ಸೊಸೈಟಿ ಕಾರ್ಯದರ್ಶಿ ಅಮಾನತು

7
ಪಡಿತರ ವಿತರಣೆಯಲ್ಲಿ ಲೋಪ, ಗ್ರಾಮಸ್ಥರ ಪ್ರತಿಭಟನೆ

ಸೊಸೈಟಿ ಕಾರ್ಯದರ್ಶಿ ಅಮಾನತು

Published:
Updated:
ಆಹಾರ ನಿರೀಕ್ಷಕರ ಕಚೇರಿಗೆ ಸುಣ್ಣಘಟ್ಟಹಳ್ಳಿ ಮತ್ತು ಟಿ.ಹೊಸಹಳ್ಳಿ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿದ್ದರು

ತೂಬಗೆರೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ತೂಬಗೆರೆ ಪಡಿತರ ವಿತರಣಾ ಕೇಂದ್ರದಲ್ಲಿ ಮೂರು ತಿಂಗಳಾದರು ಪಡಿತರ ವಿತರಣೆ ಮಾಡಲು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಸುಣ್ಣಘಟ್ಟನಹಳ್ಳಿ ಮತ್ತು ಟಿ.ಹೊಸಹಳ್ಳಿ ಗ್ರಾಮದ ನೂರಕ್ಕೂ ಹೆಚ್ಚು ಮಹಿಳೆಯರು ತಾಲ್ಲೂಕು ಕಚೇರಿಯ ಆಹಾರ ಇಲಾಖೆ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.

ತಹಶೀಲ್ದಾರ್ ಬಿ.ಎ.ಮೋಹನ್ ಮಾತನಾಡಿ, ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ರಾಮಮೂರ್ತಿ ಅವರನ್ನು ಕೂಡಲೇ ಅಮಾನತುಗೊಳಿಸುವುದಾಗಿ ತಿಳಿಸಿ
ದರು. ನಂತರ ತೂಬಗೆರೆ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಬೀಗ ಒಡೆಯಲಾಯಿತು. ಗೋದಾಮು ಖಾಲಿ ಇದ್ದ ಕಾರಣ 8 ದಿನಗಳ ಒಳಗೆ ಮೂರು ತಿಂಗಳ ಉಳಿಕೆ ಪಡಿತರವನ್ನು ವಿತರಣೆ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಮಾತನಾಡಿ, ‘ಈ ಸಂಬಂಧ ಹಿಂದೆಯೇ ಹಲವಾರು ಬಾರಿ ಗ್ರಾಮಸ್ಥರು ತೂಬಗೆರೆ ಪಡಿತರ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಾರ್ಯದರ್ಶಿ ರಾಮಮೂರ್ತಿ ಕ್ಷಮೆ ಕೋರಿ ಇನ್ನು ಮುಂದೆ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದರು’ ಎಂದರು.

‘ಈಗ ಮತ್ತೆ ಅದೇ ಚಾಳಿ ಮುಂದುವರೆಸಿರುವ ಪರಿಣಾಮ ನೇರವಾಗಿ ಗ್ರಾಮಸ್ಥರು ತಹಶೀಲ್ದಾರರ ಮುಂದೆ ಬಂದು ಪ್ರತಿಭಟನೆ ನಡೆಸುವಂತಾಗಿದೆ. ಕಾರ್ಯದರ್ಶಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರತಿಭಟನಾಕಾರರೊಂದಿಗೆ ಮಾತ
ನಾಡಿದ ಬಿ.ಎ.ಮೋಹನ್, ‘ಈ ಸಂಬಂಧ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ. ಆದರೆ ಸಮಸ್ಯೆ ಮುಂದುವರೆದ ಕಾರಣ ರಾಮಮೂರ್ತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ತಕ್ಷಣಕ್ಕೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಸುಸ್ಮಾ ಮಂಜುನಾಥ್ ಮಾತನಾಡಿ, ‘ಪಡಿತರ ವಂಚಿತರಾಗಿರುವ ಅರ್ಹ ಫಲಾನುಭವಿಗಳಿಗೆ ಉಳಿಕೆ ಮೂರು ತಿಂಗಳ ಪಡಿತರವನ್ನು ನೀಡಬೇಕು. ಈ ಪೈಕಿ ಎರಡು ತಿಂಗಳ ಬಯೋ ಮೆಟ್ರಿಕ್ ಮೂಲಕ ದಾಖಲು ಮಾಡಿದ್ದು, ಪಡಿತರ ವಿತರಣೆ ಮಾಡಿರಲಿಲ್ಲ. ಅಲ್ಲದೆ ಸೀಮೆ ಎಣ್ಣೆ ವಿತರಣೆಯಲ್ಲಿ ನಿರಂತರವಾಗಿ ವ್ಯತ್ಯಯವಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಆಹಾರ ನಿರೀಕ್ಷಕ ರಮೇಶ್ ಮಾತನಾಡಿ, ‘ಮೂರು ತಿಂಗಳಿಂದ ಪಡಿತರ ವಿತರಣೆಯಲ್ಲಿ ವಿಳಂಬವಾಗಿರುವ ಕುರಿತು ದೂರುಗಳು ಬಂದಿದ್ದವು. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗೂ ಪತ್ರ ಮುಖೇನ ರಾಮಮೂರ್ತಿ ವಿರುದ್ಧ ದೂರು ನೀಡಲಾಗಿತ್ತು. ಪರಿಣಾಮ ಎಚ್ಚೆತ್ತುಕೊಂಡ ರಾಮಮೂರ್ತಿ ಎಲ್ಲ ಹಳ್ಳಿಗಳಿಗೂ ಪಡಿತರ ವಿತರಣೆ ಮಾಡಿದ್ದರು. ಆದರೆ ಸುಣ್ಣಘಟ್ಟಹಳ್ಳಿ ಮತ್ತು ಟಿ.ಹೊಸಹಳ್ಳಿ ಗ್ರಾಮಗಳಿಗೆ ಪಡಿತರ ವಿತರಣೆ ವಿಳಂಬ ಮಾಡಿದ್ದರು. ಈ ನಿಟ್ಟಿನಲ್ಲಿ ತಹಶೀಲ್ದಾರ್ ಅಮಾನತು ಆದೇಶ ಹೊರಡಿಸಿದ್ದಾರೆ‌’ ಎಂದರು.

ಜೆಡಿಎಸ್ ಮುಖಂಡ ಮಂಜುನಾಥ್, ಸುಣ್ಣಘಟ್ಟಹಳ್ಳಿ ಗ್ರಾಮ ಮುಖಂಡರಾದ ನರಸಿಂಹಮೂರ್ತಿ, ಎಸ್.ಕೆ. ಮುನಿಶಾಮಪ್ಪ, ರಾಮಾಂಜಿನಪ್ಪ, ರಾಮಯ್ಯ, ಮುನಿಯಲ್ಲಪ್ಪ, ಗ್ರಾಮದ ನೂರಾರು ಜನರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !