ಸೋಮವಾರ, ಆಗಸ್ಟ್ 26, 2019
27 °C
ಪ್ರಗತಿಯಲ್ಲಿದೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಕೋರಿಕೆ ವರ್ಗಾವಣೆ ಮುಕ್ತಾಯ

ಬಂದಿದ್ದು 1,088 ಅರ್ಜಿ, ವರ್ಗ ಆಗಿದ್ದು 105 ಶಿಕ್ಷಕರು

Published:
Updated:
Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೋರಿಕೆ ವರ್ಗಾವಣೆ ಪ‍್ರಕ್ರಿಯೆ ಆಗಸ್ಟ್‌ 1 ಮತ್ತು 2ರಂದು ಪೂರ್ಣಗೊಂಡಿದೆ. 

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2,619 ಶಿಕ್ಷಕರಿದ್ದು, 1,088 ಮಂದಿ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಶಿಕ್ಷಣ ಇಲಾಖೆಯ ನಿಯಮ‌ದ ಪ್ರಕಾರ ಒಟ್ಟು ಶಿಕ್ಷಕರ ಪೈಕಿ ಶೇ 4ರಷ್ಟು ಮಂದಿಯನ್ನು ಮಾತ್ರ ಕೋರಿಕೆ ವರ್ಗಾವಣೆಗೆ ಪರಿಗಣಿಸಬಹುದು. ಹಾಗಾಗಿ, ಜಿಲ್ಲೆಯಲ್ಲಿ 105 ಶಿಕ್ಷಕರನ್ನು ಮಾತ್ರ ಕೋರಿಕೆ ಮೇರೆಗೆ ವರ್ಗ ಮಾಡಲಾಗಿದೆ.

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವರು, ಗರ್ಭಿಣಿಯರು, ಬಾಣಂತಿಯರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ, ಪತಿ –ಪತ್ನಿ ಪ್ರಕರಣಗಳಲ್ಲಿ ಕೋರಿಕೆ ವರ್ಗಾವಣೆಗಾಗಿ ಮನವಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಇತರರೂ ಅರ್ಜಿ ಸಲ್ಲಿಸಬಹುದು. ಆದರೆ, ಕೌನ್ಸೆಲಿಂಗ್‌ ಸಂದರ್ಭದಲ್ಲಿ ಈ ಐದು ಕಾರಣಗಳಿಗೆ ಆದ್ಯತೆ ನೀಡಲಾಗುತ್ತದೆ. 

‘ಈ ತಿಂಗಳ ಮೊದಲ ಎರಡು ದಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಿದ್ದೇವೆ. ಶೇ 4ರಷ್ಟು ನಿಯಮದಂತೆ ನಮ್ಮಲ್ಲಿ 105 ಹುದ್ದೆಗಳಿದ್ದವು. ಎರಡೇ ದಿನಗಳಲ್ಲಿ ಅವುಗಳು ಭರ್ತಿಯಾಗಿವೆ. ಮೊದಲ ದಿನ 52 ಶಿಕ್ಷಕರ ಕೌನ್ಸೆಲಿಂಗ್‌ ನಡೆಸಿ, ಶಾಲೆಗಳಿಗೆ ನಿಯೋಜಿಸಲಾಯಿತು. ಉಳಿದ ಹುದ್ದೆಗಳನ್ನು ಎರಡನೇ ದಿನದ ಕೌನ್ಸೆಲಿಂಗ್‌ನಲ್ಲಿ ಭರ್ತಿ ಮಾಡಲಾಯಿತು’ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಪಿ.ಎಸ್‌.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇತರರಿಗೆ ಸಿಗದ ಅವಕಾಶ: ವರ್ಗಾವಣೆ ಕೋರಿಕೆಗೆ ಅರ್ಜಿ ಸಲ್ಲಿಸಿದವರ ಪೈಕಿ ಐದು ಕಾರಣಗಳನ್ನು ನೀಡಿದವರಿಗೇ ವರ್ಗಾವಣೆಯಲ್ಲಿ ಅವಕಾಶ ಸಿಕ್ಕಿತು. ಇತರರಿಗೆ ಅವಕಾಶ ಸಿಗದಿರುವುದಕ್ಕೆ ಉಳಿದ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು. ಶೇ 4ರಷ್ಟು ಶಿಕ್ಷಕರಿಗೆ ಮಾತ್ರ ಈ ಅವಕಾಶ ಎಂಬ ನಿಯಮವನ್ನು ತೆಗೆದುಹಾಕಬೇಕು ಎಂಬ ಕೂಗು ಕೂಡ ಕೇಳಿ ಬಂತು. 

ನಾಲ್ಕು ವರ್ಗಾವಣೆ ಪ್ರಕ್ರಿಯೆ ಬಾಕಿ: ಈಗ ಕೋರಿಕೆ ವರ್ಗಾವಣೆ ಮಾತ್ರ ನಡೆದಿದ್ದು, ಇನ್ನೂ ನಾಲ್ಕು ಹಂತದ ವರ್ಗಾವಣೆ ಕೌನ್ಸೆಲಿಂಗ್‌ ಬಾಕಿ ಇದೆ. ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಒಂದೇ ಶಾಲೆಯಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರು ಹಾಗೂ ಪರಸ್ಪರ ವರ್ಗಾವಣೆ ಬಾಕಿ ಇದೆ. 

‘ಜಿಲ್ಲೆಯಲ್ಲಿ ವರ್ಗಾವಣೆಯಾಗಬೇಕಾದ 50 ಮುಖ್ಯ ಶಿಕ್ಷಕರ ಹಾಗೂ ಐವರು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿದ್ದು, ಇದೇ 8ರಂದು ಕೌನ್ಸೆಲಿಂಗ್‌ ನಡೆಯಲಿದೆ. ಅದೇ ರೀತಿ, 10 ವರ್ಷ ಸೇವೆ ಸಲ್ಲಿಸಿರುವವರ ಹಾಗೂ ಪರಸ್ಪರ ವರ್ಗಾವಣೆಯ ಕೌನ್ಸೆಲಿಂಗ್‌ 14ರಂದು ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ’ ಎಂದು ಮಂಜುನಾಥ್‌ ಅವರು ಮಾಹಿತಿ ನೀಡಿದರು.

10 ವರ್ಷ ಆದವರಿಗೆ ಕಡ್ಡಾಯ ವರ್ಗಾವಣೆ

ಒಂದು ಶಾಲೆಯಲ್ಲಿ 10 ವರ್ಷಗಳಿಂದ ಬೋಧನೆ ಮಾಡುತ್ತಿರುವ ಎಲ್ಲ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ. ಎಲ್ಲ ಶಿಕ್ಷಕರಿಗೂ ಜಿಲ್ಲೆಯ ವ್ಯಾಪ್ತಿಯಲ್ಲೇ ವರ್ಗಾವಣೆ ಆಗಲಿದೆ. ಇಂತಹ ಶಿಕ್ಷಕರು ‘ಎ’ ವಲಯ ಅಂದರೆ, ನಗರ ಪಟ್ಟಣ ಪ್ರದೇಶಗಳಿಂದ ‘ಸಿ’ ವಲಯ ಎಂದರೆ ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ವರ್ಗಾವಣೆಗೊಳ್ಳಲಿದ್ದಾರೆ. 

Post Comments (+)