ಆರ್‌ಟಿಒ ಕಚೇರಿ ಸ್ಥಳಾಂತರ, ಮೊದಲ ದಿನ ನಡೆಯದ ಕೆಲಸ

ಬುಧವಾರ, ಜೂನ್ 19, 2019
29 °C

ಆರ್‌ಟಿಒ ಕಚೇರಿ ಸ್ಥಳಾಂತರ, ಮೊದಲ ದಿನ ನಡೆಯದ ಕೆಲಸ

Published:
Updated:
Prajavani

ಚಾಮರಾಜನಗರ: ಗುಂಡ್ಲುಪೇಟೆ ರಸ್ತೆಯ ವಕ್ಫ್‌ ಮಂಡಳಿಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯು ಸೋಮವಾರದಿಂದ ಮಲ್ಲಯ್ಯನಪುರದ ಬಳಿ ನಿರ್ಮಿಸಲಾಗಿರುವ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದೆ. 

ಆದರೆ, ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಹಾಗೂ ಕಚೇರಿಗೆ ಪೂರ್ಣ ಪ್ರಮಾಣದ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸದೆ ಇದ್ದುದರಿಂದ ಮೊದಲ ದಿನ ಕಚೇರಿಯಲ್ಲಿ ದೈನಂದಿನ ಕೆಲಸಗಳು ನಡೆಯಲಿಲ್ಲ.  

ಸಾರಿಗೆ ಕಚೇರಿಯ ಎಲ್ಲ ವಹಿವಾಟು ಈಗ ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಇಂಟರ್‌ನೆಟ್‌ ಸಂಪರ್ಕ ಅತ್ಯಗತ್ಯ. ಹೊಸ ಕಟ್ಟಡಕ್ಕೆ ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾಗಿರುವುದರಿಂದ ಕೆಲಸಗಳು ನಡೆಯಲಿಲ್ಲ. 

ಬಿಎಸ್‌ಎನ್ಎಲ್‌ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಸಂಪರ್ಕ ನೀಡುವ ಕೆಲಸ ಆರಂಭಿಸಿದ್ದು, ಸಂಜೆಯ ವೇಳೆಗೆ ಮುಕ್ತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಜನರು ಬರಿಗೈಯಲ್ಲಿ ವಾಪಸ್‌: ಚಾಲನಾ ಕಲಿಕೆ ಪರವಾನಗಿ, ಚಾಲನಾ ಪರವಾನಗಿ, ರಸ್ತೆ ತೆರಿಗೆ ಪಾವತಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಹೊಸ ಕಚೇರಿಗೆ ಬಂದಿದ್ದ ಸಾರ್ವಜನಿಕರು ಬರಿಗೈನಲ್ಲಿ ವಾಪಸಾದರು.

ಇಂಟರ್‌ನೆಟ್‌ ಡಾಂಗಲ್‌ ಬಳಸಿ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರಲಿಲ್ಲ. ‌ಕಚೇರಿಗೆ ಬಂದ ಸಾರ್ವಜನಿಕರಿಗೆ ‘ಇನ್ನೂ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ನಾಳೆ ಬನ್ನಿ’ ಎಂದು ಸಿಬ್ಬಂದಿ ಹೇಳುತ್ತಿದ್ದರು.

ಎರಡೂವರೆ ವರ್ಷದ ಬಳಿಕ ಸ್ಥಳಾಂತರ: ₹ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಆರ್‌ಟಿಒ ಕಚೇರಿ ಹೊಸ ಕಟ್ಟಡ 2016ರ ಸೆಪ್ಟೆಂಬರ್‌ 19ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಪ್ರಶಾಂತ ವಾತಾವರಣದಲ್ಲಿ ಸುಂದರವಾದ ಹಾಗೂ ಸುಸಜ್ಜಿತ ಕಟ್ಟಡ ಇದ್ದರೂ ಕಚೇರಿ ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಎರಡೂವರೆ ವರ್ಷಗಳ ಬಳಿಕ ಕೊನೆಗೂ ಕಚೇರಿ ಸ್ಥಳಾಂತರ ಆಗಿದೆ.  

ಟ್ರ್ಯಾಕ್‌ ನಿರ್ಮಾಣ ಆಗಿಲ್ಲ: ಚಾಲನಾ ಪರೀಕ್ಷೆಯ ಟ್ರ್ಯಾಕ್‌ ಇನ್ನೂ ನಿರ್ಮಾಣಗೊಂಡಿಲ್ಲ. ಅದಕ್ಕಾಗಿಯೇ 3 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಟ್ರ್ಯಾಕ್‌ ನಿರ್ಮಾಣ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. 

ನಗರದಿಂದ ದೂರ; ಸಾರಿಗೆ ವ್ಯವಸ್ಥೆ ಅಗತ್ಯ
ಹೊಸ ಆರ್‌ಟಿಒ ಕಚೇರಿ ಜಿಲ್ಲಾ ಕೇಂದ್ರದಿಂದ ಮೂರು–ನಾಲ್ಕು ಕಿ.ಮೀಗಳಷ್ಟು ದೂರದಲ್ಲಿದೆ. ಮಲ್ಲಯ್ಯನಪುರದಿಂದಲೂ ಒಂದು ಕಿ.ಮೀ ದೂರ ಸಾಗಬೇಕು. ಇಲ್ಲಿಗೆ ಸರಿಯಾದ ಡಾಂಬರು ರಸ್ತೆ ಇಲ್ಲ. ಸದ್ಯಕ್ಕೆ ಕಚ್ಚಾರಸ್ತೆಯಲ್ಲೇ ಸಾಗಬೇಕಿದೆ. ನಿರ್ಮಾಣ ಹಂತದಲ್ಲಿರುವ ಬೈಪಾಸ್‌ ರಸ್ತೆಗೆ ಕಚೇರಿ ಹತ್ತಿರದಲ್ಲಿದೆ. ಆದರೆ, ಅಲ್ಲಿಂದ ನೇರವಾಗಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲ. 

ಕಚೇರಿಯು ನಗರದ ಹೊರವಲದಲ್ಲಿರುವುದರಿಂದ ಸಾರ್ವಜನಿಕರು ವಾಹನಗಳ ಮೂಲಕವೇ ಇಲ್ಲಿಗೆ ಬರಬೇಕಾಗಿದೆ.

ದ್ವಿಚಕ್ರ ಅಥವಾ ಇತರೆ ವಾಹನ ಇದ್ದವರಿಗೆ ಸಮಸ್ಯೆ ‍ಇಲ್ಲ. ವಾಹನಗಳು ಇಲ್ಲದವರು ಆಟೊ ಅಥವಾ ಇನ್ನಿತರ ವಾಹನಗಳನ್ನು ಬಾಡಿಗೆ ಮಾಡಿಕೊಂಡೇ ಬರಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಜನರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !