ಲಾಲ್‌ಬಾಗ್‌ನಲ್ಲಿ ಬರಲಿದೆ ‘ಸ್ಮಾರ್ಟ್‌ ಪಾರ್ಕಿಂಗ್‌’

7

ಲಾಲ್‌ಬಾಗ್‌ನಲ್ಲಿ ಬರಲಿದೆ ‘ಸ್ಮಾರ್ಟ್‌ ಪಾರ್ಕಿಂಗ್‌’

Published:
Updated:

ಲಾಲ್‌ಬಾಗ್‌ ಉದ್ಯಾನದೊಳಗೆ ವಾರಾಂತ್ಯ, ರಜಾ ದಿನಗಳು ಮತ್ತು ಫಲಪುಷ್ಪ ಪ್ರದರ್ಶನದಂತಹ ವಿಶೇಷ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಪಾರ್ಕಿಂಗ್‌ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಡಬಲ್‌ ರೋಡ್‌ ಪ್ರವೇಶದ್ವಾರದಿಂದ ಎಡಭಾಗದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 

ಈ ಯೋಜನೆಯನ್ನು ಬಾಷ್‌ ಕಂಪನಿಯು ಕಾರ್ಪೊರೇಟ್‌ ಸಮುದಾಯ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ  ಕೈಗೆತ್ತಿಕೊಂಡಿದೆ. ಅಂದಾಜು ₹ 2.5 ಕೋಟಿ ವೆಚ್ಚದ ಈ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. 73ನೇ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ದಿನಗಳಲ್ಲಿ ಈ ವ್ಯವಸ್ಥೆ ಸಾರ್ವಜನಿಕರ ಬಳಕೆಗೆ ಲಭ್ಯವಾದರೂ. ಮುಂದಿನ ಮೂರು ತಿಂಗಳೊಳಗೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ.

‘ಸ್ಮಾರ್ಟ್‌ ಪಾರ್ಕಿಂಗ್‌’ ವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದ ಮೇಲೆ ಸಮಯ ಮಿತಿಯ ಆಧಾರದಲ್ಲಿ ಪಾರ್ಕಿಂಗ್‌ ಶುಲ್ಕ ವಿಧಿಸಲಾಗುವುದು. ಇದುವರೆಗೂ ಮಾನವಾಧರಿತ ವಾಹನ ನಿಯಂತ್ರಣ ವ್ಯವಸ್ಥೆ ನಮ್ಮಲ್ಲಿ ಜಾರಿಯಲ್ಲಿತ್ತು. ಇನ್ನು ಮುಂದೆ ಅದು ಸಂಪೂರ್ಣವಾಗಿ ತಂತ್ರಜ್ಞಾನ ಆಧರಿತವಾಗಲಿದೆ. ಬಾಷ್‌ ಕಂಪನಿ ತನ್ನ ಸಿಎಸ್‌ಆರ್‌ ನಿಧಿಯ ನೆರವಿನಲ್ಲಿ ಐದು ಎಕರೆ ಪ್ರದೇಶದಲ್ಲಿ ಈ ಕಾಮಗಾರಿಯನ್ನು ಕೈಗೊಂಡಿದೆ. ಇದರಿಂದಾಗಿ ಪ್ರತಿದಿನ ಉದ್ಯಾನ ಪ್ರವೇಶಿಸುವ ಪ್ರತಿ ವಾಹನದ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಭದ್ರತೆಯ ದೃಷ್ಟಿಯಿಂದಲೂ ನಮಗೆ ಈ ವ್ಯವಸ್ಥೆ ತುಂಬಾ ಅನುಕೂಲಕರವಾಗಲಿದೆ’ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ
ವೈ.ಎಸ್.ಪಾಟೀಲ ಸಂತೋಷ ವ್ಯಕ್ತಪಡಿಸುತ್ತಾರೆ.

‘ಡಬಲ್‌ ರೋಡ್‌ ದ್ವಾರದಿಂದ ವಾಹನಗಳು ಪ್ರವೇಶಿಸುತ್ತಲೇ ಅವುಗಳ ಸ್ಕ್ಯಾನಿಂಗ್‌ ಆಗುತ್ತದೆ. ವಾಹನ ಸಂಖ್ಯೆ, ಬಣ್ಣ, ಎಷ್ಟು ಮಂದಿ ಇದ್ದಾರೆ, ಲಗೇಜ್‌ ಏನಿರುತ್ತದೆ, ಮುಂತಾದ ಸಮಗ್ರ ವಿವರ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಅಲ್ಲದೆ, ಇದುವರೆಗೂ ವಾಹನಗಳ ಪಾರ್ಕಿಂಗ್‌ ಅವಧಿಯನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಬೆಳಿಗ್ಗೆ ಉದ್ಯಾನದೊಳಗೆ ಬಂದವರು ಸಂಜೆ ಉದ್ಯಾನ ಮುಚ್ಚುವ ಹೊತ್ತಿಗೆ ಹೊರಹೋಗುತ್ತಿದ್ದುದೂ ಇದೆ, ಇಲ್ಲಿ ವಾಹನ ನಿಲ್ಲಿಸಿ ನಗರದಲ್ಲಿ ತಮ್ಮ ವ್ಯವಹಾರ ಮುಗಿಸಿ ಸಂಜೆ ಬಂದು ವಾಹನ ತೆಗೆದುಕೊಂಡು ಹೋಗುತ್ತಿದ್ದುದೂ ಇದೆ. ‘ಸ್ಮಾರ್ಟ್‌ ಪಾರ್ಕಿಂಗ್‌’ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡ ಮೇಲೆ ನಿಗದಿತ ಅವಧಿಯೊಳಗೆ ವಾಹನಗಳು ಹೊರಹೋಗದಿದ್ದಲ್ಲಿ ಮತ್ತೊಂದು ಅವಧಿಗೆ ಶುಲ್ಕ ವಿಧಿಸಲಾಗುವುದು. ಪ್ರವೇಶ ಶುಲ್ಕ ಇನ್ನೂ ಅಂತಿಮಗೊಂಡಿಲ್ಲ’ ಎಂದು ಮಾಹಿತಿ ನೀಡುತ್ತಾರೆ, ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌.

ಲಾಲ್‌ಬಾಗ್‌ ಉದ್ಯಾನವನ್ನು ಸವಿವರವಾಗಿ ನೋಡಲು, ಸುತ್ತಾಡಿಕೊಂಡು ಬರಲು ಗರಿಷ್ಠ 4 ಗಂಟೆ ಬೇಕಾದೀತು. ಇದಕ್ಕಿಂತ ಹೆಚ್ಚಿನ ಅವಧಿ ಉದ್ಯಾನದೊಳಗೆ ನಿಲುಗಡೆ ಮಾಡುವ ವಾಹನಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ.

‘ಸ್ಮಾರ್ಟ್‌ ಪಾರ್ಕಿಂಗ್‌’ ಪ್ರದೇಶದಲ್ಲಿ ಫುಟ್‌ಪಾತ್‌, ರಸ್ತೆ ವಿಭಜಕಗಳ ನಡುವೆ ಆಕರ್ಷಕ ಹೂ ಗಿಡಗಳು, ಪಕ್ಕದಲ್ಲಿ ಹುಲ್ಲಿನ ಹಾಸು ನಿರ್ಮಾಣವಾಗುತ್ತಿದೆ. ಕಾರು ಪಾರ್ಕಿಂಗ್‌ ಪ್ರದೇಶದಲ್ಲಿ ಬಣ್ಣ ಬಣ್ಣದ ಟೈಲ್ಸ್‌ ಮೂಲಕ ಕಾರುಗಳಿಗೆ ಜಾಗ ನಿಗದಿಮಾಡಲಾಗಿದೆ. 150ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಲು ಸಾಧ್ಯವಾಗಲಿದೆ. 250 ದ್ವಿಚಕ್ರಗಳು, 33 ಬಸ್‌ಗಳನ್ನು ನಿಲುಗಡೆ ಮಾಡಬಹುದು. ಪ್ರವಾಸಿಗರು ವಿಶ್ರಾಂತಿ ತೆಗೆದುಕೊಳ್ಳಲು ಕಲ್ಲು ಬೆಂಚು, ಕುಡಿಯಲು ನೀರು, ಶೌಚಾಲಯದ ಸೌಲಭ್ಯವೂ ಇಲ್ಲಿ ಲಭ್ಯವಾಗಲಿದೆ.

ಈಗ ವಾಹನ ನಿಲುಗಡೆ ಶುಲ್ಕದಿಂದ ವರ್ಷಕ್ಕೆ ಕನಿಷ್ಠ ₹ 50 ಲಕ್ಷ ಸಂಗ್ರಹವಾಗುತ್ತಿದೆ. ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯಿಂದ ಶುಲ್ಕದ ಪ್ರಮಾಣದಲ್ಲಿ ಕಡಿಮೆಯೆಂದರೂ ಶೇ 40ರಷ್ಟು ಹೆಚ್ಚಳವಾಗಬಹುದು ಎಂಬುದು ತೋಟಗಾರಿಕಾ ಇಲಾಖೆಯ ಲೆಕ್ಕಾಚಾರ.

ಸೋಲಾರ್‌ ವಿದ್ಯುತ್‌
‍ಪಾರ್ಕಿಂಗ್‌ ಪ್ರದೇಶದಲ್ಲಿ ವಿದ್ಯುತ್‌ ದೀಪಗಳನ್ನೂ ಬಾಷ್‌ ಕಂಪನಿ ಅಳವಡಿಸಿದೆ. ವಿದ್ಯುತ್‌ ಪೂರೈಕೆಗಾಗಿ ಸೌರಶಕ್ತಿ ವ್ಯವಸ್ಥೆಯನ್ನು ಕಂಪನಿ ಒದಗಿಸಿದೆ. ಒಟ್ಟಿನಲ್ಲಿ ಇನ್ನು ಮುಂದೆ ತಮ್ಮ ವಾಹನಗಳ ಸುರಕ್ಷೆಯ ಚಿಂತೆಯಿಲ್ಲದೆ ಲಾಲ್‌ಬಾಗ್‌ ಉದ್ಯಾನದೊಳಗೆ ಸುತ್ತಾಡಿ ಬರಬಹುದು.
**
ಪ್ರತಿ ಬಾರಿ ಲಾಲ್‌ಬಾಗ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರುವಾಗ ಎಷ್ಟು ಮರ ಕಡಿದಿದ್ದೀರಿ ಎಂದು ಪ್ರಶ್ನಿಸಲಾಗುತ್ತದೆ. ಆದರೆ ‘ಸ್ಮಾರ್ಟ್‌ ಪಾರ್ಕಿಂಗ್‌’ಗಾಗಿ ಮರ ಕಡಿದಿಲ್ಲ. ಬದಲಿಗೆ, ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುವ, ಆಕರ್ಷಕ ಹೂ ಹಣ್ಣು ಬಿಡುವ ಕನಿಷ್ಠ 150 ಮರಗಳನ್ನು ನೆಡಲಾಗಿದೆ.
–ವೈ.ಎಸ್.ಪಾಟೀಲ, ನಿರ್ದೇಶಕರು. ತೋಟಗಾರಿಕಾ ಇಲಾಖೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !