‍ಪೊಲೀಸರ ಸೋಗಿನಲ್ಲಿ ಸುಲಿಗೆ; ಬಂಧನ

7

‍ಪೊಲೀಸರ ಸೋಗಿನಲ್ಲಿ ಸುಲಿಗೆ; ಬಂಧನ

Published:
Updated:

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮೂವರು ಕಾರ್ಮಿಕರನ್ನು ಬೆದರಿಸಿ ಹಣ–ಚಿನ್ನಾಭರಣ ಸುಲಿಗೆ ಮಾಡಿದ್ದ ಐವರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ತಂಬುಚೆಟ್ಟಿಪಾಳ್ಯದ ಕೆ.ಪುಗಳೇಂದಿ, ಹರಿವರಸನ್, ರಾಮಮೂರ್ತಿನಗರದ ಕೆ.ಸೆಲ್ವರಾಜ್, ಸಿ.ಪೆರಿಯಸ್ವಾಮಿ ಹಾಗೂ ಮಹಾಲಿಂಗಂ ಬಂಧಿತರು. ಆರೋಪಿಗಳಿಂದ ಮೂರು ಬೈಕ್‌ಗಳು, ಕಾರು ಹಾಗೂ ₹ 70 ಸಾವಿರ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ‍ಪೊಲೀಸರು ಹೇಳಿದ್ದಾರೆ.

‘ಬಂಧಿತರೆಲ್ಲ ತಮಿಳುನಾಡಿನವರು. ಆರು ವರ್ಷಗಳ ಹಿಂದೆ ನಗರಕ್ಕೆ ಬಂದು, ಪೀಠೋಪಕರಣ ಮಾರಾಟ ಮಾಡುತ್ತಿದ್ದರು. ಜತೆಗೆ ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದರು. ಡಿ.30ರಂದು ಪಾನಮತ್ತರಾಗಿದ್ದ ಇವರು, ವೆಲ್ಡಿಂಗ್ ಶಾಪ್‌ಗಳಲ್ಲಿ ಕೆಲಸ ಮಾಡುವ ಸಲೀಂ ಪಾಷಾ, ಸಿದ್ದಿಕಿ ಹಾಗೂ ಯಾಸಿನ್ ಷರೀಫ್ ಎಂಬುವರಿಂದ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಸ್ನೇಹಿತರಾದ ಸಲೀಂ, ಸಿದ್ದಿಕಿ ಮತ್ತ ಯಾಸಿನ್ ಡಿ.30ರ ರಾತ್ರಿ ಬೈಕ್‌ನಲ್ಲಿ ದರ್ಗಾಕ್ಕೆ ತೆರಳುತ್ತಿದ್ದರು. ಶಿವಾಲೆ ರಸ್ತೆಯಲ್ಲಿ ಬೈಕ್ ತಡೆದಿದ್ದ ಆರೋಪಿಗಳು, ‘ನಾವು ಪೊಲೀಸರು. ಈ ಭಾಗದಲ್ಲಿ ಗಾಂಜಾ ಮಾರಾಟ ಹಾಗೂ ದರೋಡೆ ಕೃತ್ಯಗಳು ಹೆಚ್ಚಾಗಿವೆ. ನಿಮ್ಮನ್ನು ವಿಚಾರಣೆ ನಡೆಸಬೇಕು ಬನ್ನಿ’ ಎಂದು ಮೂವರನ್ನೂ ಸಮೀಪದ ಮಾವಿನ ತೋಪಿಗೆ ಕರೆದೊಯ್ದಿದ್ದರು.

ಅಲ್ಲಿ ಫೈಬರ್ ಪೈಪ್‌ಗಳಿಂದ ಮೂವರನ್ನೂ ಥಳಿಸಿ, ಚಿನ್ನದ ಸರ, ಬೆಳ್ಳಿ ಉಂಗುರಗಳು ಹಾಗೂ ಮೂರು ಮೊಬೈಲ್‌ಗಳನ್ನು ಕಿತ್ತುಕೊಂಡು ಕಳುಹಿಸಿದ್ದರು. ಹಲ್ಲೆಯಿಂದ ಸಿದ್ದಿಕಿ ಅವರ ಕೈ ಮುರಿದಿದ್ದರೆ, ಉಳಿದಿಬ್ಬರಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದವು. ಮೂರು ದಿನ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಅವರು, ನಂತರ ಕೊತ್ತನೂರು ಠಾಣೆಗೆ ತೆರಳಿ ದೂರು ಕೊಟ್ಟಿದ್ದರು.

‘ಸುಲಿಗೆಕೋರರು ಕಸಿದುಕೊಂಡು ಹೋಗಿದ್ದ ಮೊಬೈಲ್‌ಗಳ ಜಾಡು ಹಿಡಿದೇ ಅವರನ್ನು ಪತ್ತೆ ಮಾಡಲಾಯಿತು. ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !