ಶುಕ್ರವಾರ, ಏಪ್ರಿಲ್ 3, 2020
19 °C

ಪೋಕ್ರಾ ಪಯಣದಲ್ಲಿ…ನೇಪಾಳ ಸಮೀಪದ ಸುಂದರ ನಗರ

ಶ್ರೀನಿವಾಸ ಜೋಕಟ್ಟೆ. Updated:

ಅಕ್ಷರ ಗಾತ್ರ : | |

ನೇಪಾಳಕ್ಕೆ ಹೋದವರು ರಾಜಧಾನಿ ಕಠ್ಮಂಡು ಮತ್ತು ಪಶುಪತಿನಾಥ ದೇವಸ್ಥಾನ ನೋಡಿಬರುತ್ತಾರೆ. ನಾವು ಈ ತಾಣಗಳಗೆ ಸಮೀಪದಲ್ಲಿರುವ ಪೋಕ್ರಾ ಎಂಬ ಸುಂದರ ನಗರವನ್ನು ಸುತ್ತಾಡಿ ಬಂದೆವು. ಈ ಪಯಣದಲ್ಲಿ ಕಂಡ ಅನುಭವಗಳು ಇಲ್ಲಿವೆ…

ನೇಪಾಳದ ರಾಜಧಾನಿ ಕಠ್ಮಂಡುವಿನಷ್ಟೇ ನನ್ನನ್ನು ಸೆಳೆದ ಮತ್ತೊಂದು ನಗರ ಪೋಕ್ರಾ ನಗರ. ಇದು ಕಾಸ್ಕಿ ಜಿಲ್ಲೆಯಲ್ಲಿದೆ. ಗಂಡಕಿ ಪ್ರದೇಶದ ಪ್ರಮುಖ ಕೇಂದ್ರ. ಈ ನಗರವನ್ನು ನೋಡಲು ಇತ್ತೀಚೆಗೆ ತಂಡವೊಂದರ ಜತೆಗೆ ಮುಂಬೈನಿಂದ ಹೊರಟೆವು.

ಮುಂಬೈಯಿಂದ ಕುಶಿನಗರ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಬಂದು ಅಲ್ಲಿಂದ ಸೊನೌಲಿ ಗಡಿ ತಲುಪಿದೆವು. ಅಲ್ಲಿನ ಚೆಕ್ ಪೋಸ್ಟ್‌ನಲ್ಲಿ ನಮ್ಮ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು (ಪಾಸ್‌ಪೋರ್ಟ್ ಅಲ್ಲ) ಸಲ್ಲಿಸಿದೆವು. ನಂತರ ನಮ್ಮ ಬಸ್‌ ಸೊನೌಲಿಯ ಆಚೆಗೆ ನೇಪಾಳದ ಭೈರ್ ಹವಾ ಕಸ್ಟಮ್ ಆಫೀಸಿನ ಪ್ಯಾಸೆಂಜರ್ ಕೌಂಟರ್ ಎದುರು ನಿಂತಿತು. ಆ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ನಮ್ಮ ದಾಖಲೆ ವಿವರ ಸಲ್ಲಿಸಿದೆವು. ಸೊನೌಲಿ ಬಾರ್ಡರ್‌ನಲ್ಲಿ  ಊಟ ಮಾಡಿದ ನಂತರ ಬಸ್ಸು ಹೊರಟಿತು. ಇಲ್ಲಿಂದ ರಸ್ತೆ ಮಾರ್ಗವಾಗಿ ಆರು ಗಂಟೆಗಳ ಪ್ರಯಾಣದ ನಂತರ ನೇಪಾಳದ ಪೋಕ್ರಾ ನಗರ ತಲುಪಿದೆವು.


ಫೆವಾ ಸರೋವರದ ಮಧ್ಯದಲ್ಲಿ ಎರಡು ಮಹಡಿಯ ವಾರಾಹಿ ಮಂದಿರ

ರಾಜಧಾನಿ ಕಠ್ಮಂಡುವಿನಿಂದ 200 ಕಿಲೋಮೀಟರ್ ದೂರದಲ್ಲಿ ಪಶ್ಚಿಮಕ್ಕಿರುವ ನಗರ ಪೋಕ್ರಾ. ಇಲ್ಲಿನ ಫೆವಾ ಸರೋವರ, ಅನ್ನಪೂರ್ಣ ಸರಣಿಯ ಮಾಛಾಪುಛೆ ಪರ್ವತ, ಸುತ್ತಮುತ್ತಲಿರುವ ಪರ್ವತ ಸರಣಿಗಳ ಸುಂದರ ದೃಶ್ಯಗಳು, ಸ್ವಚ್ಛ ಸರೋವರಗಳು, ವಿಶ್ವಪ್ರಸಿದ್ಧ ಹಿಮಾಲಯದ ನಯನಮನೋಹರ ದೃಶ್ಯಗಳು ಪೋಕ್ರಾದ ಸೌಂದರ್ಯ ಹೆಚ್ಚಿಸಿವೆ. ಹಾಗಾಗಿಯೇ, ಇದು ಪ್ರವಾಸಿಗರಿಗೆ ರೋಮಾಂಚನ ಹುಟ್ಟಿಸುವ ತಾಣವಾಗಿದೆ. ಇಷ್ಟು ಪರ್ವತ ಶಿಖರಗಳಲ್ಲಿ ಅನ್ನಪೂರ್ಣ ಪರ್ವತ ಶಿಖರ ಇಲ್ಲಿನ ಪ್ರಮುಖ ಆಕರ್ಷಣೆ. ಪಶ್ಚಿಮದಿಂದ ಪೂರ್ವದತ್ತ  ಈ ಪರ್ವತ ಸರಣಿ ವ್ಯಾಪಿಸಿದೆ.

ಪೋಕ್ರಾದಲ್ಲಿ ಫ್ಯೂಬಾ ಸರೋವರ, ಬೆಗನಾಸ್ ಮತ್ತು ರೂಪಾ ಸರೋವರಗಳಿವೆ. ಸೇತಿ ಮಂಡಕಿ, ಮಹೇಂದ್ರ ಗುಹೆ, ವಾ(ಬಾ)ರಾಹಿ ಮಂದಿರಗಳಿವೆ. ಡೇವಿಸ್ ಫಾಲ್ಸ್, ಗುಪ್ತೇಶ್ವರ ಜಲಪಾತ, ಪೋಕ್ರಾ ವಸ್ತುಸಂಗ್ರಹಾಲಯಗಳಿವೆ. ನಾವು ಇವನ್ನೆಲ್ಲ ನೋಡಿಕೊಂಡು ವಿಂದ್ಯಾವಾಸಿನಿ ದೇವಿ ಮಂದಿರಕ್ಕೆ ಭೇಟಿ ನೀಡಿದೆವು. ಬೆಗನಾಸ್  ಮತ್ತು ರೂಪಾ ಸರೋವರಗಳು ಪೋಕ್ರಾದ ಪ್ರಸಿದ್ಧ 8 ಸರೋವರಗಳಲ್ಲಿ ಸೇರಿವೆ. ಇಲ್ಲಿಯ ಶಾಂತ ವಾತಾವರಣವೇ ಪ್ರವಾಸಿಗರನ್ನು ಸೆಳೆಯುತ್ತದೆ. ಸೇತಿ ಮಂಡಕ ಮತ್ತು ಸೇತಿ ಕಣಿವೆ ಕೂಡ ಇಲ್ಲಿನ ಆಕರ್ಷಣೆ. ಸೇತಿ ಮಂಡಕ ಸುಂದರ ನದಿ. ಇದು ನಗರದ ಮಧ್ಯದಿಂದಲೂ ಹರಿಯುತ್ತದೆ. ಈ ನದಿ ಕೆಲವೆಡೆ ಇದು ಭೂಮಿಯ ಒಳಗೂ ಹರಿಯುತ್ತದೆ. ಹೀಗಾಗಿ ಪೋಕ್ರಾದ ಭೂಮಿ ಸೇತಿ ನದಿಯಲ್ಲಿ ತೇಲುತ್ತಿದೆ ಎಂಬ ನಂಬಿಕೆಯೂ ಇಲ್ಲಿದೆ!

ಫೆವಾ ಸರೋವರದ ಮಧ್ಯದಲ್ಲಿ ಎರಡು ಮಹಡಿಯ ವಾರಾಹಿ ಮಂದಿರವಿದೆ. ಇದು ಪಗೋಡ  ಶೈಲಿಯಲ್ಲಿದೆ. ಪೋಕ್ರಾಗೆ ಬಂದ ಪ್ರವಾಸಿಗರು ಮೊದಲು ಭೇಟಿ ನೀಡುವುದು ವಿಂಧ್ಯಾವಾಸಿನಿ ಮಂದಿರಕ್ಕೆ. ನೇಕಾರ ಜನಾಂಗಕ್ಕೆ ಸೇರಿದ ಈ ಕ್ಷೇತ್ರಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚು ಇತಿಹಾಸವಿದೆ. ವಿಂಧ್ಯಾವಾಸಿನಿಯಲ್ಲಿ ಹಳೆಯ ಮತ್ತು ಹೊಸ ಮಂದಿರಗಳೂ ಇವೆ. ಮಹೇಂದ್ರ ಗುಹೆ ಪ್ರವಾಸಿಗರ ಇನ್ನೊಂದು ಆಕರ್ಷಣೆಯ ತಾಣ.


ನಗರದ ನಡುವೆ ಹರಿಯುವ ಫೆವಾ ನದಿ

ಇಲ್ಲಿನ ‘ಡೇವಿಸ್ ಫಾಲ್’ ವಿಸ್ಮಯಕಾರಿ ಜಲಪಾತ. ಇದು ಎರಡು ಕಿಲೋಮೀಟರ್‌ ದೂರದಲ್ಲಿ, ನೈಋತ್ಯ ದಿಕ್ಕಿನಲ್ಲಿದೆ. ಇಲ್ಲಿ ಬಜಾರ್ ಏರಿಯಾ, ಹೋಟೆಲ್‌ಗಳು ಹ್ಯಾಂಡಿಕ್ರಾಫ್ಟ್ ಅಂಗಡಿಗಳು ಸಾಕಷ್ಟಿವೆ. ಈ ನಗರದಲ್ಲಿ ಸುತ್ತಾಡುವಾಗ ಕಂಡ ಹೋಟೆಲ್‌ ಗಳ ಪ್ರವೇಶ ದ್ವಾರದಲ್ಲಿ ಮೆನು ಕಾರ್ಡ್‌ಗಳನ್ನು ತೂಗು ಹಾಕಿರುತ್ತಾರೆ. ದರಗಳು ನಿಮಗೆ ಒಪ್ಪಿಗೆಯಾದರೆ ಒಳಗಡೆ ಹೋಗಬಹುದು !

ಬೀದಿ ಬೀದಿಗಳಲ್ಲೂ ಪ್ಯಾಕೇಜ್ ಟೂರ್ ಕಚೇರಿಗಳಿವೆ. ಹೇಳಿಕೇಳಿ ರಾಫ್ಟಿಂಗ್, ಟ್ರಕ್ಕಿಂಗ್, ಜಂಗಲ್ ಸಫಾರಿಗೆ ಸೂಕ್ತವಾದ ತಾಣವಾಗಿರುವುದರಿಂದ, ಆಸಕ್ತರನ್ನು ಕರೆದೊಯ್ಯಲು ಸಾಕಷ್ಟು ಏಜೆನ್ಸಿಗಳೂ ಇಲ್ಲಿವೆ.

ಹೋಗುವುದು ಹೇಗೆ ?

ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಎಲ್ಲ ಕಡೆಯಿಂದ ರೈಲು ಸೇವೆ ಇದೆ. ಗೋರಖ್ ಪುರದಿಂದ ಭಾರತ ನೇಪಾಳ ಗಡಿ ಪ್ರದೇಶ ಸೊನೌಲಿಗೆ 90 ಕಿ.ಮೀ ದೂರವಿದೆ.

ಮಹರಾಜ್ ಗಂಜ್ ನಿಂದ 75 ಕಿ.ಮೀ.ದೂರವಿದೆ. ನೇಪಾಳ ಪ್ರವೇಶಕ್ಕೆ ಪಾಸ್ ಪೋರ್ಟ್ ಅಗತ್ಯವಿಲ್ಲ. ಆದರೆ, ಚೆಕ್ ಪೋಸ್ಟ್ ನಲ್ಲಿ ಆಧಾರ್, ಮತದಾರರ ಗುರುತಿನ ಚೀಟಿ ಕಡ್ಡಾಯ. ಭಾರತದ ವಾಹನಗಳನ್ನು ನೇಪಾಳಕ್ಕೆ ಸುತ್ತಾಡಲು ಒಯ್ಯಬಹುದು. ಆದರೆ ಅಲ್ಲಿ ಲೋಕಲ್ ಪ್ರವಾಸ ಸ್ಥಳಗಳನ್ನು ಅಲ್ಲಿನ ವಾಹನದಲ್ಲೇ ಸುತ್ತಾಡ ಬೇಕು.

ಊಟ- ವಸತಿ ವ್ಯವಸ್ಥೆ

ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಸಾಕಷ್ಟು ಟೂರಿಸ್ಟ್ ಹೋಟೆಲುಗಳಿವೆ . ನೋಟು ವಿನಿಮಯ ಕೇಂದ್ರಗಳಿವೆ. ನೇಪಾಳದಲ್ಲಿ ಭಾರತದ ನೋಟುಗಳು ಚಲಾವಣೆಯಾಗುತ್ತವೆ. ಹಾಗಾಗಿ ನಾವು ನೇಪಾಳಿ ನೋಟುಗಳಿಗಾಗಿ ರೂಪಾಯಿ ವಿನಿಮಯ ಮಾಡಿಕೊಳ್ಳುವ  ಅಗತ್ಯವಿಲ್ಲ. ರೂ 500 ನೋಟು ಹೊರತುಪಡಿಸಿದರೆ, ಚಿಕ್ಕ ಅಂಗಡಿಗಳವರು ಭಾರತೀಯ ಕರೆನ್ಸಿಗಳನ್ನು ಸ್ವೀಕರಿಸುತ್ತಾರೆ.

ಇನ್ನೇನು ನೋಡಬಹುದು ?

ಜಂಗಲ್ ಸಫಾರಿ, ಎಲಿಫೆಂಟ್ ಸಫಾರಿ ಅಂದರೆ ಚಿತ್ವನ್ ನ್ಯಾಷನಲ್ ಪಾರ್ಕ್ ಮತ್ತು ಬಾರ್ಡಿಯಾ ನ್ಯಾಷನಲ್ ಪಾರ್ಕ್ ನೋಡಬಹುದು.

ಟ್ರೆಕ್ಕಿಂಗ್ ಹೋಗಬೇಕು ಎಂದರೆ ರೌಂಡ್ ಅನ್ನಪೂರ್ಣ, ಅನ್ನಪೂರ್ಣ ಬೇಸ್ ಕ್ಯಾಂಪ್, ಅಪ್ಪರ್ ಮಸ್ತಂಗ್, ರೋಯಲ್ ಟ್ರಕ್, ಪಂಚೇಸ್ ಟ್ರಕ್ ನಂತರ ಜಾಗಗಳಿವೆ. ಟ್ರೆಕ್ಕಿಂಗ್ ಕರೆದೊಯ್ಯುವ ಏಜೆನ್ಸಿಗಳಿವೆ. ರಾಫ್ಟಿಂಗ್ ಇಷ್ಟವಿದ್ದರೆ ತ್ರಿಶೂಲ್  ರಿವರ್, ಸೇಟಿ (ತಿ)ರಿವರ್, ಸನ್ ಕೋಶಿಗೂ ಕರೆದೊಯ್ಯುತ್ತಾರೆ.

ಹೀಗೆಲ್ಲ ಸುತ್ತಾಡಬಹುದು..

ಪೋಕ್ರಾ ನಗರ ಸುತ್ತಾಡಲು ಲೋಕಲ್ ಮಿನಿ  ಬಸ್ಸಲ್ಲಿ ಹೋಗಬೇಕು. ಅವರು ಮೊದಲಿಗೆ ವಿಂದ್ಯಾವಾಸಿನಿ ಮಂದಿರಕ್ಕೆ ಕರೆದೊಯ್ಯುತ್ತಾರೆ. ಫೆವ್ಹಾ ಸರೋವರದಲ್ಲಿ ನೌಕಾ ವಿಹಾರ ಮಾಡುತ್ತಾ ವಾರಾಹಿ ಮಂದಿರವನ್ನು ವೀಕ್ಷಿಸುವುದೂ ಒಂದು ವಿಶಿಷ್ಟ ಅನುಭವ.

ಇದನ್ನೂ ಓದಿ: ಐಆರ್‌ಸಿಟಿಸಿಯಿಂದ ನೇಪಾಳ ಪ್ರವಾಸ ಸೌಲಭ್ಯ

ಗುಪ್ತೇಶ್ವರ ಮಹಾದೇವ ಮಂದಿರ, ಮನ್ ಕಾಮನಾ ಭಗವತಿ, ಗೋರ್ಖಾ ಸ್ಮಾರಕ ಮ್ಯೂಸಿಯಂ.. ಹೀಗೆ ಪ್ರವಾಸಿಗರು ಮನತಣಿಯವುಷ್ಟು ಸುತ್ತಾಡಬಹುದು.

ಪೋಕ್ರಾವನ್ನು ಅನ್ನಪೂರ್ಣ ಪರ್ವತ ಸರಣಿಯ ಗೇಟ್ ವೇ ಎಂದು ಕರೆಯುತ್ತಾರೆ. ಇದು ಫೆವ್ಹಾ ಸರೋವರ ತೀರದ ಶಹರವೂ ಹೌದು. ಪೋಕ್ರಾದಲ್ಲಿ ಸೂರ್ಯೋದಯ ವೀಕ್ಷಿಸಲು ಮುಂಜಾನೆ ಬೇಗ ಎದ್ದು ಸಾರಾಂಗ್ ಕೋಟ್‌ಗೆ ತೆರಳಬೇಕು.

ಚಿತ್ರ: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು