ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಪೇಕ್ಷಿತ ಪರಿಣಾಮಕ್ಕೆ ಆಸ್ಪದ ಬೇಡ

ಪ್ಲಾಸ್ಟಿಕ್‌ ನಿಷೇಧದ ಸುತ್ತ...
Last Updated 30 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

​ರಾಜ್ಯ ಸರ್ಕಾರ ಹಾನಿಕಾರಕವಾದ ಎಲ್ಲ ಬಗೆಯ ಪ್ಲಾಸ್ಟಿಕ್‌ ನಿಷೇಧಕ್ಕೆ ಮುಂದಾಗಿರುವುದು ಪರಿಸರ ಪ್ರೇಮಿಗಳಿಗೆ ನಿಜಕ್ಕೂ ಸಂತಸದ ಸುದ್ದಿ. ಇದರೊಂದಿಗೆ ಕರ್ನಾಟಕವೂ ಇತರ ಕೆಲವು ರಾಜ್ಯಗಳಂತೆ ಪರಿಸರದ ಕಾಳಜಿ ಬಗೆಗಿನ ತನ್ನ ಬದ್ಧತೆಯನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದಂತಾಗಿದೆ.

ಹಲವೆಡೆ ಈಗಾಗಲೇ ಪ್ಲಾಸ್ಟಿಕ್ ಕೈಚೀಲ ನಿಷೇಧಿಸಲಾಗಿದೆ, ಇಲ್ಲವೇ ಇದಕ್ಕೆ ಇನ್ನಷ್ಟು ಶುಲ್ಕ ಅಥವಾ ತೆರಿಗೆ ವಿಧಿಸಲಾಗಿದೆ. ಇಂಥ ಕ್ರಮಗಳಿಂದ ಇದರ ಬಳಕೆಯಂತೂ ಕಡಿಮೆಯಾಗಿರುವುದನ್ನು ಅಂತರ್ಜಾಲದ ಮೂಲಗಳು ತಿಳಿಸುತ್ತವೆ.

ಹಿಂದೆ ಮುಂಬೈನ ಚರಂಡಿ- ಮೋರಿಗಳಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿ ಅಲ್ಲಿ ಪ್ಲಾಸ್ಟಿಕ್ ಕೈಚೀಲ ನಿಷೇಧಿಸಲಾಯಿತು. ಹಾಗೆಯೇ ಊಟಿ, ಗೋವಾ ಹಾಗೂ ಇತರ ಕಡೆಗಳಲ್ಲಿ ಪ್ಲಾಸ್ಟಿಕ್ ಕೈಚೀಲ ನಿಷೇಧ ಜಾರಿಯಲ್ಲಿದೆ. ಈಗ ನಮ್ಮ ರಾಜ್ಯದ ಸರದಿ.

ಸ್ಯಾನ್‌ಫ್ರಾನ್ಸಿಸ್ಕೊ ನಗರ 2007ರಲ್ಲಿ ಅಮೆರಿಕದಲ್ಲಿ ಮೊದಲು ಪ್ಲಾಸ್ಟಿಕ್ ಕೈ ಚೀಲ ನಿಷೇಧಿಸಿದ ಖ್ಯಾತಿ ಹೊಂದಿದೆ. ನಂತರ ಈ ಬಗೆಯ ನಿಷೇಧ ಬೇರೆಡೆಯೂ ಜಾರಿಗೆ ಬಂದಿತು. ಟೆಕ್ಸಾಸ್ ರಾಜ್ಯದ ಆಸ್ಟಿನ್ ಪಟ್ಟಣದಲ್ಲಿ ತೆಳುವಾದ ಪ್ಲಾಸ್ಟಿಕ್ ಕೈಚೀಲ ನಿಷೇಧಿಸಿದ ನಂತರ ಎಲ್ಲೆಡೆ ದಪ್ಪನೆಯ ಪ್ಲಾಸ್ಟಿಕ್ ಚೀಲಗಳ ಹಾವಳಿ ಹೆಚ್ಚಾಯಿತಂತೆ.

ಕೆಲವೊಮ್ಮೆ ಮುಂಜಾಗ್ರತೆ ಹಾಗೂ ಅಗತ್ಯ ಜಾಗೃತಿ ಇಲ್ಲದ ದಿಢೀರ್‌ ನಿಷೇಧದಂತಹ ಕ್ರಮಗಳು ಈ ಬಗೆಯ ಅನಪೇಕ್ಷಿತ ಪರಿಣಾಮಗಳಿಗೂ ಎಡೆಮಾಡಿಕೊಡುತ್ತವೆ. ಅಂದಹಾಗೆ ಈಗಾಗಲೇ ಪ್ಲಾಸ್ಟಿಕ್‌ ನಿಷೇಧವಾಗಿರುವ ಊರುಗಳ ಚರಂಡಿ- ಮೋರಿಗಳಲ್ಲಿ ಪ್ಲಾಸ್ಟಿಕ್ ಹೊರತಾದ ಇತರ ಘನತ್ಯಾಜ್ಯಗಳು ಸಂಗ್ರಹವಾಗಿ ನೀರು ಲೀಲಾಜಾಲವಾಗಿ ಹರಿಯಲು ತೊಡಕಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವಷ್ಟೇ ಸಾಲದು, ಇತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಯೂ ಪರಿಸರ ಸಮತೋಲನಕ್ಕೆ ಅಷ್ಟೇ ಅಗತ್ಯ.

ಪ್ಲಾಸ್ಟಿಕ್‌ ನಿಷೇಧದಿಂದ ಮತ್ತೊಂದು ಪರಿಣಾಮ ಆಗುವುದು ಪ್ಲಾಸ್ಟಿಕ್ ಆಧಾರಿತ ಉದ್ಯಮ, ಪ್ಲಾಸ್ಟಿಕ್ ಪುನರ್‌ಬಳಕೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಹಾಗೂ ಅಲ್ಲಿನ ಕಾರ್ಮಿಕರ ಬದುಕಿನ ಮೇಲೆ.

ಬೆಂಗಳೂರಿನ ನಾಯಂಡನಹಳ್ಳಿ ಸುತ್ತಮುತ್ತ ಇರುವ ಪ್ಲಾಸ್ಟಿಕ್ ಪುನರ್‌ಬಳಕೆಯ ಸಣ್ಣ ಉದ್ಯಮಕ್ಕೆ ತೀವ್ರವಾದ ಪೆಟ್ಟು ಬೀಳಲಿದೆ. ಸ್ವಲ್ಪಮಟ್ಟಿಗೆ ಪರಿಸರಕ್ಕೆ ಹಾನಿಯುಂಟು ಮಾಡದಂತೆ ಕಾರ್ಯ ನಿರ್ವಹಿಸುತ್ತಿದ್ದ ಪುನರ್‌ಬಳಕೆ ಉದ್ದಿಮೆಯ ಪಾತ್ರವನ್ನು ಕಡೆಗಣಿಸಿದಂತಾಗಿದೆ.

ಈಗಂತೂ ಜನರಿಗೆ ಅಂಗಡಿಯಲ್ಲಿ ಕೊಂಡದ್ದನ್ನು ಹೊತ್ತು ತರಲು ಪ್ಲಾಸ್ಟಿಕ್ ಕೈಚೀಲದ ಬಳಕೆ ಅತಿ ಹೆಚ್ಚು ಅನುಕೂಲಕರವಾದ ಲೋಕಾರೂಢಿಯ ಕ್ರಮವಾಗಿದೆ. ನಗರಗಳಲ್ಲಿ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಕೈ ಚೀಲದ ಪ್ರಮಾಣ ಶೇಕಡ 2ಕ್ಕಿಂತ ಕಡಿಮೆ ಎಂದು ಅಧ್ಯಯನಗಳು ತಿಳಿಸುತ್ತವೆ. ಸಾಮಾನ್ಯವಾಗಿ ಪ್ರತಿ ನಗರವೂ ತನ್ನದೇ ಆದ ಪ್ಲಾಸ್ಟಿಕ್‌ ಮರುಬಳಕೆ ವ್ಯವಸ್ಥೆ ಹೊಂದಿರುತ್ತದೆ. ಇಷ್ಟಾದರೂ ಪ್ಲಾಸ್ಟಿಕ್‌ ಕೈಚೀಲಗಳ ಬೇಜವಾಬ್ದಾರಿ ವಿಲೇವಾರಿ ಪರಿಸರದ ಹಾನಿಗೆ ಕಾರಣವಾಗಿರುವುದೂ ವಾಸ್ತವ.
ಪ್ಲಾಸ್ಟಿಕ್ ತ್ಯಾಜ್ಯ ಸುಲಭದಲ್ಲಿ ಕೊಳೆಯುವ ಪದಾರ್ಥವಲ್ಲ. ಬಳಕೆಯಾಗುವ ಎಲ್ಲ  ಪ್ಲಾಸ್ಟಿಕ್ ಪದಾರ್ಥಗಳೂ ಮರುಬಳಕೆ ವ್ಯವಸ್ಥೆಗೆ ಒಳಪಡದೆ ಪರಿಸರಮಾಲಿನ್ಯಕ್ಕೆ ಕಾರಣವಾಗುತ್ತಿವೆ.

ವಿಕಾಸಗೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಪರಿಸರವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸುಸ್ಥಿರ ಅಭಿವೃದ್ಧಿಗೆ ಪರಿಸರದ  ಸಮತೋಲನ ಅತ್ಯಗತ್ಯ. ಆದರೆ ಪ್ಲಾಸ್ಟಿಕ್‌ ನಿಷೇಧ ಮಾತ್ರದ ನಿರ್ಣಯದಿಂದಷ್ಟೇ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ.

ಇಂತಹ ಕ್ರಮಗಳನ್ನು ಜಾರಿಗೆ ತರುವ ಮುನ್ನ ಸಮಗ್ರ ಚಿಂತನೆ, ಅಧ್ಯಯನದ ಜೊತೆಗೆ ಜನರ ಸಹಕಾರವೂ ಅಗತ್ಯವಾಗಿ ಬೇಕು. ಆನಂತರ ಜಾರಿಗೆ ಬರುವ ಕ್ರಮಗಳು ವಾಸ್ತವಕ್ಕೆ ಹತ್ತಿರವಾಗಿರಬೇಕು. ಹೀಗಾಗಿ, ಈಗ ಜಾರಿಆಗಲಿರುವ ಪ್ಲಾಸ್ಟಿಕ್‌ ನಿಷೇಧ ಸಮಾಜದಲ್ಲಿ ಯಾವ ರೀತಿಯ​ ​ಬದಲಾವಣೆ ​ತರಬಲ್ಲದು ಹಾಗೂ ಎಷ್ಟರ ಮಟ್ಟಿಗೆ ಪರಿಸರ ಮಾಲಿನ್ಯ ತಗ್ಗಿಸಬಲ್ಲದು ಎಂಬುದನ್ನು ಕಾದು ನೋಡಬೇಕಾಗಿದೆ.

ರಾಜ್ಯದಲ್ಲಿನ ಸ್ಥಿತಿಗತಿ
70 ಸಾವಿರ ನೌಕರರು ಪ್ಲಾಸ್ಟಿಕ್‌ ಉದ್ದಿಮೆಯಲ್ಲಿದ್ದಾರೆ
9 ಸಾವಿರ ಟನ್ ಒಟ್ಟು ತ್ಯಾಜ್ಯ ನಿತ್ಯ ಉತ್ಪಾದನೆ
450 ಟನ್ ಪ್ಲಾಸ್ಟಿಕ್‌ ತ್ಯಾಜ್ಯ ಇದರಲ್ಲಿ ಸೇರಿದೆ
775 ಟನ್ ಪ್ಲಾಸ್ಟಿಕ್‌ ತ್ಯಾಜ್ಯ 2020ರ ವೇಳೆಗೆ  ಉತ್ಪಾದನೆ(ಈಗಿನಂತೆ ಪ್ಲಾಸ್ಟಿಕ್‌ ಬಳಕೆ ಮುಂದುವರಿದರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT