ಎತ್ತಿನಹೊಳೆ ಯೋಜನೆ ನೀರು ಬರುವ ಖಾತರಿಯಿಲ್ಲ

7
ಕಾಮಗಾರಿ ಸ್ಥಳಕ್ಕೆ ಭೇಟಿ; ಸಂಸದ, ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದ ಮುಖಂಡರ ಆರೋಪ

ಎತ್ತಿನಹೊಳೆ ಯೋಜನೆ ನೀರು ಬರುವ ಖಾತರಿಯಿಲ್ಲ

Published:
Updated:
Prajavani

ಶಿಡ್ಲಘಟ್ಟ: ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಬರುತ್ತದೆ ಎಂದು ಹೇಳಿಕೊಳ್ಳುತ್ತಿರುವ ರಾಜಕಾರಣಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಆರೋಪಿಸಿದರು.

ಎತ್ತಿನಹೊಳೆ ಯೋಜನೆಯಿಂದ 10 ವರ್ಷವಾದರೂ ನೀರು ಬರುವುದು ಖಚಿತವಿಲ್ಲ. ಸರ್ಕಾರ ₹13 ಸಾವಿರ ಕೋಟಿ ವೆಚ್ಚದ ಯೋಜನೆಗೆ ₹2 ಸಾವಿರ ಕೋಟಿ ಮೀಸಲಿಟ್ಟಿದೆ. ಅನುದಾನವನ್ನು ಈಗಾಗಲೇ ಶಾಸಕರಿಗೆ ಅನುದಾನಗಳ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿ ಚುನಾವಣೆ ಸಮಯದಲ್ಲಿ ಬಯಲು ಸೀಮೆ ಭಾಗದ ಜನರಿಗೆ ನೀರಾವರಿ ಯೋಜನೆಯನ್ನು 2 ವರ್ಷಗಳಲ್ಲಿ ಅನುಷ್ಠಾನ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡಲಾಗುತ್ತಿದೆ. ಮತ ಪಡೆದು ಗೆದ್ದು ಹೋದ ನಂತರ ಯೋಜನೆಯ ವಸ್ತುಸ್ಥಿತಿಯ ಬಗ್ಗೆ ರೈತರಿಗಾಗಲಿ, ಈ ಭಾಗದ ಜನರಿಗಾಗಲಿ ತಿಳಿಸಲ್ಲ. ಚುನಾವಣೆಗಳು ಸಮೀಪಕ್ಕೆ ಬಂದಾಗ ಸಂಸದರು ತಮ್ಮ ಸ್ವಂತ ಖರ್ಚಿನಲ್ಲೆ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರನ್ನು ಕಾಮಗಾರಿಯನ್ನು ವೀಕ್ಷಣೆ ಮಾಡಲು ಕರೆದುಕೊಂಡು ತೋರಿಸಿಕೊಂಡು ಬರುತ್ತಿದ್ದಾರೆ ಎಂದು ಆಪಾದಿಸಿದರು.

ಜಿಲ್ಲಾ ರೈತ ಸಂಘದ ಮುಖಂಡ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಅಲ್ಲಿನ ಕಾಫಿ ತೋಟಗಳು, ಗದ್ದೆಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಟ್ಟಿಲ್ಲ. ಹಾಕಿರುವ ಪೈಪ್‌ಗಳು ತೂತುಗಳಾಗಿವೆ. ನೀರು ಬಂದರೂ ವ್ಯರ್ಥವಾಗುತ್ತವೆ. ಕಳೆದ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಇತ್ತು. 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಿ, 5 ವರ್ಷವಾದರೂ ಮುಕ್ತಾಯವಾಗಿಲ್ಲ. ಇದುವರೆಗೂ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿಲ್ಲ. ಇಲ್ಲಿಂದ ಹೋಗುತ್ತಿರುವ ತಂಡಗಳಿಗೆ ಸುಳ್ಳು ವಿವರಣೆ ನೀಡಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಮತ್ತು ಸಂಸದರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರಿಗೆ ಅಧಿಕಾರಿಗಳು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಯೋಜನಾ ಸ್ಥಳಕ್ಕೆ ತಾವೇ ಹೋಗಿ ಪರಿಶೀಲಿಸಿದ್ದು, ಸಂಸದರು ಭಾಷಣಗಳಲ್ಲಿ ಇಲ್ಲಿ ಹೇಳುತ್ತಿರುವ ಹೇಳಿಕೆಗಳಿಗೂ ಅಲ್ಲಿ ನಡೆಯುತ್ತಿರುವ ಕಾಮಗಾರಿಗೂ ಸಾಕಷ್ಟು ವ್ಯತ್ಯಾಸವಿದೆ. ಒಂದಕ್ಕೊಂದು ಸಂಬಂಧವಿಲ್ಲ. 10 ವರ್ಷವಾದರೂ ಎತ್ತಿನಹೊಳೆ ಯೋಜನೆ ನೀರು ಈ ಭಾಗಕ್ಕೆ ಬರುವುದು ಸಾಧ್ಯವಿಲ್ಲ ತಿಳಿಸಿದರು.

ರೈತ ಮುಖಂಡ ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !