ಸಿಂದಗಿ ಪುರಸಭೆ; ಸಾಮಾನ್ಯ ಸಭೆ ಮುಂದೂಡಿಕೆ..!

7
ಸಭೆಗೆ ಕೋರಂ ಕೊರತೆ; ಹಂಗಾಮಿ ಅಧ್ಯಕ್ಷರಾಗಿ ಸಭೆ ಮುಂದೂಡಿದ ಸದಸ್ಯ ಷಣ್ಮುಖ

ಸಿಂದಗಿ ಪುರಸಭೆ; ಸಾಮಾನ್ಯ ಸಭೆ ಮುಂದೂಡಿಕೆ..!

Published:
Updated:
Deccan Herald

ಸಿಂದಗಿ: ಬರೋಬ್ಬರಿ ಹತ್ತು ತಿಂಗಳ ಬಳಿಕ ಪಟ್ಟಣದ ಪುರಸಭೆಯ ಸಾಮಾನ್ಯ ಸಭೆ ಕರೆದಿದ್ದ ಅಧ್ಯಕ್ಷ ಭಾಷಾಸಾಬ್‌ ತಾಂಬೋಳಿಯೇ ಸಭೆಗೆ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದರು..!

23 ಸದಸ್ಯ ಬಲದ ಪುರಸಭೆಯ ಸಾಮಾನ್ಯ ಸಭೆಗೆ ನಿಗದಿತ ವೇಳೆಗೆ ಮೂವರು ಮಾತ್ರ ಹಾಜರಿದ್ದರು. ಕೆಲ ಹೊತ್ತಿನ ನಂತರ ಇಬ್ಬರು ಹಾಜರಾದರು. ಅಧ್ಯಕ್ಷ–ಉಪಾಧ್ಯಕ್ಷ ಸೇರಿದಂತೆ ಒಟ್ಟು 17 ಮಂದಿ ಗೈರಾಗಿದ್ದು, ಪಟ್ಟಣದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

ಗುರುವಾರ ಬೆಳಿಗ್ಗೆ 10.30ಕ್ಕೆ ಸಭೆ ನಿಗದಿಯಾಗಿತ್ತು. ಅಧ್ಯಕ್ಷ–ಉಪಾಧ್ಯಕ್ಷ ಸೇರಿದಂತೆ ಬಹುತೇಕ ಸದಸ್ಯರು ಗೈರು ಹಾಜರಿದ್ದರು. ಮುಕ್ಕಾಲು ತಾಸು ಕಾದರೂ ಯಾರೊಬ್ಬರೂ ಸಭೆಗೆ ಬರಲಿಲ್ಲ.

ಹಾಜರಿದ್ದ ಮೂವರು ಸದಸ್ಯರೇ ಸಭೆ ನಡೆಸುವ ನಿರ್ಧಾರ ಕೈಗೊಂಡರು. 20ನೇ ವಾರ್ಡ್ ಸದಸ್ಯ ಷಣ್ಮುಖ ಕುರಡೆ ಅವರನ್ನು ಸಭೆಯ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಸದಸ್ಯ ರಾಜಶೇಖರ ಕೂಚಬಾಳ ಸೂಚಿಸಿದರೆ, ಸದಸ್ಯ ದಯಾನಂದ ಪತ್ತಾರ ಅನುಮೋದಿಸಿದರು. ಸದಸ್ಯರ ಆಸನಗಳಲ್ಲಿ ಅಧಿಕಾರಿಗಳೇ ವಿರಾಜಮಾನವಾಗಿದ್ದರು. ಇದಕ್ಕೆ ಹಾಜರಿದ್ದ ಅಧಿಕಾರಿಗಳು ಯಾವುದೇ ಆಕ್ಷೇಪ ಸಲ್ಲಿಸದೆ, ಸಭೆಯಲ್ಲಿ ಭಾಗಿಯಾದರು.

ರಾಜಶೇಖರ ಕೂಚಬಾಳ ಆರಂಭದಲ್ಲೇ ಸದಸ್ಯರ ಗೈರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಂಗಾಮಿ ಅಧ್ಯಕ್ಷ ಸಭೆ ಮುಂದೂಡಿದರೂ ಚರ್ಚೆ ನಡೆಯಿತು. ಅಂಬೇಡ್ಕರ್ ಆಶ್ರಯ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಕೂಚಬಾಳ ಮಾತನಾಡುವಾಗ ಅಶೋಕ ಮನಗೂಳಿ ಹೆಸರು ಪ್ರಸ್ತಾಪವಾಯಿತು.

ತಕ್ಷಣವೇ ಸದಸ್ಯ ದಯಾನಂದ, ಅಶೋಕ ಯಾರು..? ಎಂದು ಪ್ರಶ್ನಿಸಿದರು. ಸಚಿವರ ಪುತ್ರ ಎಂಬ ಉತ್ತರ ಬರುತ್ತಿದ್ದಂತೆ, ಸಚಿವರ ಮಗನಿಗೂ ಪುರಸಭೆಗೂ ಏನು ಸಂಬಂಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಚಬಾಳ ಚರ್ಚೆಯ ನಡುವೆ ಠರಾವು ಪುಸ್ತಕ ಕೇಳಿದರು. ಸಿಬ್ಬಂದಿ ಹೊಸ ಪುಸ್ತಕ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೂವರೆಗಿನ ಪುಸ್ತಕ ಎಲ್ಲಿ ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಅಧ್ಯಕ್ಷರು ತೆಗೆದುಕೊಂಡು ಹೋಗಿದ್ದಾರೆ ಎಂದು ಸಿಬ್ಬಂದಿ ಉತ್ತರಿಸಿದರು.

ಈ ಚರ್ಚೆಯ ನಡುವೆ ಸಭೆಗೆ ಬಂದ ಸದಸ್ಯ ಮುತ್ತು ರೇಶ್ಮಿ, ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ, ಇನ್ನೂ ಕೆಲ ಹಗರಣಗಳು ಪುರಸಭೆಯಲ್ಲಿ ನಡೆದಿವೆ. ತೆರೆದಬಾವಿ ಹೆಸರಿನಲ್ಲಿ ₹ 21 ಲಕ್ಷ, ಅಂಬೇಡ್ಕರ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಹೆಸರಿನಲ್ಲಿ ₹ 6 ಲಕ್ಷ ಅವ್ಯವಹಾರ ಎಸಗಲಾಗಿದೆ. ಪುರಸಭೆ ವತಿಯಿಂದ ಸ್ವಾಗತ ಕಮಾನು ನಿರ್ಮಾಣಕ್ಕಾಗಿ ₹ 26 ಲಕ್ಷ ಖರ್ಚು ಬಿದ್ದರೂ; ಕೆಲಸ ಮಾತ್ರ ಅರ್ಧ ನಡೆದಿದೆ’ ಎಂದು ದೂರಿದರು.

ಇದೇ ಸಂದರ್ಭ ಸಭೆಯಲ್ಲಿದ್ದ ಉಪಾಧ್ಯಕ್ಷೆ ಪತಿ, ‘ನಮ್ಮ ವಾರ್ಡ್‌ನಲ್ಲಿ ಬೀದಿದೀಪವಿಲ್ಲದೆ ಕತ್ತಲೆ ಆವರಿಸಿದೆ’ ಎಂದು ದೂರಿದರು.

‘ಬಾವಿ ಹೋಗಿ ವಿದ್ಯುತ್ ಕಂಬ ಬಂತೋ... ಕಂಬ ಹೋಗಿ ಪೈಪ್‌ಲೈನ್ ಬಂತೋ... ಒಂದೊಂದು ಹೆಸರಿನಲ್ಲಿ ಹಣ ಗುಳುಂ. ಡುಂ ಡುಮಕ್ ರಾಜಾ..’ ಎಂದು ಕೂಚಬಾಳ ಹೇಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.

ಸದಸ್ಯರಾದ ಮಂಜುನಾಥ ಬಿಜಾಪುರ, ಚಂದ್ರಶೇಖರ ಅಮಲಿಹಾಳ ಸಭೆಗೆ ತಡವಾಗಿ ಬಂದರು. ಮುಖ್ಯಾಧಿಕಾರಿ ಬಸವರಾಜ ಹಿರೇಮಠ ಹಾಜರಿದ್ದರು.

ಕಾನೂನಿಗೆ ವಿರುದ್ಧ..!

‘ಕೋರಂ ಕೊರತೆ ನಡುವೆಯೂ ಹಂಗಾಮಿ ಅಧ್ಯಕ್ಷರನ್ನು ನಿಯೋಜಿಸಿಕೊಂಡು ಸಭೆ ನಡೆಸಿರುವುದು ಕಾನೂನಿಗೆ ವಿರುದ್ಧ. ಮೂರನೇ ಒಂದರಷ್ಟು ಸದಸ್ಯರ ಹಾಜರಾತಿ ಇಲ್ಲದಿದ್ದರೇ, ಕಾನೂನಿನ ಪ್ರಕಾರ ಆ ಸಾಮಾನ್ಯ ಸಭೆ ತಾನಾಗಿಯೇ ಮುಂದೂಡಲ್ಪಡುತ್ತದೆ.

ಆದರೆ ಸಿಂದಗಿ ಪುರಸಭೆಯಲ್ಲಿ ಕಾನೂನು ಉಲ್ಲಂಘನೆ ನಡೆಸಿ, ಹಂಗಾಮಿ ಅಧ್ಯಕ್ಷರನ್ನು ನೇಮಿಸಿಕೊಂಡು, ಸಭೆ ನಡೆಸಿರುವುದು ಸಿಂಧುವಾಗುವುದಿಲ್ಲ. ಈ ಸಭೆ ಲೆಕ್ಕಕ್ಕೆ ಇಲ್ಲ’ ಎಂದು ಪೌರಾಡಳಿತ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !