ಬೀದಿಬದಿ ಅಂಗಡಿ ತೆರವುಗೊಳಿಸಿದ ಪೊಲೀಸರು; ಠಾಣೆ ಎದುರು ಪ್ರತಿಭಟನೆ

7

ಬೀದಿಬದಿ ಅಂಗಡಿ ತೆರವುಗೊಳಿಸಿದ ಪೊಲೀಸರು; ಠಾಣೆ ಎದುರು ಪ್ರತಿಭಟನೆ

Published:
Updated:

ಬೆಂಗಳೂರು: ಶಿವಾಜಿನಗರ ಬಸ್‌ ನಿಲ್ದಾಣ ಬಳಿಯ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವ ವೇಳೆ, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

‘ಇನ್‌ಸ್ಪೆಕ್ಟರ್‌ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿದ ಕಾರ್ಯಕರ್ತರು, ಶಿವಾಜಿನಗರ ಠಾಣೆ ಎದುರು ಪ್ರತಿಭಟನೆ ನಡೆಸಿದರು. ‘ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ಘಟನೆ ಸಂಬಂಧ ಕಮಿಷನರ್‌ ಅವರು ವರದಿ ಕೇಳಿದ್ದಾರೆ ಎಂದು ಗೊತ್ತಾಗಿದೆ.

ಶಿವಾಜಿನಗರ ಬಸ್‌ ನಿಲ್ದಾಣ ಬಳಿಯ ಚರ್ಚ್‌ ಎದುರಿನ ಫುಟ್‌ಪಾತ್‌ ಮೇಲೆ ಕೆಲವರು ಅಂಗಡಿ ಇಟ್ಟುಕೊಂಡಿದ್ದರು. ಅದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಹೈಕೋರ್ಟ್‌ ಆದೇಶದನ್ವಯ ಪೊಲೀಸರು, ಶನಿವಾರ ಸ್ಥಳಕ್ಕೆ ಹೋಗಿ ಅಂಗಡಿಗಳನ್ನು ತೆರವು ಮಾಡಿದರು. ಅದೇ ಸಂದರ್ಭದಲ್ಲಿ ವಾಗ್ವಾದ ನಡೆಯಿತು.

‘ವ್ಯಾಪಾರಿಗಳಿಗೆ ಯಾವುದೇ ನೋಟಿಸ್‌ ನೀಡದೆ, ತೆರವು ಮಾಡಲಾಗಿದೆ. ಅದನ್ನು ಪ್ರಶ್ನಿಸಿದ ವ್ಯಾಪಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಇನ್‌ಸ್ಪೆಕ್ಟರ್, ಹಲ್ಲೆ ಸಹ ಮಾಡಿದ್ದಾರೆ’ ಎಂದು ಕಾರ್ಯಕರ್ತ ಸಾದಿಕ್ ದೂರಿದರು. 

ಅದನ್ನು ಅಲ್ಲಗೆಳೆದ ಪೊಲೀಸ್ ಅಧಿಕಾರಿ, ‘ಶಿವಾಜಿನಗರದಲ್ಲಿ ಬೀದಿಬದಿ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಬಾರಿ ಅಂಗಡಿ ತೆರವು ಮಾಡಿದರೂ ಪುನಃ ಅಂಗಡಿ ಇಟ್ಟುಕೊಂಡಿದ್ದರು. ಶನಿವಾರವೂ ಸ್ಥಳಕ್ಕೆ ಹೋಗಿ ಅಂಗಡಿ ತೆರವು ಮಾಡಿ, ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !