ಶೇಮ್‌ ಶೇಮ್‌ ‘ಬಾಡಿ ಶೇಮಿಂಗ್’

7

ಶೇಮ್‌ ಶೇಮ್‌ ‘ಬಾಡಿ ಶೇಮಿಂಗ್’

Published:
Updated:
Deccan Herald

ಬಹಳ ದಿನಗಳ ನಂತರ ನೀವು ಯಾರನ್ನಾದರೂ ಭೇಟಿಯಾದರೆ, ಮೊದಲು ಬರುವ ಮಾತೆಂದರೆ, ‘ಓ... ನೀವು ಬಹಳ ದಪ್ಪಗಾಗಿದ್ದೀರಿ!’ ಅಥವಾ ‘ನೀವು ತುಂಬಾ ಸಣ್ಣಗಾಗಿದ್ದೀರಿ!’ ಎಂದು. ಜನರ ಕಣ್ಣು ಸಾಮಾನ್ಯವಾಗಿ ದೇಹದ ಗಾತ್ರದತ್ತಲೇ ಹೋಗುತ್ತದೆ. ‘ದಪ್ಪಗಾಗಿದ್ದೀರಿ’ ಎನ್ನುವ ಪದ ಕಿವಿಯ ಮೇಲೆ ಬಿದ್ದ ತಕ್ಷಣವೇ ಮನದ ತುಂಬಾ ಚಿಂತೆಯ ಬೀಜಗಳು ಮೊಳಕೆಯೊಡೆದು ಚಿಗುರಲಾರಂಭಿಸುತ್ತವೆ. ಒಳಗೊಳಗೇ ಅದು ನಿಮ್ಮನ್ನು ಬಾಧಿಸಲು ಪ್ರಾರಂಭಿಸುತ್ತದೆ. ಬೇರೇನನ್ನೂ ಯೋಚಿಸದೆ ತಕ್ಷಣ ನಿಮ್ಮ ಆಹಾರದಲ್ಲಿ ‘ಡಯೆಟ್’ ಮಾಡಲು ಪ್ರಾರಂಭಿಸುತ್ತೀರಿ. ಜಿಮ್‌ಗೆ ಅಡಿಯಿಟ್ಟು ಕಂಡು ಕೇಳರಿಯದ ಯಂತ್ರಗಳ ಮೇಲೆಲ್ಲಾ ಹತ್ತಿ, ಇಳಿದು, ವ್ಯಾಯಾಮವನ್ನು ಶುರು ಮಾಡುತ್ತೀರಿ. ಇಷ್ಟೇ ಅಲ್ಲ, ದಿನದ ಬಹುಪಾಲು ಸಮಯವನ್ನು ವಿಮರ್ಶಾತ್ಮಕ ಯೋಚನೆಯಲ್ಲೇ ಕಳೆಯುತ್ತೀರಿ. ಇದು ಬರೀ ದಪ್ಪಗಿರುವವರ ಸಮಸ್ಯೆಯಷ್ಟೆ ಅಲ್ಲ. ನಿಮ್ಮ ದೇಹ ಹೇಗೇ ಇದ್ದರೂ ಈ ತೆರನಾದ ಟೀಕೆಗಳು ತಪ್ಪಿದ್ದಲ್ಲ. ಇದನ್ನೇ ಆಂಗ್ಲಭಾಷೆಯಲ್ಲಿ ‘ಬಾಡಿ ಶೇಮಿಂಗ್‘ ಎನ್ನುವುದು.

ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ತಮ್ಮ ದೇಹದ ಬಗ್ಗೆ ಟೀಕೆಗೆ ಒಳಪಟ್ಟೇ ಇರುತ್ತಾರೆ. ದಪ್ಪಗಿದ್ದರೆ ಕೆಟ್ಟದ್ದು, ಕಪ್ಪಗಿದ್ದರೆ ಕುರೂಪ, ತೆಳ್ಳಗಿದ್ದರೆ ಕಾಯಿಲೆಯವರು. ಹೀಗೆ ಜನರು ಹೇಗಿದ್ದರೂ ನಿರಂತರವಾಗಿ ಪೀಡಿಸುತ್ತಲೇ ಇರುವ ಸಮಾಜ ನಮ್ಮದು. ದಪ್ಪಗಿರುವವರಿಗೆ ಹೇಗಾದರೂ ಸರಿ ಸಣ್ಣಗಾಗುವ ಆಸೆ. ಕುಳ್ಳಗಿರುವವರಿಗೆ ಎತ್ತರವಾಗುವ ಆಸೆ. ಗುಂಗುರು ಕೂದಲಿರುವವರಿಗೆ ನೇರವಾದ ಕೂದಲನ್ನು ಹೊಂದುವ ಬಯಕೆ. ಇನ್ನು ಕೂದಲು ಕಡಿಮೆ ಇರುವವರಿಗೆ, ಕಂಡ ಕಂಡವರು ಹೇಳಿದ ಔಷಧಗಳನ್ನು ಬಳಸಿಯಾದರೂ ಕೂದಲನ್ನು ಪಡೆಯುವ ಹುಚ್ಚು!

ಹೀಗೆ ಪ್ರತಿದಿನವೂ ಪ್ರತಿಯೊಬ್ಬರಿಗೂ ತಮ್ಮ ತಮ್ಮ ದೇಹದ ನ್ಯೂನತೆಗಳೇ ಕಾಣುತ್ತಿರುತ್ತವೆ. ಮೊದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ದೇಹ ಹೇಗೇ ಇದ್ದರೂ, ಅದರೊಳಗಿರುವ ಮನಸ್ಸು ಸುಂದರವಾಗಿದ್ದರೆ ಸರಿ! ಆಗ ದೇಹಕ್ಕೆ ತಾನಾಗೇ ಅಂದ ಬರುತ್ತದೆ. ಇತ್ತೀಚೆಗೆ ಈ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಿದಷ್ಟೂ ಜನರು ‘ಬಾಡಿ ಶೇಮಿಂಗ್‌‘ಗೆ ಬಲಿಪಶುಗಳಾಗುತ್ತಿದ್ದಾರೆ. ಬೇರೆಯವರು ನಮ್ಮನ್ನು ಟೀಕಿಸಲೀ ಬಿಡಲೀ ನಮಗೆ ನಾವೇ ಮತ್ತೊಬ್ಬರಿಗೆ ನಮ್ಮನ್ನು ಹೋಲಿಸಿಕೊಂಡು, ನಮ್ಮ ದೇಹದ ಬಗ್ಗೆ ನಾವೇ ನಾಚಿಕೆಪಟ್ಟುಕೊಳ್ಳುತ್ತೇವೆ. ನಮಗೇ ನಮಗಿರುವ ದೇಹದ ಬಗೆಗೆ ಪ್ರೀತಿ ಇಲ್ಲದ ಮೇಲೆ, ಬೇರೆಯವರಿಂದ ಅದನ್ನು ನಿರೀಕ್ಷಿಸುವುದು ಸರಿಯೇ?

‘ಬಾಡೀ ಶೇಮಿಂಗ್’ ಎನ್ನುವುದು ಇತ್ತೀಚಿನ ತಲೆಮಾರುಗಳಲ್ಲಿ ಬಹಳ ದೊಡ್ಡ ತೊಂದರೆಗಳಲ್ಲಿ ಒಂದಾಗಿದೆ. ನಮ್ಮ ಸಮಾಜದಲ್ಲಿ ಬರೀ ಹೆಂಗಸರ ದೇಹವನ್ನು ಮಾತ್ರ ಟೀಕಿಸಿ, ತಮಾಷೆ ಮಾಡುವುದಿಲ್ಲ. ಗಂಡಸರ ದೇಹವನ್ನೂ ಹಿಯಾಳಿಸಿ ಖುಷಿಪಡುವ ಜನರು ನಮ್ಮ ಹಾಗೂ ನಿಮ್ಮೆಲ್ಲರ ಮಧ್ಯದಲ್ಲಿಯೇ ಇದ್ದಾರೆ! ಈ ಬಾಡಿ ಶೇಮಿಂಗ್ ಎನ್ನುವುದು ಎಲ್ಲ ಲಿಂಗಗಳಿಗೂ ಅನ್ವಯವಾಗುತ್ತದೆ. ಆದರೂ ಇದು ಹೆಚ್ಚಾಗಿ ಬಾಧಿಸುವುದು ಮಹಿಳೆಯರನ್ನು! ಕೆಲವರು ತಮ್ಮ ದೇಹದ ಬಗೆಗೆ ತಮಗಿರುವ ಕೀಳರಿಮೆಯನ್ನು ಮರೆಯಲು, ಮತ್ತೊಬ್ಬರ ದೇಹದತ್ತ ಬೆರಳು ತೋರಿಸಿ ಹಿಯಾಳಿಸುತ್ತಾರೆ. ಇತ್ತೀಚೆಗಂತೂ 8-10 ವರ್ಷದ ಹುಡುಗಿಯರೂ ತಮ್ಮ ದೇಹದ ಬಗ್ಗೆ ತೋರುವ ಕಾಳಜಿಯನ್ನು ನೋಡಿದರೆ ಭಯವಾಗುತ್ತದೆ! ಚಿಕ್ಕ ಮಕ್ಕಳಿಗೆ ಪೋಷಕರು ಈ ಬಗ್ಗೆ ತಿಳಿವಳಿಕೆ ನೀಡಬೇಕು. ಹಾಗಾದರೆ ಉತ್ತಮವಾದ ಪರ್ಫೆಕ್ಟ್ ಬಾಡಿ ಎಂದರೆ ಯಾವುದು? ಜಾಹೀರಾತಿನಲ್ಲಿ ತೋರಿಸುವ ತೆಳ್ಳಗಿನ ದೇಹದ ಯುವತಿಯರದೇ? ಖಂಡಿತ ಅಲ್ಲ. ಪರಿಪೂರ್ಣವಾದ, ಕುಂದಿಲ್ಲದ, ಚೆನ್ನಾಗಿರುವ ದೇಹವನ್ನು ಹೊಂದುವುದೇ ಎಲ್ಲರ ಅಭಿಲಾಷೆ. ಚೆನ್ನಾಗಿರುವ ಪರ್ಫೆಕ್ಟ್‌ ದೇಹ ಎಂಬುದರ ಬಗ್ಗೆ ನಮ್ಮ ಸಮಾಜಕ್ಕಿರುವ ತಪ್ಪು ತಿಳಿವಳಿಕೆಯೆಂದರೆ, ದೇಹವನ್ನು ದಂಡಿಸಿ ಸಣ್ಣಗಾಗಿಸುವುದು. ದೇಹದ ಗಾತ್ರ, ಬಣ್ಣ, ರೂಪ ಹೇಗೆ ಇರಲಿ. ಮುಖ್ಯವಾಗಿ ಯಾವುದೇ ದೇಹಕ್ಕಿಂತ ಅದರಲ್ಲಿರುವ ಮನಸ್ಸು ನಿಷ್ಕಲ್ಮಶವಾಗಿ, ಶುದ್ಧವಾಗಿ, ಶ್ರೇಷ್ಠವಾಗಿದ್ದರೆ ಸಾಕು. ಇಂತಹ ಮನಸ್ಸನ್ನು ಹೊಂದಿದ ಯಾವುದೇ ದೇಹವು ಸುಂದರವಾಗೇ ಕಾಣುತ್ತದೆ! ಸೌಂದರ್ಯ ಯಾವಾಗಲೂ ನೋಡುಗರ ಮೇಲೆ ಅವಲಂಬಿತವಾಗಿರುತ್ತದೆ. ಬಾಡಿ ಶೇಮಿಂಗ್ ಮೂಲಕ ನೀವು ಯಾರ ಬಗ್ಗೆಯಾದರೂ ಹೀಗೇ ಎಂಬ ತೀರ್ಮಾನಕ್ಕೆ ಬಂದರೆ, ಅದು ನಿಮ್ಮ ಮನಃಸ್ಥಿತಿಯನ್ನು ತೋರಿಸುತ್ತದೆಯೇ ಹೊರತು ಟೀಕೆಗೆ ಒಳಗಾದವರ ದೇಹದ ಬಗ್ಗೆ ಅಲ್ಲ!

ಸೌಂದರ್ಯದ ಬಗ್ಗೆ ಹೆಚ್ಚಾಗಿ ಆದರ್ಶ ಕಲ್ಪನೆಯುಳ್ಳವರೆಂದರೆ, ನಟಿಯರು ಹಾಗೂ ರೂಪದರ್ಶಿಗಳು. ಅವರ ಜೀವನದ ಪ್ರತಿಯೊಂದು ವಿಷಯವೂ ಸಾರ್ವಜನಿಕರಲ್ಲಿ ಚರ್ಚೆಯ ವಸ್ತುವಾಗಿರುತ್ತದೆ. ಇದರಿಂದ ನಟಿಯರು ಹಾಗೂ ರೂಪದರ್ಶಿಗಳು, ಅತಿಯಾದ ‘ಸೌಂದರ್ಯ ಪ್ರಜ್ಞೆ’ಯಿಂದ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಇಷ್ಟೇ ಅಲ್ಲದೆ, ದಿನಕ್ಕೆ ಹಲವು ಗಂಟೆಗಳ ವ್ಯಾಯಾಮ, ಊಟ-ತಿಂಡಿಯಲ್ಲಿ ಡಯೆಟಿಂಗ್, ಇವುಗಳು ಜನರ ಮನದಲ್ಲಿ ಅನಾರೋಗ್ಯಕರವಾದ ಹಾಗೂ ನೈಜವಲ್ಲದ ವೈತಿರಕ್ತ ಪರಿಣಾಮವನ್ನು ಬೀರುತ್ತಿವೆ. ಸಿನಿಮಾ ನಟಿಯರು ಏನು ಮಾಡುತ್ತಾರೋ ಅದನ್ನು ಹದಿಹರೆಯದ ಯುವತಿಯರು ನಕಲು ಮಾಡಿ, ಅವರಂತೇ ತಾವಾಗ ಬಯಸುವುದು ಹೆಚ್ಚಾಗಿದೆ. ಹಿಂದಿ ಸಿನಿಮಾ ನಟಿಯೊಬ್ಬಳ ‘ಝೀರೋ ಸೈಜ್‌’ನ ಹುಚ್ಚು ಎಲ್ಲೆಡೆ ಭಯಾನಕವಾಗಿ ಹರಡಿದೆ. ಬಹಳಷ್ಟು ಹುಡುಗಿಯರೆಲ್ಲರೂ ಈ ‘ಝೀರೋ ಸೈಜ್’ ಆಗಲು ಹೋಗಿ ಊಟ-ತಿಂಡಿ ಬಿಟ್ಟು ‘ಅನೊರೆಕ್ಸಿಯಾ’ ಎಂಬ ವ್ಯಾಧಿಗೆ ತುತ್ತಾಗುತ್ತಿದ್ದಾರೆ. ‘ಅನೊರೆಕ್ಸಿಯಾ ನರ್ವೋಸಾ‘ ಎನ್ನುವುದು ಒಂದು ರೀತಿಯ ಸೈಕಲಾಜಿಕಲ್ ವ್ಯಾಧಿ. ಸಣ್ಣಗಾಗಲು ತಿನ್ನುವುದನ್ನು ಬಿಟ್ಟು ಹಸಿವನ್ನು ಇಂಗಿಸುವ ಕಾಯಿಲೆ. ಇದರಿಂದ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆಗಳಿರುತ್ತವೆ. ಈ ಝೀರೋ ಸೈಜ್‌ಗಿಂತ ಭಯಂಕರವಾದುದು ಇತ್ತೀಚೆಗೆ ಬಂದಿರುವ ‘ಎ ಫೋರ್’ ಸೈಜ್ ಪೇಪರ್‌ನ ಚಾಲೆಂಜ್. ಇದರ ಪ್ರಕಾರ ಹುಡುಗಿಯರು ‘ಎ4’ ಸೈಜ್ ಪೇಪರ್‌ನ ಅಗಲದಷ್ಟು ಸೊಂಟದ ಸುತ್ತಳತೆಯನ್ನು ಹೊಂದಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. 

ಬಹಳಷ್ಟು ಸಿನಿಮಾ ನಟಿಯರೂ ಈ ಬಾಡಿ ಶೇಮಿಂಗ್‌ನ ವಿರುದ್ಧ ದನಿಯೆತ್ತಿದ್ದಾರೆ. ಹೆಚ್ಚಾಗಿ ಈ ಬಾಡಿ ಶೇಮಿಂಗ್‌ಗೆ ಒಳಗಾಗುವುದು ಈ ನಟಿಯರೇ! ಆದರೆ ಜನರು ಅದಕ್ಕೂ ಅವರನ್ನು ಟೀಕಿಸುವುದನ್ನು ಬಿಟ್ಟಿಲ್ಲ. ಅವರು ದಪ್ಪಗಿರುವುದರಿಂದಲೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರನ್ನು ಟೀಕಿಸುತ್ತಾರೆ. ಎಷ್ಟೋ ಜನರು ಆರೋಗ್ಯದ ಸಮಸ್ಯೆಯಿಂದ ದಪ್ಪ ಅಥವಾ ತೆಳ್ಳಗೆ ಇರುತ್ತಾರೆ. ಇವುಗಳಲ್ಲಿ ಮುಖ್ಯವಾದುದು ಥೈರಾಯಿಡ್‌ ಗ್ರಂಥಿಯ ಅಸಮತೋಲನ. ಹೌದು, ಈ ಥೈರಾಯಿಡ್‌ ಗ್ರಂಥಿಯು ಸಮ ಪ್ರಮಾಣದಲ್ಲಿ ಹಾರ್ಮೋನುಗಳನ್ನು ಸ್ರವಿಸದಿದ್ದರೆ, ದೇಹದ ಆಕಾರದಲ್ಲಿ ವ್ಯತ್ಯಯಗಳಾಗುತ್ತವೆ. ಬೇರೆಯವರನ್ನು ಸುಲಭವಾಗಿ ಟೀಕಿಸಬಹುದು. ಆದರೆ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಅರಿವಿಲ್ಲದೆ ಟೀಕಿಸುವುದು ಕೆಟ್ಟ ಪ್ರವೃತ್ತಿ. ಪ್ರತಿಯೊಬ್ಬರೂ ಮೊದಲು ತಮ್ಮನ್ನು ತಾವು ಇಷ್ಟಪಡುವುದನ್ನು ಕಲಿಯಬೇಕು. ನಮ್ಮ ದೇಹವನ್ನೇ ನಾವು ಇಷ್ಟಪಡದ ಮೇಲೆ ಬೇರೇನನ್ನೂ ಇಷ್ಟಪಡಲು ಸಾಧ್ಯವಿಲ್ಲ! ನಿಮಗೆ ನಿಮ್ಮ ದೇಹ ಆರಾಮಾಗಿ, ನೆಮ್ಮದಿಯಾಗಿ, ಹಿತಕರವಾಗಿ ಇದೆ ಎಂದು ಅನ್ನಿಸಿದರೆ ಸಾಕು. ದಪ್ಪ, ಸಣ್ಣ, ಎತ್ತರ, ಕುಳ್ಳ ಇವೆಲ್ಲಾ ಮುಖ್ಯವಾಗುವುದೇ ಇಲ್ಲ. ದೇಹದ ತೂಕ, ಗಾತ್ರ, ಬಣ್ಣ ಯಾವುದೇ ಇರಲಿ, ಚಟುವಟಿಕೆಯಿಂದಿರುವುದು ಪ್ರಮುಖವಾದದ್ದು. ‘ಪರ್ಫೆಕ್ಟ್‌ ಬಾಡಿ’ ಎನ್ನುವುದು ಒಂದು ಭ್ರಮೆ! 

ಬೇರೆಯವರಿಗಿಂತಲೂ ಬಹಳಷ್ಟು ಸಮಯ ನಾವೇ ನಮ್ಮ ದೇಹವನ್ನು ಜರಿಯುವುದರಲ್ಲಿ ಕಾಲ ಕಳೆಯುತ್ತೇವೆ. ಇದು ನಮ್ಮ ಮನದಲ್ಲಿ ಮೂಡುವ ಆಲೋಚನೆಗಳಿಗೆ ಸಂಬಂಧಿಸಿದ್ದು. ನಮ್ಮ ದೇಹ ಹೇಗಿದೆಯೋ ಹಾಗೆ ಪ್ರತಿಯೊಬ್ಬರೂ ಒಪ್ಪಿಕೊಂಡಲ್ಲಿ, ಅದು ಸರಿ ಇಲ್ಲ ಎಂದು ಅನ್ನಿಸುವುದೇ ಇಲ್ಲ. ನಮ್ಮ ದೇಹ ಇರುವಂತೆಯೇ ನಾವು ಇಷ್ಟಪಟ್ಟರೆ ಸಾಕು. ಬೇರೆಯವರ ಮೆಚ್ಚುಗೆಗಾಗಿ ಖಂಡಿತ ನಿರೀಕ್ಷೆ ಬೇಡ. ಜನರು ಹೇಗಿದ್ದರೂ ಟೀಕಿಸುತ್ತಾರೆ. ‘ಜನರನ್ನು ಮೆಚ್ಚಿಸಲು ಜನಾರ್ದನನಿಂದಲೂ ಸಾಧ್ಯವಿಲ್ಲ‘! ಅಂದ ಮೇಲೆ ಬೇರೆಯವರಿಗಾಗಿ ನಮ್ಮ ದೇಹವನ್ನು ದಂಡಿಸುವ ಅಗತ್ಯವಿಲ್ಲ. ನಮ್ಮ ದೇಹ ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದರಲ್ಲಿ ಜಾಣತನವಿದೆ. 

ಹೃದಯ ಸೌಂದರ್ಯವೇ ನಿಜ ಸೌಂದರ್ಯ
ಸೌಂದರ್ಯ ಎಂದರೇನು? ಆಂಗ್ಲ ಭಾಷೆಯ ನಾಣ್ನುಡಿಯೊಂದು ಹೇಳುವಂತೆ, ‘ಬ್ಯೂಟಿ ಲೈಸ್ ಇನ್ ದ ಐಸ್ ಆಫ್ ದ ಬಿಹೋಲ್ಡರ್’! ಅಂದರೆ, ಸೌಂದರ್ಯವೆನ್ನುವುದು ನೋಡುಗರ ಕಣ್ಣುಗಳಲ್ಲಿರುತ್ತವೆ. ನಮ್ಮ ಮನಸ್ಸು ಶುದ್ಧವಾಗಿದ್ದರೆ, ನಾವು ನೋಡುವ ಪ್ರತಿಯೊಂದು ವ್ಯಕ್ತಿ ಹಾಗೂ ವಸ್ತುವೂ ಸುಂದರವಾಗಿಯೇ ಕಾಣುತ್ತದೆ. ನಮ್ಮ ದೃಷ್ಟಿಕೋನ ಸರಿಯಿಲ್ಲದಿದ್ದರೆ, ಎಂತಹ ಸೌಂದರ್ಯದ ಪುತ್ಥಳಿಯನ್ನು ತಂದು ನಿಲ್ಲಿಸಿದರೂ ಅದರ ಬಗ್ಗೆ ಟೀಕೆ ಮಾಡುತ್ತೇವೆ. ವಿಭಿನ್ನತೆಯನ್ನು ಆನಂದ ಪಡುವುದು ಮುಖ್ಯ ಕಾಳಜಿಯಾಗಬೇಕು. ದೇಹಸೌಂದರ್ಯಕ್ಕಿಂತ ಹೃದಯ ಸೌಂದರ್ಯ ಇರುವವರೇ ನಿಜವಾದ ರೂಪವಂತರು. ಮನಸ್ಸನ್ನು ಸಂತೋಷವಾಗಿಟ್ಟುಕೊಂಡರೆ, ನಿಜವಾದ ಸೌಂದರ್ಯ ಮುಖದಲ್ಲಿ ಎದ್ದುಕಾಣುತ್ತದೆ. ನಮ್ಮ ದೇಹದ ಮೂಲಕ ನಮ್ಮನ್ನು ನಾವು ಗುರುತಿಸಿಕೊಳ್ಳುವುದರ ಬದಲು ದೇಹದ ಒಳಗೆ ಶುದ್ಧವಾದ, ನಿಷ್ಕಲ್ಮಶ ಮನಸ್ಸನ್ನು ಹೊಂದಿ, ಅದರ ಮೂಲಕ ನಮ್ಮನ್ನು ನಾವು ಗುರುತಿಸಿಕೊಳ್ಳುವ ಪ್ರಯತ್ನ ಮಾಡೋಣ. ಮಾನವತೆಯ ತತ್ವಗಳಲ್ಲಿ ಹಾಗೂ ಮತ್ತೊಬ್ಬರಿಗೆ ಮಾದರಿಯಾಗಿ ಹೇಗೆ ಜೀವಿಸುತ್ತೇವೆ ಎನ್ನುವುದರಲ್ಲಿ ನಿಜವಾದ ಸೌಂದರ್ಯ ಅಡಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !