ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಸೊಗಡು ಅರಿವ ಸಾಹಸ ಪಯಣ

ಹಳ್ಳಿಗಾಡಿನ ಕಾಲ್ದಾರಿ ನಡಿಗೆ
Last Updated 16 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕಿಸೆಯಲ್ಲಿ ದುಡ್ಡು ಇಟ್ಟುಕೊಂಡಿಲ್ಲ. ಕೈಯಲ್ಲಿ ಸೆಲ್‍ಫೋನ್ ಇಲ್ಲ. ಹೆದ್ದಾರಿಗಳನ್ನು ಮುದ್ದಾಂ ಬಳಸುವುದಿಲ್ಲ. ಊಟ-ತಿಂಡಿಯ ಯಾವ ಖಾತ್ರಿಯೂ ಇಲ್ಲ.. ನಿತ್ಯ 30-35 ಕಿ.ಮೀ. ಕಾಲು ಹಾದಿಯಲ್ಲಿ ನಡಿಗೆ.. ಬಸವಳಿದ ಬಳಿಕ ಉಳಿದುಕೊಳ್ಳುವ ಸ್ಥಳವೂ ಪರಿಚಿತವಲ್ಲ. ಅಲ್ಲಿ ಯಾರ ಪರಿಚಯ ಅಥವಾ ಕೈಯಲ್ಲಿ ಶಿಫಾರಸು ಪತ್ರವೂ ಇಲ್ಲ!

ಪುದುಚೆರಿಯ ಶ್ರೀಅರವಿಂದರು ಹಾಗೂ ಶ್ರೀ ಮಾತಾ ಆಶ್ರಮದಿಂದ ‘ವಿಶ್ವ ಕಿ ಖೋಜ್’ ಹೆಸರಿನ ಕಾಲ್ನಡಿಗೆ ಆರಂಭಿಸಿರುವ ಉತ್ತರಾಖಂಡ್‍ನ ಸಿಲಿಗುರಿಯ ಪುಟ್ಟ ಗ್ರಾಮದ ನೈನಿಕ್, ಕೋಲ್ಕತ್ತಾದ ಅಂಕಿತಾ ಮತ್ತು ಹರಿಯಾಣಾ ಬಳಿಯ ಗುರುಗ್ರಾಮ ನಗರದ ಶಿಲ್ಪಾ ಎಂಬ, 25-30 ವರ್ಷದೊಳಗಿನ ಮೂವರು ಯುವ ಸಾಹಸಿಗರ ನೆಲದ ಸೊಗಡು ಪರಿಚಯಿಸಿಕೊಳ್ಳುವ ಪಯಣವಿದು.

ನೈನಿಕ್, ಅಸ್ಸಾಂನಲ್ಲಿ ಸದ್ಯ ಸ್ವಯಂ ಸೇವಾ ಸಂಸ್ಥೆಯೊಂದನ್ನು ಮುನ್ನಡೆಸುತ್ತಿರುವ ಸ್ವಯಂ ಉದ್ಯೋಗಿ. ಅಂಕಿತಾ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಎಕ್ಸಿಕ್ಯೂಟಿವ್. ಶಿಲ್ಪಾ ದಿಲ್ಲಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಲ್ಲಿ ಅಧಿಕಾರಿಯಾಗಿದ್ದವರು.

ವಿಶೇಷವೆಂದರೆ, ಮೂವರೂ ಪರಸ್ಪರ ಪರಿಚಿತರಲ್ಲ! ಈ ಪಯಣದಲ್ಲಿ ಜೊತೆಗೂಡಿದವರಷ್ಟೇ. ಅಂಕಿತಾ– ನೈನಿಕ್ ಭೇಟಿಯಾಗಿದ್ದು ಅಸ್ಸಾಂನಲ್ಲಿ ನಡೆದ ಸೈಕಲ್ ಜಾಥಾದಲ್ಲಿ. ಈ ಇಬ್ಬರನ್ನು ಶಿಲ್ಪಾ ಭೇಟಿಯಾಗಿದ್ದು, ದಿಲ್ಲಿಯ ಯೂತ್‌ ಹಾಸ್ಟೆಲ್‍ವೊಂದರಲ್ಲಿ. ಮೊದಲು ಅಂಕಿತಾ–ನೈನಿಕ್ ನಡಿಗೆ ಆರಂಭಿಸಿದರು. ಕಳೆದ ತಿಂಗಳು ಶಿಲ್ಪಾ ಇವರೊಂದಿಗೆ ಜತೆಯಾಗಿದ್ದಾರೆ.

ಚಿಕ್ಕಜಾಜೂರು ಮೂಲಕ ಹುಬ್ಬಳ್ಳಿ, ಬಳಿಕ ಧಾರವಾಡಕ್ಕೆ ಹಳ್ಳಿಗಳ ಮೂಲಕ ಕಾಲ್ನಡಿಗೆಯಲ್ಲೇ (ಮಾ.13) ತಲುಪಿದ ಈ ತಂಡ, ಅಚಾನಕ್‌ ಆಗಿ ಧಾರವಾಡದ ಹಂಪಿಹೊಳಿ ಎಂಬುವವರ ಮನೆ ಬಾಗಿಲು ತಲುಪಿ, ಕುಡಿಯಲು ನೀರು ಕೇಳಿತ್ತು. ಪೂರ್ವಾಪರ ವಿಚಾರಿಸಿ, ಒಳಗೆ ಕರೆದು ಉಪಚರಿಸಿದ ಕುಟುಂಬ ಮುಂದಿನ ದಾರಿ ಬಗ್ಗೆ ಮಾಹಿತಿ ಪಡೆದಿತ್ತು.

ಬೆಂಗಳೂರಿನಲ್ಲಿ ಈ ತಂಡಕ್ಕೆ ಧಾರವಾಡದ ಖ್ಯಾತ ಸ್ತ್ರೀ ಆರೋಗ್ಯ ತಜ್ಞ ಡಾ.ಸಂಜೀವ ಕುಲಕರ್ಣಿ ಅವರ ಕಾಡುತೋಟ ದಡ್ಡಿಕಮಲಾಪುರದ ‘ಸುಮನ ಸಂಗಮ‘ದಲ್ಲಿ ಉಳಿದುಕೊಳ್ಳಬಹುದು ಎಂಬ ಮಾಹಿತಿ ಸಿಕ್ಕಿತ್ತಂತೆ. ಕಾಕತಾಳೀಯ, ಹಂಪಿಹೊಳಿ ಅವರ ಮೊಮ್ಮಗ ‘ಬಾಲ ಬಳಗ’ ಶಾಲೆಯ ವಿದ್ಯಾರ್ಥಿಯಾಗಿದ್ದರು. ಹಾಗಾಗಿ, ಹಂಪಿಹೊಳಿ ಅವರೇ ಮುತುವರ್ಜಿವಹಿಸಿ ಸಂಜೀವಣ್ಣ ಅವರಿಗೆ ಕರೆ ಮಾಡಿ ಈ ಸಂಬಂಧ ಬೆಸೆದರು.

ಸಂವಾದದಲ್ಲಿ ಅನುಭವ ಹಂಚಿಕೆ..

ಈ ಹಿನ್ನೆಲೆಯಲ್ಲಿ, ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಶುಕ್ರವಾರದ ಸತ್ಸಂಗದ ವೇಳೆ ಸಂಜೀವಣ್ಣ ಸಂವಾದ ಏರ್ಪಡಿಸಿದ್ದರು. ‘ಮನುಷ್ಯತ್ವ ಸತ್ತಿದೆ ಎಂದುಕೊಂಡು ಈ ನಡಿಗೆ ಆರಂಭಿಸಿದ ನಮಗೆ, ‘ಮನುಷ್ಯತ್ವ ಇನ್ನೂ ಬದುಕಿದೆ’ ಎಂಬ ಆತ್ಮ ಸಾಕ್ಷಾತ್ಕಾರವಾಯ್ತು. ಭಾಷೆ ಗೊತ್ತಿಲ್ಲ. ಜನ ಪರಿಚಿತರಲ್ಲ. ಆದರೆ, ತಮ್ಮ ಮನೆಯ ಮಕ್ಕಳೇನೋ ಎಂಬಂತೆ ತೋರಿದ ಪ್ರೀತಿ, ಸಹಕಾರ, ಕಾಳಜಿ, ಕಕ್ಕುಲಾತಿಯಿಂದ ನಮ್ಮ ಹೃದಯ ತುಂಬಿ ಬಂದಿದೆ. ಜನರು ದಾರಿಯುದ್ದಕ್ಕೂ ತೋರಿದ ಪ್ರೀತಿಗೆ ಸೋತಿದ್ದೇವೆ‘ ಎಂದರು ನೈನಿಕ್.

ತುಂಬ ಉತ್ಸಾಹದಿಂದ ಮಾತು ಆರಂಭಿಸಿದ ಅಂಕಿತಾ, ‘ಮೊದಲು ನನ್ನ ದೇಶ ನೋಡಬೇಕು. ಅನನ್ಯತೆ ಮತ್ತು ಅನ್ಯತೆಗಳ ಭಾವ ಅರ್ಥ ಮಾಡಿಕೊಳ್ಳಬೇಕು. ಸಮಾಜದ ವಿವಿಧ ಸ್ತರಗಳ, ಜನ ಜಾತಿಗಳ ಬದುಕು-ಬವಣೆ, ಗ್ರಾಮ್ಯ ಸೊಗಡು ತಿಳಿಯಬೇಕು ಎಂಬ ಉದ್ದೇಶದಿಂದ ನೈನಿಕ್ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದೇನೆ‘ ಎಂದರು.

ತುಸು ಗಂಭೀರವಾಗಿದ್ದ ಶಿಲ್ಪಾ, ‘ಹೃದಯ ಮತ್ತು ಮೆದುಳು ಹೇಳಿದ್ದನ್ನು ಏಕಾತ್ಮಭಾವದಲ್ಲಿ ಸ್ವೀಕರಿಸಿ, ನೈನಿಕ್ ಮತ್ತು ಅಂಕಿತಾ ಅವರೊಂದಿಗೆ ನಡಿಗೆಯಲ್ಲಿ ಪಾಲ್ಗೊಂಡಿದ್ದೇನೆ. ಹಣ ಇಲ್ಲದಿದ್ದರೆ ಮುಗಿಯಿತು ಕತೆ ಎಂಬ ಈ ಕಾಲದಲ್ಲಿ, ಹಣ ಬಿಟ್ಟೂ ನಾವು ಬದುಕಬಹುದು ಎಂಬ ಅನುಭವ ಪ್ರಮಾಣಕ್ಕೆ ಈ ಖೋಜ್‍ನಲ್ಲಿ ನಾನಿರುವೆ‘ ಎಂದು ಹೇಳಿದರು.

ಊಟ–ಉಪಚಾರದ ಮೆಲುಕು

ಈ ಮಧ್ಯೆ, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ದಕ್ಷಿಣದ ರಾಗಿ ಮುದ್ದೆ ಊಟ, ಒಂದೇ ದೀನ ನಾಲ್ಕು ಬಾರಿ ಊಟ! ಒಮ್ಮೊಮ್ಮೆ ನಾಲ್ಕು ದಿನ ಏನೂ ಇಲ್ಲ ಎಂಬ ಸ್ಥಿತಿ. ದೈಹಿಕ ಬಳಲಿಕೆ ಬೇರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಅನುಭವ. ಪೊಲೀಸರು ಠಾಣೆಯಲ್ಲಿ ಕುಳ್ಳಿರಿಸಿ, ಪ್ರೀತಿಯಿಂದ ಮಾತನಾಡಿಸಿ ನೀಡಿದ ಆತಿಥ್ಯ.. ಬಡವರಾದರೂ ಮನೆಯೊಳಗೆ ಕರೆದು, ಹೊಲದಲ್ಲೇ ತಮ್ಮ ಪಾಲಿನ ಬುತ್ತಿ ಬಿಚ್ಚಿ ನೀಡಿ ಹಂಚಿಕೊಂಡಿದ್ದು, ಹಣ್ಣುಗಳನ್ನು ಉಡುಗೊರೆಯಾಗಿ ನೀಡಿ ಪ್ರೀತಿ ಸುಧೆ ಹರಿಸಿದ್ದು, ದೇವಸ್ಥಾನ, ಬಸದಿ, ಸಮುದಾಯ ಭವನ, ಚರ್ಚ್ ಜೊತೆಗೆ ಪಂಚತಾರಾ ಹೋಟೆಲ್‍ಗಳಲ್ಲಿ ಸಹ ಉಳಿದುಕೊಂಡ ಅನುಭವ ಕಥನ ಹೃದಯಂಗಮವಾಗಿತ್ತು.

ಮಧ್ಯಮ ವರ್ಗದ ಕುಟುಂಬದಿಂದ ಬಂದ ಈ ಮೂವರು, ವಿಶ್ರಾಂತಿ ಸಮಯದಲ್ಲಿ ಪುಸ್ತಕಗಳನ್ನು ಓದುತ್ತಾರೆ. ಸ್ಥಳೀಯರ ಸಹಕಾರದಲ್ಲಿ ಹಳ್ಳಿಗಳ ಮಧ್ಯೆ ಹಾದಿ ಕ್ರಮಿಸುತ್ತಾರೆ. ಅಪರಿಚಿತರ ಆತಿಥ್ಯ ಸ್ವೀಕರಿಸುತ್ತಾರೆ. ಅತ್ಯಂತ ಕಡಿಮೆ ‘ಬ್ಯಾಕ್‍ಪ್ಯಾಕ್’ ಹೊತ್ತು ನಿತ್ಯ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ನಡಿಗೆ, ಬಳಿಕ ವಿಶ್ರಾಂತಿ. ಸಂಜೆ 4 ಗಂಟೆಯಿಂದ 6.30ರವರೆಗೆ ಮತ್ತೆ ನಡಿಗೆ.. ಹೀಗೆ 20 ರಿಂದ 30 ಕಿ.ಮೀ.ಗಳಷ್ಟು ನಿತ್ಯ ಪಯಣ. ಒಮ್ಮೊಮ್ಮೆ 41 ಕಿ.ಮೀ.ಗಳಷ್ಟು ದೂರ ಕ್ರಮಿಸಿದ ತಂಪಿನ ದಿನವೂ ಇದೆ!

ಏಪ್ರಿಲ್‌ನಲ್ಲಿ ಮೊದಲ ಹಂತ..

ಚಿಕ್ಕೋಡಿ ಮೂಲಕ ಸಾಂಗ್ಲಿ, ಮಹಾರಾಷ್ಟ್ರ ರಾಜ್ಯ ಪ್ರವೇಶಿಸಿ ಮುಂಬೈನಲ್ಲಿ ಪ್ರಥಮ ಹಂತದ ಕಾಲ್ನಡಿಗೆ ಏಪ್ರಿಲ್‍ನಲ್ಲಿ ಪೂರ್ಣಗೊಳಿಸಲಿದ್ದಾರೆ. ಕೆಲ ದಿನಗಳ ವಿಶ್ರಾಂತಿ ಬಳಿಕ, ಮುಂಬೈಯಿಂದ ಮತ್ತೆ ಎರಡನೇ ಹಂತದ ನಡಿಗೆ ಆರಂಭ. ಪಾಕಿಸ್ತಾನದ ಗಡಿವರೆಗೆ ನಡೆದು, ಹಡಗಿನಲ್ಲಿ ಇರಾನ್ ತಲುಪಿ, ಬಳಿಕ ಕಾಲ್ನಡಿಗೆಯಲ್ಲೇ ಯುರೋಪ್‍ನ್ನು 2021ರ ಡಿಸೆಂಬರ್ ಒಳಗೆ ಪೂರ್ಣಗೊಳಿಸುವ ತವಕ ಈ ಮೂವರು ಸಾಹಸಿಗಳದ್ದು.

ಡಾ. ಗೋಪಾಲದಾಬಡೆ ಅವರು, ಪ್ರವಾಸದ ಒಟ್ಟೂ ಅನುಭವವನ್ನು ದಾಖಲಿಸಿ, ಹೊತ್ತಗೆಯ ರೂಪದಲ್ಲಿ ಪ್ರಕಟಿಸುವಂತೆ ಯುವ ಸಾಹಸಿಗಳಿಗೆ ಸಲಹೆ ನೀಡಿದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಡಾ. ಅನಿತಾ ಕಡಗದ ಹಾಗೂ ಡಾ. ಆಕಾಶ ಕೆಂಭಾವಿ ಕಾಳಜಿ ತೋರಿದರು. ಡಾ. ಮಾಲತಿ ಪಟ್ಟಣಶೆಟ್ಟಿ ತುರ್ತು ಪರಿಸ್ಥಿತಿ ನಿಭಾಯಿಸಲು ಹಣ ಇಟ್ಟುಕೊಳ್ಳಲೇಬೇಕು ಎಂದು ಪಟ್ಟು ಹಿಡಿದದ್ದಕ್ಕೆ, ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಶಿವಾನಂದ ಶೆಟ್ಟರ್ ಅವರು, ‘ತಾಯಿ ಕರುಳಿನ ಕಾಳಜಿ ನೋಡ್ರೀ.. ಮಕ್ಕಳ ಏನ್ ಹೇಳಿದ್ರೂ ಆಕೀದು ಬ್ಯಾರೇನ..‘ ಅಂದದ್ದು ನಮ್ಮೆಲ್ಲರ ಕಣ್ಣಂಚು ತೇವವಾಗಿಸಿತ್ತು.

ನೀವೂ ಸಾಥ್ ನೀಡಬಹುದು...

ಆಸಕ್ತ ಯುವ ಸಾಹಸಿಗಳು ಈ ಮೂವರೊಂದಿಗೆ ಕಾಲ್ನಡಿಗೆಯಲ್ಲಿ ಸಾಥ್ ನೀಡಬಹುದು. ಈ ತಂಡದ ಇಂದಿನ ಇರುವಿಕೆ ಬಗ್ಗೆ ಮಾಹಿತಿ ಪಡೆಯಲು, ಮುಂಬೈಯಲ್ಲಿರುವ ಪ್ರಿಯಾನ್ಶಾ ವಾಟ್ಸ್ ಆಪ್‍ನ್ನು ಈ ತಂಡದ ಪರವಾಗಿ ಅಪ್‍ಡೇಟ್ ಮಾಡುತ್ತಿದ್ದಾರೆ. ಸಂಪರ್ಕ: 9833929624. ಹೆಚ್ಚಿನ ಮಾಹಿತಿ/ವಿವರ ಪಡೆಯಲು ಲಾಗಿನ್ ಆಗಿ
-www.bit.ly/Vkk/What’s App

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT