ಪತ್ರಿಕಾಗೋಷ್ಠಿ ಪ್ರಕರಣ; ಮಾಜಿ ಪತ್ರಕರ್ತ ಸೆರೆ

7
ಸಿಸಿಬಿ ಘನತೆಗೆ ಧಕ್ಕೆ ತರುವಂತೆ ಪ್ರಕಟಣೆ ಸೃಷ್ಟಿಸಿ ಕೊಟ್ಟ ಆರೋಪ

ಪತ್ರಿಕಾಗೋಷ್ಠಿ ಪ್ರಕರಣ; ಮಾಜಿ ಪತ್ರಕರ್ತ ಸೆರೆ

Published:
Updated:

ಬೆಂಗಳೂರು: ‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣದಲ್ಲಿ ತನಿಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಾಜಿ ಪತ್ರಕರ್ತ ಅಶೋಕ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಮೊದಲು ಸುದ್ದಿ ವಾಹಿನಿಯೊಂದರಲ್ಲಿ ಬ್ಯೂರೋ ಮುಖ್ಯಸ್ಥರಾಗಿದ್ದ ಅಶೋಕ್, ಇತ್ತೀಚೆಗೆ ಕೆಲಸ ತೊರೆದು ಉದ್ಯಮಿ ವಿಜಯ್ ತಾತಾ (ಆರೋಪಿ) ಜತೆ ಸೇರಿಕೊಂಡಿದ್ದರು. ತನಿಖಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಬೇಕೆಂಬ ಇರಾದೆಯೊಂದಿಗೆ ಸಹಚರರ ಮೂಲಕ ಪತ್ರಿಕಾಗೋಷ್ಠಿ ಮಾಡಿಸಿ, ಸಿಸಿಬಿ ವಿರುದ್ಧ ಇಲ್ಲ–ಸಲ್ಲದ ಆರೋಪಗಳನ್ನು ಮಾಡಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಇದೇ 12ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಜಯೀದ್ ಖಾನ್ ಹಾಗೂ ಸಿರಾಜುದ್ದೀನ್ ಎಂಬುವರು, ‘ಆ್ಯಂಬಿಡೆಂಟ್ ಮಾಲೀಕ ಫರೀದ್‌ ಅವರು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್‌ ಅಲೋಕ್‌ ಕುಮಾರ್‌ ಜತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಹೀಗಾಗಿಯೇ ಫರೀದ್‌ಗೆ ಸುಲಭವಾಗಿ ಜಾಮೀನು ಸಿಕ್ಕಿದೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಯಾವುದೇ ಕಾರಣಕ್ಕೂ ಗ್ರಾಹಕರ ಹಣ ವಾಪಸ್ ಬರುವುದಿಲ್ಲ’ ಎಂದು ಹೇಳಿದ್ದರು. ಇದರಿಂದ ಕೆರಳಿದ್ದ ಸಿಸಿಬಿ, ಯಾವುದೇ ಆಧಾರವಿಲ್ಲದೆ ತನಿಖಾ ಸಂಸ್ಥೆಯ ಘನತೆಗೆ ಧಕ್ಕೆ ತರಲು ಯತ್ನಿಸಲಾಗಿದೆ ಎಂದು ವಿಧಾನಸೌಧ ಠಾಣೆಗೆ ದೂರು ಕೊಟ್ಟಿತ್ತು.

ದೂರಿನಲ್ಲಿ ಏನಿತ್ತು: ‘ಆ್ಯಂಬಿಡೆಂಟ್‌ನಿಂದ ಹಣ ಪಡೆದಿರುವ ವಿಜಯ್ ತಾತಾ ಅವರ ನಿರ್ದೇಶನದಂತೆ ಪತ್ರಿಕಾಗೋಷ್ಠಿ ನಡೆದಿದೆ. ‘ಸಿಸಿಬಿ ಕೃಪೆಯಿಂದ ಬೇಲ್ ಪಡೆದ ಫರೀದ್’, ‘ಫರೀದ್ ಬೆನ್ನಿಗೆ ನಿಂತ ಪೊಲೀಸರು’, ‘ಅಂಡರ್‌ವರ್ಲ್ಡ್‌ ಕುಳ ಖಲಂದರ್ ಜತೆ ಸಿಸಿಬಿ ಸ್ನೇಹ’ ಎಂಬ ಪದಗಳನ್ನು ಬಳಕೆ ಮಾಡಿದ್ದಾರೆ. ಇದರಿಂದ ನಮ್ಮ ಮನಸಿಗೆ ಘಾಸಿಯಾಗಿದೆ. ತನಿಖೆ ನಡೆಸಲು ಕಷ್ಟವಾಗುತ್ತಿದೆ’ ಎಂದು ಸಿಸಿಬಿ ಇನ್‌ಸ್ಪೆಕ್ಟರ್ ಮಂಜುನಾಥ್ ದೂರು ಕೊಟ್ಟಿದ್ದರು.

ಅದರನ್ವಯ ವಿಜಯ್ ತಾತಾ, ಜಯೀದ್ ಹಾಗೂ ಸಿರಾಜುದ್ದೀನ್ ವಿರುದ್ಧ ಐಪಿಸಿ 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಹಾಗೂ ಅಪರಾಧ ಸಂಚು (120ಬಿ) ಆರೋಪಗಳಡಿ ಎಫ್‌ಐಆರ್ ದಾಖಲಾಗಿತ್ತು. ಆ ನಂತರ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಅಲ್ಲದೆ, ಜಯೀದ್ ಹಾಗೂ ಸಿರಾಜುದ್ದೀನ್‌ನನ್ನೂ ಬಂಧಿಸಿದ್ದರು.

ಪತ್ರಿಕಾ ಪ್ರಕಟಣೆ ಸೃಷ್ಟಿಸಿಕೊಟ್ಟಿದ್ದರು’

‘ಸಿಸಿಬಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಬೇಕೆಂಬ ಸಂಚು ಸಿದ್ಧವಾಗಿದ್ದು ವಿಜಯ್‌ ತಾತಾ ಅವರಿಗೆ ಸೇರಿದ ಆರ್‌.ಟಿ.ನಗರದ ಕಚೇರಿಯಲ್ಲಿ. ಇದನ್ನು ಜಯೀದ್ ಹಾಗೂ ಸಿರಾಜುದ್ದೀನ್ ಒಪ್ಪಿಕೊಂಡಿದ್ದಾರೆ. ‘ಅಶೋಕ್ ಅವರೇ ಪತ್ರಿಕಾ ಪ್ರಕಟಣೆ ಸಿದ್ಧಪಡಿಸಿ ಕೊಟ್ಟರು. ಯಾವ ರೀತಿ ಮಾತನಾಡಬೇಕು ಎಂಬ ಬಗ್ಗೆಯೂ ಅವರೇ ವಿವರಿಸಿ ಹೇಳಿದ್ದರು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದರು. ಹೀಗಾಗಿ, ಅವರನ್ನೂ ಬಂಧಿಸಬೇಕಾಯಿತು’ ಎಂದು ಅಲೋಕ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !