ಬುಧವಾರ, ಜೂನ್ 23, 2021
30 °C

ಶಾಂತಿವನದಾಗ ಅಶಾಂತಿ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಮನಿ ಮುಂದಿನ ಗೇಟಿಗೆ ಕಟ್ಟಿದ್ದ ನಾಯಿ ಮರಿಗೆ ರೊಟ್ಟಿ ತುಂಡು ತಿನಿಸುತ್ತ ‘ನಾಯಿ ಮರಿ, ನಾಯಿ ಮರಿ ತಿಂಡಿ ಬೇಕೆ?...’ ಎಂದು ಹಾಡು ಹೇಳುತ್ತ ನಿಂತಾಗ, ಬೈಕ್‌ನ್ಯಾಗ್‌ ಬಂದ ಪ್ರಭ್ಯಾ ಗಾಡಿ ನಿಲ್ಸಿ, ‘ಇದೇನೋ, ಅಪರೂಪಕ್ಕ ನಾಯಿ ಮರಿ ಹಿಡ್ಕೊಂಡ್‌ ನಿಂತಿ, ಏನ್‌ ವಿಷ್ಯಾ’ ಎಂದ. ‘ಬಾ, ಬಾ. ಹೆದರ್ಬೇಡ. ಇದೇನ್‌ ಮುಧೋಳ್‌ ನಾಯಿ ಅಲ್ಲ, ಬೀದಿ ನಾಯಿ ಅದ. ನಿಂಗ್‌ ತಿಂಡಿ ಬೇಕs, ಏನ್‌ ತೀರ್ಥಾ ಬೇಕs' ಎಂದೆ.

‘ತಿಂಡಿ ತಿಂದ್ಕೊಂಡ್‌ ಬಂದೀನಿ. ತೀರ್ಥಾ ಬೇಕಾದ್ರ ಸಂಜೀಕ್‌ ನೋಡಿದ್ರಾತ್‌ ಬಿಡು. ಅದಿರ್ಲಿ, ನೇರವಾಗಿ ನಾಯಿ ವಿಷಯಕ್ಕ ಬಾ’ ಅಂದ. ‘ನಾಯಿ ಸಾಕಾವ್ರು ಪರವಾನಗಿ ಪಡಿಬೇಕಂತ ಬಿಬಿಎಂಪಿ ಫರ್ಮಾನ್‌ ಹೊರಡಿಸಿದ್ದು ಹೈಕೋರ್ಟ್‌ ಕಟ್ಟಿ ಏರೀತಲ್ಲ, ಅದ್ಕ ಸ್ವಂತ ನಾಯಿ ಸಾಕ್ಬೇಕೊ ಬ್ಯಾಡ್ವೊ ಅಂತ ಲೆಕ್ಕಾ ಹಾಕಾಕತ್ತೀನಿ’ ಎಂದೆ.

‘ಎಲ್ಲಿಂದ ಹಿಡ್ಕೊಂಡ್‌ ಬಂದಿ ಈ ನಾಯೀನ್ನ’ ಅಂದ. ‘ನಮ್ಮ ಏರಿಯಾದಾಗ್ ಬೇಜಾನ್‌ ಬೀದಿ ನಾಯಿಗೋಳ್‌ ಅದಾವ್‌. ಸಾಕಿದ ನಾಯಿಗಳಿಗೆ ಭಾಳ್‌ ಬೆಣ್ಣಿ ಹಚ್ಚಬೇಕ್‌. ರೊಟ್ಟಿ ತುಣುಕು, ಮೂಳೆ ತುಂಡು ಹಾಕಿದ್ರ ಸಾಕ್‌. ಇವು ಬಾಲ ಅಳ್ಳಾಡಿಸ್ಕೋತ್‌ ಸ್ವಾಮಿನಿಷ್ಠೆ ತೋರುತ್ಸಾವ. ನಿಂಗೂ ಬೇಕೇನ್‌ ಹೇಳ್‌’ ಎಂದೆ.

ಅದೇ ಹೊತ್ತಿಗೆ ಮಾಳಗಿ ಮ್ಯಾಲೆ ಬಟ್ಟಿ ಒಣಗಸಾಕ್‌ ಬಂದ ಹೆಂಡ್ತಿ ಅಡ್ಡಬಾಯಿ ಹಾಕಿ, ‘ಮನ್ಯಾಗ್‌ ಒಂದ್‌ ನಾಯಿ ಇದ್ದಾಗ, ಇನ್ನೊಂದ್‌ ನಾಯಿ ಸಾಕೂದು ಎದ್ಕ ಬೇಕಪಾ ಯಣ್ಣಾ’ ಅಂತ ಹೇಳಿ ಪ್ರಭ್ಯಾನ ಗಮನ ಸೆಳೆದಳು. ಮಿಕಿಮಿಕಿ ನನ್ನ ಮಾರಿ ನೋಡ್ದ ಪ್ರಭ್ಯಾ, ‘ಸ್ವಾದರ ಮಾವಾ ಸಾಕಿದ್ದ ನಾಯಿ ಇದ್ಹಂಗ್‌’ ಅಂತ ನಮ್ಮವ್ವ ಹೇಳ್ತಿದ್ಳು. ಅದು ಖರೆ ಐತಿ ನೋಡ್ರಿ ವೈನಿ’ ಅಂದ. ಅದರ ಹಿಂದsನ ಕಿಸಕ್ಕನೆ ನಕ್ಕ ಸದ್ದು ಕೇಳಿಬಂತು.

‘ಲೇ ಮಳ್ಳ, ಆಕಿದು ಹೊಟ್ಟೆಕಿಚ್ಚಿನ ಮಾತು. ಅದ್ನ ಕಿವ್ಯಾಗ್ (ಹೊಟ್ಯಾಗ್‌) ಹಾಕ್ಕೊಬ್ಯಾಡ. ಅದು ಹೆಂಗ್‌ ಬೇಕ್ಹಂಗ್‌ ಮಾತಾಡು ಹಂಗ್‌ ಮಾಡ್ತದ. ಸ್ವಲ್ಪಾನೂ ತಲಿಗೂ ಹಚ್ಕೊಬ್ಯಾಡ’ ಅಂದೆ.

‘ಹೌದ್ಹೌದು. ಅಡಿಗಿ ಮನ್ಯಾಗ್‌ ಗಾಣದ ಎತ್ತಿನಂಗ್‌ ಎಷ್ಟ್‌ ಕೆಲ್ಸ ಮಾಡಿದ್ರ ಏನೈತಿ. ನಾವ್‌ ಲೆಕ್ಕಕ್ಕs ಇಲ್ಲ’ ಅಂತ ಬಟ್ಟಿ ಝಾಡಿಸ್ಕೋತನ, ಮಾತ್‌ ಒಗದ್ಲು.

‘ಹೊಟ್ಟೆಕಿಚ್ಚಿಗೆ ಮದ್ದೇ ಇಲ್ಲ ಅಂತ ಜಯಕ್ಕ ಹೇಳಿದ್ದು ಭಾಳ್‌ ಖರೆ ಐತಿ ನೋಡ್‌’ ಎಂದ ಪ್ರಭ್ಯಾ. ‘ಏಯ್‌ ತಿರಬೋಕಿ, ಸಚಿವ ಹುದ್ದೆ ಕೊಡೋದs ಅದ್ಕ ಸರಿಯಾದ ಮದ್ದಲೇ. ಮಂತ್ರಿಗಿರಿ ಬಿಟ್ಟು ಬೇರೆ ಮದ್ದು ಎಳ್ಳಕಾಳಿನಷ್ಟೂ ನಾಟುದೂ ಇಲ್ಲ’ ಎಂದೆ.

‘ಮಂತ್ರಿಗಿರಿ ಸಿಗಲಾರ್ದಕ್ಕ ಹೊಟ್ಟೆಕಿಚ್ಚು ಪಡೋದು ಸಹಜ ಬಿಡ್ರಿ. ಆದ್ರ ನರೇಂದ್ರ ಮೋದಿ ಸಾಹೇಬ್ರು ಅವಿವಾಹಿತರು ಅಂತ ಹೇಳಿದ ಆನಂದಿ ಬೆನ್‌ ಪಟೇಲ್‌ಗೆ, ಜಶೋದಾ ಬೆನ್ ಛಲೋ ಮಂಗಳಾರತಿ ಎತ್ಯಾರಲ್ಲ. ಅದೇನ್‌ ಗುಜರಾತ್‌ ಮಾದರಿ ಹೊಟ್ಟೆಕಿಚ್ಚಾ’ ಅಂದ್ಲು ಮುಗ್ಧತೆಯಿಂದ.

‘ಮನದ ಮಾತ್‌ನ್ಯಾಗ್‌ ಮೋದಿ ಸಾಹೇಬ್ರು ಉತ್ರಾ ಕೊಡಬಹುದು, ನಾಳೆ ಐತ್ವಾರ್‌ ರೇಡಿಯೊಕ್ಕ ಕಿವಿಗೊಟ್ಟು ಕೇಳ್ತಾ ಇರು, ಉತ್ರಾ ಸಿಕ್ರು ಸಿಗಬಹುದು’ ಎಂದೆ. ನನ್ನ ಮಾತಿಗೆ ಮೂಗು ಮುರಿದು, ನಮ್ಗ ಚಹಾ ಮಾಡಾಕಂತ್‌ ಹೆಂಡ್ತಿ ಅಡಿಗಿ ಮನಿ ಹೊಕ್ಕಳು.

‘ಹೊಟ್ಟೆಕಿಚ್ಚಿನ ಮಾತ್‌ ಬಿಡಪಾ. ಶಾಂತಿವನದಾಗ್‌ ಕುತ್ಕೊಂಡ್‌, ಅಶಾಂತಿಯ ಕಿಚ್ಚು ಹಚ್ಚಿದವ್ರದ್ದು ಎಂಥಾ ಹೊಟ್ಟಿಕಿಚ್ಚಪಾ’ ಎಂದು ಪ್ರಭ್ಯಾ ಮಾತಿನ ಜಾಡನ್ನು ಬ್ಯಾರೆ ದಿಕ್ಕಿಗೆ ತಿರುಗಿಸಿದ.

‘ನೀ ಹೇಳೂದು ಖರೇನ. ಪ್ರಕೃತಿ ಚಿಕಿತ್ಸೆ ತಗೋಳ್ಳಾಕ್‌, ತೂಕಾ ಇಳ್ಸಾಕ್‌ ಹೋಗಿ ಅಲ್ಲಿಯೂ ರಾಜಕೀಯ ಕಿತಾಪತಿ ಮಾಡೋದೂ, ಬೇರೊಬ್ಬರ ಬಿಪಿ ಜಾಸ್ತಿ ಮಾಡ್ತಿರೋದು ನೋಡಿದ್ರ ಕುಮಾರಣ್ಣನ ಸರ್ಕಾರಕ್ಕ ಬತ್ತಿ ಇಡೋ ಉದ್ದೇಶ ಸಿದ್ರಾಮಣ್ಣಗ್‌ ಭಾಳ್‌ ಇದ್ದಂಗೈತಿ’ ಎಂದೆ.

‘ಯಾರೊಬ್ಬರಿಗೂ ಗುನ್ನಾ ಇಡಾಕ್‌ ದೆಹಲಿಗೆ ಹೋಗಿದ್ದಿಲ್ಲ ಅಂತ ಕುಮಾರಣ್ಣ ಹೇಳಿದ್ರ, ಈ ಸಿದ್ರಾಮಣ್ಣ ಶಾಂತಿವನಕ್ಕ ಹೋಗಿ ಸರ್ಕಾರಕ್ಕs ಗುನ್ನಾ ಇಡಾಕತ್ತಾನಲ್ಲ. ಇಂಥಾವ್ರು ಸಮನ್ವಯ ಸಮಿತಿ ಅಧ್ಯಕ್ಷತೆ ಯಾಕ್ ಒಪ್ಕೊಬೇಕಪಾ. ಹೊರಗ್‌ ಇದ್ಕೊಂಡ್‌ ಹೊಲ್ಸ ರಾಜಕೀಯ ಮಾಡ್ಲಿ ಯಾರ್‌ ಬ್ಯಾಡಂತಾರ್‌. ಹೊಟ್ಯಾಗ್‌ ಕೆಂಡದಂತಹ ಸಿಟ್‌ ಇಟ್ಕೊಂಡ್‌ ಶಾಂತಿವನದಾಗ ಚಿಕಿತ್ಸಾ ಪಡದ್ರ ಅದು ಒಂದ್‌ ನಯಾಪೈಸೆಯಷ್ಟೂ ದಕ್ಕೂದಿಲ್ಲ’ ನೋಡ್‌ ಅಂದ.

‘ದೊಡ್ಡ ರಾಜಕೀಯ ಪಂಡಿತನ ಥರಾ ಮಾತಾಡಕತ್ತಿಯಲ್ಲಾ. ನಿನಗ್ ಇರು ಬುದ್ಧಿ ಅಂವ್ಗ ಇಲ್ವಲ್ಲೋ. ಸೋತರೂ ಅಧಿಕಾರ ಸಿಕ್ಕೈತಲ್ಲ, ರೊಟ್ಟಿ ಜಾರಿ ತುಪ್ಪದಾಗ್‌ ಬಿದ್ದೈತಲ್ಲ ಅಂತ ಸುಮ್ಮನಿರೋದು ಬಿಟ್ಟು ಅದೇನೋ ಅಂತಾರಲ್ಲ... ಕೆಲ್ಸ ಇಲ್ಲದ ಬಡಿಗಿ... ಅನ್ನೂ ಹಂಗ್‌ ಕೆಲ್ಸ ಇಲ್ಲದ ಸಿದ್ರಾಮಣ್ಣ, ಬರೀ... ಇದ್ನ ಮಾಡ್ಕೋತ್‌ ಕುಂತ್ರ ಪಕ್ಷ ಉದ್ಧಾರ ಆದ್ಹಂಗ್‌ ಬಿಡು’ ಎಂದೆ. 

‘ಅದೆಲ್ಲ ಇರ್ಲಿ. ಜಯಕ್ಕಳಿಗೆ ಮಂತ್ರಿಗಿರಿ ಸಿಗಾಕ್‌ ಏನ್‌ ಕಾರ‍್ಣಾ ಇರಬಹುದು?’ ಅಂದ.

ಅದ್ಕ ನಾನು, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದೆ. ‘ಅಯ್ಯಯ್ಯಪ್ಪೊ, ಈ ಹೆಂಗ್ಸರ ಜಗಳ್‌ದಾಗ್‌ ಭಕ್ತೆಯರ ಮಾರಿನೂ ನೋಡದ ಅಯ್ಯಪ್ಪಸ್ವಾಮಿಗೆ ಏನ್‌ ಕೆಲ್ಸಾನೋ. ಮಂಗ್ಯಾನಂಗ್ಹ ಅಮಂಗಳ ಮಾತಾಡ್‌ ಬ್ಯಾಡ’ ಎಂದು ಪ್ರಭ್ಯಾ ಬ್ಯಾಸ್ರಾ ಮಾಡ್ಕೊಂಡ.

‘ಇದು ಅಮಂಗಳ ಅಲ್ಲಲೇ, ಅಷ್ಟಮಂಗಲದಾಗ ಕೇಳಿದ ಪ್ರಶ್ನೆಗೆ ಸಿಕ್ಕ ಖರೆ ಉತ್ರಾ. ಹಿಂದs, ಇದೇ ಜಯಕ್ಕ, ತಾನು ಅಯ್ಯಪ್ಪಸ್ವಾಮಿ ದರ್ಶನ ಮಾಡೀನಿ ಅಂತ ಹೇಳಿದ್ದು ದೊಡ್ಡ ವಿವಾದ್‌ ಆಗಿತ್ತು ಅನ್ನೋದು ನೆನಪದ ಏನ್‌ ನಿಂಗ್‌. ಅಯ್ಯಪ್ಪ ಸ್ವಾಮಿಯ ದರ್ಶನದ ಫಲ ಈಗ ಫಲಿಸೇದ ಗೊತ್ತಾತೇನೋ ಮಳ್ಳ’ ಎಂದೆ.

‘ನೀ ಹಿಂಗ್‌ ಹೇಳಿ ಯಾರಿಗೆ ಗುನ್ನಾ ಇಡಾಕ್‌ ಹೊಂಟಿ ಅಂತ ಗೊತ್ತಾತು ಬಿಡು’ ಅಂದ.

’ಕುಮಾರಣ್ಣನ ಹಂಗ್‌ ನಾನೂ ಯಾರ‍್ಗೂ ಗುನ್ನಾ ಇಡಾಕ್‌ ಹೊಂಟಿಲ್ಲಪ್ಪ. ಪ್ರಕೃತಿ ಚಿಕಿತ್ಸೆಗೆ ಹೋಗಿ ತೂಕಾ ಇಳಿಸುವುದರ ಕಡೆ ಲಕ್ಷ್ಯ ಕೊಡೋದು ಬಿಟ್ಟು, ಕುಮಾರಣ್ಣನ ಬಜೆಟ್ಗ ಗುನ್ನಾ ಇಡಾಕ್‌ ಹೊಂಟಾನಲ್ಲಪ್ಪ ಈ ಸಿ(ಗು)ದ್ದಣ್ಣ’ ಎಂದೆ.

‘ಶಾಂತಿವನದಾಗ ಕುಂತು ನಕಲಿ ಕುಟುಕು ಕಾರ್ಯಾಚರಣೆ, ಭಟ್ಟಂಗಿಗಳ ಭೇಟಿ ಹೆಸರ್‌ನ್ಯಾಗ ಅಶಾಂತಿಯ ಸಂದೇಶ ಬೀರುವ ರಾಜಕಾರಣಿಗಳ ಹೊಟ್ಟೆಕಿಚ್ಚಿಗೆ ನಿನ್ನ ಬಳಿ ಏನರ್‌ ಪರಿಹಾರ ಐತಿ ಏನ್‌’ ಅಂದ. 

‘ಹೊಟ್ಟೆಕಿಚ್ಚು ಪಕ್ಷಾ ಸ್ಥಾಪಿಸಿದ್ರ ಏಕದಂ ಎಲ್ಲಾ ಸರಿಹೋಗ್ತದ ನೋಡ್‌’ ಎಂದೆ. ‘ಅದ್ಹೆಂಗ್ ಆಗ್ತದ. ಹೊಟ್ಟೆಕಿಚ್ಚ ಪಕ್ಷಕ್ಕ ಚುನಾವಣಾ ಆಯೋಗ ಮನ್ನಣೆ ನೀಡ್ತದ ಏನ್‌?’ ಅಂದ.

‘ಹಿಂದ್‌ ಹೊಟ್ಟೆ ಪಕ್ಷ ಅಂತನS ಅಸ್ತಿತ್ವದಾಗ್‌ ಇತ್ತಲ್ಲಪ್ಪ. ಸ್ಥಾಪಕ ರಂಗಸ್ವಾಮಿ ಅದೇ ಹೆಸರ್ನಾಗ್‌ ಎಲೆಕ್ಷನ್‌ಗೆ ನಿಂತು ಗಿನ್ನೆಸ್‌ ದಾಖಲೆ ಮಾಡಿದ್ದ. ಸಿಕ್ಕಲ್ಲೆಲ್ಲ ಸಿಕ್ಕಿದನ್ನೆಲ್ಲ ತಿಂದು ಡರ್‌ ಎಂದು ತೇಗುತ್ತ, ಗುಡಾಣದಂತಹ ಹೊಟ್ಟೆ ಹೊತ್ಕೊಂಡ್‌ ತಿರುಗುವ, ಸಭೆ ಸಮಾರಂಭದಾಗೂ ನಿದ್ದಿ ಮಾಡುವ ರಾಜಕಾರಣಿಗಳಿಗೆ ಹೊಟ್ಟೆಕಿಚ್ಚು ಪಕ್ಷ ಪಸಂದಾಗಿ ಹೊಂದತದ. ಪಕ್ಷಗಳ ಸಾಧನೆಯ ದಾಖಲೆಗಳನ್ನೆಲ್ಲ ಚಿಂದಿ ಮಾಡ್ತದ. ಎಲ್ಲಾ ಪಕ್ಷದಾಗ್‌ ಇರೋ, ಹೊಟ್ಟೆಕಿಚ್ಚಿನ ಕಾಯಿಲೆಯಿಂದ ನರಳೋರಲ್ಲ, ತಮ್ಮ ಹೊಟ್ಟಿ ಬ್ಯಾನಿಗಿ ಮದ್ದ ಸಿಕ್‌ ಖುಷ್ಯಾಗ್‌ ಈ ಕಡೆ ಓಡೋಡಿ ಬರ್ತಾರ. ಆಪರೇಷನ್ ಕಮಲ– ಹಸ್ತದ ಉಸಾಬರೀನ ಇರೂದಿಲ್ಲ, ಯಾರ‍್ಗೂ ಕೆಟ್ಟ ಹೆಸ್ರೂ ಬರೂದಿಲ್ಲ’ ಎಂದೆ.

‘ಊರ ಚಿಂತಿ ಮಾಡಿ ಮುಲ್ಲಾ ಸೊರಗಿದನಂತ ಅನ್ನೂ ಹಂಗ, ಹೊಟ್ಟೆಕಿಚ್ಚಿನ ಮಂದಿಯ ತಿಂಡಿ ಹೆಚ್ಚಾದರ ಬಗ್ಗೆ ಚಿಂತಿ ಮಾಡಿ ನಮ್ಮ ಹೊಟ್ಟಿ ಕೆಡಿಸಿಕೊಳ್ಳೋದು ಬ್ಯಾಡಪಾ. ತೀರ್ಥ ಬೇಕೆನ್‌ ಅಂತ ಕೇಳಿದ್ದಿ ಅಲ್ಲ, ಕುಡ್ಸ ನಡಿ’ ಅಂತ ಹೇಳ್ದ. ನಂಗೂ ತಲಬ್‌ ಆಗಿತ್ತು. ‘ಹ್ಞೂಂ, ನಡೀಪಾ. ಈ ಹೊಟ್ಯಾನ್‌ ಕಿಚ್ಚಿಗೆ ಬಿಯರ್‌ ಕುಡ್ದು ಹೊಟ್ಟಿ ತಂಪ್‌ ಮಾಡ್ಕೊಳ್ಳೋಣ ನಡಿ’ ಎಂದು ಹೇಳುತ್ತ ಪ್ರಭ್ಯಾನ ಎಳಕೊಂಡ್‌ ಗೂಡಂಗಡಿ ಕಡೆ ಹೊಂಟೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು