ಶಕ್ತಿಯ ಮೇಲೆ ನಿಂತಿದೆ ಪ್ರಪಂಚ: ಪ್ರೊ.ವಿ.ಜಗನ್ನಾಥ

ಗುರುವಾರ , ಜೂನ್ 20, 2019
24 °C
‘ಬಾಹ್ಯಾಕಾಶ ತಂತ್ರಜ್ಞಾನದ ಸಹಕಾರದಿಂದ ವಿಪತ್ತು ನಿರ್ವಹಣೆ’ ಕುರಿತ ಉಪನ್ಯಾಸ

ಶಕ್ತಿಯ ಮೇಲೆ ನಿಂತಿದೆ ಪ್ರಪಂಚ: ಪ್ರೊ.ವಿ.ಜಗನ್ನಾಥ

Published:
Updated:
Prajavani

ಮೈಸೂರು: ‘ಜಗತ್ತು ಶಕ್ತಿಯ ಮೇಲೆ ನಿಂತಿದೆ. ಶಕ್ತಿಯಿಂದಲೇ ಗೌರವ ಸಿಗುತ್ತಿದೆ’ ಎಂದು ಇಸ್ರೋದ ನಿವೃತ್ತ ವಿಜ್ಞಾನಿ ಪ್ರೊ.ವಿ.ಜಗನ್ನಾಥ್‌ ತಿಳಿಸಿದರು.

‘ಚಂಡಮಾರುತ, ಭೂಕಂಪ ಸಂಭವಿಸುವ 10 ನಿಮಿಷಕ್ಕೂ ಮುನ್ನವೇ ನಿಖರ ಮಾಹಿತಿ ಪಡೆಯುವಷ್ಟು ವಿಜ್ಞಾನ ಮುಂದುವರೆದಿದೆ. ಇದರ ಸಹಕಾರದಿಂದ ಅಪಾರ ಸಂಖ್ಯೆಯ ಸಾವು–ನೋವನ್ನು ತಪ್ಪಿಸಬಹುದಾಗಿದೆ’ ಎಂದು ಬುಧವಾರ ಸಂಜೆ ನಗರದ ದಿ ಇನ್ಸ್ಟಿಟ್ಯೂಷನ್ ಆಫ್‌ ಎಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ನಡೆದ ‘ಬಾಹ್ಯಾಕಾಶ ತಂತ್ರಜ್ಞಾನದ ಸಹಕಾರದಿಂದ ವಿಪತ್ತು ನಿರ್ವಹಣೆ’ ಕುರಿತ ಉಪನ್ಯಾಸದಲ್ಲಿ ಹೇಳಿದರು.

‘ವ್ಯಕ್ತಿ ಹಾಗೂ ಸಮುದಾಯಕ್ಕೆ ಸೂಕ್ತ ಸಮಯದಲ್ಲಿ ಅರಿವು, ಜ್ಞಾನ, ನೈಪುಣ್ಯ, ಮನೋಭಾವನೆ ಹಾಗೂ ಪಾಲ್ಗೊಳ್ಳುವಿಕೆಯನ್ನು ಮೂಡಿಸಿದರೆ ಅನಾಹುತಗಳನ್ನು ಸಮರ್ಥವಾಗಿ ಎದುರಿಸಬಹುದು. ವಿಪತ್ತಿನ ಸಮಸ್ಯೆಗಳಿಂದ ಸರಳವಾಗಿ ಹೊರಬರುವಿಕೆ ಸಾಧ್ಯವಾಗಲಿದೆ’ ಎಂದರು.

‘ನಮ್ಮ ಶಿಕ್ಷಣ ವ್ಯವಸ್ಥೆ ರೊಬೋಟ್‌ಗಳನ್ನು ತಯಾರಿಸುತ್ತಿದೆ. ಆದರೆ ಮುಂದುವರೆದ ಕೆಲ ದೇಶಗಳಲ್ಲಿ ಏಳು ವರ್ಷ ತುಂಬುವ ತನಕ ಮಗುವಿಗೆ ಯಾವುದೇ ಶಿಕ್ಷಣ ಕೊಡಲ್ಲ. ನಮ್ಮಲ್ಲಿ ಅಧಿಕಾರಶಾಹಿಗಳು ಹಾಗೂ ಜನಪ್ರತಿನಿಧಿಗಳ ಬಳಿ ಯಾವುದಾದರೂ ಪ್ರಾಜೆಕ್ಟ್‌ ಬಗ್ಗೆ ಹೇಳಿದರೆ, ಮೊದಲ ಮಾತೇ ಅದರಿಂದ ನನಗೆಷ್ಟು ? ಎಂಬುದಾಗಿರುತ್ತದೆ. ಈ ಎರಡೂ ವರ್ಗಕ್ಕೂ ಜಾಗತಿಕ ಬೆಳವಣಿಗೆಗಳ ಕಿಂಚಿತ್ ಮಾಹಿತಿಯೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.

‘ವಿಜ್ಞಾನಕ್ಕೆ ಈಚೆಗಿನ 300 ವರ್ಷಗಳ ಇತಿಹಾಸವಷ್ಟೇ ಇದೆ. ಆದರೆ ನಮ್ಮ ವೇದ, ಉಪನಿಷತ್ತುಗಳಿಗೆ ಐದು ಸಹಸ್ರ ವರ್ಷದ ಐತಿಹ್ಯವಿದೆ. ಇಂದಿನ ಟೆಕಿಗಳು, ವಿಜ್ಞಾನಿಗಳು ಈ ಕುರಿತಂತೆ ಅಧ್ಯಯನಕ್ಕೆ ಮುಂದಾಗಬೇಕಿದೆ’ ಎಂದು ಸಲಹೆ ನೀಡಿದರು.

‘ಬಾಹ್ಯಾಕಾಶ ವಿಜ್ಞಾನ ಅಪರೂಪವಾದುದು. ಸಕಲಕ್ಕೂ ಪರಿಹಾರ ಇದರಲ್ಲಿ ಸಿಗಲಿದೆ. ತಂತ್ರಜ್ಞಾನ ಸಿದ್ಧಗೊಂಡಿದೆ. ಆದರೆ ಇದರ ಬಳಕೆಯೂ ಅಷ್ಟೇ ಮಹತ್ವದ್ದಾಗಿದೆ. ಈ ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಬಳಕೆಯಾಗಬೇಕಿದೆ. ಸಮರ್ಪಕ ಬಳಕೆ ನಡೆಯದಿದ್ದರೆ, ಇದೀಗ ಪಬ್ಲಿಕ್ ಟಾಯ್ಲೆಟ್‌ನಂತಾಗಿರುವ ಸಾಮಾಜಿಕ ಜಾಲತಾಣವೇ ನಿದರ್ಶನವಾಗಿದೆ. ಇಲ್ಲಿ ಸೃಜನಶೀಲತೆ ಎಂಬುದೇ ಗೌಣವಾಗಿ, ಯಥಾವತ್ತು ಫಾರ್ವರ್ಡ್‌ ಮಾಡುವುದಕ್ಕೆ ಮೀಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ದಾರಿ ತಪ್ಪಿದವರ ದೇಶಭಕ್ತಿ

‘ಗಾಂಧಿ ಕೊಂದವನೇ ದೇಶ ಭಕ್ತ ಎಂದು ಈಚೆಗೆ ದಾರಿ ತಪ್ಪಿದವರು ಹೇಳಲಾರಂಭಿಸಿದ್ದಾರೆ. ಇದನ್ನೇ ಎಲ್ಲರೂ ಒಪ್ಪಲಾರಂಭಿಸಿದ್ದಾರೆ. ಮಹಾತ್ಮ ಗುಂಡೇಟಿಗೆ ಬಲಿಯಾದಾಗ ಜಗತ್ತಿನ ಎಲ್ಲ ರಾಷ್ಟ್ರಗಳು ತಮ್ಮ ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಿ ಗೌರವ ಸಲ್ಲಿಸಿದ್ದವು. ಈ ಗೌರವ ಸಲ್ಲಿಕೆ ಏಕೆ ಎಂದು ಪ್ರಶ್ನಿಸಿದ್ದಕ್ಕೆ ಹಲವರು ಮಹಾತ್ಮ ಗಾಂಧೀಜಿ ಭಾರತದ ನಾಯಕನಲ್ಲ. ವಿಶ್ವದ ಮಾನವೀಯತೆಯ ನಾಯಕ ಎಂದಿದ್ದರು’ ಎಂಬುದನ್ನು ತಮ್ಮ ಉಪನ್ಯಾಸದ ನಡುವೆಯೇ ಸಾಂದರ್ಭಿಕವಾಗಿ ಜಗನ್ನಾಥ್‌ ಹೇಳಿದರು.

‘ನಮ್ಮಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಮಾತಿದೆ. ಅದರಂತೆ ಬಹುತೇಕರು ಬದುಕಿಗಾಗಿಯೇ ಸಾಲ ಮಾಡಿದ್ದಾರೆ. ಸ್ವಾವಲಂಬನೆಯ ಬದುಕೇ ಇಲ್ಲವಾಗಿದೆ. ಚೀನಾ, ಕೊರಿಯಾ ದೇಶಗಳಲ್ಲಿ ಸ್ವಾವಲಂಬನೆಯ ಬದುಕಿದೆ. ನಮ್ಮಲ್ಲಿ ಭ್ರಷ್ಟಾಚಾರದ ಬೇರು ಕಿತ್ತು ಹಾಕಲು ಸಾಧ್ಯವಾಗದಂಥಹ ಸನ್ನಿವೇಶವಿದೆ. ಪ್ರತಿಯೊಬ್ಬರೂ ಭ್ರಷ್ಟಾಚಾರದ ಭಾಗಿಗಳಾಗಿದ್ದಾರೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !