ಇಂದಿರಮ್ಮ, ದತ್ತರಾಜ್‌ಗೆ ಎಸ್.ಪಿ.ವರದರಾಜು ಪ್ರಶಸ್ತಿ

ಶನಿವಾರ, ಮೇ 25, 2019
22 °C

ಇಂದಿರಮ್ಮ, ದತ್ತರಾಜ್‌ಗೆ ಎಸ್.ಪಿ.ವರದರಾಜು ಪ್ರಶಸ್ತಿ

Published:
Updated:

ಡಾ .ರಾಜಕುಮಾರ್ ಅವರ ಸೋದರ ಎಸ್.ಪಿ. ವರದರಾಜು ಹೆಸರಿನಲ್ಲಿ ನೀಡಲಾಗುತ್ತಿರುವ ಎಸ್.ಪಿ. ವರದರಾಜು ಪ್ರಶಸ್ತಿಗೆ ಈ ಬಾರಿ ರಂಗಭೂಮಿ ಕ್ಷೇತ್ರದ ಇಂದಿರಮ್ಮ ಮತ್ತು ಚಲನಚಿತ್ರ ಕ್ಷೇತ್ರದ ಹಿರಿಯ ಚಿತ್ರಸಾಹಿತಿ ಚಿ. ದತ್ತರಾಜ್ ಅವರು ಆಯ್ಕೆಯಾಗಿದ್ದಾರೆ.

ಇಂದಿರಮ್ಮ ಪರಿಚಯ

ಇಂದಿರಮ್ಮ ಅವರದು ದೀರ್ಘಕಾಲದ ರಂಗಭೂಮಿ ಅನುಭವ. 1937ನೇ ಫೆಬ್ರುವರಿಯಲ್ಲಿ ಜನಿಸಿದ ಅವರು 6ನೇ ವರ್ಷದಲ್ಲೇ ರಂಗಭೂಮಿಗೆ ಪದಾರ್ಪಣೆ ಮಾಡಿದವರು. 1942ರಲ್ಲಿ ಮೊದಲ ಬಾರಿಗೆ ಹರಿಹರೇಶ್ವರ ಡ್ರಾಮ ಕಂಪನಿಯಲ್ಲಿ ಬಾಲಕೃಷ್ಣನ ಪಾತ್ರಕ್ಕೆ ಬಣ್ಣಹಚ್ಚಿದರು. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಅನಂತರ ಯಡತೊರೆಯ ಕರ್ನಾಟಕ ಡ್ರಾಮ ಸಭಾ, ಸುಬ್ಬಯ್ಯ ನಾಯ್ಡು ಅವರ ರಾಜರಾಜೇಶ್ವರಿ ಡ್ರಾಮ ಕಂಪನಿ, ಎಂಸಿ.ಮಹಾದೇವ ಸ್ವಾಮಿಯವರ ಕನ್ನಡ ಥಿಯೇಟರ್, ಶ್ರೀಕಂಠೇಶ್ವರ ಕೃಪಾಪೋಷಿತ ಡ್ರಾಮ ಕಂಪನಿ, ಸ್ತ್ರೀ ನಾಟಕ ಮಂಡಳಿ, ಚಾಮುಂಡೇಶ್ವರಿ ಕಂಪನಿ, ಶೇಷಕುಮಾರ್ ಆರ್ಟ್ ಕಂಪನಿ, ಗುರುರಾಜ ಡ್ರಾಮಾ ಕಂಪನಿ, ಹಿರಣ್ಣಯ್ಯ ಮಿತತ್ರಮಂಡಳಿ– ಇವೇ ಮುಂತಾದ ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿ ಹೆಸರು ಗಳಿಸಿದರು.

ಚಿಕ್ಕಂದಿನಲ್ಲಿ ಬಾಲಕ, ಬಾಲಕಿ ಪಾತ್ರಗಳ ಮೂಲಕ ಬೆಳೆಯುತ್ತ ಅನಂತರ ಹೆಸರಾಂತ ನಾಟಕಗಳ ಪ್ರಮುಖ ಪಾತ್ರಗಳನ್ನು ಅಭಿನಯಿಸಿ ಪ್ರಸಿದ್ಧರಾದರು. ಸೀತೆ, ಸುಭದ್ರೆ, ಸದಾರಮೆ, ಚಂದ್ರಮತಿ, ದ್ರೌಪದಿ, ಅರ್ಜುನ, ವಾಸುದೇವ ಮುಂತಾದ ಪುರುಷ ಪಾತ್ರಗಳನ್ನು ಮಾಡಿದ ವಿಶೇಷ ಪ್ರತಿಭೆ ಇವರದಾಗಿದೆ. ಇಂದಿರಮ್ಮ ಅವರ ರಂಗಭೂಮಿ ಅನುಭವಕ್ಕೆ ಮನ್ನಣೆ ನೀಡಿ ಕರ್ನಾಟಕ ನಾಟಕ ಅಕಾಡೆಮಿಯು 2008ರಲ್ಲಿ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಪ್ರಸಿದ್ಧ ಕಲಾವಿದರಾದ ದಿ.ಎಚ್.ಟಿ. ಅರಸು ಅವರ ಪತ್ನಿಯವರಾದ ಇಂದಿರಮ್ಮ ಅವರಿಗೆ ಈಗ 82 ವರ್ಷಗಳಾದರೂ ಕುಗ್ಗದ ಉತ್ಸಾಹದಿಂದ ಬದುಕು ನಡೆಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಡಾ. ರಾಜಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ ಅವರು ‘ಭಕ್ತಪ್ರಹ್ಲಾದ’ ನಾಟಕದಲ್ಲಿ ಹಿರಣ್ಯಕಶಿಪು ಪಾತ್ರ ಮಾಡಿದಾಗ ಇಂದಿರಮ್ಮ ಅವರೊಂದಿಗೆ ಬಾಲ ಪ್ರಹ್ಲಾದನ ಪಾತ್ರ ಮಾಡಿದ್ದರು. ಇದೇ ನಾಟಕದಲ್ಲಿ ರಾಜಕುಮಾರ್ ಉಗ್ರನರಸಿಂಹನ ಪಾತ್ರ ನಿರ್ವಹಿಸಿದ್ದರು. ಪುಟ್ಟಸ್ವಾಮಯ್ಯ ಮತ್ತು ರಾಜಕುಮಾರ್ ಅವರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ಹೊಂದಿರುವ ಇಂದಿರಮ್ಮ ಅವರಿಗೆ ಈ ಬಾರಿಯ ಎಸ್.ಪಿ. ವರದರಾಜು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಚಿ.ದತ್ತರಾಜ್ ಪರಿಚಯ

ಚಿ.ದತ್ತರಾಜ್ ಖ್ಯಾತ ಚಿತ್ರಸಾಹಿತಿ ಚಿ.ಸದಾಶಿವಯ್ಯ ಅವರ ಪುತ್ರ. ಚಿ. ಉದಯಶಂಕರ್ ಅವರ ಕಿರಿಯ ಸೋದರ. ಸದಭಿರುಚಿಯ ಎಂಟು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜಕುಮಾರ್ ಅವರ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿರುವ ಹೆಗ್ಗಳಿಕೆಯೊಂದಿಗೆ, ಉತ್ತಮ ಚಲನಚಿತ್ರ ಸಾಹಿತಿಯಾಗಿಯೂ ದುಡಿದಿದ್ದಾರೆ.

ದತ್ತರಾಜ್ 1943ರ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಬಸವನಗುಡಿಯ ನ್ಯಾಷನಲ್ ಹೈಸ್ಕೂಲಿನಲ್ಲಿ ಎಸ್ಎಸ್‌ಎಲ್‌ಸಿ ಓದಿ ಎಸ್‌.ಜೆ.ಪಿ.ಯಲ್ಲಿ ರೇಡಿಯೊ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದರು. ನಂತರ ಮದ್ರಾಸಿಗೆ ಹೋಗಿ ₹ 150 ಸಂಬಳಕ್ಕೆ ರೇಡಿಯೊ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದರು. ನಂತರ ಆಕಾಶವಾಣಿ ಕಲಾವಿದರಾದರು. ಎಸ್.ಕೆ. ಅನಂತಾಚಾರ್, ರೇವತಿ, ಪಾಪಮ್ಮ, ಎಂ.ನರೇಂದ್ರ ಬಾಬು, ಗಿರಿಮಾಜಿ, ಆರೂರು ಪಟ್ಟಾಭಿ, ಜಯ ಮೊದಲಾದವರೊಡನೆ ರೇಡಿಯೊ ನಾಟಕಗಳಲ್ಲಿ ದುಡಿದು, ಅಭಿನಯಿಸಿದರು. ನಾಟಕಗಳ ಸಂಭಾಷಣೆ ತಿದ್ದಿ ಹೊಸದಾಗಿ ಬರೆಯುವ ಮೂಲಕ ಬರವಣಿಗೆ ಅಭ್ಯಾಸವಾಯಿತು. ಈ ದಿನಗಳಲ್ಲಿ ಸಿನಿಮಾ ನಿರ್ದೇಶಕನಾಗಬೇಕೆಂಬ ಆಸೆ ಮೊಳೆಯಿತು.

1970ರಲ್ಲಿ ರವೀ ಅವರ ‘ಲಕ್ಷ್ಮಿ ಸರಸ್ವತಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದದ್ದು ಮೊದಲ ಅನುಭವ. ನಂತರ ರವೀ ಅವರದೇ ‘ಶ್ರೀಕೃಷ್ಣ ರುಕ್ಷ್ಮಿಣಿ ಸತ್ಯಭಾಮ’, ‘ದೇವರು ಕೊಟ್ಟ ತಂಗಿ’ಗೆ ಕೆಲಸ ಮಾಡಿದರು. ‘ಬಂಗಾರದ ಪಂಜರ’ಕ್ಕೆ ಸಹಾಯಕರಾದರು. ಡಾ.ರಾಜ್ ಇವರ ಪ್ರತಿಭೆ, ಶ್ರದ್ಧೆಯನ್ನು ಗಮನಿಸಿ, ‘ಸಂಭಾಷಣೆ ತಿಳಿದುಕೊಳ್ಳಲು, ಅಭ್ಯಾಸ ಮಾಡಲು ದತ್ತು ಅವರು ಇರಲಿ, ಅವರನ್ನು ಕರೆಯಿಸಿ’ ಅನ್ನುತ್ತಿದ್ದರು. ಹೀಗೆ ರಾಜ್ ಅವರ ನೆರಳಿನಲ್ಲಿ 8 ಚಿತ್ರಗಳಿಗೆ ದುಡಿದರು. ಇದರಲ್ಲಿ ಮಹತ್ವದ ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಶ್ರೀನಿವಾಸ ಕಲ್ಯಾಣ’ ಸೇರಿವೆ. ‘ರಾಜ ನನ್ನ ರಾಜ’ ಚಿತ್ರದ ಬಹುತೇಕ ಕೆಲಸ ಇವರದ್ದೇ. ದುಡಿದ ಎಲ್ಲ ಚಿತ್ರಗಳಲ್ಲೂ ಒಂದೊಂದು ಪಾತ್ರಕ್ಕೆ ಧ್ವನಿ ನೀಡಿರುವುದಲ್ಲದೇ ಪುಟ್ಟ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ.

ಸಂಕೋಚ ಸ್ವಭಾವದವರಾದ ದತ್ತು, ರಾಜ್‌–ಪಾರ್ವತಮ್ಮ  ಅವರನ್ನು ತಮ್ಮ ತಂದೆ–ತಾಯಿಯರಂತೆ, ವರದರಾಜು ಅವರನ್ನು ಅಣ್ಣ ಉದಯಶಂಕರ್ ಅವರಂತೆ ಗೌರವಿಸುತ್ತಾ ತರೆಮರೆಯಲ್ಲಿ ಜೀವನ ಕಳೆದ ಚೇತನ. 8 ವರ್ಷಗಳ ಕಾಲ ‘ವಿಜಯಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾದ ಡಾ.ರಾಜ್ ಅವರ ಆತ್ಮಕಥೆ ‘ಕಥಾನಾಯಕನ ಕಥೆ’ಯನ್ನು ರಾಜಕುಮಾರ್ ಹೇಳುತ್ತಾ ಹೋದಂತೆ ಬರೆದು ನಿರೂಪಿಸಿದವರು ದತ್ತರಾಜ್‌. ದತ್ತರಾಜ್ ಅವರಿಗೆ ರಾಜ್ಯ ಸರ್ಕಾರ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ದತ್ತು ಅವರನ್ನು ‘ಎಸ್.ಪಿ.ವರದರಾಜು ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !