ಚೈನೀಸ್ ಫ್ರೈಡ್‌ರೈಸ್‌ನಿಂದ ಉಡುಪಿ ಉತ್ತಪ್ಪದವರೆಗೆ

7

ಚೈನೀಸ್ ಫ್ರೈಡ್‌ರೈಸ್‌ನಿಂದ ಉಡುಪಿ ಉತ್ತಪ್ಪದವರೆಗೆ

Published:
Updated:
Prajavani

ಬಗೆ ಬಗೆಯ ದೋಸೆಗಳು, ಉತ್ತರ ಭಾರತ, ದಕ್ಷಿಣ ಭಾರತ ಶೈಲಿಯ ಖಾದ್ಯಗಳು, ಚೈನೀಸ್‌ ಚಾಟ್ಸ್‌ಗಳು, ವಿವಿಧ ಹಣ್ಣಿನ ಜ್ಯೂಸ್‌ಗಳ ರುಚಿಯನ್ನು ಮೊನೋಟೈಪ್‌ನಲ್ಲಿರುವ (ಬನಶಂಂಕರಿ ಎರಡನೇ ಹಂತ) ಉಡುಪಿ ಉಪಚಾರ ರೆಸ್ಟೋರೆಂಟ್‌ನಲ್ಲಿ ಸವಿಯಬಹುದು.

ಈರುಳ್ಳಿ ಉತ್ತಪ್ಪ

ಈರುಳ್ಳಿ, ಜೀರಿಗೆ, ದಪ್ಪ ಮೆಣಸಿನಕಾಯಿ, ಕ್ಯಾರೆಟ್‌, ಕೊಬ್ಬರಿ, ಕೊತ್ತಂಬರಿ ಸೊಪ್ಪು ಹಾಕಿ ತಯಾರಿಸುವ ಈರುಳ್ಳಿ ಉತ್ತಪ್ಪ ಇಲ್ಲಿ ಸಿಗುವ ವಿಶೇಷ ದೋಸೆ. ಹಿಟ್ಟಿನ ಮೇಲೆ ಈರುಳ್ಳಿ, ಕ್ಯಾರೆಟ್‌ ಚೂರುಗಳು ಮತ್ತು ಜೀರಿಗೆ ಸುರಿದು ನೋಡುವುದಕ್ಕೆ ಆಕರ್ಷಕವಾಗಿ ಕಾಣುವಂತೆ ದಪ್ಪ ಮೆಣಸಿನಕಾಯಿಯ ದೊಡ್ಡ ಹೋಳುಗಳನ್ನು ಹಾಕಿ, ಸ್ವಾದಕ್ಕಾಗಿ ಕೊತ್ತಂಬರಿ ಸೊಪ್ಪು ಉದುರಿಸಿ ಈ ದೋಸೆಯನ್ನು ತಯಾರಿಸಲಾಗುತ್ತದೆ. ಇನ್ನು ಇಲ್ಲಿ ಸಿಗುವ ರವೆ ದೋಸೆ ಕೂಡ ವಿಶೇಷ ರುಚಿ ನೀಡುತ್ತದೆ. ಹೀಗೆ ಬಹುತೇಕ ಎಲ್ಲ ಬಗೆಯ ದೋಸೆಗಳ ರುಚಿಯನ್ನು ಇಲ್ಲಿ ಸವಿಯಬಹುದು.

ಚೈನೀಸ್‌ ಸಿಹಿ–ಖಾರ

ಸಿಹಿ ಮತ್ತು ಖಾರ ರುಚಿಗಳನ್ನು ಒಂದೇ ಖಾದ್ಯದಲ್ಲಿ ಬೆರೆಸಿ ತಯಾರಿಸುವ ಇಲ್ಲಿ ಮಾತ್ರ ಸಿಗುವಂತಹ ‘ಉಡುಪಿ ಉಪಚಾರ ಚೈನೀಸ್‌’ ಖಾದ್ಯವು ವಿಶೇಷ ಎನಿಸದಿರದು.

ದ್ರಾಕ್ಷಿ, ಗೋಡಂಬಿ, ಬಾದಾಮಿಯಂತಹ ಒಣ ಹಣ್ಣುಗಳು, ಚೀಸ್‌, ಬೆಣ್ಣೆ ಹಾಕಿ, ಸಿಹಿ ರುಚಿಗಾಗಿ ಚೆರ‍್ರಿ ಹಣ್ಣುಗಳನ್ನ ಬೆರೆಸಿ ಇವೆಲ್ಲವನ್ನು ಅನ್ನದೊಂದಿಗೆ ಮಿಶ್ರಣ ಮಾಡಿ ಆಹ್ಲಾದಕರ ರುಚಿ ನೀಡುವಂತೆ ತುಪ್ಪ ಹಾಕಿ ಫ್ರೈಡ್‌ರೈಸ್‌ನಂತೆ ಇದನ್ನು ತಯಾರಿಸುತ್ತಾರೆ. ಮತ್ತೊಂದು ಕಡೆ ಇದೇ ರೀತಿ ಒಣಹಣ್ಣು, ಚೀಸ್‌, ಬೆಣ್ಣೆಯ ಜೊತೆಗೆ ಕಾರ ರುಚಿಗಾಗಿ ಹೂಕೋಸಿನ ಚೂರುಗಳನ್ನು ಬರೆಸಿ ತುಪ್ಪ ಹಾಕಿ ಫ್ರೈಡ್‌ರೈಸ್‌ನಂತೆ ತಯಾರಿಸುವ ಎರಡೂ ಖಾದ್ಯಗಳನ್ನು ಒಂದೇ ತಟ್ಟೆಯಲ್ಲಿ ಕುದುರೆ ಲಾಳದ ಆಕಾರದಲ್ಲಿ ಇಟ್ಟು ಅಲಂಕಾರಕ್ಕಾಗಿ ಆ್ಯಪಲ್‌ ಚೂರುಗಳನ್ನು ಮತ್ತು ಚೆರ್‍ರಿ, ಟ್ಯೊಮೆಟೊ ಹಣ್ಣನ್ನು ಹಾಕಿ ಆಕರ್ಷಕವಾಗಿ ತಯಾರಿಸಲಾಗುತ್ತದೆ. ರುಚಿ ಕೂಡ ಭಿನ್ನ ಎನಿಸುತ್ತದೆ.

ಉತ್ತರ ಭಾರತ ಶೈಲಿಯ ಉಡುಪಿ ಖಾದ್ಯ

ಇನ್ನು ಇಲ್ಲಿ ಮಾತ್ರ ಸಿಗುವಂತಹ ವಿಶೇಷ ಖಾದ್ಯಗಳಲ್ಲಿ, ಉಡುಪಿ ಸ್ಪೆಷಲ್ ನಾರ್ತ್‌ ಇಂಡಿಯನ್‌ ಫ್ರೈಡ್‌ರೈಸ್‌ ಕೂಡ ಒಂದು.

ಕ್ಯಾರೆಟ್‌, ಹೂಕೋಸು, ಎಲೆಕೋಸು ಮೆಣಸಿನಕಾಯಿ ಹೀಗೆ ವಿವಿಧ ತರಕಾರಿಗಳ ಚೂರುಗಳನ್ನು ಹಾಕಿ, ಅದಕ್ಕೆ ತುಪ್ಪ, ಬೆಣ್ಣೆ ಹಾಕಿ ಈ ಫ್ರೈಡ್‌ರೈಸ್‌ ತಯಾರಿಸಲಾಗುತ್ತದೆ. ಅಲಂಕಾರಕ್ಕಾಗಿ ಬ್ಯಾಡಗಿ ಮೆಣಸಿಕನಕಾಯಿ ಇಟ್ಟು ಬಡಿಸಲಾಗುತ್ತದೆ. ತಿನ್ನುವಾಗ ಅಲ್ಲಲ್ಲಿ ಸಿಗುವ ಗೋಡಂಬಿ ಚೂರುಗಳು, ಪನೀರ್ ಚೂರುಗಳು ನಾಲಗೆಗೆ ಹಿತರಕ ರುಚಿ ನೀಡುತ್ತವೆ.

ಕಾಫಿ, ಟೀ, ಹಾಲು ಇತ್ಯಾದಿ ಬಿಸಿ ಪಾನೀಯಗಳು, ವಿವಿಧ ಬಗೆಯ ಜ್ಯೂಸ್‌ಗಳು, ಪಾನಿಪುರಿ, ಬೇಲ್‌ಪುರಿ, ದಹಿಪುರಿಯಂತಹ ಚಾಟ್ಸ್‌ಗಳು, ಗೋಬಿ, ಮಶ್ರೂಮ್‌, ಪಾವ್‌ ಮಂಚೂರಿಗಳೂ ಇಲ್ಲಿ ಸಿಗುತ್ತವೆ.

ಬೆಳಗಿನ ತಿಂಡಿಗೆ ಬಗೆ ಬಗೆಯ ರೈಸ್‌ಭಾತ್‌ಗಳು, ಇಡ್ಲಿ, ಪೂರಿ, ಚೌಚೌಬಾತ್‌ ಸಿಗುತ್ತದೆ. ಮಧ್ಯಾಹ್ನದ ಊಟಕ್ಕೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಶೈಲಿಯ ಊಟಗಳು ದೊರೆಯುತ್ತವೆ. ಇದೇ ರೀತಿ ರಾತ್ರಿ ಊಟಕ್ಕೂ ಸಿಗುತ್ತವೆ. ವಿವಿಧ ಖಾದ್ಯಗಳನ್ನು ತಯಾರಿಸುವುದಕ್ಕಾಗಿಯೇ ನುರಿತ 11 ಮಂದಿ ಅಡುಗೆ ಭಟ್ಟರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. 

2ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಪಾರ್ಸೆಲ್‌ ಸೌಲಭ್ಯವನ್ನೂ ನೀಡಲಾಗುತ್ತದೆ. ಜತೆಗೆ ಸ್ವಿಗ್ಗಿ, ಜೊಮ್ಯಾಟೊ, ಫುಡ್‌ಪಾಂಡಗಳ ಮೂಲಕವೂ ಆರ್ಡರ್‌ ಮಾಡಬಹುದು. 

ಉಡುಪಿ ಉಪಚಾರ

ಸಮಯ: ಬೆಳಗ್ಗೆ 7ರಿಂದ ರಾತ್ರಿ 10:30

ಸ್ಥಳ: ಯಾರಬ್‌ನಗರ ಮುಖ್ಯರಸ್ತೆ, ಮೊನೋಟೈಪ್‌ ಹತ್ತಿರ, ಬನಶಂಕರಿ ಎರಡನೇ ಹಂತ

ಸಂಪರ್ಕ: 080–26719977

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !