ಶುಕ್ರವಾರ, ನವೆಂಬರ್ 15, 2019
20 °C
ವಕೀಲರ ಭವನದ ಮೊದಲ ಮಹಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ವಕೀಲರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಕಿವಿಮಾತು

ಗುಂಪುಗಾರಿಕೆ ಬದಿಗಿಟ್ಟು ಒಗ್ಗೂಡಿ ಮುನ್ನಡೆಯಿರಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಎಲ್ಲ ವೃತ್ತಿಗಳಿಗಿಂತ ವಕೀಲಿ ವೃತ್ತಿಗೆ ಹೆಚ್ಚಿನ ಗೌರವವಿದೆ. ಆದ್ದರಿಂದ ವಕೀಲರು ಗುಂಪುಗಾರಿಕೆ ಬದಿಗಿಟ್ಟು ಯಾವುದೇ ಸಮಸ್ಯೆ ಇದ್ದರೆ ಅವುಗಳನ್ನು ಮುಕ್ತವಾಗಿ ಬಗೆಹರಿಸಿಕೊಳ್ಳುವ ಮೂಲಕ ಒಗ್ಗಟ್ಟಿನಿಂದ ಮುಂದೆ ಸಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಶನಿವಾರ ವಕೀಲರ ಭವನದ ಮೊದಲ ಮಹಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿನ ನ್ಯೂನತೆಗಳನ್ನು ತಿದ್ದಿ ಸರಿಯಾದ ದಾರಿಯಲ್ಲಿ ತರುವಲ್ಲಿ ವಕೀಲರ ಪಾತ್ರ ಹೆಚ್ಚಿದೆ. ಆದ್ದರಿಂದ ವಕೀಲರು ತಮ್ಮ ವೃತ್ತಿ ಘನತೆ ಎತ್ತಿ ಹಿಡಿಯುವಂತೆ ನಡೆದುಕೊಳ್ಳಬೇಕು. ಜಿಲ್ಲಾ ನ್ಯಾಯಾಲಯದಲ್ಲಿ ಕೆಳ ನ್ಯಾಯಾಲಯಗಳಿಗಿಂತಲೂ ಹೆಚ್ಚಿನ ಸೌಕರ್ಯಗಳಿವೆ ಅವುಗಳನ್ನು ಮತ್ತು ಗ್ರಂಥಾಲಯವನ್ನು ವಕೀಲರು ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿನ ಶಾಸಕಾಂಗ, ಕಾರ್ಯಾಂಗ, ಪತ್ರಿಕಾರಂಗವನ್ನು ಪರಾಮರ್ಶಿಸಿ ಸರಿಯಾದ ತೀರ್ಪು ನೀಡುವ ಪವಿತ್ರ ವೃತ್ತಿ ನ್ಯಾಯಾಂಗದ್ದು. ಸಮಾಜದಲ್ಲಿ ಸಮಾನತೆ ತರುವುದು, ಸಂವಿಧಾನದ ಆಶಯಗಳನ್ನು ಈಡೇರಿಸುವುದು ವಕೀಲರ ಕರ್ತವ್ಯವಾಗಿದೆ. ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು’ ಎಂದು ಹೇಳಿದರು.

‘ಇಂದು ಕಕ್ಷಿದಾರನ ಗೆಲುವಿಗಾಗಿ ವಕೀಲರು ಸತ್ಯ, ಪ್ರಾಮಾಣಿಕತೆ ಬದಿಗಿಟ್ಟು ಚಮತ್ಕಾರ, ಕೌಶಲದಿಂದ ಪ್ರಕರಣದಲ್ಲಿ ಗೆಲುವು ಸಾಧಿಸುವುದೇ ಗುರಿಯಾಗಿರಿಸಿಕೊಂಡಿರುವುದು ಕಾಣುತ್ತಿದೆ. ಸೋತರೇ ಸಮಾಜದಲ್ಲಿ ಗೌರವ ಸಿಗಲ್ಲ, ಗೆದ್ದರೆ ಇನ್ನಷ್ಟು ಅವಕಾಶ ಹುಡುಕಿಕೊಂಡು ಬರುತ್ತವೆ ಎಂಬ ಮನೋಭಾವ ಹೆಚ್ಚುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಕೆಲವೇ ವಾರಗಳಲ್ಲಿ ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡದ ಉದ್ಘಾಟನೆಯಾಗಲಿದೆ. ನ್ಯಾಯಾಲಯದಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇರಲಿದೆ. ಕೋರ್ಟ್ ಮುಂಭಾಗದ ರಸ್ತೆ ನಗರದ ಎಲ್ಲ ರಸ್ತೆಗಳಿಗೆ ಕಳಸಪ್ರಾಯದಂತೆ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ತಿಳಿಸಿದರು.

ಭಾರತ ವಕೀಲರ ಪರಿಷತ್ ಸದಸ್ಯ ವೈ.ಆರ್.ಸದಾಶಿವರೆಡ್ಡಿ ಮಾತನಾಡಿ, ‘ವಕೀಲರಿಗೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಿ ರಾಜಕೀಯ, ಗುಂಪುಗಾರಿಕೆಯ ಬದಲಿಗೆ ಐಕ್ಯತೆ, ಒಗ್ಗಟ್ಟು ಪ್ರದರ್ಶಿಸಬೇಕು. ವಕೀಲರಲ್ಲಿ ಸಮಸ್ಯೆಗಳಿದ್ದರೆ ಅದನ್ನು ಮುಕ್ತವಾಗಿ ತೆರೆದಿಟ್ಟು ಪರಿಹರಿಸಿಕೊಳ್ಳಬೇಕು. ಸಂಘದ ಮೇಲೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ದೇವರಾಜ್, ನಟರಾಜ್, ಭಾನುಮತಿ, ರೂಪಾ, ಹರಟಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಣ್ಣ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ವಕೀಲ ಸಂಘದ ಗೌರವಾಧ್ಯಕ್ಷ ಜಿ.ಆರ್.ಹರಿಕುಮಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)