ಶಶಿಕಲಾಗೆ ‘ಎ–ಕ್ಲಾಸ್’ ಸೌಲಭ್ಯ; ಸರ್ಕಾರಕ್ಕೆ ವರದಿ

7
ಕಿಟಕಿ–ಬಾಗಿಲಿಗೆ ಕರ್ಟನ್ ಭಾಗ್ಯ * ಅಡುಗೆಗೆ ಮಹಿಳಾ ಬಂದಿಯ ನೇಮಕ

ಶಶಿಕಲಾಗೆ ‘ಎ–ಕ್ಲಾಸ್’ ಸೌಲಭ್ಯ; ಸರ್ಕಾರಕ್ಕೆ ವರದಿ

Published:
Updated:
Prajavani

ಬೆಂಗಳೂರು: ‘ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಎಂಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರಿಗೆ ‘ಎ–ಕ್ಲಾಸ್’ ಸವಲತ್ತು ನೀಡಲಾಗಿತ್ತು’ ಎಂಬ ಅಂಶ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ ಕುಮಾರ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿದೆ.

‘ಜೈಲಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡಲಾಗಿದೆ’ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಆರೋಪಿಸಿದ್ದರು. ಹೀಗಾಗಿ, ತನಿಖೆಗೆ ವಿನಯ್‌ ಕುಮಾರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಆರ್‌ಟಿಐ ಕಾರ್ಯಕರ್ತರೊಬ್ಬರ ಮೂಲಕ ಬಹಿರಂಗವಾಗಿದೆ.

ಇಬ್ಬರಿಗೇಕೆ ಐದು ಸೆಲ್‌: ‘ಶಶಿಕಲಾ ಜತೆಗೆ ಅವರ ಸಂಬಂಧಿ ಜೆ.ಇಳವರಸಿ ಸಹ ಶಿಕ್ಷೆಗೆ ಗುರಿಯಾಗಿದ್ದರು. ಕಾರಾಗೃಹದ ಕೈಪಿಡಿ (ಮ್ಯಾನ್ಯುಯಲ್) ಪ್ರಕಾರ ಒಂದು ಸೆಲ್‌ನಲ್ಲಿ ನಾಲ್ವರು ಬಂದಿಗಳನ್ನು ಇಡಬೇಕು. ಆದರೆ, ಇವರಿಬ್ಬರಿಗೇ ಐದು ಸೆಲ್‌ಗಳನ್ನು ನೀಡಲಾಗಿತ್ತು. ಶಶಿಕಲಾ ಹಾಗೂ ಇಳವರಸಿ ಒಂದು ಸೆಲ್‌ನಲ್ಲಿದ್ದರೆ, ಅಕ್ಕ–ಪಕ್ಕದ ನಾಲ್ಕು ಕೊಠಡಿಗಳನ್ನು ಇವರ ಬಳಕೆಗಾಗಿಯೇ ಖಾಲಿ ಬಿಡಲಾಗಿತ್ತು’ ಎಂಬ ಅಂಶ ವರದಿಯಲ್ಲಿದೆ.

‘ಇವರಿದ್ದ ಕೊಠಡಿಯ ಕಿಟಕಿ ಹಾಗೂ ಬಾಗಿಲಿಗೆ ಕರ್ಟನ್‌ಗಳನ್ನು ಹಾಕಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ, ‘ಬೆಕ್ಕುಗಳು ಕಿಟಕಿಯಿಂದ ಒಳಗೆ ಬರಬಾರದೆಂದು ಕರ್ಟನ್ ಹಾಕಿದ್ದೇವೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ’ ಎಂದೂ ವರದಿಯಲ್ಲಿದೆ.

‘ಶಶಿಕಲಾ ಹಾಗೂ ಇಳವರಸಿ ಅವರ ಪಕ್ಕದ ಸೆಲ್‌ಗಳಲ್ಲಿ ಏಕೆ ಬಂದಿಗಳನ್ನು ಇರಿಸಿಲ್ಲ ಎಂದು ಪ್ರಶ್ನಿಸಿದಾಗ, ‘ಶಶಿಕಲಾ ಅವರಿಗೆ ಬೆದರಿಕೆ ಇತ್ತು. ಭದ್ರತೆ ದೃಷ್ಟಿಯಿಂದ ಪಕ್ಕದ ಸೆಲ್‌ಗಳನ್ನು ಖಾಲಿ ಬಿಡಲಾಗಿತ್ತು’ ಎಂದು ಅಧಿಕಾರಿಗಳು ಹೇಳಿದರು. ಆದರೆ, ಬೆದರಿಕೆ ಇತ್ತು ಎಂಬುದನ್ನು ಪೂರಕ ಸಾಕ್ಷ್ಯಗಳು ದೊರೆತಿಲ್ಲ’ ಎಂದು ವಿನಯ್‌ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ.

ಅಡುಗೆಗೆ ಮಹಿಳಾ ಕೈದಿ: ‘ಶಶಿಕಲಾ ಕೊಠಡಿಯಲ್ಲಿ ಕುಕ್ಕರ್ ಪತ್ತೆಯಾಗಿತ್ತು. ಅವರು ಅಡುಗೆ ಮಾಡಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದಾಗ, ‘ಜೈಲಿನಲ್ಲಿ ಕೊಡುವ ಊಟವನ್ನು ಇಡುವುದಕ್ಕಾಗಿ ಕುಕ್ಕರ್ ಬಳಸುತ್ತಿದ್ದಾರೆಯೇ ಹೊರತು, ಅಡುಗೆಗೆ ಬಳಸುತ್ತಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಅಡುಗೆ ಮಾಡುವುದಕ್ಕಾಗಿಯೇ ಅಜಂತಾ ಎಂಬ ಮಹಿಳಾ ಬಂದಿಯನ್ನು ಅಕ್ರಮವಾಗಿ ನೇಮಿಸಲಾಗಿತ್ತು ಎಂಬುದು ಹಲವರ ವಿಚಾರಣೆಯಿಂದ ಗೊತ್ತಾಗಿದೆ. ಅಡುಗೆಗೆ ಬಳಸುವ ಅರಿಶಿಣದ ಪುಡಿ ಸೆಲ್ಫ್‌ ಮೇಲೆ ಚೆಲ್ಲಿದ್ದೂ, ಆರೋಪಕ್ಕೆ ಪುಷ್ಟಿ ನೀಡುವಂತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

4 ತಾಸು ಮಾತುಕತೆಗೆ ಅವಕಾಶ

ಶಶಿಕಲಾ ಬ್ಯಾಗ್ ಹಿಡಿದು ಓಡಾಡುತ್ತಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದಕ್ಕೆ ಸಮಜಾಯಿಷಿ ಕೊಟ್ಟಿರುವ ಅಧಿಕಾರಿಗಳು, ‘ತಮ್ಮನ್ನು ಭೇಟಿಯಾಗಲು ಬಂದಿದ್ದವರನ್ನು ಮಾತನಾಡಿಸಿಕೊಂಡು ಸೆಲ್‌ಗೆ ವಾಪಸಾಗುತ್ತಿದ್ದಾಗ ಸೆರೆಯಾಗಿರುವ ದೃಶ್ಯಗಳವು’ ಎಂದಿದ್ದಾರೆ.

ಶಶಿಕಲಾ ಕೆಲವೊಮ್ಮೆ ನಾಲ್ಕು ತಾಸು ಸಂದರ್ಶಕರನ್ನು ಭೇಟಿ ಮಾಡಿರುವುದು ವರದಿಯಿಂದ ಸ್ಪಷ್ಟವಾಗಿದೆ. ಆದರೆ, ‘ಶಶಿಕಲಾ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಒಂದೊಂದು ಕೇಸ್‌ಗೆ ಒಬ್ಬೊಬ್ಬರಂತೆ ವಕೀಲರು ಅವರನ್ನು ಭೇಟಿಯಾಗಿದ್ದಾರೆ. ಎಲ್ಲ ವಕೀಲರಿಗೂ ಸೇರಿ ನಾಲ್ಕು ತಾಸು ಅವಕಾಶ ನೀಡಿರಬಹುದೇ ಹೊರತು, ಒಬ್ಬರೇ ಸಂದರ್ಶಕರಿಗೆ ಅಷ್ಟೊಂದು ಸಮಯ ಕೊಟ್ಟಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !