೂಪವಿದೆ. ಒಳಹೋಗುವ ಮೊದಲು ಎತ್ತರವಾದ ಕಲ್ಲಿನ ಕಂಬವೊಂದು ನಮ್ಮ ದೇವಸ್ಥಾನಗಳ ಗರುಡಗಂಬವನ್ನು ಹೋಲುವ ರಚನೆಯಾಗಿದೆ. ಎರಡೂ ಬದಿಗಳಲ್ಲಿ ಇರುವ ಆನೆಗಳ ಕೆತ್ತನೆಗಳು ಶಿಥಿಲವಾಗಿವೆ. ಆನೆಗಳ ಮೇಲೆ ಗೋಡೆಗಳಲ್ಲಿ ಬುದ್ಧನ ಹಾಗೂ ಇತರ ಹಲವು ಆಕರ್ಷಕ ಕೆತ್ತನೆಗಳೂ ಇವೆ. ಉಳಿದ ಗುಹೆಗಳ ರಚನೆ ಅತೀ ಸಾಧಾರಣವಾಗಿದೆ. ಗುಹೆಗಳ ಒಳಗೆ ಬೆಳಕು ಬರುವಂತೆ ಕಲ್ಲಿನಲ್ಲೇ ಕಿಟಕಿಗಳನ್ನು ಕೊರೆದಿದ್ದಾರೆ.

ಭಾಜ ಗುಹೆಗಳು

ಲೋನಾವಾಲದಿಂದ ಸುಮಾರು 18 ಕಿ.ಮೀಗಳಷ್ಟು ದೂರದಲ್ಲಿವೆ ಭಾಜಾ ಗುಹೆಗಳು. ಅಂದರೆ ಕಾರ್ಲ ಗುಹೆಗಳ ವಿರುದ್ಧ ದಿಕ್ಕಿನಲ್ಲಿವೆ. ಕೆಳಗಿರುವ ಭಾಜ ಹಳ್ಳಿಯಿಂದ ಸುಮಾರು 400 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲೆ ಇದೆ. ಇದು 22 ಗುಹೆಗಳ ಸಂಕೀರ್ಣ. ಕ್ರಿ.ಪೂ 2ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಹೀನಯಾನ ಬೌದ್ಧಪಂಥಕ್ಕೆ ಸೇರಿದ್ದವು. ಈಗ ಭಾರತೀಯ ಪುರಾತನ ಸರ್ವೇಕ್ಷಣ ವಿಭಾಗದ ಸುಪರ್ದಿಯಲ್ಲಿವೆ.

ಇವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಪ್ರಾರ್ಥನಾ ಮಂದಿರ. ಇಲ್ಲಿ ಅಷ್ಟ ಭುಜಾಕೃತಿಯ ಕಲ್ಲಿನ ಕಂಬಗಳಿವೆ. ಇವುಗಳಲ್ಲಿ ಯಾವುದೇ ಕೆತ್ತನೆಗಳಿಲ್ಲ. ಮೇಲ್ಛಾವಣಿಯಲ್ಲಿ ಅಲಂಕಾರಿಕ ಮರದ ದಿಮ್ಮಿಗಳನ್ನು ಅಳವಡಿಸಲಾಗಿದೆ. ಇದು 2200 ವರ್ಷಗಳಷ್ಟು ಹಳೆಯದೆಂದು ಶಾಸನಗಳು ಹೇಳುತ್ತವೆ. ಕೆಲವು ಉಲ್ಲೇಖಗಳಲ್ಲಿ ದಾನಿಗಳ ಹೆಸರು ನಮೂದಿತವಾಗಿದೆ. ಪ್ರಾರ್ಥನಾ ಗೃಹದ ಒಳಗೆ ದೊಡ್ಡದಾದ ಒಂದು ಸ್ತೂಪವಿದೆ.

ಇತರ ಗುಹೆಗಳಲ್ಲಿ ಕೆಲವು ಕಂಬಗಳು ಹಾಗೂ ಕಲ್ಲಿನ ಕೆತ್ತನೆಗಳನ್ನು ಹೊಂದಿವೆ. ಇನ್ನು ಕೆಲವು ಸಾಧಾರಣ ವಾಗಿವೆ. ಕೆತ್ತನೆಗಳಲ್ಲಿ ತಲೆಯ ಅಲಂಕಾರ, ಕತ್ತಿನ ಹಾರಗಳು ಸೇರಿದಂತೆ ವೈವಿಧ್ಯಮಯ ಆಭರಣಗಳನ್ನು ಕಾಣಬಹುದು. ಒಂದು ಕೆತ್ತನೆಯಲ್ಲಿ ಮಹಿಳೆಯೊಬ್ಬಳು ತಬಲಾ(ಪುಷ್ಕರ) ಬಾರಿಸುತ್ತಿರುವುದು ಹಾಗೂ ಇನ್ನೊಬ್ಬ ಮಹಿಳೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಆ ಕಾಲದಲ್ಲೇ ಸಂಗೀತ ನೃತ್ಯಗಳು ಪ್ರಚಲಿತವಾಗಿದ್ದಿರಬಹುದೆಂದು ಊಹಿಸುವಾಗಲೇ ನಮ್ಮ ದೇಶದ ಪ್ರಾಚೀನತೆಯ ಬಗೆಗೆ ಹೆಮ್ಮೆ ಎನಿಸುತ್ತದೆ.

ಮತ್ತೊಂದು ಗುಹೆ ಸ್ತೂಪಗಳನ್ನು ಹೊಂದಿದೆ. ಇದು ಇಲ್ಲಿನ ಮತ್ತೊಂದು ಆಕರ್ಷಣೆ. ಅಸಮರೂಪದ ಈ ಗುಹೆಯ ಒಳಗೆ ಐದು, ಹೊರಗೆ ಒಂಬತ್ತು ಸ್ತೂಪಗಳಿವೆ. ಇಲ್ಲಿ ವಾಸವಾಗಿದ್ದ ಬೌದ್ಧ ಭಿಕ್ಷುಗಳು ಕಾಲವಾದಾಗ ಅವರ ಚಿತಾಭಸ್ಮದ ಮೇಲೆ ಇವುಗಳನ್ನು ನಿರ್ಮಿಸಲಾಗಿದೆ. ಕೆಲವು ಸ್ತೂಪಗಳ ಮೇಲೆ ಭಿಕ್ಷುಗಳ ಹೆಸರಿದೆ.

ಕಲ್ಲುಗಳ ಮಧ್ಯೆ ನೀರು ತುಂಬಿರುವ ಜಾಗಗಳನ್ನೂ ಕಾಣಬಹುದು. ಮಳೆಗಾಲದಲ್ಲಿ ಮೇಲಿಂದ ಧುಮ್ಮಿಕ್ಕುವ ಜಲಧಾರೆ ಕೆಳಗಿರುವ ಕೆರೆಯನ್ನು ಸೇರುತ್ತದೆ.‌

ಮೇಲೇರಲು ಸುಮಾರು ಇನ್ನೂರು ಮೆಟ್ಟಿಲುಗಳನ್ನು ಹತ್ತಬೇಕು. ಆದರೆ ಕಾರ್ಲ ಗುಹೆಗಳಲ್ಲಿದ್ದಷ್ಟು ಕಡಿದಾದ ಮೆಟ್ಟಲುಗಳಲ್ಲ. ಜನಜಂಗುಳಿ ಇಲ್ಲದೆ ಪ್ರಶಾಂತವಾಗಿದೆ. ಇಲ್ಲಿ ತಲುಪಲು ಸ್ವಂತವಾಹನ, ಟ್ಯಾಕ್ಸಿ ಅಥವಾ ತ್ರಿಚಕ್ರವಾಹನಗಳನ್ನು ಹಿಡಿಯಬೇಕು.

ಕಾರ್ಲ: ಹೋಗುವುದು ಹೇಗೆ?

ಲೋನಾವಾಲದಿಂದ 12ರಿಂದ 13 ಕಿ.ಮೀ ದೂರವಿರುವ ಕಾರ್ಲಕ್ಕೆ ಹೋಗಲು ಬಸ್ಸುಗಳಿವೆ. ಇವು ಬೆಟ್ಟದ ಬುಡದವರೆಗೆ ಹೋಗುತ್ತವೆ. ಟ್ಯಾಕ್ಸಿ, ಆಟೊಗಳನ್ನು ಹಿಡಿದರೆ ಬೆಟ್ಟದ ಮಧ್ಯದವರೆಗೂ ಕರೆದೊಯ್ಯುತ್ತಾರೆ. ಅಲ್ಲಿಂದ ಮುಂದಕ್ಕೆ ಕಡಿದಾದ ಕಲ್ಲಿನ ಮೆಟ್ಟಲುಗಳನ್ನೇರಿ (ಸುಮಾರು ಇನ್ನೂರು) ಮುನ್ನಡೆಯಬೇಕು. ಮೆಟ್ಟಲುಗಳು ಸಮಾನವಾಗಿಲ್ಲ. ಹಾಗಾಗಿ ಬಹು ಎಚ್ಚರಿದಿಂದ ಮೇಲೇರಬೇಕು.

ಬೆಟ್ಟ ಏರುವಾಗ ಇಕ್ಕೆಲಗಳಲ್ಲಿಯೂ ವಿವಿಧ ವಸ್ತುಗಳ ಮಾರಾಟಮಳಿಗೆಗಳು, ಹೋಟೆಲ್‌ಗಳು, ಮಜ್ಜಿಗೆ- ಕಬ್ಬಿನರಸಗಳ ಅಂಗಡಿಗಳು ಯಥೇಚ್ಛವಾಗಿವೆ. ಗುಹೆಗಳ ಪಕ್ಕದಲ್ಲೇ ಪ್ರಸಿದ್ಧವಾದ ‘ಏಕ್ ವೀರ್’ ದೇವಿಯ ದೇವಸ್ಥಾನವಿರುವುದರಿಂದ ಹತ್ತಿಳಿಯುವ ಜನರ ಸಂಖ್ಯೆ ರಜಾದಿನಗಳಲ್ಲಂತೂ ಮಿತಿಮೀರುತ್ತದೆ. ಹಾಗೆಯೇ ವಾಹನ ಸಂಚಾರ- ನಿಲುಗಡೆಗಳಲ್ಲಿ ದಟ್ಟಣೆ, ಅಡಚಣೆಗಳು ಅತಿಯಾಗಿರುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)