ಸೋಮವಾರ, ಮೇ 25, 2020
27 °C

ಕಥಕ್ ದೀಕ್ಷೆ ಸೌಂದರ್ಯ ಸಮೀಕ್ಷೆ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

Prajavani

ತಬಲಾದ ‘ಧಾ ಧಿನ್‌ ಧಿನ್‌ ಧಾ...’ ಬೋಲ್‌ಗಳ ಕ್ರಮಬದ್ಧ ಲಯದ ಆಧಾರದ ಮೇಲೆ ನೃತ್ಯ, ಭಾವ ಅಭಿನಯಗಳ ಸೃಜನಶೀಲ ಅಭಿವ್ಯಕ್ತಿ ಕಥಕ್‌ ನೃತ್ಯ ಪ್ರಕಾರದ ವೈಶಿಷ್ಟ್ಯ. ಸ್ಥೂಲಾರ್ಥದಲ್ಲಿ ಕಥಕ್‌ ಎಂದರೆ ಕಥೆ ಹೇಳುವುದು. ಸಾಂಪ್ರದಾಯಿಕವಾಗಿ ಕಥಕ್‌ನಲ್ಲಿ ಲಯದ ತೀನ್‌ತಾಲ್‌ದ್ದೇ ಮಹತ್ವದ ಸ್ಥಾನ. ಆದರೆ ತಾಳದ ಮಾಮೂಲಿ ಬೋಲ್‌ಗಳ ಜತೆಗೆ ತಿಹಾಯಿ ರಚನೆಯನ್ನು ಉಸಿರು ಬಿಡದೆ ಹೇಳುತ್ತಾ ಕಾಲಚಕ್ರದ (ಸ್ಪಿನ್‌) ಮೇಲೆಯೂ ಹಿಡಿತ ಸಾಧಿಸಲು ಅಸಾಧಾರಣ ಪರಿಶ್ರಮ ಬೇಕು. ಇದು ಸತತ ಅಭ್ಯಾಸ, ನಿರಂತರ ಶ್ರದ್ಧೆ ಬಯಸುತ್ತದೆ. ಕಥಕ್‌ನಲ್ಲಿ ಸಂಗೀತ, ಲಯ, ಭಾವ, ಅಭಿನಯ ಎಲ್ಲವೂ ಏಕಕಾಲಕ್ಕೆ ಅನಾವರಣಗೊಳ್ಳಬೇಕು. ಇವೆಲ್ಲವನ್ನೂ ಸಾಧಿಸಿದವರು ಕಲಾವಿದೆ ಸಿಮ್ರನ್‌ ಗೋಧ್ವಾನಿ.

ಬೆಂಗಳೂರಿನ ಕೋರಮಂಗಲದಲ್ಲಿರುವ ‘ಕೃಶಲ ಡ್ಯಾನ್ಸ್‌ ಥಿಯೇಟರ್‌’ನಲ್ಲಿ ಕಲಾ ನಿರ್ದೇಶಕಿಯಾಗಿರುವ ಸಿಮ್ರನ್‌, ನೃತ್ಯದೊಂದಿಗೆ ಮಾಡೆಲಿಂಗ್‌ನಲ್ಲೂ ಆಸಕ್ತಿ ಹೊಂದಿರುವವರು. ಖ್ಯಾತ ಕಥಕ್ ನೃತ್ಯ ಪಟು ಮುರಾರಿ ಶರಣ ಗುಪ್ತ ಅವರ ಬಳಿ 15 ವರ್ಷಗಳ ಕಾಲ ಕಥಕ್‌ ಅಭ್ಯಾಸ ಮಾಡಿದ ಬಳಿಕ, ವಿಶ್ವವಿಖ್ಯಾತ ನೃತ್ಯದಿಗ್ಗಜ ಪಂ. ಬಿರ್ಜು ಮಹಾರಾಜ್‌ ಅವರ ಬಳಿ ಹೆಚ್ಚಿನ ನೃತ್ಯ ಮಾರ್ಗದರ್ಶನವನ್ನು ಪಡೆವದವರು. ಬೆಂಗಳೂರಿನಲ್ಲಿ ಹುಟ್ಟಿ, ಲಂಡನ್‌ ಮತ್ತು ದುಬೈಗಳಲ್ಲಿ ಬೆಳೆದ ಸಿಮ್ರನ್‌, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದು ಐದು ವರ್ಷ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದವರು.

ದೇಶ ವಿದೇಶಗಳ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆಯೂ ಇವರ ಬೆನ್ನಿಗಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ನೃತ್ಯ ರೂಪಕಗಳಾದ ರಾಧಾ, ಯಶೋದಾ, ಬಾನ್ಸುರಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರೊಂದಿಗಿನ ಮಾತುಕತೆಯ ಅಕ್ಷರರೂಪ ಇಲ್ಲಿದೆ.

ಸೃಜನಶೀಲ ಕಲೆ, ಸಂಗೀತ–ನೃತ್ಯದಲ್ಲಿ ಕೌಟುಂಬಿಕ ಹಿನ್ನೆಲೆ ಏನಾದರೂ ಇದೆಯೇ?

ಮನೆಯಲ್ಲಿ ಸಂಗೀತ–ನೃತ್ಯದ ಹಿನ್ನೆಲೆ ಇಲ್ಲ. ಕಥಕ್‌ನಲ್ಲಿ ಆಸಕ್ತಿ ಹುಟ್ಟಲು ಹಾಗೂ ಕಥಕ್‌ ಕಲಿಯಲು ಪ್ರೇರಣೆ ನೀಡಿದ್ದು ಶ್ರೀಕೃಷ್ಣನ ಕಥಾನಕವನ್ನು ಕೇಳಿದ ಬಳಿಕ. ಅದಕ್ಕೂ ಮೊದಲೇ ನಾನು ಐದು ವರ್ಷದವಳಿರುವಾಗಲೇ ಕಥಕ್‌ ನೃತ್ಯದತ್ತ ಆಕರ್ಷಿತಳಾಗಿ ಅದನ್ನು ಕಲಿಯಲಾರಂಭಿಸಿದೆ. ನನ್ನ ಕುಟುಂಬದ ಸದಸ್ಯರೆಲ್ಲ ಎಂಜಿನಿಯರ್‌, ಡಾಕ್ಟರ್‌ ಆಗಿದ್ದಾರೆ. ಪತಿ ರಾಕೇಶ್‌ ಗೋಧ್ವಾನಿ ಬೆಂಗಳೂರಿನ ಐಐಎಂಬಿಯಲ್ಲಿ ಪ್ರೊಫೆಸರ್‌. ನಾನು ಓದಿದ್ದು ಕಂಪ್ಯೂಟರ್ ಸೈನ್ಸ್‌ ಪದವಿ. ಸಾಫ್ಟ್‌ವೇರ್‌ ಕಂಪನಿಯಲ್ಲಿ ಐದು ವರ್ಷ ಕೆಲಸವನ್ನೂ ಮಾಡಿದ ಬಳಿಕ ವೃತ್ತಿಗೆ ಗುಡ್‌ಬೈ ಹೇಳಿ ಪೂರ್ಣ ಪ್ರಮಾಣದಲ್ಲಿ ಕಥಕ್‌ ನೃತ್ಯಕ್ಕೇ ಆತುಕೊಂಡಿದ್ದೇನೆ.

ನಿಮ್ಮ ನೃತ್ಯ ಬದುಕಿನ ಮಹತ್ವದ ತಿರುವುಗಳೇನು?

ಅದು 2005ನೇ ಇಸವಿ. ಬೆಂಗಳೂರಿನ ಕೋರಮಂಗಲದಲ್ಲಿರುವ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ಕ್ಯಾಂಪಸ್‌ನಲ್ಲಿ ಭಾರತದ ‘ಕಥಕ್‌ ಭೀಷ್ಮ’ ಪಂ. ಬಿರ್ಜು ಮಹಾರಾಜ್‌ ಅವರ ನೃತ್ಯಕಾರ್ಯಕ್ರಮವಿತ್ತು. ಕಾರ್ಯಕ್ರಮದ ಬಳಿಕ ನನ್ನ ಗುರು ಮುರಾರಿ, ಬಿರ್ಜು ಮಹಾರಾಜ್‌ ಅವರಿಗೆ ನನ್ನನ್ನು ಪರಿಚಯಿಸಿದರು. ಆದರೆ ಅದಕ್ಕೂ ಮೊದಲೇ ಬಿರ್ಜು ಮಹಾರಾಜ್‌ ಅವರು ದೇಶ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ನಾನು ನೀಡಿದ ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೋಡಿದ್ದರು. ಪಂ. ಬಿರ್ಜು ಮಹಾರಾಜ್‌ ನನ್ನ ಹವ್ಯಾಸ ಮತ್ತು ವೃತ್ತಿಯ ಬಗ್ಗೆ ಕೇಳಿದರು. ‘ನಾನು ಸಾಫ್ಟ್‌ವೇರ್‌ ಎಂಜಿನಿಯರ್‌, ಪ್ರವೃತ್ತಿ ಮಾತ್ರ ಕಥಕ್‌’ ಎಂದೆ. ‘ಎಂಜಿನಿಯರ್‌, ವೈದ್ಯ ವೃತ್ತಿಯಲ್ಲಿ ಸಾಕಷ್ಟು ಜನ ಇದ್ದಾರೆ. ಉತ್ತಮ ಕಥಕ್‌ ಕಲಾವಿದೆಯರು ಸಿಗುವುದು ವಿರಳ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಕಥಕ್‌ನಲ್ಲೇ ತೊಡಗಿಸಿಕೊ’ ಎಂದರು. ಅವರ ಒಂದೇ ಮಾತು ನನ್ನ ವೃತ್ತಿ ಜೀವನದಲ್ಲಿ ಮಹತ್ತರ ತಿರುವು ಪಡೆಯಿತು.

ಪಂ. ಬಿರ್ಜು ಮಹಾರಾಜ್‌ ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿ.

ಉತ್ತರ ಪ್ರದೇಶ ಮೂಲದ ಒಂದು ವಿಶಿಷ್ಟ ನೃತ್ಯ ಪ್ರಕಾರ ಕಥಕ್‌. ತಬಲಾ ಲಯದ ಆಧಾರದ ಮೇಲೇ ಹೆಚ್ಚಿನ ನೃತ್ತ, ನೃತ್ಯ, ಅಭಿನಯ ಅವಲಂಬಿಸಿರುವುದೂ ಈ ನೃತ್ಯಪ್ರಕಾರದ ಮತ್ತೊಂದು ವೈಶಿಷ್ಟ್ಯ. ಪಂ. ಬಿರ್ಜು ಮಹಾರಾಜ್‌ ಹಲವಾರು ಪ್ರತಿಷ್ಠಿತ ವಿಶ್ವವೇದಿಕೆಗಳಲ್ಲಿ ಕಥಕ್‌ ನೃತ್ಯ ಮಾಡಿದವರು. ಅವರ ಮಾರ್ಗದರ್ಶನ ಪಡೆಯುವ ಅವಕಾಶ ಸಿಕ್ಕಿದ್ದೇ ದೊಡ್ಡ ಸುದೈವ. ಒಮ್ಮೆ ದೆಹಲಿಯಲ್ಲಿ ಅವರ ಗುರುಕುಲದಲ್ಲಿ ಮಹಾರಾಜ್‌ ಅವರೇ ಕೊರಿಯೋಗ್ರಫಿ ಮಾಡಿದ ಕಥಕ್‌ ಪ್ರದರ್ಶನದಲ್ಲಿ ನಾನು ಪ್ರಮುಖ ನೃತ್ಯಗಾರ್ತಿಯಾಗಿದ್ದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಆ ನೃತ್ಯದಲ್ಲಿ ರಾಧಾಳ ಪಾತ್ರ ಮಾಡಿದ್ದೆ. ಅವರಿಗೆ ನನ್ನ ಅಭಿನಯ ಬಹಳ ಹಿಡಿಸಿತು. ಕಾರ್ಯಕ್ರಮ ಮುಗಿದ ಬಳಿಕ ಮೆಚ್ಚುಗೆಯ ಮಾತನಾಡಿದರು.

ಮಹಾರಾಜ್‌ ಅವರೊಂದಿಗೆ ನೃತ್ಯ ಮಾಡುವ ಸದವಕಾಶಗಳೂ ಸಿಕ್ಕಿವೆ. 10 ವರ್ಷಗಳ ಹಿಂದೆ ಪಂ. ಬಿರ್ಜು ಅವರ 70ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಜನ್ಮಸ್ಥಳ ಅಲಹಾಬಾದ್‌ನ ಹಾಂಡ್ಯದಲ್ಲಿ ಕಥಕ್‌ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ದೇಶ ವಿದೇಶಗಳ ಅನೇಕ ಪ್ರತಿಭಾನ್ವಿತ ನೃತ್ಯಪಟುಗಳು ಅಲ್ಲಿಗೆ ಬಂದಿದ್ದರು. ಆ ವೇದಿಕೆಯಲ್ಲಿ ನಾನು ‘ಚಕ್ಕರ್ಸ್‌’ (70 ಸ್ಪಿನ್‌ ಇರುವ ವಿಶಿಷ್ಟ ನೃತ್ಯ) ಮಾಡಿದ್ದೆ. ‘ಕಾಲಚಕ್ರ’ (ಟೈಮ್‌ ಸೈಕಲ್‌) ವನ್ನೇ ನಿಖರವಾಗಿ ನಿರ್ಧರಿಸುವ ನೃತ್ಯ ಮಾಡುವುದು ಬಹುದೊಡ್ಡ ಸವಾಲು.

ಇನ್ನೊಮ್ಮೆ ನ್ಯೂಯಾರ್ಕ್‌ನಲ್ಲಿ (ನಾಲ್ಕುವರ್ಷ ಹಿಂದೆ) ನಡೆದ ‘ನ್ಯೂಯಾರ್ಕ್‌ ಡ್ಯಾನ್ಸ್‌ ಫೆಸ್ಟಿವಲ್‌’ನಲ್ಲಿ ನನ್ನ ನೃತ್ಯಕ್ಕೆ ಗುರು ಮುರಾರಿ ಅವರೇ ತಬಲಾ ನುಡಿಸಿದ್ದರು. ಇವೆಲ್ಲವೂ ಎಂದೂ ಮರೆಯಲಾರದ ಸವಿನೆನಪಾಗಿ ಉಳಿದಿವೆ. ಇವಲ್ಲದೆ ಬಿರ್ಜು ಮಹಾರಾಜ್‌ ಅವರ ಸಂಯೋಜನೆಯ ಅನೇಕ ನೃತ್ಯಗಳಲ್ಲಿ ನನಗೆ ಪ್ರಮುಖ ಪಾತ್ರದಲ್ಲೇ ಅಭಿನಯಿಸುವ ಅವಕಾಶ ಸಿಕ್ಕಿದ್ದು ಕೂಡ ನನ್ನ ಸುಯೋಗ.

ಕಥಕ್‌ ನೃತ್ಯ ಅಲ್ಲದೆ ಈ ಪ್ರಕಾರದ ವಿವಿಧ ಆಯಾಮಗಳಲ್ಲಿ ಹೇಗೆ ತೊಡಗಿಸಿಕೊಂಡಿದ್ದೀರಿ?

ಆಸಕ್ತ ಮಕ್ಕಳಿಗೆ ಕಥಕ್‌ ಹೇಳಿಕೊಡುತ್ತಿದ್ದೇನೆ. ಬೆಂಗಳೂರಿನಲ್ಲಿ, ಅಮೆರಿಕದಲ್ಲಿ ಹಲವಾರು ಮಕ್ಕಳು ಕಲಿಯುತ್ತಿದ್ದಾರೆ. ಕಥಕ್‌ ಅನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಪ್ರಚಾರಕ್ಕೆ ತರುವುದು ಇದರ ಉದ್ದೇಶ. ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಒಂದು ಗ್ರಾಮವನ್ನು ದತ್ತು ಪಡೆದು ಅಲ್ಲಿ ಕಥಕ್‌ನೃತ್ಯ ಕೇಂದ್ರ ಆರಂಭಿಸಿದ್ದೇನೆ. ಅಲ್ಲಿನ ಆಸಕ್ತ 40 ಮಕ್ಕಳಿಗೆ ಉಚಿತವಾಗಿ ನೃತ್ಯ ಹೇಳಿಕೊಡುತ್ತಿದ್ದೇನೆ.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿ ಕಥಕ್‌ನಲ್ಲಿ ಕೆಲವು ನೃತ್ಯ ಸಂಯೋಜನೆ ಮಾಡಿದ್ದು, ‘ಅಕ್ಕಮಹಾದೇವಿ’ ಕುರಿತ ಒಂದು ನೃತ್ಯರೂಪಕಕ್ಕೆ ಸದ್ಯ ಕೊರಿಯೊಗ್ರಫಿ ಮಾಡಿದ್ದೇನೆ.

ಸಿಮ್ರನ್‌ ಕಥಾನಕವನ್ನು krshala.com ನಲ್ಲಿ ನೋಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.