ಗುರುವಾರ , ಡಿಸೆಂಬರ್ 12, 2019
17 °C
ನೌಕರಿ ಕಾಯಂ, ಕನಿಷ್ಠ ಸಂಬಳ, ಬಾಕಿ ವೇತನ ನೀಡಲು ಒತ್ತಾಯ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ಕನಿಷ್ಠ ವೇತನ, ನೌಕರಿ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ, ಅಕ್ಷರ ದಾಸೋಹ ಅಡುಗೆಯವರ, ಸಹಾಯಕಿಯರ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳ ಮಹಾ ಮಂಡಳಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಸತ್ಯಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಮಂಡಳಿಯ ಪದಾಧಿಕಾರಿಗಳು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನ ತಲುಪಿ ಪ್ರತಿಭಟನೆ ನಡೆಸಿದರು. 

‘ಬಿಲ್‌ ಕಲೆಕ್ಟರ್‌ಗಳಿಗೆ ಪ್ರತಿ ವರ್ಷ ಕಾರ್ಯದರ್ಶಿ ಹುದ್ದೆ ಅಥವಾ ಆ ಶ್ರೇಣಿಯ ಹುದ್ದೆ ನೀಡಲಾಗುತ್ತಿದೆ. ಆದರೆ, ವಾಟರ್‌ಮೆನ್‌, ಅಟೆಂಡರ್‌ ಹಾಗೂ ಇನ್ನುಳಿದ ನೌಕರರನ್ನೂ ಕಾಯಂ ನೌಕರರನ್ನಾಗಿ ಮಾಡಬೇಕು. ಈ ಸಂಬಂಧ ಜಿಲ್ಲಾ ಪಂಚಾಯಿತಿಯು ಸಭಾ ನಡವಳಿ ಮಾಡಿ ಸರ್ಕಾರಕ್ಕೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

‘ನೌಕ‌ರರಿಗೆ ಕನಿಷ್ಠ ವೇತನ ನೀಡಬೇಕು ಎಂದು ಸರ್ಕಾರದ ಆದೇಶ ಇದ್ದರೂ ಇನ್ನೂ ಸರಿಯಾದ ವೇತನ ಸಿಗುತ್ತಿಲ್ಲ. ಪ್ರತಿ ತಿಂಗಳು 5ನೇ ತಾರೀಖಿನ ಒಳಗಡೆ ವೇತನ ನೀಡಬೇಕು. ನಿವೃತ್ತಿಯಾದ, ಮರಣಹೊಂದಿದವರ ಕುಟುಂಬಕ್ಕೆ ಬಾಕಿ ವೇತನ, ಪರಿಹಾರ ನೀಡಲು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಲಿ ಗ್ರಾಮ ಪಂಚಾಯಿತಿ ‌ನೌಕರರಿಗೆ ಬಾಕಿ ಉಳಿಸಿರುವ ವೇತನವನ್ನು ತಕ್ಷಣವೇ ನೀಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

‘ಅಕ್ಷರ ದಾಸೋಹ ಅಡುಗೆಯವರು ಹಾಗೂ ಸಹಾಯಕಿಯರನ್ನು ಕಾಯಂ ನೌಕರರನ್ನಾಗಿ ಮಾಡಬೇಕು. ಕಾಯ್ದೆಯ ಅನ್ವಯ ಕನಿಷ್ಠ ವೇತನ ನೀಡಬೇಕು. ಹೆರಿಗೆ ರಜೆ ನೀಡಬೇಕು. ಕಡಿಮೆ ಮಕ್ಕಳು ಇದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದವರನ್ನು ಮತ್ತೆ ನೇಮಕ ಮಾಡಿಕೊಳ್ಳಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿದರು. 

ಮಹಾ ಮಂಡಳಿಯ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಕೆ.ಎಸ್‌.ಪ‍್ರಕಾಶ್‌, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಮಹಮದ್‌ ಶಫಿ, ಅಡುಗೆ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲೇಗೌಡ, ಕಾರ್ಯದರ್ಶಿ ಕಲಾವತಿ, ಮುಖಂಡರಾದ ಕೆಂಪಣ್ಣ, ಮಲ್ಲಯ್ಯ, ರೇವಣ್ಣ, ನಾಗರಾಜು, ಅಕ್ಷರ ದಾಸೋಹ ಅಡುಗೆಯರ ಜಿಲ್ಲಾ ಘಟಕದ ಉಪಾಧ್ಯಕ್ಷೆ ಪ್ರೇಮಲತ, ಸಂಚಾಲಕರಾದ ಮಹದೇವಮ್ಮ, ಚಂದ್ರಮ್ಮ ಮತ್ತಿತರರು ಇದ್ದರು. 

ಪ್ರತಿಕ್ರಿಯಿಸಿ (+)