ಶನಿವಾರ, ನವೆಂಬರ್ 16, 2019
22 °C
ಮೈಸೂರು ರೈಲ್ವೆ ನಿಲ್ದಾಣ: ಕಾರ್ಯಾಚರಣೆ ಸ್ಥಗಿತಗೊಳಿಸಿದ ಎಟಿಎಂ ಕೇಂದ್ರಗಳು–ಪ್ರಯಾಣಿಕರ ಪರದಾಟ

ಕ್ಯಾಂಟೀನ್‌ನಲ್ಲಿ ಶುಚಿ–ರುಚಿಯಿಲ್ಲ; ಆದರೂ ತುಟ್ಟಿ..!

Published:
Updated:
Prajavani

ಮೈಸೂರು: ನಗರದ ರೈಲ್ವೆ ನಿಲ್ದಾಣದಲ್ಲಿನ ಕ್ಯಾಂಟೀನ್‌ನ ಊಟ–ಉಪಾಹಾರ ಶುಚಿ–ರುಚಿಯಿಂದ ಕೂಡಿರಲ್ಲ. ಆದರೂ ತುಟ್ಟಿ...

ಪ್ಲಾಟ್‌ಫಾರಂನಲ್ಲಿರುವ ಹೋಟೆಲ್‌ಗೆ ಭೇಟಿ ನೀಡುವ ರೈಲ್ವೆ ಪ್ರಯಾಣಿಕರಿಂದ ಕೇಳಿ ಬರುವ ಸಾಮಾನ್ಯ ದೂರಿದು. ತಿಂಡಿ–ತಿನಿಸುಗಳ ಬೆಲೆ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತವಾಗುತ್ತದೆ.

150 ಮಿ.ಲೀ. ಚಹಾಗೆ ₹ 15. ಕಾಫಿಗೆ ₹ 26. ಹಾಲಿಗೆ ₹ 28. ಕಾಲು ಲೀಟರ್ ಲಸ್ಸಿ ಬೆಲೆ ₹ 68. 100 ಗ್ರಾಂ ತೂಕದ ಸಮೋಸಾ, ಕಚೋರಿಯ ಬೆಲೆ ತಲಾ ₹ 22. 200 ಗ್ರಾಂ ತೂಕದ ಬರ್ಗರ್‌ಗೆ ₹ 56. 100 ಗ್ರಾಂ ಸ್ಯಾಂಡ್‌ವಿಜ್‌ಗೆ ₹ 49ರ ಧಾರಣೆಯಿದೆ ಈ ಹೋಟೆಲ್‌ನಲ್ಲಿ.

ಇನ್ನೂ ಚೈನೀಸ್‌ ತಿನಿಸುಗಳಾದ 275 ಗ್ರಾಂ ತೂಕದ ವೆಜ್‌ ಫ್ರೈಡ್‌ ರೈಸ್‌, ನೂಡಲ್ಸ್‌, ಗೋಬಿ ಮಂಚೂರಿಗೆ ತಲಾ ₹ 105. 300 ಗ್ರಾಂ ವೆಜ್‌ ಪಲಾವ್‌ಗೆ ₹ 85, ಇಷ್ಟೇ ತೂಕದ ಮೊಸರನ್ನ, ಬಾತ್, ಚಿತ್ರಾನ್ನಗೆ ₹ 67, 400 ಗ್ರಾಂ ತೂಕದ ವೆಜ್‌ ಬಿರಿಯಾನಿಗೆ ₹ 148ರ ಬೆಲೆಯಿದೆ.

250 ಗ್ರಾಂ ತೂಕದ ಇಡ್ಲಿ ಸಾಂಬಾರ್‌ಗೆ ₹ 46, ಇಡ್ಲಿ–ವಡಾಗೆ ₹ 51, 200 ಗ್ರಾಂ ತೂಕದ ಖಾಲಿ ದೋಸೆಗೆ ₹ 51, 400 ಗ್ರಾಂ ತೂಕದ ಮಸಾಲಾ ದೋಸೆ, ಈರುಳ್ಳಿ ದೋಸೆಗೆ ತಲಾ ₹ 68. ಉತ್ತರ ಭಾರತ ಶೈಲಿಯ 700 ಗ್ರಾಂ ತೂಕದ ಥಾಲಿಗೆ ₹ 165, ದಕ್ಷಿಣ ಭಾರತದ ಥಾಲಿಗೆ ₹ 102ರ ಧಾರಣೆಯಿದೆ. ಇದು ಮಧ್ಯಮ ವರ್ಗದವರು, ಬಡವರಿಗೆ ಹೊರೆಯಾಗುವ ಜತೆ, ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬ ದೂರು ಅಸಂಖ್ಯಾತ ರೈಲ್ವೆ ಪ್ರಯಾಣಿಕರದ್ದು.

‘ಈ ಹೋಟೆಲ್‌ನೊಳಗೆ ಕೂರಲು ಸೂಕ್ತ ಸ್ಥಳಾವಕಾಶವಿಲ್ಲ. ಯಾವೊಂದು ತಿನಿಸು ರುಚಿಯಾಗಿರಲ್ಲ. ಬಹುತೇಕ ಕಳಪೆಯಿಂದ ಕೂಡಿರುತ್ತದೆ’ ಎಂಬುದು ರೈಲ್ವೆ ಸಿಬ್ಬಂದಿಯ ದೂರು ಸಹ ಆಗಿದೆ.

‘ನಂಜನಗೂಡಿಗೆ ಬಂದಿದ್ದೆವು. ಭಾನುವಾರ ರಾತ್ರಿ ದೇಗುಲದಲ್ಲಿ ಊಟ ಮಾಡದೆ ಮಲಗಿದ್ದೆವು. ನಸುಕಿನಲ್ಲೇ ಪೂಜೆ ಮುಗಿಸಿಕೊಂಡು, ಶ್ರೀಕಂಠೇಶ್ವರನ ದರ್ಶನ ಪಡೆದು ಊರಿಗೆ ಮರಳಲು ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದೆವು. ಹಸಿವು ತಡೆಯಲಾಗದೆ ಫ್ಲಾಟ್‌ಫಾರಂನಲ್ಲಿರುವ ಹೋಟೆಲ್‌ನಲ್ಲಿ ವಿಧಿಯಿಲ್ಲದೆ ₹ 45 ಕೊಟ್ಟು ಮೂರು ಇಡ್ಲಿ ತೆಗೆದುಕೊಂಡೆವು. ರುಚಿಯಿರಲಿಲ್ಲ. ಗುಣಮಟ್ಟವೂ ಅಷ್ಟಕ್ಕಷ್ಟೇ. ಇಲ್ಲಿ ಹಣ ಸುಲಿಗೆ ಮಾಡುತ್ತಾರಷ್ಟೇ’ ಎಂದು ಬೆಂಗಳೂರಿನ ಚಿಕ್ಕಹೈದ, ಪ್ರೇಮಾ ಸೋಮವಾರ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಫ್ಲಾಟ್‌ಫಾರಂನಲ್ಲಿರುವ ಹೋಟೆಲ್‌ ಬಗ್ಗೆ ಹಲವು ದೂರುಗಳಿವೆ. ರುಚಿ–ಶುಚಿ, ಗುಣಮಟ್ಟವಿರಲ್ಲ ಎಂಬುದು ಅಸಂಖ್ಯಾತರ ದೂರು. ಆದರೆ ನಾವೂ ಏನು ಮಾಡುವಂತಿಲ್ಲ. ಐಆರ್‌ಸಿಟಿಸಿ ಸೂಚಿಸಿದ ದರವನ್ನೇ ಹೋಟೆಲ್‌ನವರು ನಿಗದಿಪಡಿಸಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ರೈಲ್ವೆ ಸಿಬ್ಬಂದಿಯೊಬ್ಬರು ತಿಳಿಸಿದರು.

ನಿತ್ಯವೂ ತಪ್ಪದ ಪರದಾಟ

ರೈಲ್ವೆ ನಿಲ್ದಾಣದಲ್ಲಿ ಆರು ತಿಂಗಳ ಹಿಂದೆ ಆರು ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಿದ್ದವು. ನವೀಕರಣದ ಹೆಸರಿನಲ್ಲಿ ಎಲ್ಲವನ್ನೂ ಸ್ಥಗಿತಗೊಳಿಸಲಾಗಿತ್ತು. ಇದೀಗ ಎಸ್‌ಬಿಐ ಬ್ಯಾಂಕ್‌ನ ಒಂದೇ ಒಂದು ಎಟಿಎಂ ಕಾರ್ಯಾಚರಿಸುತ್ತಿದೆ.

ಈ ಕೇಂದ್ರದಲ್ಲೂ ದುಡ್ಡು ಸಿಗ್ತಿಲ್ಲ. ಯಾವಾಗಲೂ ಜನದಟ್ಟಣೆ ಇರುತ್ತದೆ. ಸರತಿ ಸಾಲಿನಲ್ಲಿ ನಿಂತರೂ ಹಲವೊಮ್ಮೆ ಕಾಸು ಸಿಗೋದೆ ಇಲ್ಲ. ಮೈಸೂರಿಗೆ ಬಂದಿಳಿಯುತ್ತಿದ್ದಂತೆ ಈ ಅವ್ಯವಸ್ಥೆಯಿಂದ ದುಡ್ಡಿಗಾಗಿ ಪರದಾಡಬೇಕಿದೆ ಎನ್ನುತ್ತಾರೆ ಬೆಂಗಳೂರು–ಮೈಸೂರು ನಡುವೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕ ಪ್ರದೀಪ್‌ಕುಮಾರ್‌.

‘ದೂರದ ಊರುಗಳಿಂದ ಮೈಸೂರು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು ಕಾಸು ಪಡೆಯಲು ಎಟಿಎಂಗಳಿಗೆ ಎಡತಾಕುತ್ತಾರೆ. ಎಲ್ಲೆಡೆ ನೋ ಸರ್ವೀಸ್‌ ಎಂಬ ಫಲಕ ನೋಡಿ ಹಿಡಿಶಾಪ ಹಾಕ್ತಾರೆ. ಸಿಬ್ಬಂದಿ ಸಹ ಎಟಿಎಂ ಸೌಲಭ್ಯಕ್ಕಾಗಿ ಪರದಾಡಬೇಕಿದೆ’ ಎಂದು ರೈಲ್ವೆ ಇಲಾಖೆಯ ಸಿಬ್ಬಂದಿಯೊಬ್ಬರು ಅಲವತ್ತುಕೊಂಡರು.

ಪ್ರತಿಕ್ರಿಯಿಸಿ (+)