ಸೋಮವಾರ, ಮಾರ್ಚ್ 8, 2021
27 °C
ಪಂಚಾಯ್ತಿ ಅಭಿವೃದ್ಧಿಗೆ ಹೊಸ ದಾರಿಗಳು

ಮಾದರಿ ಮಾಲಂಗಿ

ಅರುಣ್ ಜೋಳದಕೂಡ್ಲಿಗಿ Updated:

ಅಕ್ಷರ ಗಾತ್ರ : | |

Prajavani

‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಸಿದ ಕೆರೆಗಳಿಗೆ ನೀರು ಬಂದಿದೆ...’ – ಚಿತ್ರಸಹಿತ ಪ್ರಕಟವಾಗಿದ್ದ ಈ ಫೇಸ್ಬುಕ್ ಪೋಸ್ಟ್ ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ಅದನ್ನು ಪೋಸ್ಟ್ ಮಾಡಿ, ಸಾರ್ಥಕಭಾವ ವ್ಯಕ್ತಪಡಿಸಿದ್ದವರು ಪಿರಿಯಾಪಟ್ಟಣ ತಾಲ್ಲೂಕಿನ ಮಾಲಂಗಿಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಡಾ. ಶೋಭಾರಾಣಿ. ಆ ನಂತರದಲ್ಲಿ ಒಮ್ಮೆ ಈ ಮಾಲಂಗಿ ಪಂಚಾಯ್ತಿ ನೋಡಬೇಕೆನಿಸಿ, ಅಲ್ಲಿಗೆ ಹೋಗಿ ಬಂದೆ.

ಸುಸಜ್ಜಿತ ಪಂಚಾಯ್ತಿ ಕಚೇರಿ: ಮಾಲಂಗಿಗೆ ಹೋದಾಗ, ಮೊದಲು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದೆ. ಆ ಸುಸಜ್ಜಿತ ಗ್ರಾಮ ಪಂಚಾಯ್ತಿಯಲ್ಲಿ, ಪ್ರತಿಯೊಂದು ದಾಖಲೆ, ಪ್ರತಿ ಪೈಸೆಯ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಪರಿಶೀಲಿಸುವಷ್ಟು ಕ್ರಮಬದ್ಧವಾಗಿತ್ತು. ಗ್ರಾಮಸಭೆ, ಜನರ ಸಮ್ಮುಖದಲ್ಲೇ ಫಲಾನುಭವಿಗಳ ಆಯ್ಕೆ, ಯೋಜನೆಯ ಹಂಚಿಕೆ, ಪ್ರತಿ ಹಂತದಲ್ಲೂ ಸಮುದಾಯದ ಸಹಭಾಗಿತ್ವದಲ್ಲೇ ಗ್ರಾಮದ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದನ್ನು ಶೋಭಾರಾಣಿ ಅವರು ಉದಾಹರಣೆ ಸಹಿತ ಮಾಹಿತಿ ನೀಡುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಿದ್ದಾಗ, ಅಧಿಕಾರ ವಿಕೇಂದ್ರೀಕರಣದ ಫಲ ನಿಜಾರ್ಥದಲ್ಲಿ ಜನಸಾಮಾನ್ಯರ ಮಧ್ಯೆ ಹಂಚಿಕೆಯಾದ ಅನುಭವವಾಯಿತು.

ಅಂದ ಹಾಗೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿರುವ ಮಾಲಂಗಿ ಗ್ರಾಮಪಂಚಾಯ್ತಿಯ ಒಂಬತ್ತು ಗ್ರಾಮಗಳಲ್ಲಿ 1350 ಕುಟುಂಬಗಳಿವೆ. 6069ರಷ್ಟು ಜನಸಂಖ್ಯೆ ಇದೆ. ಒಂಬತ್ತು ಅಂಗನವಾಡಿ, ಎಂಟು ಪ್ರಾಥಮಿಕ ಶಾಲೆಗಳಿವೆ. ಈ ಗ್ರಾಮ ರಾಜೀವಗಾಂಧಿ ರಾಷ್ಟ್ರೀಯ ರಕ್ಷಿತ ಅರಣ್ಯವಲಯಕ್ಕೆ ಹೊಂದಿಕೊಂಡಂತಿದೆ. ಹೀಗಾಗಿ, ಆನೆ, ಜಿಂಕೆ, ಚಿರತೆ, ನವಿಲುಗಳು ಸಹಜವಾಗಿ ನೆಲೆಗೊಂಡಿವೆ. ಇಲ್ಲಿ ಜೇನುಕರುಬ ಮೊದಲಾದ ಬುಡಕಟ್ಟುಗಳಿವೆ.

ಸಮುದಾಯ ಸಹಭಾಗಿತ್ವದ ಶಕ್ತಿ : ಪರಿಣಾಮಕಾರಿ ಸಮುದಾಯ ಸಹಭಾಗಿತ್ವವೇ ಗ್ರಾಮ ಪಂಚಾಯ್ತಿಗಳ ಯಶಸ್ಸಿಗೆ ಕಾರಣ. ಮಾಲಂಗಿ ಪಂಚಾಯ್ತಿ ಕೂಡ ಇದೇ ಮಾದರಿ ಅನುಸರಿಸಿದೆ. ಪ್ರತಿ ಯೋಜನೆ ಹಂಚಿಕೆಯೂ ಗ್ರಾಮ ಸಭೆಗಳ ಮೂಲಕ ಜನ ಸಮ್ಮುಖದಲ್ಲಿಯೇ ತೀರ್ಮಾನವಾಗಿವೆ. ಇಂಥ ಪಾರದರ್ಶಕ ಚಟುವಟಿಕೆಗಳಿಂದಾಗಿ ಜನರಲ್ಲಿ ಪಂಚಾಯ್ತಿಯ ಬಗ್ಗೆ ಹೊಸ ಭರವಸೆ ವಿಶ್ವಾಸ ಮೂಡಿದೆ.

ನಿಯಮಾನುಸಾರ ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣದಲ್ಲಿ ಪಂಚಾಯ್ತಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಮಾಲಂಗಿ ಗ್ರಾಮಪಂಚಾಯ್ತಿಯ ಶಕ್ತಿ ಅಡಗಿರುವುದು ಇಲ್ಲಿಯೇ. ಈ ಪಂಚಾಯ್ತಿ, ಮೊದಲು ಒತ್ತುವರಿಯಾಗಿದ್ದ 22 ಎಕರೆ ಸರ್ಕಾರಿ ಜಾಗವನ್ನು ಜೇನುಕುರುಬರ ಹೋರಾಟಗಾರ್ತಿ ಜಾನಕಮ್ಮ ಅವರ ನೆರವಿನೊಂದಿಗೆ ತೆರವುಗೊಳಿಸಿತು. ಈ ಜಾಗದಲ್ಲಿ ಇದೀಗ ಕಿತ್ತೂರು ರಾಣಿ ಮತ್ತು ಇಂದಿರಾಗಾಂಧಿ ವಸತಿ ಶಾಲೆಗಳಿವೆ. ಉಳಿದ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ. ₹ 1.25 ಲಕ್ಷದಷ್ಟಿದ್ದ ಪಂಚಾಯ್ತಿಯ ವಾರ್ಷಿಕ ಆದಾಯವನ್ನು ₹ 15 ಲಕ್ಷಕ್ಕೆ ಏರಿಸಿದೆ. ಈ ಹಣವನ್ನು ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ.

ಅನುದಾನವಿಲ್ಲದ ಅಭಿವೃದ್ಧಿ– ಒಂದು ಮಾದರಿ : ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂದರೆ ಹಣ ಬೇಕೇ ಬೇಕು. ಆದರೆ, ಹಣವಿಲ್ಲದೆಯೂ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಬಹುದು ಎಂಬುದಕ್ಕೆ ಈ ಪಂಚಾಯ್ತಿ ಮಾದರಿಯನ್ನೇ ರೂಪಿಸಿದೆ.

ಮೊದಲ ಹಂತದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಗಳ ಸರ್ವೆ ಮಾಡಿಸಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು. ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಲ್ಲಿ ಆರೋಗ್ಯ ಶಿಬಿರ ನಡೆಸಿ, ಶೇ 100ರಷ್ಟು ಲಸಿಕೆ ಹಾಕಿಸುವ ಕಾರ್ಯವೂ ಪೂರ್ಣಗೊಂಡಿತು. ಕಾನೂನು ಅರಿವು ಶಿಬಿರಗಳು ನಡೆದವು. ದಾನಿಗಳನ್ನು ಹುಡುಕಿ, ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಬೇಕಾಗುವ ಮೂಲ ಸೌಲಭ್ಯಗಳನ್ನು ಕೊಡಿಸಲಾಯಿತು.

ಬೋರನಕಟ್ಟೆ ಹಾಡಿಯಲ್ಲಿ ಕಾಡಾನೆ ಹಾವಳಿಯಿಂದ ರಕ್ಷಿಸಿಕೊಳ್ಳಲು ಸ್ವಯಂ ಸೇವಾ ಸಂಸ್ಥೆಯಿಂದ ಸೋಲಾರ್ ಬೀದಿ ದೀಪಗಳ ಅಳವಡಿಸಲಾಗಿದೆ. ಈ ಭಾಗದ ತಂಬಾಕು ಬೆಳೆ ಖರೀದಿಸುವ ಐಟಿಸಿ ಕಂಪನಿಯಿಂದ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಕೆರೆಗಳ ಹೂಳೆತ್ತಿಸಲಾಗಿದೆ. ಮೆಂಡಾ ಫೌಂಡೇಷನ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಹಾಗೂ ಗ್ರಾಮ ಪಂಚಾಯ್ತಿಯಿಂದ ₹ 30 ಸಾವಿರ ಅನುದಾನ ನೀಡಿ, 5 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕೊಡಿಸಲಾಗಿದೆ. ಇದೀಗ ಮಾಲಂಗಿ ಸಂಪೂರ್ಣ ಸೋಲಾರ್ ಗ್ರಾಮ.

‘ಶಿಕ್ಷಣಕ್ಕಾಗಿ ಬೆಳಕು’ ಯೋಜನೆಯಡಿ ಹಾಡಿಯ ಗುಡಿಸಲುಗಳಿಗೆ ಸೆಲ್ಕೊ ಸೋಲಾರ್ ಕಂಪನಿಯ ಸಹಯೋಗದೊಂದಿಗೆ ರೂ 1 ಲಕ್ಷ ವೆಚ್ಚದಲ್ಲಿ ಸೋಲಾರ್ ಲೈಟ್‍ಗಳನ್ನು ವಿತರಿಸಲಾಗಿದೆ. ಒಂಬತ್ತು ಶಾಲೆಗಳಿಗೆ ಅಗತ್ಯ ಕ್ರೀಡಾ ಸಾಮಗ್ರಿಗಳು, ಊಟದ ತಟ್ಟೆಗಳನ್ನು ವಿತರಿಸಲಾಗಿದೆ. ಗ್ರಾಮ ಪಂಚಾಯ್ತಿಯಿಂದಲೇ ವಿಧವಾ, ವೃದ್ಧಾಪ್ಯ ವೇತನಗಳಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸಿಕೊಡಲಾಗಿದೆ.

₹19 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡ, `ರಾಜೀವ ಗಾಂಧಿ ಸೇವಾ ಕೇಂದ್ರ’ ನಿರ್ಮಾಣವಾಗಿದೆ. ‘ಜಿಲ್ಲಾ ಪಂಚಾಯ್ತಿಯ ಅನುದಾನದಿಂದ ಅಂಗನವಾಡಿ ಮಕ್ಕಳಿಗೆ ಕಲಿಕೆಗೆ ಅನುವಾಗುವ ಆಟದ ಪರಿಕರಗಳು, ಪೀಠೋಪಕರಣಗಳ ಪೂರೈಕೆ. ಗ್ರಾಮೀಣ ಕ್ರೀಡೆಗಳ ಆಯೋಜನೆ.. ಇವೆಲ್ಲ ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿವೆ‘ ಎನ್ನುತ್ತಾರೆ ಶೋಭಾರಾಣಿ. ಇತ್ತೀಚೆಗೆ ಕಾನನ ಕೃಷಿಕ ಸಂಘದ ಮಹಿಳೆಯರು ‘ಕಾನನ ಸಮುದಾಯ ಬೀಜ ಬ್ಯಾಂಕ್’ ಆರಂಭಿಸಿದ್ದಾರೆ. ನಾಟಿ ಬೀಜಗಳ ಸಂರಕ್ಷಣೆ ಮತ್ತು ಬೀಜ ವಿನಿಮಯ ಈ ಬ್ಯಾಂಕ್‌ನ ಉದ್ದೇಶ. ಈ ಬೀಜ ಬ್ಯಾಂಕ್‍ಗಾಗಿ ಗ್ರಾಮ ಪಂಚಾಯ್ತಿ, ತನ್ನ ಕಟ್ಟಡವೊಂದನ್ನು ಬಿಟ್ಟುಕೊಟ್ಟಿದೆ.

ಅಭಿವೃದ್ಧಿ ಮಾದರಿಗೆ ಪುರಸ್ಕಾರದ ಗರಿ: ಮಾಲಂಗಿ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ಎರಡು ಬಾರಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆ ಮಾಡಿದೆ. ಅಲ್ಲದೆ ಬಯಲು ಶೌಚಮುಕ್ತ ಗ್ರಾಮಪಂಚಾಯ್ತಿ ಪುರಸ್ಕಾರವನ್ನೂ ಪಡೆದಿದೆ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ‘ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ -2018’ ರ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಏಕೈಕ ಪಂಚಾಯ್ತಿ ಮಾಲಂಗಿ.

ಪಿಡಿಒ ಪರಿಶ್ರಮ, ದೂರದೃಷ್ಟಿ: ‘ಇಷ್ಟೊಂದು ವಿಷಯಗಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಗೊತ್ತಾದದ್ದೇ ಶೋಭಾ ಮೇಡಂ ಬಂದ ಮೇಲೆ. ನಮ್ಮ ಜೇನುಕುರುಬರ ಅಭಿವೃದ್ಧಿಗಂತೂ ಅವರು ತುಂಬಾ ಕೆಲಸ ಮಾಡಿದ್ದಾರೆ’ ಎಂದು ಅಬ್ಬಳತಿ ಗ್ರಾಮದ ಹೋರಾಟಗಾರ್ತಿ ಜಾನಕಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಶೌಚಾಲಯ ಕಟ್ಟಿಕೊಡಿ ಎಂದು ಗ್ರಾಮ ಪಂಚಾಯ್ತಿಯನ್ನು ಕೇಳುವ ಮಟ್ಟಕ್ಕೆ ಜನರು ಬದಲಾಗಿದ್ದಾರೆ ಎನ್ನುವುದು ನಮ್ಮ ಪಂಚಾಯ್ತಿಯ ಹಿರಿಮೆ. ಶೋಭಾ ಮೇಡಂ ಅವರಿಗೆ ನಾವೆಲ್ಲ ಸಹಕಾರ ಕೊಟ್ಟಿದಿವಿ. ಶೇ 80ರಷ್ಟು ಜನರಿಗೆ ಯೋಜನೆಗಳು ತಲುಪಿವೆ’ ಎಂದು ತಾಲೂಕು ಪಂಚಾಯ್ತಿ ಸದಸ್ಯ ಎಚ್.ಎಸ್.ಶ್ರೀನಿವಾಸ್ ಅಭಿಪ್ರಾಯ ಪಡುತ್ತಾರೆ.

ಶೋಭಾ ಅವರು ಎಂಎಸ್ಸಿ ಪದವೀಧರೆ. ಬೆಂಗಳೂರು ವಿವಿಯಿಂದ ಜೀವವಿಜ್ಞಾನ ವಿಭಾಗದಲ್ಲಿ ಪಿಎಚ್‍ಡಿ ಪಡೆದಿದ್ದಾರೆ. ಜಾರ್ಖಂಡ್ ವಿವಿಯ ರಾಧೇಶ್ಯಾಮ್ ಪ್ರತಿಷ್ಠಾನದಿಂದ ‘ಯುವ ವಿಜ್ಞಾನಿ’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇಂಥ ಹಿನ್ನೆಲೆ ಹೊಂದಿರುವ ಅವರು, ತನ್ನ ಜ್ಞಾನ, ಸಂಶೋಧನಾ ತಿಳಿವಳಿಕೆಯನ್ನು ಗ್ರಾಮಮಟ್ಟದಲ್ಲಿ ವಿಸ್ತರಿಸುವುದಕ್ಕಾಗಿಯೇ ಪಿಡಿಒ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಾಲಂಗಿಯನ್ನು ಮಾದರಿ ಗ್ರಾಮವನ್ನಾಗಿ ರೂಪಿಸಿದ ಶೋಭಾರಾಣಿ ಅವರಿಗೀಗ ಬೇರೆ ಪಂಚಾಯ್ತಿಗೆ ವರ್ಗವಾಗಿದೆ. ಆ ಹೊಸ ಗ್ರಾಮಪಂಚಾಯ್ತಿಯಲ್ಲೂ ಇನ್ನಷ್ಟು ಹೊಸ ಮಾದರಿಗಳು ರೂಪುಗೊಳ್ಳಲಿ. 

***
‘ಗ್ರಾ.ಪಂ ಜನರ ಆಸ್ತಿ. ಅದನ್ನು ರಕ್ಷಿಸಿ, ಬೆಳೆಸುವುದು ಅವರ ಜವಾಬ್ದಾರಿ’ ಎಂಬುದನ್ನು ಮಾಲಂಗಿ ಜನತೆಗೆ ಮನವರಿಕೆ ಮಾಡಿಸಿದ್ದೇನೆ. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಹಾದಿಯಲ್ಲಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಊರಿನ ಹಿರಿಯರು ಸಹಕಾರ ಕೊಡಲಾರಂಭಿಸಿದರು. ಈ ಪಂಚಾಯ್ತಿಯನ್ನು ಮಾದರಿಯಾಗಿಸಲು ನಾಲ್ಕೈದು ವರ್ಷ ಹಿಡಿಯಿತು’
–ಶೋಭಾರಾಣಿ, ಪಿಡಿಒ

*
’ಮಾಲಂಗಿಯಲ್ಲಿ ಈಗ ಸ್ವಚ್ಛತೆಯ ಅರಿವು ಮೂಡಿದೆ. ಕಂದಾಯ ಪಾವತಿಸುವ ಅರಿವು ಮೂಡಿದ್ದು, ತೆರಿಗೆ ಸಂಗ್ರಹ ಕೂಡ ಹೆಚ್ಚಾಗಿದೆ. ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವಂತೆ ನಮ್ಮ ದುಡ್ಡನ್ನು ನಮಗೇ ಖರ್ಚು ಮಾಡಿದ್ರು. ನಾವು ಶೋಭಾ ಮೇಂಡಮ್ಮೋರ್ನ ಎಂದೂ ಮರಿಯಲ್ಲ’
-ಜಯಣ್ಣ ಕೃಷಿಕರು, ಮಾಲಂಗಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು