ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಮಾಡಿಕೊಂಡರೆ ಪರಿಹಾರ ಸುಲಭ

Last Updated 27 ಮೇ 2011, 19:30 IST
ಅಕ್ಷರ ಗಾತ್ರ

ಪೊಲೀಸರ ಮೇಲೆಯೇ ಸಾರ್ವಜನಿಕರು ಕೈ ಎತ್ತುತ್ತಿರುವ ಘಟನೆ ಗಳು ಇತ್ತೀಚಿನ ದಿನಗ ಳಲ್ಲಿ ಹೆಚ್ಚು ಹೆಚ್ಚಾಗಿ ನಡೆಯಲು ಕಾರಣ ವೇನೆಂದು ಊಹಿ ಸುವುದು ಕಷ್ಟವೇನೂ ಅಲ್ಲ. ಬ್ರಿಟಿಷ್ ಕಾಲದ ಪೊಲೀಸ್ ವರ್ತನೆಯ ಚಾಳಿ ಇನ್ನೂ ಬಿಡದ  ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಂದ ಕಾಲಕ್ರಮೇಣ ದೂರವಾಗುತ್ತಾ ಬರುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೇ ಉಳಿದಿಲ್ಲ.

ಮೊನ್ನೆ ನಡೆದ ಘಟನೆಯೊಂದನ್ನು ಇಲ್ಲಿ ಉದಹರಿಸ ಬಯಸುತ್ತೇನೆ.  ನನ್ನ ಮಗಳ ಮನೆಯಲ್ಲಿ ತೆರೆದ ಬಾಗಿಲನ್ನು ದೂಡಿಕೊಂಡು ಬಂದ ಕಳ್ಳನೊಬ್ಬ ಅವಳ ಬ್ಯಾಗ್, ಮೊಬೈಲ್ ಇತ್ಯಾದಿಗಳನ್ನು ಕದ್ದೊಯ್ದ.  ಕೂಡಲೇ ನನ್ನ ಮಗಳು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲು ಹೋದಳು.  ಅಲ್ಲಿದ್ದ ಪೊಲೀಸ್ ಅಧಿಕಾರಿ `ನಿಮ್ಮ ಮನೆಯಲ್ಲಿ ಕಳ್ಳತನ ಆಗಿದೆ ಎನ್ನುವುದನ್ನು ನಾವು ನಂಬಲು ಹೇಗೆ ಸಾಧ್ಯ?~ ಎಂದು ಕೇಳಿದ. ನನ್ನ ಮಗಳು ಸಮರ್ಪಕ ವಿವರಣೆ ನೀಡಿದಾಗ, `ನೀವೇ ನಿಮ್ಮ ಬ್ಯಾಗನ್ನು ಬಸ್‌ನಲ್ಲೋ, ಬೇರೆ ಜಾಗದಲ್ಲೊ ಮರೆತಿಲ್ಲ ಎನ್ನುವ ಗ್ಯಾರೆಂಟಿ ಏನು?~ ಎಂದು ಮರು ಪ್ರಶ್ನಿಸಿದ. ವಕೀಲ ವೃತ್ತಿಯಲ್ಲಿರುವ ನನ್ನ ಮಗಳು ಸೂಕ್ತ ಉತ್ತರ ನೀಡಿದಾಗ, ಆ ಪೊಲೀಸ್ ಅಧಿಕಾರಿ `ಈ ಪ್ರಕರಣವು ನಮ್ಮ ಠಾಣಾ ವ್ಯಾಪ್ತಿಗೆ ಬರುವುದಿಲ್ಲ. ನೀವು ಇನ್ನೊಂದು ಠಾಣೆಯನ್ನು ಸಂಪರ್ಕಿಸಿ~ ಎಂದು ಉತ್ತರಿಸಿದ.  ಸುಮಾರು ಎರಡು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿ ಸಮಯ ಕಳೆದಿದ್ದ ನನ್ನ ಮಗಳು ಕೊನೆಗೆ ಪೊಲೀಸರಿಗೆ ತನ್ನ ಪರಿಚಯ ಹೇಳಿಕೊಂಡು, ತಾನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಗಳು ಎಂಬ ವಿಷಯ ತಿಳಿಸಿದಾಗ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಅವಳ ಮನೆಗೆ ಬಂದು ತನಿಖೆ ಪ್ರಾರಂಭಿಸಿದರು.

ಕಳೆದ ವಾರವಷ್ಟೇ ಚಿತ್ರ ನಟಿಯೊಬ್ಬರು ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಜೈಲಿಗೆ ಹೋದ ಸುದ್ದಿ ಬೆಂಗಳೂರಿನಿಂದ ವರದಿಯಾಗಿದೆ. ಇದೇ ಘಟನೆಯ ಬಗ್ಗೆ ಆಕೆಯ ವಿವರಣೆ, ಸಂಬಂಧಿಸಿದ ಪೊಲೀಸ್ ಅಧಿಕಾರಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಏಕವಚನದಲ್ಲಿ ಸಂಭೋದಿಸಿ ಅಶ್ಲೀಲ ಭಾಷೆ ಬಳಸಿದ್ದು ತನ್ನನ್ನು ರೊಚ್ಚಿಗೇಳಿಸಿತು ಎಂದು.  ಕಳೆದ ವಾರವೇ ಉತ್ತರ ಕನ್ನಡದ ಅಂಕೋಲದಲ್ಲಿ ಸಾರ್ವಜನಿಕರು ಪೊಲೀಸ್ ಅಧಿಕಾರಿಯೊಬ್ಬರ ವರ್ತನೆ ಬಗ್ಗೆ ಪ್ರತಿಭಟಿಸುತ್ತಾ, ಠಾಣೆ ಮುಂದೆ ಜಮಾಯಿಸಿ ಧಿಕ್ಕಾರ ಹಾಕಿದ ಸುದ್ದಿ ಬಂದಿದೆ.  ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಪಾನಮತ್ತ ವಿದೇಶಿ ವಿದ್ಯಾರ್ಥಿನಿಯೊಬ್ಬಳು ತನ್ನ ವಾಹನವನ್ನು ನಿಲ್ಲಿಸಿದ  ಕಾನ್ಸ್‌ಟಬಲ್ ಮೇಲೆ ಕೈ ಮಾಡಿದ ಸುದ್ದಿ ಇನ್ನೂ ಹಸಿರಾಗಿದೆ.

ಇಂತಹ ಘಟನೆಗಳನ್ನು ಗಮನಿಸಿದರೆ ಯಾವ ಕಾರಣಕ್ಕಾಗಿ ಸಾರ್ವ ಜನಿಕರು ಪೊಲೀಸರ ಬಗ್ಗೆ ರೋಸಿ ಹೋಗಿ ದ್ದಾರೆ ಎಂದು ಊಹಿ ಸುವುದು ಕಷ್ಟವಾಗುವು ದಿಲ್ಲ. ಪೊಲೀಸ್ ಠಾಣೆಗೆ ಹೋದ ಸಾರ್ವ ಜನಿಕರಿಗೆ, ಇಲ್ಲವೇ ಸಾರ್ವಜನಿಕ ಸ್ಥಳದಲ್ಲಿ ಪೊಲೀಸರೊಡನೆ ಮುಖಾಮುಖಿ ಆಗುವ ಸಾರ್ವಜನಿಕರಿಗೆ ಆಗುವ ಸಾರ್ವತ್ರಿಕ ಅನುಭವದ ಪ್ರಕಾರ ಪೊಲೀಸರು ಕೆಟ್ಟದಾಗಿ ವರ್ತಿಸುವವರು; ಕೆಟ್ಟ ಭಾಷೆಯನ್ನು ಉಪಯೋಗಿಸುವವರು; ಹಾರಿಕೆಯ ಉತ್ತರ ನೀಡುವವರು; ನೋವಿಗೆ ಸ್ಪಂದಿಸದೇ ಇರುವವರು ಎನ್ನುವುದು.  ವರ್ಷವೊಂದಕ್ಕೆ ಪೊಲೀಸ್ ಅಧಿಕಾರಿಗಳ ವಿರುದ್ಧ ನಮ್ಮ ರಾಜ್ಯದಲ್ಲಿಯೇ ಸುಮಾರು 8000 ದೂರುಗಳು  ಹಿರಿಯ ಪೊಲೀಸ್ ಅಧಿಕಾರಿಗಳಿಗೆ  ಬರುತ್ತವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಇವು ವಾಸ್ತವವಾಗಿ ತೀರಾ ಕಡಿಮೆ ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ನೂರಕ್ಕೆ 90ರಷ್ಟು ಜನ ಪೊಲೀಸರ ವಿರುದ್ದ ದೂರು ನೀಡಲು ಹಿಂಜರಿಯುತ್ತಾರೆ. 

ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಬಾಂಧವ್ಯ ಹದಗೆಡಲು ಕಾರಣಗಳು ವಿದಿತವಾಗಿರುವಾಗ ಪೊಲೀಸರು ಸಾರ್ವಜನಿಕರೊಡನೆ ತಮ್ಮ ಬಾಂಧವ್ಯ ಸರಿಪಡಿಸಿಕೊಳ್ಳಲು  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇಬೇಕಾಗಿದೆ.  ಜನ ಸಂಪರ್ಕ ಸಭೆಗಳನ್ನು ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಕಾಲಕಾಲಕ್ಕೆ ಆಲಿಸಬೇಕು, ಸಾರ್ವಜನಿಕರ ನೋವಿಗೆ ಸ್ಪಂದಿಸಬೇಕು ಎಂದು ಹಿರಿಯ ಅಧಿಕಾರಿಗಳು ಪದೇ ಪದೇ ಸುತ್ತೋಲೆಗಳ ಮೇಲೆ ಸುತ್ತೋಲೆಗಳನ್ನು ಹೊರಡಿಸುತ್ತಿದ್ದರೂ ಪರಿಸ್ಥಿತಿ ಇನ್ನೂ ಬದಲಾಗಿಯೇ ಇಲ್ಲ. 

ಸಾರ್ವಜನಿಕರೊಡನೆ ಸಂಬಂಧ ಉತ್ತಮಗೊಂಡರೆ ತಮ್ಮ ಕೆಲಸವೇ ಹಗುರವಾಗುತ್ತದೆ ಎನ್ನುವ ಸತ್ಯ ಸಾಕಷ್ಟು ಪೊಲೀಸರಿಗೆ ತಿಳಿದಿಲ್ಲ.  ನಾನು ಈ ಹಿಂದೆ ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡಾಗ ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯ ಅತಿ ದೊಡ್ಡ ಬಿರುಕು ಉಂಟಾಗಿತ್ತು. ಪೊಲೀಸರ ಬಗ್ಗೆ ಸಾರ್ವಜನಿಕರಿಗೆ ನಂಬಿಕೆಯೇ ಇರದೆ ಅವರನ್ನು ಸಂಶಯದಿಂದ ನೋಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಪೊಲೀಸರ ವಿಶ್ವಾಸಾರ್ಹತೆ ಹೆಚ್ಚಿಸಲು ನಾನು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ. ಮೊದಲಿಗೆ ಸಾರ್ವಜನಿಕರಿಗೆ ಪೊಲೀಸರ ಮೇಲೆ ಇರುವ ಭಯವನ್ನು ಹೋಗಿಸಲು ನಾನು ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹಲವಾರು ಬಡಾವಣೆಗಳಿಗೆ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುತ್ತಿದ್ದೆವು.  ಇದಲ್ಲದೆ, ಮಹಿಳಾ ಸಂಘಟನೆಗಳು, ರೋಟರಿ ಕ್ಲಬ್, ಚೇಂಬರ್ ಆಫ್ ಕಾಮರ್ಸ್ ಇತ್ಯಾದಿ ಜಾಗಗಳಿಗೆ ಪದೇ ಪದೇ ಭೇಟಿ ನೀಡಿ ಪೊಲೀಸರ ಬಗ್ಗೆ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ಇರುವ ಹಲವಾರು ಸಂದೇಹಗಳನ್ನು ನಿವಾರಿಸುತ್ತಿದ್ದೆವು.  ಮಕ್ಕಳಿಗಾಗಿ ಪೊಲೀಸರು ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್ ಕರ್ತವ್ಯಗಳ ಬಗ್ಗೆ  ವಿವರಣೆ ನೀಡುತ್ತಿದ್ದೆವು. ಅಪರಾಧಗಳನ್ನು ತಪ್ಪಿಸಲು ಸಾರ್ವಜನಿಕರು ಏನು ಮಾಡಬೇಕು ಎನ್ನುವ ತಿಳುವಳಿಕೆಯನ್ನೂ ಈ ಮುಖಾಮುಖಿಯಲ್ಲಿ ನೀಡುತ್ತಿದ್ದೆವು.  ಸಾರ್ವಜನಿಕರು ಈ ಕಾರ್ಯಕ್ರಮಗಳಿಂದ ಪೊಲೀಸರಿಗೆ ಎಷ್ಟು ಹತ್ತಿರವಾಗಿದ್ದರೆಂದರೆ ಯಾವುದೇ ಒಂದು ಸಂಶಯಾಸ್ಪದ ಘಟನೆ ನಡೆದರೂ ಅಥವಾ ಸಂಶಯಾಸ್ಪದ ವಸ್ತುವನ್ನು ಕಂಡರೂ ಅವರು ತತ್‌ಕ್ಷಣ ನನಗಾಗಲೀ, ಹಿರಿಯ ಅಧಿಕಾರಿಗಳಿಗಾಗಲೀ ಅಥವಾ ಪೊಲೀಸ್ ಕಂಟ್ರೋಲ್ ರೂಂ ಗಾಗಲೀ ಸುದ್ದಿ ಮುಟ್ಟಿಸುತ್ತಿದ್ದರು.  ಈ ರೀತಿ ಫಸ್ಟ್-ಹ್ಯಾಂಡ್ ಸುದ್ದಿ ಬರುತ್ತಿದ್ದುದರಿಂದ ನಾವು ಕೂಡಲೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದವು. ನನಗೆ ಹೆಮ್ಮೆ ತರುವ ಸಂಗತಿಯೆಂದರೆ ನಾನು ಹುಬ್ಬಳ್ಳಿಯಲ್ಲಿ ಕಮಿಷನರ್ ಆಗಿ ಇದ್ದ ಎರಡು ವರ್ಷವೂ ಯಾವುದೇ ದೊಡ್ಡ ಕಾನೂನು ಸುವ್ಯವಸ್ಥೆ ಘಟನೆ ನಡೆಯಲಿಲ್ಲ.

ಅಪರಾಧಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಆಯಿತು.  ಎರಡು ವರ್ಷಗಳ ಕಾಲ ಒಂದೇ ಒಂದು ದರೋಡೆಯ ಪ್ರಕರಣವೂ ದಾಖಲಾಗಲಿಲ್ಲ. ಅಪರಾಧ ಪತ್ತೆ ಹಾಗೂ ನಿಯಂತ್ರಣದಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಮುಗಿಲು ಮುಟ್ಟಿತು. 
ಇಂತಹದೇ ಹಲವಾರು ರೀತಿಯ ಕಾರ್ಯಕ್ರಮಗಳನ್ನು ವಿವಿಧ ಪೊಲೀಸ್ ಅಧಿಕಾರಿಗಳು ಬೇರೆ ಬೇರೆ ಸ್ಥಳಗಳಲ್ಲಿ ಜಾರಿಗೊಳಿಸಿದ್ದಾರೆ. ಜಾರಿಗೊಳಿಸುತ್ತಲೂ ಇದ್ದಾರೆ.  ಉದಾಹರಣೆಗೆ ಇತ್ತಿಚೆಗೆ ಮೈಸೂರಿನಲ್ಲಿ ಪೊಲೀಸರ ಸಹಭಾಗಿತ್ವದಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವ ಒಂದು ಹೊಸ ಯೋಜನೆಯೊಂದನ್ನು ರೂಪಿಸಲಾಗಿದೆ.   ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ `ಮನೆ ಮನೆಗೂ ಪೊಲೀಸರು~ ಎನ್ನುವ ಹೊಸ ಕಾರ್ಯಕ್ರಮ ರೂಪಿಸಿ ಪ್ರತಿ ಪೊಲೀಸ್ ಕಾನ್ಸ್‌ಟಬಲ್ ಸುಮಾರು 200 ಮನೆಗಳ ನಿವಾಸಿಗಳಿಗೆ ಸ್ನೇಹಿತನಾಗುವಂತೆ ಪ್ರೇರೇಪಿಸಿದ್ದಾರೆ. ಇಂತಹ ಯೋಜನೆಗಳಿಂದ ಪೊಲೀಸರು ಸಾರ್ವಜನಿಕರ ಸಮೀಪ ಬರುವುದರಲ್ಲಿ ಸಂಶಯವೇ ಇಲ್ಲ. ಆದರೆ ದುರದೃಷ್ಟಕರ ಸಂಗತಿ ಎಂದರೆ ಒಬ್ಬ ಅಧಿಕಾರಿ ವರ್ಗಾವಣೆ ಆದಾಗ ಆತನ ಬದಲಾಗಿ ಬರುವವರು ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸದೇ ಇರುವುದು. ಇಂತಹ ಕಾರ್ಯಕ್ರಮಗಳು ರಾಜ್ಯವ್ಯಾಪಿ ಆಗಬೇಕು ಹಾಗೂ ಮುಂದುವರಿಯುತ್ತಲೇ ಬರುವಂತೆ ನೋಡಿಕೊಳ್ಳಲು ಪೊಲೀಸ್ ಮುಖ್ಯಸ್ಥರು ನೆರವಾಗಬೇಕು.

ಪೊಲೀಸರು ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿದರೆ ತಮ್ಮ ಕೆಲಸವೇ ಹಗುರವಾಗುತ್ತದೆ ಎಂದು ಪೊಲೀಸರು ಅರ್ಥಮಾಡಿಕೊಳ್ಳಬೇಕು.  ಸಾರ್ವಜನಿಕರು ತಮ್ಮ ಬಳಿ ಬಂದರೆ ತಮಗೆ ತಲೆ ನೋವು, ತಮ್ಮ ಕೆಲಸ ಹೆಚ್ಚಾಗುತ್ತದೆ ಎನ್ನುವ ಭಾವನೆಯನ್ನು ಪೊಲೀಸರು ಹೊಂದಿರುವುದರಿಂದ ಸಾರ್ವಜನಿಕರು ಅವರಿಂದ ದೂರವಾಗುತ್ತಿದ್ದಾರೆ. ಇದು ಕೂಡಲೆ ಹೋಗಬೇಕು. ಸಾರ್ವಜನಿಕರು ಪೊಲೀಸರ ಜೊತೆ ಸಾಕಷ್ಟು ಬೆರೆಯದೇ ಹೋಗುವುದರಿಂದ ಪೊಲೀಸರ ಕಷ್ಟಸುಖಗಳ ಬಗ್ಗೆ ಅವರಿಗೆ ಅರಿವೇ ಆಗುತ್ತಿಲ್ಲ. ಹೀಗಾಗಿ ಪೊಲೀಸರಿಂದ ಒಂದು ಸಣ್ಣ ಅಚಾತುರ್ಯ ಆದರೂ ಅವರ ವಿರುದ್ಧ ಜನ ರೊಚ್ಚಿಗೇಳುತ್ತಿದ್ದಾರೆ. ಇದರ ಫಲವಾಗಿಯೇ ಪೊಲೀಸರ ಮೇಲೆ ಕೈ ಮಾಡುವುದು, ಪೊಲೀಸರ ವಿರುದ್ಧ ಘೋಷಣೆ ಕೂಗುವುದು ಇತ್ಯಾದಿಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆಯೂ ಹೇಳಬೇಕಾದ ಅವಶ್ಯಕತೆ ಇದೆ. ಪೊಲೀಸರು ಬಹಳ ಕ್ಲಿಷ್ಟ ಸಂದರ್ಭಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ರಜೆ ಮತ್ತಿತರ ಸೌಲಭ್ಯಗಳನ್ನು ಬೇರೆಯವರಿಗಿಂತ ಕಡಿಮೆ ಉಪಯೋಗಿಸಿಕೊಂಡು ಜನಸೇವೆಗೆ ತಮ್ಮನ್ನು ಮೀಸಲಿಡುತ್ತಾರೆ. ಪೊಲೀಸ್ ಕೆಲಸ ಸಾಕಷ್ಟು ಒತ್ತಡದ ಕೆಲಸವಾದ್ದರಿಂದ ಈ ಕೆಲಸದಲ್ಲಿ ಒತ್ತಡ ಹೆಚ್ಚಾದಾಗ ಅವರ ತಾಳ್ಮೆಯೂ ಕೆಡುತ್ತದೆ. ಪೊಲೀಸರ ಸಂಖ್ಯಾ ಬಲ ಕಡಿಮೆ ಇರುವುದರಿಂದ ಅವರ ಕೆಲಸವೂ ಭಾರ. ಇದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಹಲವಾರು ನಾಗರಿಕರು ವಿಫಲರಾಗಿರುವುದರಿಂದ ಪದೇ ಪದೇ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಿರಸ ಏರ್ಪಡುತ್ತಿದೆ. ಎಲ್ಲಾ ಸಂದರ್ಭಗಳಿಗೂ ಪೊಲೀಸರನ್ನೇ ನಾಗರಿಕರು ದೂಷಿಸುತ್ತಾ ಬರುತ್ತಿದ್ದಾರೆ.  ಇದೂ ಸರಿಯಲ್ಲ. ಈ ಮೊದಲೇ ಹೇಳಿದಂತೆ ಪೊಲೀಸರಲ್ಲೂ ಸಮಸ್ಯೆ ಇದೆ.

ಸಾರ್ವಜನಿಕರಲ್ಲೂ ಇದೆ. ಆದರೆ ಪೊಲೀಸರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸಾರ್ವಜನಿಕರು ವಿಫಲರಾಗಿರುವುದರಿಂದ ಪದೇ ಪದೇ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ. ಈ ರೀತಿಯ ಸಂಘರ್ಷಗಳು ನಿವಾರಣೆ ಆಗಬೇಕಾದರೆ ಇಬ್ಬರೂ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಬೇಕು. ಆಗಲೇ ಇಂತಹ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.

(ಲೇಖಕರು ಡಿಜಿಪಿ ದರ್ಜೆಯ ಅಧಿಕಾರಿ. ಈ ಲೇಖನದಲ್ಲಿನ ಅಭಿಪ್ರಾಯಗಳು ಅವರ ವೈಯಕ್ತಿಕ ಅನಿಸಿಕೆಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT