ಚಾಮರಾಜನಗರ: ಇಳೆಗೆ ತಂಪೆರೆದ ಗಾಳಿ ಸಹಿತ ಮಳೆ

ಶುಕ್ರವಾರ, ಏಪ್ರಿಲ್ 26, 2019
35 °C

ಚಾಮರಾಜನಗರ: ಇಳೆಗೆ ತಂಪೆರೆದ ಗಾಳಿ ಸಹಿತ ಮಳೆ

Published:
Updated:
Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಮಳೆಯಾಗಿದ್ದು, ಬಿಸಿಲಿಗೆ ಕಾದು ಬೆಂಡಾಗಿದ್ದ ಇಳೆಗೆ ಕೊಂಚ ತಂಪೆರೆಯಿತು.

ಗುಂಡ್ಲುಪೇಟೆ ಬಿಟ್ಟು ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು ಭಾಗಗಳಲ್ಲಿ ಸಂಜೆ 5 ಗಂಟೆ ಸುಮಾರಿಗೆ ಕೆಲ ಕಾಲ ಗಾಳಿ ಸಹಿತ ಮಳೆಯಾಗಿದೆ. ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. 

ಹನೂರು ಭಾಗದ ರಾಮಾಪುರ, ಅಜ್ಜೀಪುರ, ಗೆಜ್ಜಲನತ್ತ, ಹೂಗ್ಯಂ, ನೆಲ್ಲೂರು ಮುಂತಾದ ಕಡೆಗಳಲ್ಲಿ ಸಂಜೆ 4 ಗಂಟೆಗೆ ಪ್ರಾರಂಭವಾದ ಗುಡುಗು ಸಹಿತ ಮಳೆ 5 ಗಂಟೆಯವರೆಗೂ ಸುರಿದಿದೆ. ಶಾಗ್ಯಂನಲ್ಲಿ ಮಧ್ಯಾಹ್ನದ ನಂತರ ತುಂತುರು ಮಳೆಯಾಗಿದೆ. 

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ 5ರಿಂದ 10 ನಿಮಿಷಗಳ ಕಾಲ ಬಿರುಸಿನ ಮಳೆಯಾಯಿತು. 4.30ಕ್ಕೆ ಜೋರಾಗಿ ಗಾಳಿ ಬೀಸಲು ಆರಂಭವಾಗಿ 5 ಗಂಟೆ ಸುಮಾರಿಗೆ ಮಳೆಯಾಯಿತು. 

ಕೊಳ್ಳೇಗಾಲ ವರದಿ: ನಗರ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಗಾಳಿ ಸಹಿತ ಜೋರು ಮಳೆ ಸುರಿದಿದೆ. ಗಾಳಿಯ ರಭಸಕ್ಕೆ ಭೀಮನಗರ ಬಡಾವಣೆಯ ಕೆಲ ಹಳೆಯ ಮನೆಗಳ ಹಂಚುಗಳು ಹಾರಿ ಹೋಗಿವೆ. ಮತ್ತು ಸಣ್ಣಪುಟ್ಟ ಒಣಮರಗಳು ಧರೆಗೆ ಉರುಳಿವೆ.

ತಾಲ್ಲೂಕಿನ ಮಧುವನಹಳ್ಳಿ, ಹೊಂಡರಬಾಳು, ಲಿಂಗಣಪುರ, ಕೆಂಪನಪಾಳ್ಯ, ಮುಳ್ಳೂರು, ಉತ್ತಂಬಳ್ಳಿ, ಕುಣಗಳ್ಳಿ, ಬೆಂಡರಳ್ಳಿ, ಸರಗೂರು, ಸತ್ತೇಗಾಲ ಸೇರಿದಂತೆ ಇನ್ನೂ ಹೆಚ್ಚಿನ ಗ್ರಾಮಗಳಲ್ಲಿ ಮಳೆಯಾಗಿದೆ.

ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯಾದ್ಯಂತ ಮೋಡದ ವಾತಾವರಣ ಇದ್ದು, ತಡರಾತ್ರಿ ಮಳೆಯಾಗುವ ಸಾಧ್ಯತೆ ಇದೆ. 

ತುಂತುರು ಮಳೆ: ಸೋಮವಾರ ರಾತ್ರಿ ಪೂರ್ತಿ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಇತ್ತು. ಮಿಂಚು ಸಮೇತ ಹನಿ ಹನಿ ಮಳೆಯಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !