ಸಾಕ್ಷಿ ಮರು ವಿಚಾರಣೆ ವಿರೋಧಿಸಿದ್ದ ಅರ್ಜಿ ವಜಾ

7
ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣ

ಸಾಕ್ಷಿ ಮರು ವಿಚಾರಣೆ ವಿರೋಧಿಸಿದ್ದ ಅರ್ಜಿ ವಜಾ

Published:
Updated:
Prajavani

ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರು ವಿಚಾರಣೆ ವಿರೋಧಿಸಿದ್ದ ಆರೋಪಿಗಳ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ.

‘ಪ್ರಾಸಿಕ್ಯೂಷನ್‌ ವತಿಯಿಂದ ಯಾವುದೇ ಲೋಪಗಳಾಗಿಲ್ಲ. ಅಧೀನ ನ್ಯಾಯಾಲಯ ನೀಡಿರುವ ಆದೇಶ ಕಾನೂನು ವ್ಯಾಪ್ತಿಯಲ್ಲಿ ಸರಿಯಾಗಿಯೇ ಇದೆ’ ಎಂಬ ಅಭಿಪ್ರಾಯನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಏನಿದು ಅರ್ಜಿ? : ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಕೊಲೆ ಮಾಡಿದ್ದರು.

ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಗ್ಗೆ 9 ಗಂಟೆ ವೇಳೆಗೆ ನಡೆದಿತ್ತು.

ಈ ಪ್ರಕರಣದಲ್ಲಿ, ಅಸೀಮ್‌ ಶರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮಹಮ್ಮದ್‌ ಸಾದಿಕ್‌ ಅಲಿಯಾಸ್ ಮಜಹರ್ ಮತ್ತು ಮಹಮ್ಮದ್ ಮುಬೀಬುಲ್ಲಾ ಅಲಿಯಾಸ್ ಮೌಲಾ ಆರೋಪಿಗಳಾಗಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ರುದ್ರೇಶ್ ಸ್ನೇಹಿತರಾದ ಬಿ.ಜಯರಾಂ, ಡಿ.ಕುಮಾರೇಶನ್ ಮತ್ತು ಹರಿಕೃಷ್ಣ ಅವರು ಸಾಕ್ಷಿಗಳಾಗಿದ್ದಾರೆ.

ಎನ್ಐಎ ವಿಶೇಷ ನ್ಯಾಯಾಲಯ ನಡೆಸುತ್ತಿರುವ ಈ ಪ್ರಕರಣದಲ್ಲಿ, ವಿಚಾರಣೆ ವೇಳೆ, ಹತ್ಯೆಗೆ ಬಳಸಲಾದ ಮಚ್ಚು ಮತ್ತು ಮೋಟಾರ್ ಬೈಕ್ ಅನ್ನು ಸಕಾಲದಲ್ಲಿ ಹಾಜರುಪಡಿಸಿರಲಿಲ್ಲ.

‘ಕೋರ್ಟ್ ಕಟ್ಟಡದಲ್ಲಿರುವ ಮಾಲ್‌ಖಾನಾದಲ್ಲಿ ಪೊಲೀಸರು ವಶಪಡಿಸಿ ಕೊಂಡ ವಸ್ತುಗಳನ್ನು ಇರಿಸಲು ಜಾಗವಿರಲಿಲ್ಲ. ಹೀಗಾಗಿ ವಿಳಂಬವಾಗಿದೆ’ ಎಂದು ಎನ್ಐಎ ಮೌಖಿಕವಾಗಿ ನ್ಯಾಯಾಧೀಶರಿಗೆ ತಿಳಿಸಿತ್ತು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಆರೋಪಿಗಳ ಪಾಟೀ ಸವಾಲು ಮುಂದುವರಿಸಿದ್ದರು. ಆದರೆ, ಈ ಕ್ರಮವನ್ನು ವಿರೋಧಿಸಿದ್ದ ಆರೋಪಿಗಳು, ‘ಒಮ್ಮೆ ಸಾಕ್ಷಿ ವಿಚಾರಣೆ ನಡೆದ ನಂತರ ಪುನಃ ನಡೆಸಲು ಸಾಧ್ಯವಿಲ್ಲ. ಇದು ಕಾನೂನು ಬಾಹಿರ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಆಕ್ಷೇಪಿಸಿದ್ದರು.

ಆರೋಪಿಗಳ ಈ ಆಕ್ಷೇಪಣೆಯನ್ನು ನ್ಯಾಯಾಧೀಶ ಸಿದ್ಧಲಿಂಗ ಪ್ರಭು 2018ರ ಅಕ್ಟೋಬರ್ 12 ರಂದು ವಜಾ ಮಾಡಿದ್ದರು.

ಈ ಆದೇಶವನ್ನು ಆರೋಪಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದೀಗ ಹೈಕೋರ್ಟ್ ಕೂಡಾ ಆರೋಪಿಗಳ ಮನವಿಯನ್ನು ತಿರಸ್ಕರಿಸಿದೆ.

ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ಮತ್ತು ಆರೋಪಿಗಳ ಪರ ಬಾಲನ್ (ಎಸ್‌.ಬಾಲಕೃಷ್ಣನ್‌) ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !