ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ಗೆ ಏಕೆ ತಕರಾರು?

Last Updated 4 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಯಾವುದೇ ಒಂದು ವ್ಯವಸ್ಥೆಯಲ್ಲಿ ಏನಾದರೂ ಪರಿವರ್ತನೆ ತಂದರೆ, ಹೊಸದನ್ನು ಅಳವಡಿಸಿ ದರೆ ಮನಸ್ಸು ತಕ್ಷಣ ಅದನ್ನು ಒಪ್ಪಿಕೊಳ್ಳುವುದಿಲ್ಲ (ಆದರೆ ಇದು ಮೊಬೈಲ್‌ ಮತ್ತಿತರ ಆಧುನಿಕ ಸಾಧನಗಳಿಗೆ ಮಾತ್ರ ಅನ್ವಯಿಸುವುದಿಲ್ಲ). ಅನುಮಾನದಿಂದಲೇ ನೋಡುತ್ತದೆ. ಇದು ಮಾನವ ಸಹಜ ಸ್ವಭಾವ. ‘ಆಧಾರ್‌ ಕಾರ್ಡ್‌’  ವಿಷಯದಲ್ಲೂ ಆಗಿರುವುದು ಇದೇ.

ಜತೆಗೆ, ಆಧಾರ್‌   ಅರ್ಜಿದಾರರ ಬೆರಳಚ್ಚು ಗುರುತು ಮತ್ತು ಕಣ್ಣಿನ ಗುಡ್ಡೆಯ ಚಿತ್ರ ಸಂಗ್ರಹಣೆಯನ್ನು ಅನೇಕರು ‘ವ್ಯಕ್ತಿಯೊಬ್ಬನ ತೀರಾ ಖಾಸಗಿ ಮತ್ತು ವಿಶಿಷ್ಟ ಜೈವಿಕ ಮಾಹಿ ತಿಯ ಮೇಲೆ ಸರ್ಕಾರದ ಆಕ್ರಮಣ’ ಎಂದೇ ಭಾವಿಸುತ್ತಾರೆ. ಆದರೆ ‘ಆಧಾರ್‌’ನಿಂದ ಸಾಕಷ್ಟು ಪ್ರಯೋಜನವೂ ಇದೆ. ತಕರಾರಿನ ಅಬ್ಬರದ ಮುಂದೆ ಅದು ಮಂಕಾಗಿದೆಯಷ್ಟೇ.

ಸರ್ಕಾರಿ ಯೋಜನೆಗಳು, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಲಾಭವನ್ನು ನೇರವಾಗಿ ಅರ್ಹರಿಗೆ ತಲುಪಿಸುವಲ್ಲಿ ಆಧಾರ್‌ ಮಹತ್ವದ ಪಾತ್ರ ವಹಿಸುತ್ತದೆ.
ಆಧಾರ್‌ ಸಂಖ್ಯೆಯನ್ನು ಈ ಯೋಜನೆಗಳಿಗೆ ಜೋಡಿಸಿದರೆ ಸಾಕು. ಒಬ್ಬನೇ ವ್ಯಕ್ತಿ ಅಥವಾ ಕುಟುಂಬ ನಿಯಮ ಮೀರಿ ಹಲವಾರು  ಸೌಲಭ್ಯಗಳನ್ನು ಕಬಳಿಸುವುದನ್ನು ತಪ್ಪಿಸಬಹುದು. ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಪಡೆಯದಂತೆ ಮಾಡಬಹುದು.

ವಸತಿ ಯೋಜನೆಗಳು, ರಿಯಾಯಿತಿ ಸಾಲ, ಸ್ಕಾಲರ್‌ಶಿಪ್‌ ಹಣ ವಿತರಣೆ, ಕಡುಬಡವರು, ನಿರ್ಗತಿಕರು, ವಿಧವೆಯರು, ವೃದ್ಧರಿಗೆ ಸರ್ಕಾರ ನೀಡುವ ಮಾಸಾಶನಗಳ ದುರುಪಯೋಗಕ್ಕೆ ಕಡಿವಾಣ ಹಾಕಬಹುದು. ಸರ್ಕಾರಿ ಹಣದ ಸೋರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಹತ್ತಾರು ಬಗೆಯ ಗುರುತಿನ ಚೀಟಿಗಳನ್ನು ಇಟ್ಟುಕೊಳ್ಳಬೇಕಾದ ಶ್ರಮ ಕಡಿಮೆ ಮಾಡಬಹುದು. ಒಟ್ಟಾರೆ ಬಹು ಉದ್ದೇಶದ ಗುರುತು ಚೀಟಿಯಾಗಿ ಮಾರ್ಪಡಿಸಬಹುದು.
ಅಷ್ಟಕ್ಕೂ ಇಂಥ ವ್ಯವಸ್ಥೆ ನಮ್ಮಲ್ಲಿ ಮಾತ್ರವಲ್ಲ, ಮುಂದುವರಿದ ದೇಶಗಳಲ್ಲೂ ಇದೆ. ಆದರೆ ವಿತರಣೆ, ಮಾಹಿತಿ ಸಂಗ್ರಹ ವ್ಯವಸ್ಥೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಇರಬಹುದಷ್ಟೇ.

ಅಮೆರಿಕದಲ್ಲಿ  ಅಸ್ತಿತ್ವದಲ್ಲಿ ಇರುವ ಒಂಬತ್ತು ಅಂಕಿ, ಸಂಕೇತಾಕ್ಷರಗಳನ್ನು ಒಳಗೊಂಡ ‘ಸಾಮಾಜಿಕ ಸುರಕ್ಷತಾ ಕಾರ್ಡ್‌’ ಅಥವಾ ಎಸ್‌ಎಸ್‌ಸಿ (social security card) ನಮ್ಮ ಆಧಾರ್‌ನ ಮತ್ತೊಂದು ರೂಪ. ಮಗು ಹುಟ್ಟಿದ ಕೂಡಲೇ ಅದಕ್ಕೊಂದು ಸಂಖ್ಯೆ ಕೊಡಲಾಗುತ್ತದೆ. ಬದುಕಿ ನುದ್ದಕ್ಕೂ ಅಲ್ಲಿ ಬದಲಾಗದ ಏಕೈಕ ಸಂಖ್ಯೆ ಇದು. ಇದನ್ನು ಹೊಂದುವುದು ಕಡ್ಡಾಯವೂ ಹೌದು. ಶಾಲೆ ಸೇರ್ಪಡೆ, ಪಾಸ್‌ಪೋರ್ಟ್‌, ಚಾಲನಾ ಪತ್ರ, ಬ್ಯಾಂಕ್‌ ಸಾಲ, ಠೇವಣಿ, ನೌಕರಿ, ಸ್ಥಿರ ಮತ್ತು ಚರಾಸ್ತಿಗಳ ಖರೀದಿ– ನೋಂದಣಿ, ವಿಮೆ, ಸರ್ಕಾರದ ವಿವಿಧ ಸವಲತ್ತು ಬಳಕೆ... ಹೀಗೆ ಪ್ರತಿಯೊಂದಕ್ಕೂ ಈ ಸಂಖ್ಯೆ ಕೊಡಲೇಬೇಕು.

ಎಸ್‌ಎಸ್‌ಸಿ ಇಲ್ಲದಿದ್ದರೆ  ವ್ಯಕ್ತಿಯ ಅಸ್ತಿ ತ್ವವೇ ಇಲ್ಲ ಎಂಬಷ್ಟರ ಮಟ್ಟಿಗೆ ಅಲ್ಲಿ ಅದು ಅನಿವಾರ್ಯ. ಆದರೆ ಆಧಾರ್‌ನಂತೆ ಅಲ್ಲಿ ಬೆರಳಚ್ಚು, ಕಣ್ಣಿನ ಗುಡ್ಡೆ ಮಾಹಿತಿ ಸಂಗ್ರಹಿಸುವುದಿಲ್ಲ. ಅಲ್ಲದೆ ಭೌತಿಕ ರೂಪದ ಕಾರ್ಡ್‌ ಇಟ್ಟುಕೊಳ್ಳದೆ ಕೇವಲ ಸಂಖ್ಯೆಯನ್ನು ಅರ್ಜಿ ನಮೂನೆಗಳಲ್ಲಿ ತುಂಬಿಕೊಟ್ಟರೆ ಸಾಕು. ಆದರೆ ಈ ಕಾರ್ಡ್‌ ಸಂಖ್ಯೆಯನ್ನು  ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳು ಅಲ್ಲಿಯೂ ಹೆಚ್ಚುತ್ತಿವೆ. ಹೀಗಾಗಿ ಜೈವಿಕ ಗುರುತನ್ನು ಸಾಮಾಜಿಕ ಸುರಕ್ಷತಾ ಕಾರ್ಡ್‌ಗೆ ಜೋಡಿಸಬೇಕು ಎಂಬ ಆಗ್ರಹ ಅಲ್ಲಿ ಕೇಳಿಬರುತ್ತಿದೆ.

ರಷ್ಯದಲ್ಲಿ ವಿಮೆ ಮತ್ತು ಪಿಂಚಣಿ ಸೌಲಭ್ಯ ಪಡೆಯಲು ಎಸ್‌ಎನ್‌ಐಎಲ್‌ಎಸ್‌ ಎಂಬ ವಿಶಿಷ್ಟ ವ್ಯಕ್ತಿಗತ ಸಂಖ್ಯೆ ಹೊಂದುವುದು ಕಡ್ಡಾಯ. ಯೂರೋಪ್‌, ಆಫ್ರಿಕ ಅಷ್ಟೇ ಏಕೆ, ನಮ್ಮದೇ ಖಂಡದ ಮಲೇಷ್ಯಾ, ಸಿಂಗಪುರ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರತಿ ವ್ಯಕ್ತಿಗೂ ವಿಶಿಷ್ಟ ಸಂಖ್ಯೆಗಳನ್ನು ಒಳಗೊಂಡ ಗುರುತು ಚೀಟಿಗಳಿವೆ. ಅಲ್ಲೆಲ್ಲ ಇಲ್ಲದ ವಿರೋಧ ಇಲ್ಲೇಕೆ?
-ಎ.ಎಸ್‌. ನಾರಾಯಣರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT