ಮಂಗಳವಾರ, ಸೆಪ್ಟೆಂಬರ್ 28, 2021
26 °C
ತಾಳಿಕೋಟೆ, ಇಂಡಿ, ಬಸವನಬಾಗೇವಾಡಿ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ

ಅಭ್ಯರ್ಥಿಗಳ ಆಯ್ಕೆಗಾಗಿ ಸರಣಿ ಸಭೆ; ಟಿಕೆಟ್‌ ಲಾಬಿ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ವಿಜಯಪುರ: ಬಸವನಬಾಗೇವಾಡಿ, ಇಂಡಿ, ತಾಳಿಕೋಟೆ ಪುರಸಭೆಗೆ ಚುನಾವಣಾ ಅಧಿಸೂಚನೆ ಮೇ 9ರ ಗುರುವಾರ ಪ್ರಕಟಗೊಳ್ಳಲಿದ್ದು, ನಾಮಪತ್ರ ಸಲ್ಲಿಕೆಯೂ ಆರಂಭಗೊಳ್ಳಲಿದೆ.

ಮೇ 16ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಈಗಾಗಲೇ ಈ ಮೂರು ಪುರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸರಣಿ ಸಭೆ ನಡೆಸಿವೆ. ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿಯಿಂದ ಅರ್ಜಿ ಸಲ್ಲಿಸಿದ್ದು, ತಮ್ಮ ನಾಯಕರು, ಪ್ರಭಾವಿಗಳ ಮೂಲಕ ಬಿ ಫಾರ್ಮ್‌ ಗಿಟ್ಟಿಸಿಕೊಳ್ಳಲು ಲಾಬಿ ಬಿರುಸುಗೊಳಿಸಿದ್ದಾರೆ.

ಇಂಡಿ, ಬಸವನಬಾಗೇವಾಡಿ ಪುರಸಭೆ ಪಕ್ಷಗಳಿಗೆ ಒಲಿದಿದ್ದು, ಮೂರು ಪಕ್ಷಗಳು ಆಯಾ ಪಟ್ಟಣದ ಪ್ರಮುಖ ಆಡಳಿತ ಕೇಂದ್ರವಾದ ಪುರಸಭೆಯ ಚುಕ್ಕಾಣಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತು ನಡೆಸಿವೆ.

ಬಸವನಬಾಗೇವಾಡಿ

ಲೋಕಸಭಾ ಚುನಾವಣೆಗೂ ಮುನ್ನವೇ ಪುರಸಭೆ ಚುನಾವಣೆಯ ಕಸರತ್ತು ನಡೆದಿತ್ತು. ಸೂಕ್ಷ್ಮವಾಗಿ ಮೀಸಲಾತಿ ತಿಳಿದಿದ್ದ ಹಲ ಆಕಾಂಕ್ಷಿಗಳು, ಮತದಾರರ ಪಟ್ಟಿ ಹಿಡಿದುಕೊಂಡು ಯಾವ ವಾರ್ಡ್‌ನಲ್ಲಿ ಸ್ಪರ್ಧಿಸಿದರೆ ನಮಗೆ ಅನುಕೂಲವಾಗಲಿದೆ ಎಂಬುದರ ಲೆಕ್ಕಾಚಾರವನ್ನು ನಡೆಸಿದ್ದು ವಿಶೇಷವಾಗಿತ್ತು.

ಯಾವ ವಾರ್ಡ್‌ನಲ್ಲಿ ಯಾರ ಪ್ರಭಾವ ಹೆಚ್ಚಿದೆ. ಯಾರನ್ನು ಸಂಪರ್ಕಿಸಿದರೆ, ಯಾರ ಜತೆ ಒಡನಾಟವಿಟ್ಟುಕೊಂಡರೆ ತಮ್ಮ ಗೆಲುವು ಸುಲಭವಾಗಲಿದೆ ಎಂಬ ಪ್ರಾಥಮಿಕ ಸುತ್ತಿನ ‘ಮತ ಗಣಿತ’ ಮುಗಿಸಿದ್ದು, ಇದೀಗ ಟಿಕೆಟ್‌ಗಾಗಿ ಲಾಬಿ ಬಿರುಸುಗೊಳಿಸಿದ್ದಾರೆ. ವಾರ್ಡ್‌ನ ಹಿರಿಯರ ಆಶೀರ್ವಾದ ಗಿಟ್ಟಿಸುವ ಯತ್ನವನ್ನು ನಡೆಸಿದ್ದಾರೆ.

ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆಗಾಗಿ ಸಭೆ ನಡೆಸಿವೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಎರಡೂ ಪಕ್ಷಗಳಿಗೆ ತಲೆನೋವಿನ ಸಂಗತಿಯಾಗಿದೆ. ಬಿಜೆಪಿಗೆ ಬಣ ರಾಜಕಾರಣವೂ ಕಾಡಬಹುದು. ಜಿಲ್ಲಾ ಘಟಕ ಯಾವ ರೀತಿ ಸಂಭಾಳಿಸಲಿದೆ ಎಂಬುದರ ಮೇಲೆ ಚುನಾವಣಾ ಚಿತ್ರಣ ರಂಗೇರಲಿದೆ.

ಕಾಂಗ್ರೆಸ್‌ನಲ್ಲಿ ಇದೂವರೆಗೂ ಅಧಿಕೃತ ಸಭೆ ನಡೆದಿಲ್ಲ. ಆರೋಗ್ಯ ಸಚಿವ ಶಿವಾನಂದ ಪಾಟೀಲ ನಿರ್ಣಯವೇ ಅಂತಿಮ. ಸಚಿವ ಸಂಪುಟ ಸಭೆ, ಉಪ ಚುನಾವಣೆ ಪ್ರಚಾರದಲ್ಲಿ ತಲ್ಲೀನರಾಗಿರುವ ಸಚಿವ ಶಿವಾನಂದ ಮೇ 12ರಂದು ಸಭೆ ನಡೆಸಲಿದ್ದು, ಅಲ್ಲಿಯೇ ಅಭ್ಯರ್ಥಿಗಳನ್ನು ಅಖೈರುಗೊಳಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಶಿವಾನಂದ ಒಲವು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್‌ ಆಕಾಂಕ್ಷಿತರಲ್ಲಿ ಪೈಪೋಟಿ ಹೆಚ್ಚಿದೆ.

ಇಂಡಿ

ಆಡಳಿತಾರೂಢ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರು ಪಕ್ಷಗಳು ಇಂಡಿ ಪುರಸಭೆ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರಗಾರಿಕೆ ರೂಪಿಸುವಲ್ಲಿ ತಲ್ಲೀನವಾಗಿವೆ. ಬಹುಮತದ ಆಡಳಿತಕ್ಕಾಗಿ ಕಸರತ್ತು ನಡೆಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಸ್ವತಃ ಇಂಡಿಯಲ್ಲಿ ಜೆಡಿಎಸ್‌ ಸಭೆ ನಡೆಸಿದ್ದು, ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಮತದಾರರು ಬೈದರೂ; ಬೈಸಿಕೊಂಡು ಮತ ಗಳಿಸಿ ಗೆಲುವು ಸಾಧಿಸಬೇಕು ಎಂದು ಸ್ಥಳೀಯ ಮುಖಂಡರಿಗೆ ಸೂಚಿಸಿರುವುದು ಜೆಡಿಎಸ್‌ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಶಾಸಕ ಯಶವಂತರಾಯಗೌಡ ಪಾಟೀಲ ಬುಧವಾರ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದಾರೆ. ಅಪೇಕ್ಷಿತರಿಂದ ಮನವಿ ಆಲಿಸಿದ್ದಾರೆ. ಶತಾಯ ಗತಾಯ ಬಹುಮತ ಪಡೆಯಲಿಕ್ಕಾಗಿ ತಮ್ಮದೇ ತಂತ್ರಗಾರಿಕೆ ರೂಪಿಸಿದ್ದು, ನಾಮಪತ್ರ ಸಲ್ಲಿಕೆಗೂ ಅಂತಿಮ ದಿನಕ್ಕೂ ಮುನ್ನ ಬಿ ಫಾರ್ಮ್‌ಗಳನ್ನು ಅಭ್ಯರ್ಥಿಗಳಿಗೆ ನೀಡಲಿದ್ದಾರೆ ಎಂಬುದು ತಿಳಿದು ಬಂದಿದೆ.

ಬಿಜೆಪಿ ಉತ್ಸಾಹದಲ್ಲಿದೆ. ಈ ಬಾರಿ ಒಳ್ಳೆ ಅವಕಾಶ ಸಿಗಲಿದೆ ಎಂಬ ವಿಶ್ವಾಸ ಹೊಂದಿದೆ. ಈಗಾಗಲೇ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಅಪೇಕ್ಷಿತರಿಂದ ಅರ್ಜಿ ಆಹ್ವಾನಿಸಿದೆ. ವಾರ್ಡ್‌ವಾರು ಅಭಿಪ್ರಾಯ ಸಂಗ್ರಹಣೆಗೂ ಮುಂದಾಗಿದೆ.

ಪಕ್ಷೇತರರ ಪ್ರಾಬಲ್ಯಕ್ಕೆ ಪೆಟ್ಟು..?

ತಾಳಿಕೋಟೆ ಪುರಸಭೆ ಪಕ್ಷಗಳಿಗೆ ಒಲಿದಿದ್ದಕ್ಕಿಂತ ಪಕ್ಷೇತರರಿಗೆ ಒಲಿದಿರುವುದೇ ಹೆಚ್ಚು. ಈ ಹಿಂದಿನ ಹಲ ಚುನಾವಣೆಗಳಲ್ಲಿ ಬಹುತೇಕ ವಾರ್ಡ್‌ಗಳಿಂದ ಪಕ್ಷೇತರರೇ ವಿಜಯಭೇರಿ ಬಾರಿಸಿ, ಕಾಂಗ್ರೆಸ್‌ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಇತಿಹಾಸ.

ಶತಾಯ–ಗತಾಯ ಈ ಬಾರಿ ಪಕ್ಷೇತರರಿಗೆ ಅವಕಾಶ ಕೊಡದೆ, ಪಕ್ಷದ ಆಡಳಿತವನ್ನು ಪ್ರತಿಷ್ಠಾಪಿಸಬೇಕು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಕಾಂಗ್ರೆಸ್‌ನ ಮಾಜಿ ಸಚಿವ ಸಿ.ಎಸ್.ನಾಡಗೌಡ ಪಣತೊಟ್ಟಿದ್ದು, ಸ್ಥಳೀಯ ಜೆಡಿಎಸ್ ಮುಖಂಡರು ಸಹ, ತಮ್ಮ ಅಸ್ತಿತ್ವ ಪ್ರದರ್ಶನಕ್ಕಾಗಿ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಪಕ್ಷದ ಅಭ್ಯರ್ಥಿಗಳಿಗೆ ಪ್ರಬಲವಾಗಿ ಸೆಡ್ಡು ಹೊಡೆಯಲು ಪಕ್ಷೇತರರಾಗಿ ಅಖಾಡಕ್ಕಿಳಿಯಲು ಮಾಜಿ ಸದಸ್ಯರು ಸೇರಿದಂತೆ ಹೊಸಬರು ಹಲ ಕಸರತ್ತು ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಮನೆ ಮನೆಗೆ ಎಡತಾಕಿ, ನಾನು ಪಕ್ಷೇತರನಾಗಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವೆ. ನಿಮ್ಮಗಳ ಆಶೀರ್ವಾದವಿರಲಿ ಎಂದು ನಾಮಪತ್ರ ಸಲ್ಲಿಕೆಗೂ ಮುನ್ನವೇ ಒಂದೆರೆಡು ಸುತ್ತಿನ ಪ್ರಚಾರದ ಮೂಲಕ ಮತದಾರರ ಆಶೀರ್ವಾದ ಗಿಟ್ಟಿಸುವ ಯತ್ನ ತಾಳಿಕೋಟೆ ಪುರಸಭೆಯ 23 ವಾರ್ಡ್‌ಗಳಲ್ಲೂ ನಡೆದಿದೆ.

ಮಾಜಿ ಸಚಿವ ಸಿ.ಎಸ್.ನಾಡಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ ಸಭೆ ನಡೆದಿದ್ದು, ಅಪೇಕ್ಷಿತರಿಂದ ಅರ್ಜಿ ಪಡೆಯಲಾಗಿದೆ. ಆಯಾ ವಾರ್ಡ್‌ನ ಪಂಚರ ಸಮಿತಿ ಅಭಿಪ್ರಾಯದೊಂದಿಗೆ ಟಿಕೆಟ್‌ ಹಂಚಬೇಕು ಎಂಬುದು ಕಾಂಗ್ರೆಸ್‌ನ ನಿಲುವಾಗಿದೆ.

ಜೆಡಿಎಸ್‌ ಸಹ ಜಿಲ್ಲಾ ವೀಕ್ಷಕರ ಮೂಲಕ ಸಭೆ ನಡೆಸಿದೆ. 23 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದೆ. ಪಕ್ಷೇತರರ ಪ್ರಾಬಲ್ಯಕ್ಕೆ ಪೆಟ್ಟುಕೊಡಲು ಸ್ಥಳೀಯವಾಗಿಯೇ ದೋಸ್ತಿಗೂ ಸಿದ್ಧವಿದೆ.

ಬೆಂಬಲಿತರ ಆಡಳಿತಕ್ಕೆ ಬ್ರೇಕ್‌ ಹಾಕಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. ಈಗಾಗಲೇ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಲವು ರಹಸ್ಯ ಸಭೆ ನಡೆಸಿದ್ದಾರೆ. ಜಿಲ್ಲಾ ಘಟಕವೂ ಮಂಡಲ ಅಧ್ಯಕ್ಷರ ಮೂಲಕ ಸ್ಥಳೀಯವಾಗಿ ಸಭೆ ನಡೆಸಿದ್ದು, ಆಕಾಂಕ್ಷಿಗಳಿಂದ ಅರ್ಜಿ ಪಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.