ಮಂಗಳವಾರ, ಅಕ್ಟೋಬರ್ 15, 2019
26 °C

ಮೈಸೂರು ಸಮೀಪದಲ್ಲೇ ಇರುವ 'ಶೂಟಿಂಗ್‌' ಮಹದೇವಪುರ

Published:
Updated:

ನಾನೂ... ನೀನು... ಹಾಲು.. ಜೇನು... ಹಾಡನ್ನೊಮ್ಮೆ ನೆನಪಿಸಿಕೊಳ್ಳಿ. ಡಾ.ರಾಜ್‌ಕುಮಾರ್‌–ಮಾಧವಿ, ಅಂಬರೀಷ್‌–ಶ್ರೀಶಾಂತಿ ಜೋಡಿ  ‘ಒಡಹುಟ್ಟಿದವರು’ ಸಿನಿಮಾದಲ್ಲಿ ನರ್ತಿಸುವ ಹಾಡು ಅದು. ಆ ಹಾಡಿನ ಜತೆಗೆ ಪ್ರಾಕೃತಿಕ ಸೊಬಗು ಅಷ್ಟೇ ಕಣ್ಣಿಗೆ ಕಟ್ಟಿದಂತಿರುತ್ತದೆ.

‘ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ಹುಡುಗರು ‘ಅಕ್ಕಾ ನಿನ್‌ ಗಂಡ ಹೆಂಗಿರಬೇಕು’ ಎಂದಾಗ, ಹರಿಯುವ ನೀರಿನಲ್ಲಿ ನಲಿಯುತ್ತಿದ್ದ ನಟಿ ಬಿಂದಿಯಾ ‘ಲಕ್ಕಾ ಲಕ್ಕಾ ಅಂತ ಹೊಳಿತಿರಬೇಕು’ ಎಂದು ಹಾಡುವುದಿನ್ನೂ ನೀರಿನಷ್ಟೇ ತಿಳಿಯಾಗಿದೆ.

‘ರವಿಮಾಮ’ ಸಿನಿಮಾದಲ್ಲಿ ನಟಿ ನಗ್ಮಾ ತೆಂಗಿನಮರಗಳ ಸಾಲಿನಲ್ಲಿ ಲಂಗ–ದಾವಣಿ ಧರಿಸಿ ನರ್ತಿಸುತ್ತಾ ಬರುತ್ತಾರೆ. ‘ಮನಮೆಚ್ಚಿದ ಹುಡುಗಿ’ ಸಿನಿಮಾದಲ್ಲಿ ‘ಗೌರಮ್ಮ ನಿನ್ನ ಗಂಡ ಯಾರಮ್ಮ’ ಎಂದು ಶಿವರಾಜ್‌ಕುಮಾರ್‌–ಸುಧಾರಾಣಿ ಹಾಡುತ್ತಾ ಹೆಜ್ಜೆ ಹಾಕಿದ ದೃಶ್ಯಗಳು, ‘ಆಪ್ತಮಿತ್ರ’ ಚಿತ್ರದಲ್ಲಿ ವಿಷ್ಣವರ್ಧನ್‌ ಪ್ರವೇಶದ ಫೈಟ್‌ ದೃಶ್ಯ, ‘ಜನುಮದ ಜೋಡಿ’ಯಲ್ಲಿ ಸಾಲು ಸಾಲು ಎತ್ತಿನ ಗಾಡಿಗಳು ಸಾಗುವ ಚಿತ್ರಣ.. ಇಂಥ ಹಲವು ದೃಶ್ಯಗಳು ಮನದೊಳಗೆ ಅಚ್ಚಾಗಿದೆ.

ಇಂಥ ನೂರಾರು ಸಿನಿಮಾಗಳಲ್ಲಿ ಸುಂದರವಾದ ‘ಹಳ್ಳಿಲೋಕ’ವನ್ನು ತೋರಿಸುವ ದೃಶ್ಯಗಳೆಲ್ಲ ಚಿತ್ರೀಕರಣಗೊಂಡಿರುವುದು ಕಾವೇರಿ ತಟದ ಮಹದೇವರ ಗ್ರಾಮದಲ್ಲಿ. ಅದಕ್ಕೆ ಈ ಗ್ರಾಮವನ್ನು ‘ಶೂಟಿಂಗ್ ಮಹದೇವಪುರ’ ಎನ್ನುತ್ತಾರೆ. ಇಲ್ಲಿ ಚಿತ್ರೀಕರಣಗೊಂಡಿರುವ ಎಲ್ಲ ದೃಶ್ಯಗಳು ಜನಮಾನಸದಲ್ಲಿ ಈಗಲೂ ಹಸಿರಾಗಿವೆ. ಅಪ್ಪಟ ಹಳ್ಳಿಯ ಪರಿಸರ ಎಂದೊಡನೆ ಈಗಲೂ ಚಿತ್ರರಂಗದವರು ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮವನ್ನು ಹುಡುಕಿಕೊಂಡು ಬರುತ್ತಾರೆ.

ಕನ್ನಡದಲ್ಲಿ ಡಾ.ರಾಜ್‌ಕುಮಾರ್‌ ಅವರಿಂದ ದರ್ಶನ್‌, ಯಶ್‌, ಸುದೀಪ್‌ವರೆಗೂ ಹಲವು ನಾಯಕ ನಟರು ಮಹದೇವಪುರದ ತಾಣಗಳಲ್ಲಿ ನರ್ತಿಸಿದ್ದಾರೆ. ಸ್ಯಾಂಡಲ್‌ವುಡ್‌ ಮಾತ್ರವಲ್ಲ ಕಾಲಿವುಡ್‌, ಟಾಲಿವುಡ್‌, ಬಾಲಿವುಡ್‌ ಸಿನಿಮಾಗಳ್ಲೂ ಮಹದೇವಪುರ ಬೆಳ್ಳಿಪರದೆಯ ಮೇಲೆ ರಾರಾಜಿಸಿದೆ. ಇತ್ತೀಚೆಗಷ್ಟೇ ತಮಿಳಿನ ‘ಲಿಂಗಾ’ ಸಿನಿಮಾದ ಚಿತ್ರೀಕರಣಕ್ಕಾಗಿ ಸೂಪರ್‌ ಸ್ಟಾರ್‌ ರಜನೀಕಾಂತ್‌ ಹಾಗೂ ಬಾಲಿವುಡ್‌ ತಾರೆ ಸೋನಾಕ್ಷಿ ಸಿನ್ಹಾ ಇಲ್ಲಿಗೆ ಬಂದಿದ್ದರು.

ಗದ್ದೆ–ಬಯಲು, ವೀಳ್ಯೆದೆಲೆ ತೋಟ

ಇಲ್ಲಿಯ ಗದ್ದೆ ಬಯಲಿನ ಬದುವಿನಲ್ಲಿ ಹಲವು ಹೀರೋಯಿನ್‌ಗಳು ಜಾರಿ ಬಿದ್ದಿದ್ದಾರೆ. ವೀಳ್ಯೆದೆಲೆ ತೋಟಗಳ ಬಳ್ಳಿಗಳ ನಡುವೆ ನಟ–ನಟಿಯರು ನರ್ತಿಸಿದ್ದಾರೆ. ಇಲ್ಲಿಯ ಸಪೋಟ, ಸೀಬೆ, ಮಾವು, ಬಾಳೆ ತೋಟದ ಹಣ್ಣುಗಳ ರುಚಿ ನೋಡಿದ್ದಾರೆ.

ಕಾವೇರಿ ಬೋರೆದೇವರ ದೇಗುಲದಲ್ಲಿ ನೂರಾರು ಶೂಟಿಂಗ್‌ ಮದುವೆಗಳಾಗಿವೆ. ದೇಗುಲದ ಸಮೀಪದಲ್ಲೇ ಇರುವ ಬ್ಯಾರೇಜ್‌ ಮೇಲೆ ನಾಯಕ–ನಾಯಕಿಯರು ಕೈಕೈ ಹಿಡಿದು ಓಡಾಡಿದ್ದಾರೆ. ಸ್ವಲ್ಪ ದೂರದಲ್ಲೇ ಇರುವ ಗೆಂಡೆಹೊಸಹಳ್ಳಿ ಪಕ್ಷಿಧಾಮದ ಹಕ್ಕಿಗಳ ಚಿಲಿಪಿಲಿ ಗಾನ ಬೆಳ್ಳಿಪರದೆಗೂ ತಟ್ಟಿದೆ. ಮಹದೇವಪುರದ ಐತಿಹಾಸಿಕ ಬಂಗಲೆ ಕನ್ನಡದ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದೆ.

ಸಮೀಪದಲ್ಲೇ ಪಕ್ಷಿಧಾಮ

‘ಶೂಟಿಂಗ್‌ ಮಹದೇವಪುರ’ ಎಂದರೆ ಇದು ಕೇವಲ ಒಂದು ಗ್ರಾಮವಷ್ಟೇ ಅಲ್ಲ, ಗೆಂಡೆಹೊಸಹಳ್ಳಿ ಪಕ್ಷಿಧಾಮದಿಂದ ಕರಿಘಟ್ಟದವರೆಗೂ 10 ಕಿ.ಮೀ. ಹಾದಿಯ ಸುಂದರ ಪರಿಸರ. ಕರಿಘಟ್ಟ, ಹೊಡೆದಾಟದ ಸನ್ನಿವೇಶಗಳಿಗೆ ಬಲು ಪ್ರಸಿದ್ಧ ಜಾಗ. ಹಲವು ಬೈಕ್‌ ಚೇಸಿಂಗ್‌ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಬೆಟ್ಟದ ಸುತ್ತಲೂ ಹರಿಯುತ್ತಿರುವ ನಾಲೆ, ಅರಣ್ಯ ರಾಶಿ ನೂರಾರು ಚಲನಚಿತ್ರಗಳಲ್ಲಿ ಕಣ್ಣಿಗೆ ಕಟ್ಟುತ್ತವೆ.

‘ದಶಕದ ಹಿಂದೆ ಮಹದೇವಪುರದಲ್ಲಿ ನಿತ್ಯವೂ ಶೂಟಿಂಗ್‌ ಇರುತ್ತಿತ್ತು. ಮೊಬೈಲ್‌ ಹಾವಳಿ ಹೆಚ್ಚುವುದಕ್ಕೂ ಮೊದಲು ಚಿತ್ರೀಕರಣ ನೋಡಲು ಬಂದ ಜನರು ನಟ–ನಟಿಯರ ಜೊತೆ ಫೋಟೊ ತೆಗೆಸಿಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಿದ್ದರು. ನೂರಾರು ಫೋಟೊಗ್ರಾಫರ್‌ಗಳೂ ಜೀವನ ಕಟ್ಟಿಕೊಂಡಿದ್ದರು. ಆದರೆ ಇತ್ತೀಚೆಗೆ ಚಿತ್ರೀಕರಣ ಕಡಿಮೆಯಾಗಿವೆ. ಸ್ಟುಡಿಯೊಗಳಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡುತ್ತಾರೆ. ಆದರೂ ಹಳ್ಳಿಯ ಪರಿಸರಕ್ಕೆ ಈಗಲೂ ಹಲವರು ಮಹದೇವಪುರ ಹುಡುಕಿಕೊಂಡು ಬರುತ್ತಾರೆ’ ಎಂದು ಗ್ರಾಮದ ಶಿವರಾಮು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಗಗನಚುಕ್ಕಿ ಜಲಪಾತ: ಸ್ವಚ್ಛತೆ, ಶೌಚಾಲಯ ಸೌಲಭ್ಯ

ಮಹದೇವಪುರ ಗ್ರಾಮದ ಬಳಿಯ ನದಿಯಲ್ಲಿರುವ ಕನಕನ ಬಂಡೆಗೆ ಐತಿಹಾಸಿಕ ಹಿನ್ನೆಲೆ ಇದೆ. ಕನಕದಾಸರು ನದಿಯಲ್ಲಿ ಈಜಿಕೊಂಡು ಬಂದು ಬಂಡೆಯ ಮೇಲೆ ಧ್ಯಾನ ಮಾಡಿದ್ದರು ಎಂಬ ಐತಿಹ್ಯವಿದೆ. ಹೀಗಾಗಿ ಈ ಬಂಡೆ ‘ಕನಕನ ಬಂಡೆ’ ಎಂದೇ ಪ್ರಸಿದ್ಧಿ ಪಡೆದಿದೆ. ಬಂಡೆಯ ಸಮೀಪದಲ್ಲೇ ಕನಕದಾಸರ ದೇವಾಲಯವೂ ಇದೆ.

‘ಚಿತ್ರಕಲಾ ಕಲಾವಿದರಿಗೆ ಈ ಪರಿಸರ ಹೇಳಿ ಮಾಡಿಸಿದ ಜಾಗ. ಇಲ್ಲಿರುವ ಐತಿಹಾಸಿಕ ಬಂಗಲೆಯನ್ನು ಅಧ್ಯಯನ ಮಾಡಲು ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಇಲಾಖೆ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ರೂಪಿಸುವಲ್ಲಿ ಸಂಪೂರ್ಣವಾಗಿ ಸೋತಿದೆ’ ಎಂದು ಕಲಾವಿದ ವಿಕ್ರಮ್‌ ಬೇಸರ ವ್ಯಕ್ತಪಡಿಸುತ್ತಾರೆ.

ಸದ್ಯ, ಕೆಆರ್‌ಎಸ್‌ ಜಲಾಶಯ ತುಂಬಿದ್ದು ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಗೆಂಡೆಹೊಸಹಳ್ಳಿಯಿಂದ ಕರಿಘಟ್ಟದವರೆಗೆ ನದಿ ತೀರದ ಸೌಂದರ್ಯ ನೂರ್ಮಡಿಯಾಗಿದೆ. ಕರಿಘಟ್ಟದ ಮೇಲೆ ನಿಂತು ಕಾವೇರಿಯನ್ನು ಕಣ್ತುಂಬಿಕೊಳ್ಳಲು ಇದು ಸಕಾಲವಾಗಿದೆ.

ದಾರಿ ಇಲ್ಲಿದೆ...

ದಸರಾ ನೋಡಲು ಮೈಸೂರಿಗೆ ಹೋಗುವ ಪ್ರವಾಸಿಗರು ಶ್ರೀರಂಗಪಟ್ಟಣ ಸಮೀಪವಿರುವ ಶೂಟಿಂಗ್‌ ಮಹಾದೇವಪುರಕ್ಕೂ ಭೇಟಿ ನೀಡಬಹುದು. ನಿಮಿಷಾಂಬಾ ದೇವಿ ದೇವಾಲಯದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ ಕರಿಘಟ್ಟ. ಕರಿಘಟ್ಟದಿಂದ ಗೆಂಡೆಹೊಸಳ್ಳಿವರೆಗೂ ಒಂದೇ ರಸ್ತೆ ಇದ್ದು ಮಹಾದೇವಪುರ ಸುತ್ತಮುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಲೋಕಪಾವನಿ ನದಿ ಸೇತುವೆ ಬಳಿ ಎಡಕ್ಕೆ ತಿರುಗಿದರೆ ಕರಿಘಟ್ಟ ಸಿಗುತ್ತದೆ. ಅಲ್ಲಿಂದ ಸೇತುವೆ ದಾಟಿದರೆ ಮಹಾದೇವಪುರಕ್ಕೆ ತೆರಳಬಹುದು.

ಚಿತ್ರಗಳು: ಸಂತೋಷ್ ಚಂದ್ರಮೂರ್ತಿ

Post Comments (+)