ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಸಂಬಂಧ ಇಲ್ಲದವರ ಹಸ್ತಕ್ಷೇಪ

ದೇಗುಲ ಪ್ರವೇಶ ನಿರ್ಬಂಧ
Last Updated 29 ಜನವರಿ 2016, 19:51 IST
ಅಕ್ಷರ ಗಾತ್ರ

ಇಂದು ಎರಡು ವಿಭಿನ್ನ ಸ್ಥಳಗಳಲ್ಲಿ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಕುರಿತು ಹೋರಾಟಗಳು ನಡೆಯುತ್ತಿವೆ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ, ಭಾರತೀಯ ಸಂಸ್ಕೃತಿಯ ಕುರಿತು ಈ ಮುಂದಿನ ತಪ್ಪು ಕಲ್ಪನೆಗಳು ಅವರಿಗೆ ಇರುವುದು ಸ್ಪಷ್ಟ.

ಅದೆಂದರೆ: 1. ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು. 2. ಹಿಂದೂಗಳ ದೇವಾಲಯಗಳು ಚರ್ಚು, ಮಸೀದಿಗಳಂತೆ ಹಿಂದೂಗಳ ಸಾರ್ವಜನಿಕ ಪೂಜಾ ಸ್ಥಳಗಳು. ಹಾಗಾಗಿ ಹಿಂದೂ ಮಹಿಳೆಯರನ್ನು ಇಂಥ ದೇವಾಲಯಗಳಲ್ಲಿ ಬಿಟ್ಟುಕೊಳ್ಳದಿರುವುದು ಲೈಂಗಿಕ ತಾರತಮ್ಯವನ್ನು ಮಾಡಿದಂತೆ ಎಂಬುದು ಅವರ ತರ್ಕ. 

ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ರಿಲಿಜನ್ನಲ್ಲ. ಇದೊಂದು ಬಹು ಸಂಪ್ರದಾಯಗಳ ಸಮಾಜ. ಈ ಸಂಪ್ರದಾಯಗಳಿಗೆ ಆಧಾರವಾಗಿ ಕ್ರೈಸ್ತರು, ಮುಸ್ಲಿಮರಿಗೆ ಇರುವಂತೆ ಯಾವುದೇ ದೇವವಾಣಿ, ಪವಿತ್ರ ಗ್ರಂಥ ಅಥವಾ ಏಕರೂಪಿ ಡಾಕ್ಟ್ರಿನ್ನುಗಳ ಆಧಾರವಿಲ್ಲ. ಹಾಗಾಗಿ ಇಂಥ ಸಂಪ್ರದಾಯಗಳು ವೈವಿಧ್ಯಪೂರ್ಣವಾಗಿ ಬೆಳೆದುಕೊಂಡಿವೆ. ಹಿಂದೂ ದೇವಾಲಯಗಳು ಚರ್ಚುಗಳಂತೆ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಘಟಕಗಳಲ್ಲ. ಅವು ಹುಟ್ಟಿಕೊಳ್ಳುವುದು, ಅವುಗಳ ಅಭಿವೃದ್ಧಿ, ಜನಪ್ರಿಯತೆ, ನಿರ್ವಹಣೆ, ಅವನತಿ ಇವೆಲ್ಲ ಆಯಾ ಕ್ಷೇತ್ರಗಳ ಕ್ರಿಯಾಶೀಲತೆಗೆ ಸಂಬಂಧಪಟ್ಟ ಖಾಸಗಿ ವಿಚಾರಗಳಾಗಿವೆ. ಅವುಗಳಿಗೆ ಭಕ್ತರು ನಾನಾ ಕಡೆಗಳಿಂದ ಬರುತ್ತಾರೆ ಎಂಬ ಕಾರಣಕ್ಕೆ ಅವು ಸಾರ್ವಜನಿಕವಲ್ಲ. ಏಕೆಂದರೆ ಆ ಭಕ್ತರಿಗೆ ಅಲ್ಲಿ ಬರಲೇಬೇಕೆಂಬ ನಿರ್ಬಂಧವಿಲ್ಲ. ಭಕ್ತರು ಆಯಾ ಕ್ಷೇತ್ರದ ರೀತಿ ರಿವಾಜುಗಳಿಗೆ ಗೌರವ ಕೊಟ್ಟೇ ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಅಲ್ಲಿಗೆ ಬಂದಿರುತ್ತಾರೆ.  ಯಾರಿಗಾದರೂ ಹೊಸ ದೇವಾಲಯವನ್ನು ಕಟ್ಟಿ ಬೆಳೆಸುವ ಆಯ್ಕೆ ಮುಕ್ತವಾಗಿದೆ. ಹಾಗಾಗಿ ನಮ್ಮಲ್ಲಿ ಜಾತಿಗಳಿಗೆ, ಮತಗಳಿಗೆ, ಕುಲಗಳಿಗೆ, ಪ್ರದೇಶಗಳಿಗೆ, ಊರುಗಳಿಗೆ, ಗಲ್ಲಿಗಳಿಗೆ ಪ್ರತ್ಯೇಕ ದೇವಾಲಯಗಳು ಇರುವುದು.

ಇಂಥ ದೇವಾಲಯಗಳಲ್ಲಿನ ರಿವಾಜುಗಳು ಕೂಡ ಅಷ್ಟೇ ವೈವಿಧ್ಯಪೂರ್ಣವಾಗಿರುತ್ತವೆ. ಕೆಲವೆಡೆ ಹೆಂಗಸರಿಗೆ ಪ್ರವೇಶವಿಲ್ಲವಾದರೆ ಕೆಲವೆಡೆ ಗಂಡಸರಿಗೇ ಪ್ರವೇಶವಿಲ್ಲ, ಕೆಲವೆಡೆ ಹೆಂಗಸರನ್ನೇ ಇಟ್ಟು ಪೂಜಿಸುತ್ತಾರೆ, ಕೆಲವೆಡೆ ದಲಿತರಿಗೆ ಪ್ರವೇಶವಿಲ್ಲ, ಇನ್ನು ಕೆಲವೆಡೆ ದಲಿತರಾದಿಯಾಗಿ ಎಲ್ಲರಿಗೂ ಮುಟ್ಟಿ ದರ್ಶನದ ವ್ಯವಸ್ಥೆ ಇರುತ್ತದೆ. ಕೆಲವೆಡೆ ಬ್ರಾಹ್ಮಣರ ಎಡೆಯ ಮೇಲೆ ಕೆಳಜಾತಿಯವರು ಹೊರಳಾಡಿದರೆ, ಕೆಲವೆಡೆ ಮೇಲ್ಜಾತಿಯವರ  ಬೆನ್ನನ್ನು ದಲಿತ ಪೂಜಾರಿಗಳು ತುಳಿದು ಸಾಗುತ್ತಾರೆ. ಕೆಲವೆಡೆ ಅಂಗಿ ಬಿಚ್ಚದೆ ಭಕ್ತಾದಿಗಳಿಗೆ ಪ್ರವೇಶ ಇಲ್ಲ ವಾದರೆ, ಇನ್ನು ಕೆಲವೆಡೆ ಸ್ವತಃ ಪೂಜಾರಿಗಳೇ ಸ್ವೆಟರ್, ಮಫ್ಲರ್ ಸಮೇತ ಪೂಜೆ ಮಾಡುತ್ತಾರೆ. ಹೆಂಗಸರ ಕಾಲಿಗೆ ಗಂಡಸರು ಬೀಳುವುದೂ, ದಲಿತರ ಕಾಲಿಗೆ ಬ್ರಾಹ್ಮಣರು ಬೀಳುವುದೂ ಇಂಥ ದೇವಾಲಯಗಳ ವೈವಿಧ್ಯಪೂರ್ಣ ರಿವಾಜುಗಳ ಪಟ್ಟಿಯಲ್ಲೇ ಬರುತ್ತವೆ. ಇಂಥ ಯಾವುದೋ ದೇವಾಲಯದಲ್ಲಿ ಹೆಂಗಸರನ್ನು ಒಳಗೆ ಬಿಟ್ಟುಕೊಂಡಿಲ್ಲ ಹಾಗಾಗಿ ಅವರು ಸ್ತ್ರೀಯರನ್ನು ಕೀಳುಭಾವದಿಂದ ನೋಡುತ್ತಾರೆ ಎನ್ನುವವರು ಪುರುಷರನ್ನೇ ಒಳಗೆ ಬಿಟ್ಟುಕೊಳ್ಳದ ದೇವಾಲಯಗಳಲ್ಲಿ ಸ್ತ್ರೀಯರಿಗೆ ಪುರುಷರ ಕುರಿತು ಕೀಳು ಭಾವನೆ ಇದೆ ಎನ್ನಬೇಕಾಗುತ್ತದೆ. ಮೇಲ್ಜಾತಿಯವರ ಬೆನ್ನನ್ನು ತುಳಿಯುವ ದಲಿತರು ಮೇಲ್ಜಾತಿಗಳನ್ನು ಕೀಳಾಗಿ ನೋಡುತ್ತಿದ್ದಾರೆ ಎನ್ನಬೇಕಾಗುತ್ತದೆ. ಹಾಗಾಗಿ ಕೆಲವು ಆಚರಣೆಗಳನ್ನು ಮಾತ್ರ ಹಿಂದೂಗಳ ಲಿಂಗ ತಾರತಮ್ಯ, ಜಾತಿ ತಾರತಮ್ಯಕ್ಕೆ ಉದಾಹರಣೆ ಮಾಡಿ ಸಾರ್ವತ್ರೀಕರಿಸುವುದು ಅವಾಸ್ತವಿಕವಾಗುತ್ತದೆ. ಅಂಥ ಮಾತನ್ನಾಡುವವರು ಈ ದೇವಾಲಯಗಳಿಗೇ ಹೋಗದವರು ಮಾತ್ರ.

ಇನ್ನು ಈ ಸಂದರ್ಭದಲ್ಲಿ ಧಾರ್ಮಿಕ ಹಕ್ಕಿನ ಕುರಿತು ಮಾತನಾಡಲಾಗುತ್ತಿದೆ. ಭಾರತೀಯ ದೇವಾಲಯಗಳನ್ನು ಚರ್ಚು, ಮಸೀದಿಗಳಂಥ ಪ್ರಾರ್ಥನಾ ಸ್ಥಳಗಳು ಎಂದು ತಪ್ಪಾಗಿ ಕಲ್ಪಿಸಿದ್ದರಿಂದ ಈ ಎಲ್ಲ ಅವಾಂತರಗಳು. ಭಾರತೀಯರಿಗೆ   ದೇವಾಲಯಕ್ಕೆ ಹೋಗಿಯೇ ದೇವರನ್ನು ಪೂಜೆ ಮಾಡಬೇಕು ಅಥವಾ ಪೂಜೆ ಮಾಡಿಯೇ ಸದ್ಗತಿಯನ್ನು ಪಡೆಯಬೇಕು ಎಂಬ ನಿರ್ಬಂಧವಿಲ್ಲ. ಹಾಗಾಗಿ ದೇವಾಲಯ ಪ್ರವೇಶವನ್ನು ನಿರಾಕರಿಸಿದ್ದರಿಂದ ಯಾವುದೇ ಭಾರತೀಯನ ಧಾರ್ಮಿಕ ಹಕ್ಕು ಚ್ಯುತಿಯಾಗುವುದಾಗಲೀ, ಸಾಮಾಜಿಕ ಸ್ಥಾನಮಾನವು ಭ್ರಷ್ಟವಾಗುವುದಾಗಲೀ ಇಲ್ಲಿ ಸಾಧ್ಯವಿಲ್ಲ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಥವಾ ಸದ್ಗತಿಗೆ ದೇವಾಲಯಗಳೊಂದೇ ಸಾಧನ ಎಂಬುದಾಗಿ ನಮ್ಮ ಯಾವ ಮಹಾ ಪುರುಷರೂ ಹೇಳಿಲ್ಲ, ಯಾವ ಗ್ರಂಥಗಳೂ ಸಾರಿಲ್ಲ. ಹಾಗೆ ಸಾರಿದವರನ್ನು ಅಜ್ಞಾನಿಗಳು ಎಂದೇ ನಮ್ಮ ಪರಂಪರೆ ಹೇಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಧಾರ್ಮಿಕ ಹಕ್ಕಿನ ಕುರಿತು ಮಾತನಾಡುವವರಿಗೆ ನಮ್ಮ ಪರಂಪರೆಯ ಕುರಿತು ಈ ಅಜ್ಞಾನವಿದೆ ಎನ್ನಲಡ್ಡಿಯಿಲ್ಲ. ಇದಕ್ಕಿಂತ ತಮಾಷೆಯ ವಿಷಯವೆಂದರೆ, ಈ ಹೋರಾಟಗಾರರು ತಾವೇ ಗೌರವಿಸದ ಸದ್ಗತಿಯ ಹಕ್ಕನ್ನು ಇತರರಿಗೆ ಕೊಡಿಸುವ ಸಲುವಾಗಿ ಹೋರಾಡುತ್ತಿರುವುದು.

ಈ ಧಾರ್ಮಿಕ ಹಕ್ಕು ಎಂಬುದು ನಮಗೆ ಪಾಶ್ಚಾತ್ಯರಿಂದ ಬಂದ ಬಳುವಳಿ. ಆದರೆ ಪ್ರಸ್ತುತ ಚಳವಳಿಯಲ್ಲಿ ತೊಡಗಿರುವವರಿಗೆ ಒಂದು ವಿಷಯ ಗೊತ್ತಿದ್ದಂತಿಲ್ಲ. ಪಾಶ್ಚಾತ್ಯರು ಧಾರ್ಮಿಕ ಹಕ್ಕು ವೈಯಕ್ತಿಕ ಆಯ್ಕೆ ಎಂದು ಹೇಳುತ್ತಾರೆ. ಪ್ರತಿ ವ್ಯಕ್ತಿಗೂ ತನ್ನ ಸದ್ಗತಿಗೆ ಬೇಕಾದ ರಿಲಿಜನ್ನನ್ನು ಆಯ್ದುಕೊಳ್ಳುವ ಹಕ್ಕು ದೈವದತ್ತವಾಗಿದೆ. ಅನ್ಯರು ಅದರಲ್ಲಿ ಹಸ್ತಕ್ಷೇಪ ಮಾಡಿದರೆ ಅದು ಧಾರ್ಮಿಕ ಹಕ್ಕಿನ ಹರಣವೇ ಆಗುತ್ತದೆ. ಹಾಗಾಗೇ ಬಲಾತ್ಕಾರದ ಮತಾಂತರವನ್ನು ಧಾರ್ಮಿಕ ಹಕ್ಕಿನ ಚ್ಯುತಿ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರಸ್ತುತ ಚರ್ಚೆಯಲ್ಲಿ ಇವರೆಲ್ಲ ಸಮಸ್ತ ಭಕ್ತ ಸ್ತ್ರೀ ಸಮುದಾಯದ ಧಾರ್ಮಿಕ ಹಕ್ಕಿನ ಕುರಿತು ಮಾತನಾಡುತ್ತಿದ್ದಾರೆ ಹಾಗೂ ಇವರು ಆ ಭಕ್ತ ಸಮುದಾಯಕ್ಕೆ ಸೇರಿಲ್ಲ. ಹಾಗಾದರೆ ಇವರು ಅವರ ಹಿತಾಸಕ್ತಿಯನ್ನು ಹೇಗೆ ಪ್ರತಿನಿಧಿಸಬಲ್ಲರು ಎಂಬ ಪ್ರಶ್ನೆ ಏಳುತ್ತದೆ. ಈ ಹೋರಾಟ ಮಾಡುವವರು ಭಕ್ತ ಸ್ತ್ರೀಯರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆಯೆ? ಆ ಸ್ತ್ರೀಯರು ‘ಈ ಸಂಪ್ರದಾಯವು ಇರಲಿ’ ಎಂದು ಹೇಳಿದ ಪಕ್ಷದಲ್ಲಿ ಧಾರ್ಮಿಕ ಹಕ್ಕಿನ ಕುರಿತು ಹೋರಾಡುವವರೇ ಅದನ್ನು ಉಲ್ಲಂಘಿಸಿದ ಹಾಗಾಗುವುದಿಲ್ಲವೆ? ಈ ಪ್ರಶ್ನೆಗೆ ಅವರಿಗಿರುವುದು ಒಂದೇ ಉತ್ತರ: ಅದೆಂದರೆ ಈ ಸ್ತ್ರೀಯರೆಲ್ಲ ಮುಗ್ಧರು, ತಿಳಿವಳಿಕೆಯಿಲ್ಲದವರು, ಇಲ್ಲ ಸೋಗಲಾಡಿಗಳು. ಇಂಥ ಉತ್ತರಗಳು ಸ್ತ್ರೀ ಘನತೆಯ ಪರವಾಗಿ ಹೋರಾಡುವವರಿಗೆ ಬೇಕೆ?

ಇನ್ನು ಈ ಹೋರಾಟವನ್ನು ಮಾಡುತ್ತಿರುವವರಲ್ಲಿ ಇಬ್ಬಂದಿತನವೂ ಇದೆ. ಶಬರಿಮಲೆಯ ಆಚರಣೆಯನ್ನು ಪ್ರಶ್ನಿಸಿ ಪಿಐಎಲ್ ಹಾಕಿದವರು ಒಬ್ಬ ಮುಸ್ಲಿಂ. ಇಸ್ಲಾಂನಲ್ಲಿ ಸ್ತ್ರೀಯರಿಗೆ ಸಾರ್ವತ್ರಿಕವಾಗಿ ಪ್ರಾರ್ಥನೆಯಲ್ಲಿ ಸಹಭಾಗಿತ್ವವಿಲ್ಲ. ಹಾಗಿರುವಾಗ ಶಬರಿಮಲೆಗೆ ಹೋಗುವ ಸ್ತ್ರೀಯರ ಸಮಾನತೆಗೆ ಚ್ಯುತಿ ಬಂದಿತೆನ್ನುವುದು ಮಾತ್ರ ಸಮಸ್ಯೆಯಾಗಿದ್ದು ಆಶ್ಚರ್ಯ.  ಇಂಥ ಹೋರಾಟಗಳ  ಮಿತಿಯನ್ನು ತಿಳಿಸಲು ಇದು ಒಂದು ಉದಾಹರಣೆ ಅಷ್ಟೆ. ಶಬರಿಮಲೆಯಲ್ಲಿ, ಶನಿ ಶಿಂಗ್ಣಾಪುರದಲ್ಲಿ ಅಥವಾ ಇನ್ನಿತರ ಇಂಥ ಕ್ಷೇತ್ರಗಳಲ್ಲಿ ಇರುವ ಆಚರಣೆಗಳು ಆಯಾ ಕ್ಷೇತ್ರಗಳು ಹಾಗೂ ಅವುಗಳ ರಿವಾಜಿಗೆ ಸಂಬಂಧಪಟ್ಟವು ಅಷ್ಟೆ. ಅವನ್ನು ಸ್ತ್ರೀಯರ ಸಮಾನತೆಯ, ಹಕ್ಕುಗಳ ಸಮಸ್ಯೆಗಳನ್ನಾಗಿ ನೋಡುವುದೇ ತಪ್ಪು. ಅದರಿಂದ ಹುಟ್ಟುವುದು ವಿವಾದ, ಪ್ರಕ್ಷುಬ್ಧತೆಯೇ ವಿನಾ ಸ್ತ್ರೀ ಸಮಾನತೆಯಲ್ಲ.

ಹಿಂದೂಯಿಸಂನಲ್ಲಿ ಎಲ್ಲೆಲ್ಲೂ ಸುಳ್ಳು, ಅನೈತಿಕತೆ ಹಾಗೂ ಮೌಢ್ಯಗಳೇ ತುಂಬಿವೆ ಎಂಬುದು ವಿದ್ಯಾವಂತ ಹಿಂದೂಗಳ ಸಾಮಾನ್ಯ ಜ್ಞಾನವೇ ಆಗಿಬಿಟ್ಟಿದೆ. ಹಾಗಾಗಿ ಕಣ್ಣಿಗೆ ಕಾಣಿಸಿದ ಆಚರಣೆಗಳೆಲ್ಲವೂ ಒಂದಿಲ್ಲೊಂದು ಹಕ್ಕುಗಳನ್ನು ಹತ್ತಿಕ್ಕುತ್ತಿರುವಂತೆ ಕಾಣುತ್ತದೆ. ಅದಕ್ಕೆ ಸರಿಯಾಗಿ ಪೂಜಾರಿಗಳೂ ಋತುಸ್ರಾವ, ಮೈಲಿಗೆ ಅಂತೆಲ್ಲ ತುಪ್ಪ ಹೊಯ್ಯುತ್ತಿರುತ್ತಾರೆ. ಋತುಸ್ರಾವವು ದೇವಾಲಯಗಳಿಗೆ ಸಮಸ್ಯೆಯಾಗಿದ್ದೇ ಹೌದಾಗಿದ್ದರೆ ಉಳಿದ ದೇವಾಲಯಗಳಲ್ಲಿ ಸ್ತ್ರೀಯರನ್ನು ಏಕೆ ಬಿಟ್ಟುಕೊಳ್ಳುತ್ತಾರೆ? ಅವಕ್ಕೆಲ್ಲ ಚಳವಳಿಗಳೇ ನಡೆದವೆ? ಈಗ ಸ್ತ್ರೀಯರಿಗೆ ವೇದಗಳನ್ನು, ಪೌರೋಹಿತ್ಯವನ್ನು ಕಲಿಸಲಾಗುತ್ತಿದೆ. ದಲಿತ ಸ್ತ್ರೀಯರನ್ನೇ ಪೂಜಾರಿಗಳನ್ನಾಗಿ ಮಾಡುವ ಪ್ರಯೋಗಗಳನ್ನೂ ನೋಡಿದ್ದೇವೆ. ಅವು ಯಾವ ಹಿಂದೂಗಳಿಗೂ ಸಮಸ್ಯೆಯಾಗಿ ಕಾಡಿಲ್ಲ.

ಅಂದರೆ ಇಲ್ಲಿ ಮೇಲ್ನೋಟಕ್ಕೆ ಕಾಣಿಸುವುದೆಂದರೆ ಅದು ಆಯಾ ದೇವಾಲಯಗಳ ರಿವಾಜು ಹಾಗೂ ಭಕ್ತರು ಅವನ್ನು ಮಾನ್ಯ ಮಾಡಿಯೇ ಆ ಕ್ಷೇತ್ರಗಳಿಗೆ ಹೋಗುತ್ತಾರೆ. ಹಾಗಾಗಿ ಇಂಥ ಆಚರಣೆಗಳನ್ನು ಮಾಡುವವರಿಗೇ ಅವು ಸಮಸ್ಯೆಯಾಗಿ ಕಾಡುವವರೆಗೂ ಅದೊಂದು ನಿವಾರಿಸಬೇಕಾದ ಸಮಸ್ಯೆಯಲ್ಲ. ಅವಕ್ಕೆ ಸಂಬಂಧಪಡದವರ ಹಸ್ತಕ್ಷೇಪವಂತೂ ಅನಗತ್ಯ ಹಿಂಸೆಗೆ ಎಡೆಮಾಡುತ್ತದೆ. ಅಂಥದ್ದೊಂದು ಸಂದರ್ಭ ಬಂದಾಗ ಅವರೇ ಮತ್ತೊಂದು ಪುರಾಣವನ್ನು ಕಟ್ಟಿಕೊಂಡು ಹೊಸ ಆಚರಣೆಗಳನ್ನು ಮಾನ್ಯ ಮಾಡುತ್ತಾರೆ. ನಮ್ಮ ಯಾವ ದೇವಾಲಯಗಳ ಪೂಜಾ ವಿಧಿಗಳೂ ಆಚಂದ್ರಾರ್ಕವಾಗಿ ಇರುವಂಥವಲ್ಲ. ಅವು ಕಾಲದಿಂದ ಕಾಲಕ್ಕೆ ಭಕ್ತರ ಒಲವುಗಳಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡೇ ಬಂದಿವೆ. ದೇವಾಲಯಗಳ ದೇವರುಗಳೇ ಬದಲಾಗಿವೆ, ಆಚರಣೆ ಬದಲಾಗುವುದು ಏನು ಮಹಾ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT